ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಮ್ರಾಪೂರ


 ಸೋಮಶೇಖರ ಇಮ್ರಾಪೂರ


ಸೋಮಶೇಖರ ಇಮ್ರಾಪೂರ ಅವರು ಕವಿ, ವಿದ್ವಾಂಸ, ಜಾನಪದ ತಜ್ಞ, ಸಂಶೋಧಕ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.

ಸೋಮಶೇಖರ ಇಮ್ರಾಪೂರ ಅವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 1940ರ ಫೆಬ್ರವರಿ 14 ರಂದು ಜನಿಸಿದರು. ತಂದೆ ಗುರಪ್ಪ. ತಾಯಿ ಸಂಗಮ್ಮ.
ಅವರ ಪ್ರಾರಂಭಿಕ ಶಿಕ್ಷಣ ಅಬ್ಬಿಗೇರಿಯಲ್ಲಿ ನಡಯಿತು. ಮುಂದೆ ಓದಿದ್ದು ಹೊಳೆ ಆಲೂರು ಹಾಗೂ ಧಾರವಾಡದ ಕರ್ನಾಟಕ ಹೈಸ್ಕೂಲುಗಳಲ್ಲಿ. ಜೆ.ಎಸ್‌.ಎಸ್‌. ಕಾಲೇಜಿನಿಂದ ಬಿ.ಎ. ಪದವಿ ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಮತ್ತು ಭಾಷಾ ವಿಜ್ಞಾನದಲ್ಲಿ ಸುವರ್ಣಪದಕದೊಡನೆ ಎಂ.ಎ. ಪದವಿ  ಪಡೆದ ಸೋಮಶೇಖರರು 'ಜನಪದ ಒಗಟುಗಳು’ ಪ್ರಬಂಧಮಂಡಿಸಿ ಪಿಎಚ್‌.ಡಿ ಪದವಿ ಪಡೆದರು. 

ಸೋಮಶೇಖರ ಇಮ್ರಾಪೂರ ಅವರು ಧಾರವಾಡದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಕಾಲ, ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಸಂಶೋಧಕರಾಗಿ, ಅಧ್ಯಾಪಕರಾಗಿ, ಜನಪದ ಸಾಹಿತ್ಯದ ರೀಡರ್ ಆಗಿ , ಕನ್ನಡ ಅಧ್ಯಯನ ಪೀಠದ ಜಾನಪದ ಪ್ರಾಧ್ಯಾಪಕರಾಗಿ, ಹೀಗೆ ವಿವಿಧ ಸ್ತರಗಳಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಿದರು. ತಮ್ಮ ತಾತ್ವಿಕ ಹೋರಾಟದಿಂದ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗಕ್ಕೆ ಜೀವತುಂಬಿ, ಜಾನಪದ ವಿಭಾಗವನ್ನು ಕಟ್ಟಿ ಬೆಳೆಸಿದರು. ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾಪರಿಷತ್ತಿನ ಸೆನೆಟ್‌, ಸಿಂಡಿಕೇಟ್‌ ಸದಸ್ಯರಾಗಿ, ಕಲಾ ವಿಭಾಗದ  ಡೀನ್‌ ಆಗಿಯೂ ಅವರ ಸೇವೆ ಸಂದಿತು. 

ಸೋಮಶೇಖರ ಇಮ್ರಾಪೂರ ಅವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನ, ಕಮ್ಮಟ, ಕಲಾಮೇಳಗಳಲ್ಲಿ ಉಪನ್ಯಾಸಕರಾಗಿ, ಸಂಚಾಲಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಗೋಷ್ಠಿಯ ಅಧ್ಯಕ್ಷರಾಗಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ, ಸ್ನಾತಕೋತ್ತರ ಶಿಕ್ಷಕರ ಸಂಘ, ಸರಕಾರದ ಪದವಿ ಪೂರ್ವ ಕನ್ನಡ ಪಠ್ಯ ಕ್ರಮ ಮಂಡಲಿ, ಜನಪದ ಸಾಹಿತ್ಯ ಸ್ನಾತಕ ಹಾಗೂ ಸ್ನಾತಕೋತ್ತರ ಕನ್ನಡ ಅಭ್ಯಾಸಮಂಡಲಿ ಅಧ್ಯಕ್ಷರಾಗಿ, ಜಾನಪದ ವೇದಿಕೆ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆ ಮುಂತಾದವುಗಳ ಸಂಚಾಲಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಭಾರತಿ, ವಿದ್ಯಾರ್ಥಿ ಭಾರತಿ, ದಲಿತ ಪತ್ರಿಕೆ ಮುಂತಾದವುಗಳ ಸಂಪಾದಕರಾಗಿ, ಜಾನಪದ ಕಲಾವಿದರ ಆಯ್ಕೆ ಸಮಿತಿ, ಜಾನಪದ ಸಂಗೀತ ಸಲಹಾ ಸಮಿತಿ, ಸಮಗ್ರ ಜಾನಪದ ಸಾಹಿತ್ಯ ಸಂಪುಟ ಪ್ರಕಟಣಾ ಯೋಜನಾ ಸಲಹಾ ಸಮಿತಿ ಮುಂತಾದ ಸಮಿತಿಗಳ ಸದಸ್ಯರಾಗಿ, ಹೀಗೆ ಹಲವಾರು ಶೈಕ್ಷಣಿಕ, ಸಾಂಸ್ಕೃತಿಕ, ಸಂಘ, ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದಾರೆ. 

ಸೋಮಶೇಖರ ಇಮ್ರಾಪೂರ ಅವರು ಹಲವಾರು ಸೃಜನಶೀಲ ಕೃತಿಗಳನ್ನು ರಚಿಸಿದ್ದು, ಬಿಸಿಲು ಹೂವು, ಬೆಳದಿಂಗಳು, ಬೆಂಕಿ, ಬಿರುಗಾಳಿ, ಜಲತರಂಗ, ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ, ಹುತ್ತಗಳು, ಬೇವು ಬೆಲ್ಲ ಮುಂತಾದ ಕಾವ್ಯ ಕೃತಿಗಳು; ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ, ಕುವೆಂಪು-ಬೇಂದ್ರೆ, ಜಿಜ್ಞಾಸೆ ಮುಂತಾದ ವಿಮರ್ಶಾ ಕೃತಿಗಳು; ‘ಲಾಲೀಸಿ ಕೇಳಾ ನನ ಮಾತಾ’ ಅಂಕಣ ಬರಹಗಳ ಸಂಗ್ರಹ; ಕನ್ನಡದ ಸಾವಿರದ ಒಗಟುಗಳು, ಜನಪದ ಮಹಾ ಭಾರತ, ಜಾನಪದ ವಿಜ್ಞಾನ, ನಮ್ಮ ಜಾನಪದ ಸಮೀಕ್ಷೆ, ಜಾನಪದ ಹಾಡುಗಳಲ್ಲಿ ನರಗುಂದದ ಬಾಬಾಸಾಹೇಬ ಮೊದಲಾದ ಸಂಪಾದಿತ ಹಾಗೂ ವಿಮರ್ಶಾ ಕೃತಿಗಳು ಹೀಗೆ  40 ಕ್ಕೂ ಹೆಚ್ಚು ಕೃತಿಗಳ್ನು ಪ್ರಕಟಿಸಿದ್ದಾರೆ. 

'ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಬಿರುಗಾಳಿ’ ಕೃತಿಗೆ ಅಮ್ಮನ ಭಾವಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಜನದನಿ ಸಾಂಸ್ಕೃತಿಕ ಟ್ರಸ್ಟ್‌ (ಮಂಡ್ಯ) ನಿಂದ ಜೀಶಂಪ ಜಾನಪದ ತಜ್ಞ ಪ್ರಶಸ್ತಿ, ದೀಪಾರಾಧನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವ ಪ್ರಶಸ್ತಿಗಳು ಸೋಮಶೇಖರ ಇಮ್ರಾಪೂರ ಅವರಿಗೆ ಸಂದಿವೆ..ಇವರ ನೆಚ್ಚಿನ ವಿದ್ಯಾರ್ಥಿಗಳು, ಹಿತೈಷಿಗಳು 2001ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಬೇವು-ಬೆಲ್ಲ’.

ಹಿರಿಯರಾದ ಸೋಮಶೇಖರ ಇಮ್ರಾಪೂರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birth day of scholar and writer Professor Somashekhara Imrapura 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ