ಟಿ. ಜಿ. ಶ್ರೀನಿಧಿ
ಟಿ. ಜಿ. ಶ್ರೀನಿಧಿ
ನಮ್ಮ ಟಿ.ಜಿ. ಶ್ರೀನಿಧಿ ಇದಾನಲ್ಲ ಅವನದ್ದೊಂದು ವಿಶಿಷ್ಟ ಹಾದಿ. ಎಲ್ಲ ಮಕ್ಕಳೂ ನಾವು ಇಂಗ್ಲಿಷ್ ಶಾಲೆಗೆ ಹೋಗ್ತೀವಿ ಅಂದ್ರೆ, ನಾನು ತನ್ನ ಶ್ರೀಮಂಗಲ ಗ್ರಾಮದ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದೋದು ಅಂದ. ಕನ್ನಡ ಮೀಡಿಯಂ ಓದಿದವರು ಹೆಚ್ಚು ಏನು ಓದುಕ್ಕಾಗುತ್ತೆ ಅಂತ ಅನ್ನೋ ಸಮಯದಲ್ಲಿ ಬಿಇ, ಎಂಟೆಕ್ ಮಾಡ್ದಾ. ಈ ಇಂಜಿನಿಯರಿಂಗ್ ಓದೋ ಹುಡುಗರಿಗೆ ಕನ್ನಡ ಗೊತ್ತಿದ್ಯಾ ಅನ್ನೋ ಕಾಲದಲ್ಲೇ ಪತ್ರಿಕೆಗಳಲ್ಲಿ ಸಹಸ್ರಾರು ಲೇಖನಗಳನ್ನು ಬರೆದಿದ್ದ. ಕನ್ನಡದಲ್ಲಿ ತಂತ್ರಜ್ಞಾನವನ್ನು ಸರಿಯಾಗಿ ಅಭಿವ್ಯಕ್ತಿಸೋದು ಸಾಧ್ಯವೇ ಇಲ್ಲ ಅನ್ನೋ ಕಾಲದಲ್ಲಿ ತಂತ್ರಜ್ಞಾನವನ್ನು ಹೇಗೆ ಕನ್ನಡದಲ್ಲಿ ಸುಲಲಿತವಾಗಿ ಬಳಸಬಹುದು ಎಂದು ಮನದಟ್ಟಾಗುವಂತಹ ತಂತ್ರಜ್ಞಾನ ಕುರಿತಾದ ಪುಸ್ತಕಗಳನ್ನು ಕನ್ನಡದಲ್ಲಿ ಬರೆದ. ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬಹುಮಾನಕ್ಕೂ ಅರ್ಹನಾದ. ಆತ ಮಾಡಿದ ಕನ್ನಡದ ಬ್ಲಾಗ್ e-ಜ್ಞಾನ ಅತ್ಯುತ್ತಮ ಬ್ಲಾಗುಗಳಲ್ಲಿ ಒಂದು ಎಂದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿತು. ಇದೆಲ್ಲ ಮಾಡಿದ ಈತ ತನ್ನ ಐಟಿ ಕೆಲಸ ಬಿಟ್ಟುಬಿಟ್ನ?. ಖಂಡಿತ ಇಲ್ಲ ಆತ ಅಂತರರಾಷ್ಟ್ರೀಯ ಐಟಿ ಸಂಸ್ಥೆಯಲ್ಲಿ ಅಧಿಕಾರಿ ಕೂಡಾ. ದೆಹಲಿಯಲ್ಲಿ ನಡೆಯುವ ಇಂಡಿಯಾ ಇಂಟರ್ನ್ಯಾಶನಲ್ ಸೈನ್ಸ್ ಫೆಸ್ಟಿವಲ್ನಲ್ಲಿ ಪ್ರಬಂಧ ಮಂಡನೆಗೆ ನಿರಂತರವಾಗಿ ಆಹ್ವಾನ ಪಡೆಯುತ್ತಿದ್ದಾನೆ. ಸಾಮಾಜಿಕ ಕಾಳಜಿಯಿಂದ ಊರೂರಿನ ಶಾಲೆ ಶಾಲೆಗಳಿಗೆ ಹೋಗಿ ಮಕ್ಕಳಿಗೆ ತಂತ್ರಜ್ಞಾನವನ್ನು ಅರ್ಥವಾಗುವಂತೆ ಕನ್ನಡದಲ್ಲಿ ಹೇಳುತ್ತಿದ್ದಾನೆ. e-ಜ್ಞಾನ ಟ್ರಸ್ಟ್ ಸ್ಥಾಪಿಸಿ ಬಡಮಕ್ಕಳಿಗೆ ಪುಸ್ತಕಗಳನ್ನು ತಲುಪಿಸುತ್ತಿದ್ದಾನೆ, ತಂತ್ರಜ್ಞಾನದಿಂದ ಭಾಷೆಯ ಉಪಯೋಗವನ್ನು ಹೇಗೆ ಉತ್ತಮಪಡಿಸಬಹುದು ಎಂಬ ಬಗ್ಗೆ ಎಲ್ಲೆಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾನೆ. ನಮ್ಮ ಕನ್ನಡದಲ್ಲಿ ಉತ್ತಮ ತಂತ್ರಜ್ಞಾನ ಬಳಕೆಯ ಅಂತರಜಾಲ ವ್ಯವಸ್ಥೆ ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಬಹುದಾದಷ್ಟು ಸುಸಜ್ಜಿತ ತಂತ್ರಜ್ಞಾನ ಬಳಕೆ ಮಾಡಿ ತನ್ನ ejnana.com ಆನ್ನು ಆಧುನಿಕಗೊಳಿಸಿ ಕನ್ನಡಿಗರಿಗೆ ಅರ್ಪಿಸಿದ್ದಾನೆ. ಕನ್ನಡ ಭಾಷೆಯ ಅಭಿಮಾನವನ್ನು ಕೇವಲ ಘೋಷಣೆ ಮಾಡಿಕೊಂಡು ದಿನಬೆಳಗಾದರೆ ಸ್ವಾರ್ಥಕ್ಕೋಸ್ಕರ ಹೋರಾಡುವ ಮಂದಿಯಿಂದ ಕನ್ನಡ ಉಳಿದು ಬೆಳೆಯುವುದು ಸಾಧ್ಯವಿಲ್ಲ. ಅದಕ್ಕೆ ಆಸಕ್ತ ಶ್ರದ್ಧೆ ಬೇಕು. ಅಂತಹ ಶ್ರದ್ಧೆ ನಮ್ಮ ಟಿ.ಜಿ. ಶ್ರೀನಿಧಿಯ ಸೃಜನಶೀಲ ಕಾರ್ಯಗಳಲ್ಲಿದೆ.
ನಮ್ಮ ಟಿ. ಜಿ. ಶ್ರೀನಿಧಿ ಹುಟ್ಟಿದ ದಿನ ಫೆಬ್ರುವರಿ 24, 1983. ಹುಟ್ಟಿದ್ದು ಅರಸೀಕೆರೆ ಬಳಿಯ ಬಾಣಾವರದಲ್ಲಿ. ಓದಿದ್ದು ನಾಗರಹೊಳೆ ಅರಣ್ಯಪ್ರದೇಶಕ್ಕೆ ಸಮೀಪವಿರುವ ವಿರಾಜಪೇಟೆ ತಾಲ್ಲೂಕಿನ ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ. ತಂದೆ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಪ್ರಸಿದ್ಧ ಬರಹಗಾರರೂ ಆದ (ನನ್ನ ಅಣ್ಣ) ಟಿ. ಎಸ್. ಗೋಪಾಲ್ Thiru Srinivasachar Gopal. ತಾಯಿ ಗೀತ Geetha Gopal.
ತಮ್ಮ ಕ್ರಿಯಾಶೀಲ ತಂದೆತಾಯಿಗಳ ನೆರಳಿನಲ್ಲಿ ಬೆಳೆದು ಬಂದ ಶ್ರೀನಿಧಿ ಶ್ರೀಮಂಗಳದಂತಹ ಪುಟ್ಟ ಗ್ರಾಮೀಣ ಕನ್ನಡ ಮಾಧ್ಯಮದ ಶಾಲೆಯಲ್ಲಿ ಬೆಳೆದು ಬಂದರೂ ನಿರಂತರವಾಗಿ ಓದಿನಲ್ಲಿ ಔನ್ನತ್ಯವನ್ನು ಕಾಪಾಡಿಕೊಂಡು ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಸ್ನಾತಕೋತ್ತರ ಪದವಿಗಳನ್ನು ಪಡೆದರು. ಹೀಗೆ ಹುಡುಗರು ಬುದ್ಧಿವಂತರಾಗುತ್ತಾರೆ ಎಂದರೆ ಈ ಕಾಲದಲ್ಲಿ ಯಾವಾಗಲೂ ಟ್ಯೂಶನ್, ಓದು ಹೀಗೆ ಮುಳುಗಿರುತ್ತಾರೆ, ಸಾಮಾನ್ಯವಾಗಿ ಕನ್ನಡವನ್ನು ಇಂಗ್ಲಿಷಿನಲ್ಲಿ ಸಂಭಾಷಿಸುತ್ತಾರೆ ಎಂದರ್ಥ. ಆದರೆ ಶ್ರೀನಿಧಿಯ ವಿಚಾರದಲ್ಲಿ ಅದೆಲ್ಲ ಎಷ್ಟು ಬೇಕೋ ಅಷ್ಟು ಮಾತ್ರ. ಪ್ರಕೃತಿ ಪ್ರೇಮ, ಕಲಾತ್ಮಕ – ವೈಜ್ಞಾನಿಕ – ಕೌತೂಹಲಿಕ ಆಸಕ್ತಿಗಳು ಶ್ರೀನಿಧಿಯಲ್ಲಿ ನಿರಂತರವಾಗಿದ್ದು ಓದಿನ ದಿನಗಳಿಂದಲೇ ಅವರು ತಮ್ಮ ಈ ಆಸಕ್ತಿಗಳನ್ನು ಸಮಾಜದಲ್ಲಿ ಅಭಿವ್ಯಕ್ತಿಸುತ್ತಾ ನಡೆದರು. ಓದಿನ ದಿನಗಳಲ್ಲೇ ಕನ್ನಡದಲ್ಲಿ ನೂರಾರು ಲೇಖನಗಳನ್ನು ಬರೆದರು. ಪ್ರಸಿದ್ಧ ಪತ್ರಿಕೆಗಳ ಅಂಕಣಕಾರರಾದರು. ಪುಸ್ತಕಗಳನ್ನು ಪ್ರಕಟಿಸಿದರು. ವಿವಿಧ ವೇದಿಕೆಗಳಲ್ಲಿ ವಿಚಾರ ವಿನಿಮಯಗಳಲ್ಲಿ ಆಹ್ವಾನಿತರಾದರು. ಇವೆಲ್ಲವುಗಳ ನಡುವೆ ಸಜ್ಜನಿಕೆ, ಆತ್ಮೀಯ ನಡವಳಿಕೆ, ನಿರಂತರ ಜ್ಞಾನಾರ್ಜನೆ, ಕ್ರಿಯಾಶೀಲ ಅಭಿವ್ಯಕ್ತಿ, ಸೃಜನಶೀಲ ಸೃಷ್ಟಿ ಇವೆಲ್ಲವುಗಳನ್ನೂ ತಮ್ಮ ಸಹಜ ಗುಣಗಳನ್ನಾಗಿಸಿಕೊಂಡು ಮುನ್ನಡೆದಿದ್ದಾರೆ.
ಟಿ ಜಿ. ಶ್ರೀನಿಧಿ ಅವರು ಇಂದಿನ ಯುವ ಪೀಳಿಗೆಯ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತಾದ ಕನ್ನಡ ಬರಹಗಾರರಲ್ಲಿ ಎದ್ದು ಕಾಣುವಂತಹವರಾಗಿದ್ದು, ಅವರ ‘ಹಾರುವ ಕನಸನು ಕಂಡವರು’, ‘ಅಂತರಿಕ್ಷದ ಅದ್ಭುತಗಳು’, ‘ವೆಬ್ ವಿಹಾರ’, ‘ಅವಕಾಶ ಅಪಾರ’, ಹಂಪಿ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರಕ್ಕಾಗಿನ ‘ಮಾಹಿತಿ ಮತ್ತ ಸಂವಹನ ತಂತ್ರಜ್ಞಾನ’, ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’, ‘ಫ್ಲಾಪಿಯಿಂದ ಫೇಸ್ಬುಕ್’ವರೆಗೆ, ‘ಕಂಪ್ಯೂಟರ್ ಪ್ರಪಂಚ’, ‘ಡಿಜಿಟಲ್ ಕ್ಯಾಮರಾ ಮೋಡಿ – ಕ್ಲಿಕ್ ಮಾಡಿ ನೋಡಿ’, ‘ಕೆ. ಪಿ. ರಾವ್’, ‘ಪ್ರಯೋಗಶೀಲ ಸಸ್ಯ ವಿಜ್ಞಾನಿ ಬಿ. ಜಿ. ಎಲ್. ಸ್ವಾಮಿ’, ‘ಕಂಪ್ಯೂಟರ್’ಗೆ ಪಾಠ ಹೇಳಿ’, ‘ಟೆಕ್ ಬುಕ್’, ‘ಕಂಪ್ಯೂಟರ್ ಪದ ವಿವರಣ ಕೋಶ’, ‘ನುಡಿಯ ನಾಳೆಗಳು’, 'ಪುಟ್ಟ-ಪುಟ್ಟಿಯ ಪರಿಸರ ಪಾಠಗಳು', 'ಬೆರಳ ತುದಿಯ ಬೆರಗು' ಮುಂತಾದ ಪುಸ್ತಕಗಳು ಓದುಗರಿಂದ, ವಿಮರ್ಶಕರಿಂದ ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದು ಅನೇಕ ಮರುಮುದ್ರಣಗಳನ್ನು ಕಾಣುತ್ತಿವೆ. 'ಅಡ್ಯನಡ್ಕ ಕೃಷ್ಣಭಟ್ಟರ ಆಯ್ದಬರಹಗಳು' ಅಂತಹ ಪುಸ್ತಕಗಳನ್ನು ಸಂಪಾದನೆ ಕೂಡಾ ಮಾಡಿದ್ದಾರೆ.
ಅವರ ಬರಹಗಳು ಎಲ್ಲ ಜನಪ್ರಿಯ ಪತ್ರಿಕೆಗಳಲ್ಲೂ ನಿರಂತರವಾಗಿ ಪ್ರಕಟಗೊಳ್ಳುತ್ತಿವೆ. ಹೀಗೆ ಪ್ರಕಟಗೊಂಡಿರುವ ಲೇಖನಗಳ ಸಂಖ್ಯೆಯೇ 2000ಕ್ಕೂ ಹೆಚ್ಚು. ಇವೆಲ್ಲಕ್ಕೂ ಮಿಗಿಲಾಗಿ ಅಥವ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಹೊರಹೊಮ್ಮಿರುವ ಅವರ ಇಜ್ಞಾನ.ಕಾಂ (www.ejnana.com) ಕನ್ನಡ ಭಾಷೆಯಿಂದ ವಿಜ್ಞಾನಕ್ಕೆ ಸಲ್ಲುತ್ತಿರುವ ಶ್ರೇಷ್ಠ ಗೌರವವೇ ಆಗಿದೆ. ಕೆಲ ವರ್ಷದ ಹಿಂದೆ ಇದು ತನ್ನ ಸೃಜನಶೀಲತೆಗಾಗಿ ‘ಇಂಡಿಯಾ ಬ್ಲಾಗರ್ ಅವಾರ್ಡ್’ ಗೌರವಕ್ಕೆ ಪಾತ್ರವಾಯಿತು. ಇದರಲ್ಲಿ ವಿಜ್ಞಾನ ಆಸಕ್ತರಿಗೆ, ಕನ್ನಡದಲ್ಲಿ ವಿಜ್ಞಾನ ಸಂವಹನ ಇಚ್ಛಿಸುವವರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪುಟಾಣಿಗಳಿಗೆ ಕೂಡಾ ಮಹತ್ವದ ಜ್ಞಾನ ಭಂಡಾರವಿದೆ. ಅವರ ‘ಶ್ರೀನಿಧಿಯ ಪ್ರಪಂಚ’ ಬ್ಲಾಗ್ ಮತ್ತೊಂದು ಕ್ರಿಯಾಶೀಲ ಕನ್ನಡ ತಾಣ. ಇವರು ತಮ್ಮ ಪುಸ್ತಕಗಳಿಗೆ ಮಾತ್ರವಲ್ಲದೆ ಇತರ ಹಲವಾರು ಬರಹಗಾರರ ಪುಸ್ತಕಗಳಿಗೆ ವಿನ್ಯಾಸವನ್ನು ಕೂಡಾ ಮಾಡಿದ್ದಾರೆ.
ಪ್ರತಿಷ್ಠಿತ ಸಾಫ್ಟ್ವೇರ್ ಉದ್ಯಮದಲ್ಲಿನ ಅಂತರರಾಷ್ಟ್ರೀಯ ಮಟ್ಟದ ಕಾರ್ಯನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಆಸಕ್ತಿಗಳ ಜೊತೆಗೆ ಪ್ರಕೃತಿ, ಅರಣ್ಯ ಸಂಪತ್ತು, ಚಾರಿತ್ರಿಕ ತಿಳುವಳಿಕೆ, ಸಾಹಿತ್ಯಕ ಅಧ್ಯಯನ, ಛಾಯಾಗ್ರಹಣ, ಸಾಂಸ್ಕೃತಿಕ ಕ್ಷೇತ್ರಾಧ್ಯಯನ ಹೀಗೆ ವಿವಿಧ ಆಸಕ್ತಿಗಳಲ್ಲಿ ತಮ್ಮನ್ನು ವ್ಯಾಪಿಸಿಕೊಂಡಿರುವ ಶ್ರೀನಿಧಿ, ಆಳ್ವಾಸ್ ನುಡಿಸಿರಿ, ಹಲವು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ಕರ್ನಾಟಕ ಮತ್ತು ಭಾರತದ ವಿವಿದೆಡೆಗಳಲ್ಲಿನ ಪ್ರಬಂಧ ಮಂಡನೆಯೂ ಒಳಗೊಂಡಂತೆ, ವಿವಿಧ ವಿಜ್ಞಾನ ಕಮ್ಮಟ ಮತ್ತು ವಿಚಾರ ಗೋಷ್ಠಿಗಳಲ್ಲಿ ಪ್ರಾತಿನಿಧ್ಯ, ಹಂಪಿ ವಿಶ್ವವಿದ್ಯಾಲಯದಲ್ಲಿ ಆಹ್ವಾನಿತ ಉಪನ್ಯಾಸಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಣಜ’ಕ್ಕೆ ಸಲಹೆಗಾರ ಹೀಗೆ ವಿವಿಧ ರೀತಿಯಲ್ಲಿ ಜನಸಮುದಾಯದ ನಡುವೆ ವಿಶಿಷ್ಟರಾಗಿ ಕಂಡಿದ್ದಾರೆ. ಭಾರತ ಸರ್ಕಾರದ ವಿಜ್ಞಾನ ಪ್ರಕಟಣೆ 'ಜರ್ನಲ್ ಆಫ್ ಸೈನ್ಟಿಫಿಕ್ ಟೆಂಪರ್' ಸಹಾ ಶ್ರೀನಿಧಿ ಅವರ ಬರಹವನ್ನು ಪ್ರಕಟಿಸಿದೆ. ವಿಜಯ ಕರ್ನಾಟಕ ಪತ್ರಿಕೆ 2019ರ ಪ್ರಾರಂಭದಲ್ಲಿ ಸಮೀಕ್ಷಿಸಿದ ಟಾಪ್ ಟೆನ್ ಯುವ ಸಾಧಕರಲ್ಲಿ ಶ್ರೀನಿಧಿ ಒಬ್ಬರು. ಜರ್ಮನಿಯ 'Falling Walls Breakthroughs of the year 2020’ ಪರಿಗಣನಾ ಪಟ್ಟಿಯ 'ವಿಜ್ಞಾನ ಸಾಧನಾ' ವಿಭಾಗದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು.
ಯುವಕ ಶ್ರೀನಿಧಿ ಸಾಕಷ್ಟು ಸಾಧಿಸಿದ್ದಾರೆ. ಈ ಕಿರು ವಯಸ್ಸಿನಲ್ಲೇ ತಮ್ಮ ಪ್ರಸಿದ್ಧ ಪುಸ್ತಕ ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’ ಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕನ್ನಡ ನಾಡಿನ ಗೌರವಾನ್ವಿತ ಹಿರಿಯರ ಮಾರ್ಗದರ್ಶನದಲ್ಲಿ ‘ಇಜ್ಞಾನ ಟ್ರಸ್ಟ್’ ಸ್ಥಾಪಿಸಿ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಿಗೆ ವಿಶಾಲ ವ್ಯಾಪ್ತಿ ನೀಡಿ ವಿಶೇಷವಾಗಿ ವಿದಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಕನ್ನಡದಲ್ಲಿ ಮೂಡಿಸುವುದರ ಬಗ್ಗೆ ವಿಶೇಷ ಯೋಜನೆಗಳನ್ನು ರೂಪಿಸುತ್ತಾ ವಿಶಿಷ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ಇವರ ಬದುಕು ಸುಂದರವಾಗಿರಲಿ. ಇವರ ಕೊಡುಗೆಗಳು ಕನ್ನಡದ ಶ್ರೇಷ್ಠತೆಯನ್ನು, ವೈಜ್ಞಾನಿಕ ಕೌತುಕಗಳನ್ನು ನಿರಂತರ ಪ್ರಜ್ವಲಿಸುತ್ತಿರಲಿ, ಕನ್ನಡದ ಬಗ್ಗೆ ಪ್ರೀತಿಯಿಂದ ಕೆಲಸ ಮಾಡುತ್ತಿರುವ ನನ್ನಂತವರನ್ನು ಹೀಗೇ ಪ್ರೇರಿಸುತ್ತಿರಲಿ ಎಂದು ಆಶಿಸುತ್ತಾ ಶ್ರೀನಿಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳೋಣ.
On the birth day of our young writer and great inspiration Srinidhi TG
ಅಪರೂಪದ ಸಾಧಕರಾಗಿದ್ದೀರಿ ನಿಮಗೆ ದೇವರು ಆರೋಗ್ಯ ಆಯಸ್ಸು ನೆಮ್ಮದಿ ಕೊಟ್ಟು ಕಾಪಾಡಲಿ
ಪ್ರತ್ಯುತ್ತರಅಳಿಸಿ