ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗೇಶ ಹೆಗಡೆ


 ನಾಗೇಶ ಹೆಗಡೆ


ನಾಗೇಶ ಹೆಗಡೆ ಕನ್ನಡ ನಾಡಿನ ಅಪೂರ್ವ ವೈಜ್ಞಾನಿಕ ಬರಹಗಾರರೆನಿಸಿದ್ದಾರೆ.   ಮೂಲತಃ ವಿಜ್ಞಾನಿಯಾಗಿ ಪ್ರಯೋಗಾಲಯದಲ್ಲಿನ ಸಂಶೋಧಕಾರಾಗಿ ಮತ್ತು ಶಿಕ್ಷಕರಾಗಿ   ಕಾರ್ಯನಿರ್ವಹಿಸುತ್ತಿದ್ದ ನಾಗೇಶ ಹೆಗಡೆಯವರು  ಪತ್ರಿಕಾ ಪ್ರಪಂಚಕ್ಕೆ ಧುಮುಕಿ ಪತ್ರಕರ್ತರಾದವರು.  ಇಷ್ಟೇ ಅಲ್ಲದೆ ಅವರು ಸಾಮಾಜಿಕ ಮತ್ತು ವೈಜ್ಞಾನಿಕ ಕಾಳಜಿಗಳುಳ್ಳ ಪರಿಸರವಾದಿಯೂ ಹೌದು.

ನಾಗೇಶ ಹೆಗಡೆ 1948ರ ಫೆಬ್ರುವರಿ 14ರಂದು ಜನಿಸಿದರು.  ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿಯ ಬಕ್ಕೆಮನೆ ಅವರ ಊರು.  ಅಧ್ಯಾಪನದ ಅನುಭಾವವನ್ನು  ತಮ್ಮ ಬರಹಗಳಲ್ಲಿ  ಸಮರ್ಥವಾಗಿ ಬೆಸೆದಿರುವ ಅವರು ವಿಜ್ಞಾನದ ಲಹರಿಯನ್ನು ಆಪ್ತವೆನ್ನುವಂತೆ ಸುಲಲಿತ ಕನ್ನಡದಲ್ಲಿ ಅಪ್ಯಾಯಮಾನವಾಗಿಸುತ್ತಿದ್ದಾರೆ. ಸುಧಾ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ನಾಗೇಶರು ಇಂದು  ಕನ್ನಡಕ್ಕೆ ಅನೇಕ ಯುವಪೀಳಿಗೆಯ ಬರಹಗಾರರು ದೊರಕುವಂತೆ ಮಾಡಿದ್ದಾರೆ.  ಇಂದಿನ ಕನ್ನಡದ ಬಹುತೇಕ ಯುವ ವಿಜ್ಞಾನ ತಾಂತ್ರಿಕ ಬರಹಗಾರರಿಗೆ ಅವರು ಪ್ರೇರಣೆಯೂ ಆಗಿದ್ದಾರೆ.  

ಕನ್ನಡದಲ್ಲಿ ಅನೇಕ ಮಹತ್ವದ ಪುಸ್ತಕಗಳನ್ನು ಬರೆದಿರುವ ನಾಗೇಶ ಹೆಗಡೆ ಅವರ ಕೃತಿಗಳಲ್ಲಿ ಇರುವುದೊಂದೇ ಭೂಮಿ, ಗಗನ ಸಖಿಯರ ಸೆರಗ ಹಿಡಿದು, ನಮ್ಮೊಳಗಿನ ಬ್ರಹ್ಮಾಂಡ, ಕೆರೆಯಲಿ ಚಿನ್ನ ಕೆರೆಯೇ ಚಿನ್ನ, ಗುಳಿಗೆ ಗುಮ್ಮ, ಗುರುಗ್ರಹದಲ್ಲಿ ದೀಪಾವಳಿ, ಮಿನುಗುವ ಮೀನು ಕುಲಾಂತರಿ ಕೋತಿ,  ಅಂತರಿಕ್ಷದಲ್ಲಿ ಮಹಾಸಾಗರ, ಮಂಗಳಲೋಕದಲ್ಲಿ ಮಾನವ, ಪ್ರತಿದಿನ ಪರಿಸರದಿನ, ಮುಷ್ಟಿಯಲ್ಲಿ ಮಿಲೆನಿಯಂ, ಸುರಿಹೊಂಡ ಭರತಖಂಡ, ಅಕ್ಕರೆ ಅಕ್ಕಿ ಭಳಿರೇ ಭತ್ತ, ಆಚಿನ ಲೋಕಕ್ಕೆ ಕ್ಯಾಲಕೋಶ, ಶತ್ರುವಿಲ್ಲದ ಸಮರ,  ಅಭಿವೃದ್ಧಿಯ ಅಂಧಯುಗ, ಕೊಪೆನ್ ಹೇಗನ್ ಋತುಸಂಹಾರ, ಟಿಪ್ಪೂ ಖಡ್ಗದ ನ್ಯಾನೋ ಕಾರ್ಬನ್, ಮತ್ತೆ ಮತ್ತೆ ಕೂಗುಮಾರಿ, ಹಳ್ಳಿ ಮುಕ್ಕ ಎಲ್ಲೆಲ್ ಹೊಕ್ಕ, ಬರ್ಗರ್ ಭಾರತ, ನಮ್ಮೊಳಗಿನ ದುಂದುಮಾರ ಮುಂತಾದ ಜನಾನುರಾಗಿ ಪುಸ್ತಕಗಳು ಸೇರಿವೆ.   ಪ್ರಜಾವಾಣಿಯಲ್ಲಿ ನಿರಂತರವಾಗಿ ಮೂಡಿಬರುತ್ತಿರುವ ಅವರ ವಿಜ್ಞಾನ ವಿಶೇಷ ಅಂಕಣವೂ ಓದುಗರಿಗೆ  ಪ್ರೀತಿಪಾತ್ರವೆನಿಸಿದೆ.  

ಕಬ್ಬಿಣದ ಅದಿರಿನ ರಫ್ತಿನ ಬಗ್ಗೆ ನಾಗೇಶ ಹೆಗಡೆ ಅವರು ಮಾಡಿದ ಸಂಶೋಧನೆ ಸಂಸತ್ತಿನಲ್ಲೂ ಪ್ರತಿಧ್ವನಿ ಮೂಡಿಸಿತ್ತು.  ಕೈಗಾದಲ್ಲಿ ಅಣುಸ್ಥಾವರ ತಲೆ ಎತ್ತಿದಾಗ ನಾಗೇಶ ಹೆಗಡೆ ಅವರು ತಮ್ಮ ಲೇಖನಿಯನ್ನೇ ಕತ್ತಿಯಾಗಿಸಿಕೊಂಡು ಕಣಕ್ಕೆ ಧುಮುಕಿದವರು. ಈ ಭೂಮಿ ನಮ್ಮ ಮುಂದಿನ ಪೀಳಿಗೆಗೆ ಸೇರಿದ್ದು ಎಂದು ಸಮುದಾಯದಲ್ಲಿ  ಎಚ್ಚರ ಮೂಡಿಸಿದವರು. ಸುಧಾ, ಕರ್ನಾಟಕ ದರ್ಶನ, ಕೃಷಿ ರಂಗ ಮುಂತಾದವು  ಈಗಲೂ ನಾಗೇಶ ಹೆಗಡೆಯವರ  ಹೆಸರನ್ನು ಹಸುರಾಗಿಸಿವೆ. 

ಪ್ರಾರಂಭದಲ್ಲಿ ಮಣ್ಣುಪರೀಕ್ಷೆ ಮಾಡುತ್ತಾ, ಮುಂದೆ ಪತ್ರಿಕೋದ್ಯಮಕ್ಕೆ ಬಂದ ನಾಗೇಶ ಹೆಗಡೆ ಅವರು, ಮಣ್ಣಿನ ಜೊತೆಗಿನ ತಮ್ಮ ಸಂಬಂಧವನ್ನೂ ಉಳಿಸಿಕೊಂಡಿದ್ದಾರೆ.  ಕೆಂಗೇರಿಯ ಬಳಿಯಲ್ಲಿರುವ ಅವರ ಮೈತ್ರಿ ಫಾರಂ ಅವರ ಪ್ರಯೋಗ ಕ್ಷೇತ್ರವೂ ಹೌದು.  

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಕೃತಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನಾ ಗೌರವ,  ಪತ್ರಿಕೋದ್ಯಮದ ಜೀವಮಾನ ಸಾಧನಾ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಗೌರವಗಳು ನಾಗೇಶ ಹೆಗಡೆಯವರನ್ನರಸಿ ಬಂದಿವೆ. 2018 ವರ್ಷ ಟಾಟಾ-ಪರಾಗ್ ಸಂಸ್ಥೆ ಮಕ್ಕಳ ಸಾಹಿತ್ಯದ ಕುರಿತಾದ ಅವರ ಸಾಧನೆಗಾಗಿ ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ ನೀಡಿದ್ದು  ಕನ್ನಡಕ್ಕೆ ಸಂದ ಹೆಮ್ಮೆ. ಆ ಪ್ರಶಸ್ತಿ ಜೊತೆ ಬಂದ ದೊಡ್ಡ ಮೊತ್ತವನ್ನು ಹೆಗ್ಗಡೆ ಅವರು ಮಕ್ಕಳ ಸಾಹಿತ್ಯ ಅಭಿರುಚಿ ಅಭಿವೃದ್ಧಿಗೆ ಮೀಸಲಿರಿರಿಸಿದ್ದಾರಲ್ಲದೆ ಈಗಾಗಲೇ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

ಕನ್ನಡಿಗರಲ್ಲಿ  ವಿಜ್ಞಾನ ಮತ್ತು ಪರಿಸರ ಪ್ರೇಮಗಳನ್ನು ನಿರಂತರವಾಗಿ ಬಿತ್ತುವ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಸರಳ ಸಜ್ಜನಿಕೆಯ ಜ್ಞಾನ ಪರ್ವತರಾದ ನಾಗೇಶ ಹೆಗಡೆಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ.

On the birth day of our affectionate Nagesh Hegde Sir 🙏🌷🙏

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ