ಮಂಗಳಾ ಪ್ರಿಯದರ್ಶಿನಿ
ಮಂಗಳಾ ಪ್ರಿಯದರ್ಶಿನಿ
ಡಾ. ಮಂಗಳಾ ಪ್ರಿಯದರ್ಶಿನಿ ತಮ್ಮ ಹೆಸರಿನಷ್ಟೇ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಆಪ್ತರಾದವರು. ಲೇಖಕರಾಗಿ, ವಿಮರ್ಶಕರಾಗಿ, ಸ್ತ್ರೀಪರ ಚಿಂತಕರಾಗಿ, ಶಿಕ್ಷಣ ತಜ್ಞರಾಗಿ, ಉನ್ನತ ಶೈಕ್ಷಣಿಕ ಸಾಧಕರಾಗಿ, ಮಾರ್ಗದರ್ಶಕರಾಗಿ, ಹೀಗೆ ಅವರ ಸಾಧನೆಯ ಹಾದಿ ವೈವಿಧ್ಯಮುಖಿಯಾದದ್ದು.
ಮಂಗಳಾ ಪ್ರಿಯದರ್ಶಿನಿ ಅವರು ಜನಿಸಿದ ದಿನ ಫೆಬ್ರವರಿ 28. ತಂದೆ ಹೆಸರಾಂತ ಶಿಕ್ಷಣತಜ್ಞರಾದ ಬಿ. ವಿ. ದಕ್ಷಿಣಾ ಮೂರ್ತಿ. ತಾಯಿ ಪ್ರಖ್ಯಾತ ಕಾದಂಬರಿಕಾರ್ತಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ.
ನಿರಂತರ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಮಂಗಳಾ ಪ್ರಿಯದರ್ಶಿನಿ ಬಿ. ಎ. ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಮತ್ತು ಕನ್ನಡ ಎಂ.. ಪದವಿಯನ್ನು ಎಂಟು ಚಿನ್ನದ ಪದಕಗಳೊಂದಿಗೆ ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಗಳಿಸಿದರು. ಡಾ. ಜಿ. ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ 'ನವೋದಯ ಕಾವ್ಯದಲ್ಲಿ ಪ್ರತಿಮಾ ವಿಧಾನ - ಒಂದು ಅಧ್ಯಯನ' ಪ್ರಬಂಧ ಮಂಡಿಸಿ ಎಂ.ಫಿಲ್. ಮತ್ತು 'ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು - ಒಂದು ಅಧ್ಯಯನ' ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿಗಳನ್ನು ಗಳಿಸಿದರು.
ನಿರಂತರ ಜ್ಞಾನಾಕಾಂಕ್ಷಿಗಳಾದ ಮಂಗಳಾ ಪ್ರಿಯದರ್ಶಿನಿ ಅವರು ಯುಜಿಸಿ ನೆರವಿನೊಂದಿಗೆ ‘ಮಹಿಳಾ ಅಧ್ಯಯನ - ಸಮಕಾಲೀನ ಸ್ವರೂಪ, ಸಮಸ್ಯೆಗಳ ವಿಶ್ಲೇಷಣೆ ಸಾಹಿತ್ಯ ಪರಂಪರೆಯ ಹಿನ್ನಲೆಯಲ್ಲಿ’ ಮತ್ತು ‘ಮಹಿಳಾ ಸಮಸ್ಯೆಗಳು ಮತ್ತು ಮಹಿಳಾ ಚಳುವಳಿಗಳು‘ ಎಂಬ ಸಂಶೋಧನೆಗಳನ್ನೂ ಕೈಗೊಂಡು ಯಶಸ್ವಿಯಾಗಿ ನಿರ್ವಹಿಸಿದರು.
ಡಾ. ಮಂಗಳಾ ಪ್ರಿಯದರ್ಶಿನಿ ಅವರು ಪದವಿ ಮಟ್ಟದಲ್ಲಿ 38 ವರ್ಷಗಳ ಬೋಧನಾನುಭವ ಮತ್ತು ಕನ್ನಡ ಸ್ನಾತಕೋತ್ತರ ಮಟ್ಟದಲ್ಲಿ 15 ವರ್ಷಗಳ ಬೋಧನಾನುಭವ ಉಳ್ಳವರಾಗಿದ್ದು ಬೆಂಗಳೂರು ಬಸವೆಶ್ವರ ನಗರದ ಯು ಜಿ ಸಿ ಗ್ರೇಡ್ ಒನ್ ( ನಿ ) ವಿ ವಿ ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಂದರ್ಶನ ಪ್ರಾಧ್ಯಾಪಕಿಯೂ ಅವರ ಸೇವೆ ಸಂದಿದೆ. ಬೆಂಗಳೂರು ವಿಶ್ವವಿದ್ಯಾಲಯ , ಹಂಪಿ ವಿಶ್ವವಿದ್ಯಾಲಯ ಹಾಗೂ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯಗಳ ಅನೇಕ ಅಭ್ಯರ್ಥಿಗಳಿಗೆ ಪಿಎಚ್.ಡಿ ಮತ್ತು ಎಂ.ಫಿಲ್ ಅಧ್ಯಯನಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಐಎಎಸ್ , ಕೆಎಎಸ್ ಪರೀಕ್ಷಾರ್ಥಿಗಳಿಗೂ ಅವರ ಮಾರ್ಗದರ್ಶನ ಸಂದಿದೆ.
ಮಂಗಳಾ ಪ್ರಿಯದರ್ಶಿನಿ ಅವರ ಕೃತಿಗಳು ವಿದ್ವತ್ಪೂರ್ಣ ವೈವಿಧ್ಯಗಳಿಂದ ಕೂಡಿವೆ. ನವೋದಯ ಕಾವ್ಯದಲ್ಲಿ ಪ್ರತಿಮಾ ವಿಧಾನ - ಒಂದು ಅಧ್ಯಯನ (ಎಂ.ಫಿಲ್ ಸಂಶೋಧನಾ ಪ್ರಬಂಧ ಕೃತಿ); ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು (ಪಿಎಚ್.ಡಿ ಸಂಶೋಧನಾ ಪ್ರಬಂಧ ಕೃತಿ); ಬೇಂದ್ರೆ, ವೀರಶೈವ ಷಟ್ಪದಿ ಸಾಹಿತ್ಯ, ಆಧುನಿಕ ಕನ್ನಡ ಕಾವ್ಯದ ಸ್ವರೂಪ, ಮೋಳಿಗೆ ಮಹಾದೇವಿ, ಮಹಿಳಾ ಸಾಹಿತ್ಯ ಚರಿತ್ರೆ; ಸ್ತ್ರೀವಾದ, ಮಹಿಳಾ ಅಧ್ಯಯನ , ಒಂದು ಪ್ರವೇಶಿಕೆ; ಬೆಳೆಗೆರೆ ಪಾರ್ವತಮ್ಮ, ವಚನಕಾರ್ತಿಯರ ಅನುಭಾವ, ಬೈದವ್ವ ಕೇಳಾ ನನ ಮಾತಾ, ಸ್ತ್ರೀವಾದೀ ಚಿಂತನೆಗಳ ಹಿನ್ನೆಲೆಯಲ್ಲಿ; ಗಾನ ಗಂಗೆ ಪಂಚಾಕ್ಷರಿ ಗವಾಯಿಗಳು; ಪ್ರಮಾಣ - ಕನ್ನಡ ಲೇಖಕ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಕುರಿತಾದ ಚಿಂತನೆಗಳು; ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು - ತಾಂಜಾನಿಯಾ ದೇಶದ ಪ್ರವಾಸದ ಅನುಭವ ಕಥನ; ಭಾರತೀಯ ಕಾವ್ಯ ಮೀಮಾಂಸೆ ಹಾಗೂ ಪಾಶ್ಚಾತ್ಯ ವಿಮರ್ಶೆ; ಐ ಎ ಎಸ್ ಸಾಹಿತ್ಯ ದರ್ಶಿನಿ; ನವೋದಯ ಸಾಹಿತ್ಯ ಹಾಗೂ ಅನುಭಾವ ಮುಂತಾದ ಕೃತಿಗಳು ಪ್ರಸಿದ್ಧ ಸಂಸ್ಥೆಗಳಿಂದ ಪ್ರಕಟಗೊಂಡು ಅನೇಕ ಮರುಮುದ್ರಣಗಳೊಂದಿಗೆ ಜನಪ್ರಿಯಗೊಂಡಿವೆ. ಕಡಲಾಚೆಯ ನೆನಪುಗಳು ( ಮೂಲ ಡಾ. ಚಿ. ನ . ಮಂಗಳಾ ) ಇವರ ಅನುವಾದಿತ ಕೃತಿ. ಶ್ರೀಹರಿಚರಿತ್ರೆ - ಒಂದು ಸಮೀಕ್ಷೆ, ರಶ್ಮಿ ದರ್ಶನ - ‘ಭಾರತ ಸಿಂಧು ರಶ್ಮಿ’ಯ ವಿವಿಧ ವಿಮರ್ಶಾ ಲೇಖನಗಳ ಸಂಗ್ರಹ, ಸೌಪರ್ಣಿಕ ಇವರ ಸಂಪಾದನೆಗಳು. ಇದಲ್ಲದೆ ಸುಮಾರು ನೂರಕ್ಕೂ ಹೆಚ್ಚು ಲೇಖನಗಳು ವಿವಿಧ ವಿಚಾರ ಸಂಕಿರಣಗಳು, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ .
ಡಾ. ಮಂಗಳಾ ಪ್ರಿಯದರ್ಶಿನಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಮಟ್ಟದ ಬೋರ್ಡ್ ಆಫ್ ಸ್ಟಡೀಸ್ ( BOS ) ಸದಸ್ಯರಾಗಿ, ಮೂರು ಬಾರಿ; ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಮಟ್ಟದ ಬೋರ್ಡ್ ಆಫ್ ಎಕ್ಸಾಮಿನೇಷನ್ ( BOE ) ಅಧ್ಯಕ್ಷರಾಗಿ, ಸದಸ್ಯರಾಗಿ ಮೂರು ಬಾರಿ; ಕರ್ನಾಟಕ ಲೋಕಸೇವಾ ಸೇವಾ ಆಯೋಗದ ಪರೀಕ್ಷರಾಗಿ, ತಜ್ಞ ಸಮಿತಿಯ ಸದಸ್ಯರಾಗಿ; ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕ ಮಟ್ಟದ ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ; ಕನ್ನಡ ಸಂಸ್ಕೃತಿ ಇಲಾಖೆಯ ಪುಸ್ತಕಗಳ ಆಯ್ಕೆ ಸಮಿತಿ ಸದಸ್ಯರಾಗಿ; ದೂರದರ್ಶನ ‘ಚಂದನ’ದ ಧಾರಾವಾಹಿ ಮತ್ತು ಮಹಾಧಾರಾವಾಹಿಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಪಠ್ಯ ಪುಸ್ತಕಗಳ ಸಂಪಾದನೆಯಲ್ಲೂ ಮಹತ್ವದ ಕೊಡುಗೆ ನೀಡಿರುವ ಮಂಗಳಾ ಪ್ರಿಯದರ್ಶಿನಿ ಅವರ ಪರಿಶ್ರಮಗಳಲ್ಲಿ 'ಆಧುನಿಕ ಕನ್ನಡ ಕವಿತೆಗಳು', 'ಪ್ರಾಚೀನ ಕಾವ್ಯಧಾರೆ', 'ಪ್ರಸ್ತುತ‘, ‘ಪ್ರಸಕ್ತ‘, 'ಸುವರ್ಣ ಸಂಪದ‘, 'ಸ್ತ್ರೀ ವಾದ , ಮಹಿಳಾ ಅಧ್ಯಯನ , ಒಂದು ಪ್ರವೇಶಿಕೆ ಪ್ರವೇಶಿಕೆ‘ ಮುಂತಾದವು ಸೇರಿವೆ.
ಮಂಗಳಾ ಪ್ರಿಯದರ್ಶಿನಿ ಅವರದ್ದು ಬಹುಮುಖಿ ಪ್ರತಿಭೆ. ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪ್ರತಿನಿಧಿಯಾಗಿದ್ದಾರೆ. ಅಮೆರಿಕಾದ ಪಿ ಸಿ ಎಲ್ ಸಂಸ್ಥೆ ಹಾಗೂ ಪ್ರಸಾರ ಭಾರತಿಯ ಸಹ ಆಶ್ರಯದಲ್ಲಿ ಆಕಾಶವಾಣಿಗಾಗಿ 3ನೇ ಜಗತ್ತಿನ ಮಹಿಳೆಯರ ಸಮಸ್ಯೆಗಳನ್ನಾಧರಿಸಿದ 104 ಕಂತುಗಳ ಧಾರವಾಹಿ ‘ಬೆಳಕಿನಂಗಳ’ದ ರಚನೆ ಮಾಡಿದ್ದಾರೆ. 'ಮಲ್ಲಿಗೆ' ಮಾಸ ಪತ್ರಿಕೆ ಹಾಗೂ ಬೆಂಗಳೂರು ಮುದ್ರಣಾಲಯ ತಂದಿರುವ ‘ಸಾಹಿತ್ಯ ದರ್ಶಿನಿ' ಕ್ಯಾಲೆಂಡರ್ ರಚನೆ ಮಾಡಿದ್ದಾರೆ. ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜ್ (CIL) ಸಂಸ್ಥೆಯ ‘ಭಾಷಾ ಮಂದಾರ' ಹೊರ ತಂದ ಡಾ . ವಿ. ಕೃ . ಗೋಕಾಕರ ಸಾಕ್ಷ್ಯ ಚಿತ್ರಕ್ಕೆ ಸಾಹಿತ್ಯ ರಚನೆ ಮಾಡಿದ್ದಾರೆ; DSERTಯವರು ರಾಜ್ಯ ಮಟ್ಟದಲ್ಲಿ ಶಾಲಾ ಕಾಲೇಜುಗಳ ಶಿಕ್ಷರಿಗೆ ‘ಹೊಸ ಶಿಕ್ಷಣ ನೀತಿಯಹಿನ್ನಲೆಯಲ್ಲಿ ನಡೆಸಿದ ಕಾರ್ಯಾಗಾರದಲ್ಲಿ ‘ಮಹಿಳೆ ಮತ್ತು ಶಿಕ್ಷಣ' ಕುರಿತಂತೆ ಕೃತಿ ರಚನೆ ಮಾಡಿದ್ದಾರೆ.
ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾಗಿ, ಬೆಂಗಳೂರು ದೂರದರ್ಶನದ ರಾಷ್ಟ್ರೀಯ ದಾಖಲೆಗಾಗಿ ( National Archives ) ರಾಷ್ಟ್ರಕವಿ ಡಾ . ಜಿಎಸ್ ಶಿವರುದ್ರಪ್ಪ ಅವರೊಡನೆ ನಡೆಸಿದ ಸಂದರ್ಶನ 'ಸಂಚಯ'ದಲ್ಲಿ ಪ್ರಸಾರಗೊಂಡಿದೆ. ‘ಶುಭೋದಯ ಕರ್ನಾಟಕ‘ , ಉದಯ ಟಿವಿಯ ‘ಪರಿಚಯ‘ ಸಂದರ್ಶನಗಳು ಪ್ರಸಾರಗೊಂಡಿವೆ. ಕನ್ನಡದ ವಿವಿಧ ಛಾನೆಲ್ಗಳಲ್ಲಿ ಟಾಕ್ ಶೋ , ನೂರಕ್ಕೂ ಹೆಚ್ಚು ಸಂದರ್ಶನ ಕಾರ್ಯಕ್ರಮಗಳು, ಅನೇಕ ಕಾರ್ಯಕ್ರಮಗಳ ನಿರೂಪಣೆ, ಸಾಹಿತ್ಯ ರಚನೆ ಇವರಿಂದ ಆಗಿವೆ. ಕನ್ನಡ ಚಲನ ಚಿತ್ರಗಳಿಗೆ, ಸಾಕ್ಷ್ಯ ಚಿತ್ರಗಳಿಗೆ ಕಂಠ ದಾನ ಮತ್ತು ನಿರೂಪಣೆ ಮಾಡಿದ್ದಾರೆ.
ಡಾ. ಮಂಗಳಾ ಪ್ರಿಯದರ್ಶಿನಿ ಅವರಿಗೆ ಭಾರತೀಯ ಕರ್ನಾಟಕ ಸಂಘದಿಂದ ಅತ್ಯುತ್ತಮ ಮಹಿಳಾ ವಿಮರ್ಶಕಿ; 'ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು‘ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ ರಾಷ್ಟ್ರೀಯ ಮಹಿಳಾ ಕೃತಿ ಪ್ರಶಸ್ತಿ; 'ಶಾಶ್ವತಿ ಪ್ರಶಸ್ತಿ', ಕನ್ನಡ ಸಾಹಿತ್ಯ ಪರಿಷತ್ತಿನ ಶೇಷಮ್ಮ ಭಾಸ್ಕರ ರಾವ್ ಪ್ರಶಸ್ತಿ,‘ಬೈದವ್ವ ಕೇಳಾ ನನ ಮಾತಾ‘ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ ರಾಷ್ಟ್ರೀಯ ಮಹಿಳಾ ಕೃತಿ ಪ್ರಶಸ್ತಿ; ಮೈಕೋ ಕನ್ನಡ ಬಳಗ 'ಕುವೆಂಪು ಸ್ಮಾರಕ ಪ್ರಶಸ್ತಿ'; ಬಸವ ವೇದಿಕೆಯ ವಚನ ಸಾಹಿತ್ಯ ಶ್ರೀ ಪ್ರಶಸ್ತಿ; ವಿಚಾರ ಸಾಹಿತ್ಯಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದ ಎಚ್ ಎಸ್ ಪಾರ್ವತಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಅಬ್ಬಬ್ಬಬ್ಬಾ ಮಂಗಳಾ ಪ್ರಿಯದರ್ಶಿನಿ ಅವರ ಸಾಧನೆ ಓದ್ತಾ ಇದ್ರೇನೇ ನಮಗೆ ಸುಸ್ತಾಗುತ್ತೆ. ಇವರಂತೂ ನಿರಂತರ ಸಾಧನೆ ಮಾಡ್ತಾನೇ ಇದಾರೆ. ಸಾಮಾನ್ಯ ಸಾಧನೆ ಮಾಡಿದವರೆಲ್ಲ ಗಂಭೀರವಾಗಿರ್ತಾರೆ. ಮಂಗಳಾ ಪ್ರಿಯದರ್ಶಿನಿ ಅವರದ್ದು ಸದಾ ನಗು ಮುಖ. ತುಂಬಾ ಸರಳತೆ. ಹಾಗಾಗಿ ಆಗಾಗ ನಾ ಅವರ ಜೊತೆ ಫೇಸ್ಬುಕ್ನಲ್ಲಿ ತರಲೆ ಮಾಡ್ತಾ ಇರ್ತೀನಿ.
ಹಿಂದಿನ ಸಾಲಿನ ಹುಡುಗರಾಗಿ ಬದುಕಿದ ನಮಗೆ ನಿತ್ಯ ನಗೆಮೊಗದ ಡಾ.ಮಂಗಳಾ ಪ್ರಿಯದರ್ಶಿನಿ ಅವರಂತಹ ನಿರಂತರ ಪ್ರಥಮ ರ್‍ಯಾಂಕ್ ಪಡೆದ ಮೊದಲ ಸಾಲಿನವರ ಸ್ನೇಹದ ಆಪ್ತತೆ ಹೆಮ್ಮೆ ತರುವಂತದ್ದಾಗಿದೆ. ಆತ್ಮೀಯರಾದ ಮಂಗಳಾ ಪ್ರಿಯದರ್ಶಿನಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕಗಳು.
Happy birthday DrMangala Priyadarshini, a person of many achievements

ಕಾಮೆಂಟ್‌ಗಳು