ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಳಿನಿ ಮೂರ್ತಿ


 ನಳಿನಿ ಮೂರ್ತಿ


ಡಾ. ನಳಿನಿ ಮೂರ್ತಿ ಅವರು ವಿಜ್ಞಾನ ಸಂಶೋಧಕರಾಗಿ, ಸಂವಹನ ತಂತ್ರಜ್ಞರಾಗಿ, ಕನ್ನಡದ ಬರಹಗಾರರಾಗಿ ಮತ್ತು ಕಲೋಪಾಸಕರಾಗಿ ಪ್ರಸಿದ್ಧರಾಗಿದ್ದವರು.

ನಳಿನಿ ಮೂರ್ತಿಯವರು  1937ರ ಫೆಬ್ರುವರಿ 24ರಂದು ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ಎಂ.ಆರ್. ಸೀತಾರಾಮ್ ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್  ಆಗಿದ್ದರು. ತಾಯಿ ಅನ್ನಪೂರ್ಣ ಅವರು.  

ನಳಿನಿ ಅವರ ಪ್ರಾರಂಭಿಕ ವಿದ್ಯಾಭ್ಯಾಸ ಶಿಂಷಾದಲ್ಲಿ ನೆರವೇರಿತು.  ಗಣಿತದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮರಾಗಿ ಪದವಿಯನ್ನು ಗಳಿಸಿದ ನಳಿನಿ ಮೂರ್ತಿ  ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಿ ಎಲೆಕ್ಟ್ರಿಕಲ್ ಕಮ್ಯೂನಿಕೇಶನ್ ಓದಿದರು.  ಜೊತೆಗೆ ಇಂಡಿಯನ್ ಸರ್ವೀಸಸ್ ಪರೀಕ್ಷೆಯಲ್ಲೂ ತೇರ್ಗಡೆಯಾದರು.

ಪತಿ ಎಸ್ ನರಸಿಂಹಮೂರ್ತಿಯವರೊಡನೆ ಜರ್ಮನಿಗೆ ಪಯಣಿಸಿದ ನಳಿನಿ ಮೂರ್ತಿಯವರು ಇಂಗ್ಲೆಂಡಿನ ಮ್ಯಾಂಚೆಸ್ಟರಿನಲ್ಲಿ ಎಂಟೆಕ್ ಪದವಿ ಪಡೆದರು.  ನಂತರ ವಾಪಸ್ಸಾಗಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ಸಂಶೋಧನಾ ಕಾರ್ಯಕ್ಕಿಳಿದರು.  ಇಷ್ಟಾದರೂ ಇನ್ನೂ ಸಾಧಿಸಬೇಕೆಂಬ ತುಡಿತ ಅವರಲ್ಲಿ ನಿರಂತರವಾಗಿ  ತುಂಬಿತ್ತು.  ಪುನಃ ವಿದೇಶ ಪ್ರವಾಸ ಕೈಗೊಂಡು 1967ರಲ್ಲಿ ಕೆನಡಾದ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪಿಎಚ್‍.ಡಿ ಗಳಿಸಿದರು.  

ವಿದೇಶದಲ್ಲಿ ನೆಲೆಸಿದ್ದರೂ, ತಮ್ಮ ಅಪಾರ ಶೈಕ್ಷಣಿಕ ಮತ್ತು ವೈಜ್ಞಾನಿಕ  ಸಂಶೋಧನೆಗಳ ಮಧ್ಯದಲ್ಲಿಯೂ ಡಾ. ನಳಿನಿ ಮೂರ್ತಿ ಅವರು ಕನ್ನಡಕ್ಕೆ ಅಪೂರ್ವ ಕಥೆ, ಕಾದಂಬರಿಗಳನ್ನು ನೀಡಿದರು.  ಇವುಗಳಲ್ಲಿ ಬಿಸಿಲು ಮಳೆ, ಬೀಸಿ ಬಂದ ಬಿರುಗಾಳಿ, ಹೊಸಬಾಳು, ಮಕ್ಕಳಿಗಾಗಿ ಗಣಕದ ಕಥೆ, ಗಣಕ ಎಂದರೇನು, ಕಿರು ಕಾದಂಬರಿ ಬಂಗಾರದ ಜಿಂಕೆ, ಊರ್ಮಿಳಾ, ಪ್ರತಿಜ್ಞೆ ಪ್ರಮುಖವಾದವು.  ಡಾ. ನಳಿನಿ ಮೂರ್ತಿಯವರು ತಮ್ಮ ಪತಿ ನರಸಿಂಹಮೂರ್ತಿಯವರ ಜೊತೆಗೂಡಿ ಬರೆದಿದ್ದ ಸಾಹಿತ್ಯ, ವಿಜ್ಞಾನ ಲೇಖನಗಳು ‘ಸಾಹಿತ್ಯ ವಿಜ್ಞಾನ’ ಎಂಬ ಕೃತಿರೂಪವಾಗಿ  ಪ್ರಕಟಗೊಂಡಿದೆ.

ಇಷ್ಟೆಲ್ಲವನ್ನೂ ತಮ್ಮ ಕಿರುಬಾಳಿನಲ್ಲೇ ಸಾಧಿಸಿದ ಡಾ. ನಳಿನಿಮೂರ್ತಿಯವರು ತಮ್ಮ ಐವತ್ತೈದನೆಯ ವಯಸ್ಸಿನಲ್ಲಿ (1992ರ ಅಕ್ಟೋಬರ್ 20ರಂದು) ಕೆನಡಾದಲ್ಲಿ ನಿಧನರಾದರು. 

1994ರಲ್ಲಿ ಶ್ರೀ ನರಸಿಂಹ ಮೂರ್ತಿ ಅವರು ನಮ್ಮ ಎಚ್ಎಮ್‍ಟಿ ಕನ್ನಡ ಸಂಪದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಭಿಕರಾಗಿ ಬಂದಿದದ್ದರು.  ವಿದೇಶದಲ್ಲಿ ಪುಟ್ಟ ಹೆಸರಿನಲ್ಲಿ ತಮ್ಮನ್ನು 'ಸಿಮ್'(Sim) ಎಂದು ಸಂಬೋಧಿಸುವ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದನ್ನು ಬಹು ಆಪ್ತವಾಗಿ ಇಟ್ಟುಕೊಂಡಿದ್ದೆ.  ಅಷ್ಟೊಂದು ಸಾಧಿಸಿದ್ದರೂ ನಾನು ನನ್ನ ಬಜಾಜ್ ಸ್ಕೂಟರಿನಲ್ಲಿ ಕರೆದೊಯ್ಯುವೆನೆಂದು ಅಹ್ವಾನ ನೀಡಿದಾಗ ಮುಜುಗರ ತೋರದೆ ಬಂದರು. ಶೇಷಾದ್ರಿಪುರಂ ಹಿಂದಿರುವ ಶ್ರೀಪುರದಲ್ಲಿ ಅವರು ಇಳಿದುಕೊಂಡಿದ್ದ ಮನೆಯವರೆಗೆ ಹೋದ ಹಾದಿಯಲ್ಲಿ ತಮ್ಮ ದಿವಂಗತ ಪತ್ನಿ ನಳಿನಿ ಮೂರ್ತಿ ಅವರ ಸಾಹಿತ್ಯ ಮತ್ತು ಸಾಧನೆಗಳ ಬಗ್ಗೆ ತುಂಬು ಅಭಿಮಾನದಿಂದ ಮಾತನಾಡಿದ್ದು ಇನ್ನೂ ನೆನಪಲ್ಲಿ ಹಸುರಾಗಿದೆ.  ಸವಿ ನೆನಪುಗಳು ಮತ್ತು ಡಾ. ನಳಿನಿ ಮೂರ್ತಿ ಅಂತಹವರ ಪ್ರತಿಭಾನ್ವಿತ ಕೆಲಸ ಸುಲಭವಾಗಿ ಮರೆಯುವಂತದ್ದಲ್ಲ. 

ಮೂರ್ತಿ ಅವರು ತಾಂತ್ರಿಕ ಅಧ್ಯಯನ ಮಾಡುವ ಮಹಿಳೆಯರ ಬೆಂಬಲಕ್ಕಾಗಿ ಡಾ. ನಳಿನಿ ಮೂರ್ತಿ ಸಂಸ್ಮರಣಾ ದತ್ತಿಯ ಮೂಲಕ ವಿದ್ಯಾರ್ಥಿ ವೇತನವನ್ನೂ ಸ್ಥಾಪಿಸಿದ್ದಾರೆ. ಈ ಮಹಾನ್ ಚೇತನಕ್ಕೆ ನಮನ.

On the birth anniversary of great achiever in scientific research and writer late Dr. Nalini Murthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ