ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರಿಬಸವಯ್ಯ


 ಕರಿಬಸವಯ್ಯ 


ಕರಿಬಸವಯ್ಯ ಕನ್ನಡ  ಚಿತ್ರರಂಗ, ಕಿರುತೆರೆ ಮತ್ತು  ರಂಗಭೂಮಿ ಕಂಡ ಉತ್ತಮ ಕಲಾವಿದರಲ್ಲೊಬ್ಬರು. 

ಕರಿಬಸವಯ್ಯ ಹುಟ್ಟಿ ಬೆಳೆದದ್ದು ಬೆಂಗಳೂರಿಗೆ ಸಮೀಪವೇ ಇರುವ ನೆಲಮಂಗಲದ ಕೊಡಿಗೇಹಳ್ಳಿ ಎಂಬ ಗ್ರಾಮದಲ್ಲಿ. ಓದಿದ್ದು ಸಿದ್ಧಗಂಗೆಯಲ್ಲಿ. ಕಲಾವಿದನಾಗಬೇಕೆಂಬ ಕನಸು ಹೊತ್ತು ಬೆಂಗಳೂರು ಸೇರಿದ ಕರಿಬಸವಯ್ಯನವರ ಬದುಕಿಗೆ ಆಸರೆಯಾಗಿದ್ದು ಶೇಷಾದ್ರಿಪುರಂ ಕಾಲೇಜಿನ ಲ್ಯಾಬ್ ಅಸಿಸ್ಟೆಂಟ್ ಕೆಲಸ.

ಕಲೆಯ ಗೀಳು ಹತ್ತಿಸಿಕೊಂಡವರಿಗೆ ಅದೆಂಥದ್ದೇ ಉದ್ಯೋಗ, ಸಂಪಾದನೆಯಿದ್ದರೂ, ಮುಖಕ್ಕೆ ಬಣ್ಣ ಹಚ್ಚುವ ತನಕ ಅವರ ಹಸಿವು ನೀಗುವುದಿಲ್ಲ. ಕರಿಬಸವಯ್ಯ ಕೂಡ ಅದಕ್ಕೆ ಹೊರತಾದವರಲ್ಲ. 1979ರ ವೇಳೆಗೆ ಕರಿಬಸವಯ್ಯ ತಮ್ಮ ಸ್ನೇಹಿತ ಹಾಗೂ ರಂಗ ನಿರ್ದೇಶಕ ಕೆ. ಎಸ್. ಡಿ. ಎಲ್. ಚಂದ್ರು ಮುಖಾಂತರ ‘ರೂಪಾಂತರ’ ಎಂಬ ರಂಗತಂಡವನ್ನು ಸೇರಿದರು. ಒಮ್ಮೆ ಕುಂ. ವೀರಭದ್ರಪ್ಪನವರ ಸಣ್ಣಕಥೆಗಳನ್ನು ಆಧರಿಸಿ ಅಮರ್ ನಿರ್ದೇಶಿಸಿದ್ದ ‘ಕತ್ತಲನು ಬೆಳಕಿನ ತ್ರಿಶೂಲ ಹಿಡಿತ ಕಥೆ’ ಎಂಬ ರಂಗಪ್ರಯೋಗ ನಡೆದಿತ್ತು. ಆಗ ತಂಡದ ನಟನೊಬ್ಬ ಕತ್ತಲನ ಪಾತ್ರವನ್ನು ಒಲ್ಲೆ ಎಂದಾಗ ಆ ಅವಕಾಶ ಕರಿಬಸವಯ್ಯರ ಪಾಲಾಯಿತು. ನಾಟಕದ ಮೊದಲ ಪ್ರದರ್ಶನದಲ್ಲೇ ಕರಿಬಸವಯ್ಯನವರ ಖದರ್ರಿಗೆ ಇಡೀ ರಂಗಮಂದಿರ ಬೆಚ್ಚಿಬಿದ್ದಿತ್ತು. ಆ ನಾಟಕದ ಮೂಲಕ ಕರಿಬಸವಯ್ಯ ತಾನೊಬ್ಬ ಪರಿಪೂರ್ಣ ನಟ ಎಂಬುದನ್ನು ಇಡೀ ಸಾಂಸ್ಕೃತಿಕ ಲೋಕಕ್ಕೆ ಜಾಹೀರು ಮಾಡಿದರು.

ವ್ಯವಸ್ಥೆಯ ಲೋಪಗಳ ವಿರುದ್ಧ ಸಿಡಿದೆದ್ದು ತ್ರಿಶೂಲ ಹಿಡಿಯುವ ‘ಕತ್ತಲ’ನ ಪಾತ್ರ ಕರಿಬಸವಯ್ಯರ ಬದುಕಿನ ಮೊಟ್ಟಮೊದಲ ಟರ್ನಿಂಗ್ ಪಾಯಿಂಟ್. ನಂತರ ಪಿ. ಲಂಕೇಶರ ‘ಗುಣಮುಖ’ ದ ಅಲಾವಿಖಾನ್, ‘ಮುಸ್ಸಂಜೆ ಕಥಾಪ್ರಸಂಗ’ದ ಬೂಸಿ ಬಸ್ಯ, ‘ತಲೆದಂಡ’ದ ಬಸವಣ್ಣನ ಪಾತ್ರ ಹಾಗೂ ತೇಜಸ್ವಿಯವರ ‘ಕರ್ವಾಲೋ’ದ ಬಿರಿಯಾನಿ ಕರಿಯನ ಪಾತ್ರಗಳು ಕರಿಬಸವಯ್ಯನವರಿಗೋಸ್ಕರವೇ ಸೃಷ್ಟಿಸಿದಂತಿದ್ದವು. 

ಹೀಗೆ ರಂಗಭೂಮಿಯನ್ನು ಬಿಗಿದಪ್ಪಿ, ನಿರಂತರವಾಗಿ ನಟಿಸುತ್ತಿದ್ದ ಕರಿಬಸವಯ್ಯ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸಿದ್ದು ‘ದೊಡ್ಡಮನೆ’ ಧಾರಾವಾಹಿಯಲ್ಲಿ. ಆದರೆ ಕಿರುತೆರೆಯಲ್ಲಿ ಕರಿಬಸವಯ್ಯನವರಿಗೊಂದು ಶಾಶ್ವತ ಸ್ಥಾನ ಕಲ್ಪಿಸಿದ್ದು ‘ಶೋಧ’ ಎಂಬ ಧಾರಾವಾಹಿ. ಎನ್. ಎಸ್. ಶಂಕರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಮಾಸ್ಟರ್ ಮಂಜುನಾಥ್, ಮೈನಾ ಚಂದ್ರು ಮುಂತಾದವರು ನಟಿಸಿದ್ದರು. ಕಾಲೇಜಿನ ಹುಡುಗರು ಒಮ್ಮೆ ಟ್ರಕ್ಕಿಂಗ್ ಹೊರಟಾಗ ಅವರೊಂದಿಗೆ ಹೊರಡುವ ಸಹಾಯಕನ ಪಾತ್ರದಲ್ಲಿ ಕರಿಬಸವಯ್ಯ ನಟಿಸಿದ್ದರು.

ಅಲ್ಲಿಂದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ಕರಿಬಸವಯ್ಯನವರಿಗೆ ಹಿರಿತೆರೆಯಲ್ಲಿ ಅವಕಾಶ ಕೊಟ್ಟಿದ್ದು ನಾಗತಿಹಳ್ಳಿ ಚಂದ್ರಶೇಖರ್. ತಮ್ಮ ನಿರ್ದೇಶನದ ಮೊದಲ ಚಿತ್ರ ‘ಉಂಡೂ ಹೋದ ಕೊಂಡೂ ಹೋದ’ ಚಿತ್ರದಲ್ಲಿ ಹಾಲು, ಬೆಣ್ಣೆಗೆ ಆಸೆಪಟ್ಟು ಕೌ ಇನ್ಸ್‌ಪೆಕ್ಟರ್‌ನಿಂದ ಮೋಸ ಹೋಗುವ ಕರಿಮಳೆ ಪಾತ್ರವನ್ನು ನಾಗತಿಹಳ್ಳಿ ನೀಡಿದ್ದರು. ನಂತರ ‘ಕೊಟ್ರೇಶಿ ಕನಸು’ ಚಿತ್ರದಲ್ಲಿ ತನ್ನ ಮಗನನ್ನು ವಿದ್ಯಾವಂತನನ್ನಾಗಿ ಮಾಡಲು ಹೆಣಗಾಡುವ ತಂದೆ ದಿಬ್ಬನ ಪಾತ್ರದಲ್ಲಿ ಕರಿಬಸವಯ್ಯ ಅದೆಷ್ಟು ಸಹಜವಾಗಿ ನಟಿಸಿದ್ದರೆಂದರೆ, ಅವರ ನಟನೆಗೆ ರಾಜ್ಯ ಪ್ರಶಸ್ತಿಯೂ ದೊರಕಿತು. ನಂತರ ಚಿತ್ರರಂಗದಲ್ಲಿ ಭದ್ರವಾಗಿ ಕಾಲೂರಿದ ಆತ ಎಂದೂ ಹಿಂತಿರುಗಿ ನೋಡುವ ಪ್ರಮೇಯವೇ ಒದಗಿಬರಲಿಲ್ಲ. ರೂಪವಂತ ಹುಡುಗಿಯನ್ನು ಮದುವೆಯಾಗಲು ಇಚ್ಛಿಸುವ ‘ಜನುಮದ ಜೋಡಿ’ಯ ಕುಡುಕ ಅಂದಾನಿ ಪಾತ್ರದ ಮೂಲಕ ಎಲ್ಲ ಬಗೆಯ ಚಿತ್ರಾಸಕ್ತರನ್ನು ಕರಿಬಸವಯ್ಯ ತನ್ನತ್ತ ಸೆಳೆದರು.

ಮುಂದೆ ಕಾಲೇಜಿನ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದ ಕರಿಬಸವಯ್ಯ ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ನಟನೆ ಮತ್ತು  ಹರಿಕಥಾ ಕ್ಷೇತ್ರಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡರು.  ಮೇಲ್ಕಂಡ ಚಿತ್ರಗಳಲ್ಲದೆ,  ಗಲಾಟೆ ಅಳಿಯಂದ್ರು, ಮುಂಗಾರಿನ ಮಿಂಚು, ಪೊಲೀಸ್ ಸ್ಟೋರಿ, ಉಲ್ಲಾಸ ಉತ್ಸಾಹ, ಮುಂಗಾರಿನ ಮಿಂಚು, ಯಾರಿಗೆ ಸಾಲುತ್ತೆ ಸಂಬಳ ಸೇರಿದಂತೆ ಇನ್ನೂರಕ್ಕೂ ಹೆಚ್ಚು  ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.  

ತೆರೆಯ ಮೇಲೆ ನೋಡುಗರನ್ನು ನಕ್ಕು ನಲಿಸುತ್ತಿದ್ದ ಕರಿಬಸವಯ್ಯ ಹರಿಕಥೆ ಮಾಡಲು ನಿಂತರೆಂದರೆ ನೆರೆದಿರುವವರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ದುಬಿಡುತ್ತಿದ್ದರು. ಅಂಥ ಅಸಾಧಾರಣ ಪಾಂಡಿತ್ಯ ಅವರದ್ದು.

ತಾನು ನೋವಿನಲ್ಲಿ ಬೆಂದರೂ ಕಲಾರಂಗದಲ್ಲಿ ಜನಸ್ತೋಮವನ್ನು ನಕ್ಕು ನಲಿಸಿದ ಕರಿಬಸವಯ್ಯ ವಿಧಿಯ ಕರೆಯೋ, ಎಲ್ಲಾ ನೋವಿನಿಂದ ಬಿಡುಗಡೆಯ ಕಡೆಗೋ ಎಂಬಂತೆ, ತಮ್ಮ ಮಧ್ಯವಯಸ್ಸಿನಲ್ಲೇ ಈ ಲೋಕದಿಂದ ಹೊರನಡೆದುಬಿಟ್ಟರು.  2013 ವರ್ಷ ಫೆಬ್ರವರಿ 3ನೇ ದಿನಾಂಕದಂದು ಕರಿಬಸವಯ್ಯ ರಸ್ತೆ ಅಪಘಾತದ ದೆಸೆಯಿಂದಾಗಿ ಈ ಲೋಕವನ್ನು ಅಗಲಿದರು.  

ಕರಿಬಸವಯ್ಯ ಅವರು ತಾವು ನಿರ್ವಹಿಸಿದ ಪಾತ್ರಗಳ ಮೂಲಕ ಕಲಾಭಿಮಾನಿಗಳ ಹೃದಯದಲ್ಲಿ ಜೀವಂತರಿದ್ದಾರೆ.  ಹೀಗೆ ಬರೆದಾಗಲೆಲ್ಲ ಅನಿಸುತ್ತೆ.  "ನಿಜವಾಗ್ಲೂ ಲೋಕ ಹೋದವರನ್ನ ನೆನೆಯುತ್ತಾ? ನಾವು ಹೋದ ಮೇಲೂ ಅಷ್ಟೇಯಾ" 😌

Actor Late Karibasavaiah 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ