ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಋತ್ವಿಕ್ ಸಿಂಹ


 ಋತ್ವಿಕ್ ಸಿಂಹ 

ಋತ್ವಿಕ್ ಸಿಂಹ ಕನ್ನಡ ರಂಗಭೂಮಿಯ ಪ್ರಮುಖ ಹೆಸರು.  ಪ್ರತಿಭಾವಂತ ನಿರ್ದೇಶಕರಾಗಿ, ನಟರಾಗಿ ಮತ್ತು ಬರಹಗಾರರಾಗಿ ಅವರು ಮಹತ್ವದ ಕೆಲಸ ಮಾಡುತ್ತಾ ಬಂದಿದ್ದಾರೆ. 

ಕನ್ನಡ ರಂಗಭೂಮಿ, ಸಿನಿಮಾ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರಾದ ಸಿ. ಆರ್. ಸಿಂಹ ಮತ್ತು ಶಾರದಾ ಸಿಂಹ ದಂಪತಿಗಳ ಸುಪುತ್ರರಾದ ಋತ್ವಿಕ್ ಸಿಂಹ 1974ರ ಫೆಬ್ರವರಿ 21ರಂದು ಜನಿಸಿದರು.

ಶ್ರೀ ಸರಸ್ವತಿ ವಿದ್ಯಾಮಂದಿರ, ನ್ಯಾಷನಲ್ ಹೈಸ್ಕೂಲುಗಳಲ್ಲಿ ಶಾಲಾ ಶಿಕ್ಷಣ ಪಡೆದ ಋತ್ವಿಕ್ ಸಿಂಹ,  ಹೈಸ್ಕೂಲಿಗೆ ಬರುವಷ್ಟರಲ್ಲಿಯೇ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಸಮಾಜಶಾಸ್ತ್ರ ಮತ್ತು ಮನಃಶಾಸ್ತ್ರದಲ್ಲಿ ಪದವಿ ಪಡೆದ ಋತ್ವಿಕ್ ಮುಂದೆ ವಿದ್ಯುನ್ಮಾನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಹೀಗಿದ್ದರೂ ತಾವು ಬೆಳೆದದ್ದೇ ರಂಗಭೂಮಿಯಲ್ಲಿ ಎಂಬ ಹೃದ್ಭಾವ ತುಂಬಿಕೊಂಡ  ಋತ್ವಿಕ್, ತಮ್ಮ 18ನೇ ವಯಸ್ಸಿಗೆ ರಂಗಭೂಮಿಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ಅದರಲ್ಲೇ ಮುನ್ನಡೆಯುತ್ತಿದ್ದಾರೆ. 

ಇಡೀ ಸಿಂಹ ಕುಟುಂಬವೇ ರಂಗಭೂಮಿಯದ್ದು.  ಋತ್ವಿಕ್ ಅವರ ಪತ್ನಿ ಜಸಲೀನ್ ಸಿಂಹ  ಮೂಲತಃ ಪಂಜಾಬಿಯವರಾದರೂ, ಕನ್ನಡ ಕಲಿತಿದ್ದಾರೆ. ಸುಂದರವಾಗಿ ಕನ್ನಡ ಮಾತಾಡುತ್ತಾರೆ. ಅಗತ್ಯವಿದ್ದಾಗ ನಟಿಸುತ್ತಾರೆ.  ರಂಗಭೂಮಿಯ  ನೇಪಥ್ಯದಲ್ಲಿ ಅಪಾರ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕಾಸ್ಟ್ಯೂಮ್ ನೋಡಿಕೊಳ್ಳುವುದು ಅವರೇ. ರಂಗಶಿಕ್ಷಣ ಮತ್ತು ರಂಗಪ್ರಯೋಗಗಳ ನೇತೃತ್ವ ವಹಿಸಿದ್ದಾರೆ. 

ಋತ್ವಿಕ್ ಸಿಂಹ ನಟನೆಯ ಜತೆಗೆ ನಿರ್ದೇಶನ ಮತ್ತು ನಾಟಕಕಾರರಾಗಿಯೂ ಚಿರಪರಿಚಿತರು. ತಂದೆ ಸಿ. ಆರ್. ಸಿಂಹರ ಜೊತೆ ನಟಿಸುತ್ತಾ, ತಂದೆಗೆ ನಿರ್ದೇಶನವನ್ನೂ ಮಾಡುತ್ತಾ ಬೆಳೆದರು. ತಮ್ಮದೇ 'ವೇದಿಕೆ' ನಾಟಕ ತಂಡ ಕಟ್ಟಿಕೊಂಡು, ಸದಾ ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಋತ್ವಿಕ್, ರಂಗಭೂಮಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ.

ಋತ್ವಿಕ್ ಸಿಂಹ ‘ರಸ ಋಷಿ ಕುವೆಂಪು’ ಎಂಬ ಚಲನಚಿತ್ರವನ್ನು  ನಿರ್ದೇಶನ ಮಾಡಿದರು. ಅದು ಕಮರ್ಷಿಯಲ್ ಆಗಿ ಬಿಡುಗಡೆ ಆಗಲಿಲ್ಲ. ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದು ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೂ ಮತ್ತು ಇತರ ಪ್ರಶಸ್ತಿಗಳಿಗೂ ಪಾತ್ರವಾಗಿದೆ. 

ಋತ್ವಿಕ್ ಅವರು ನಿರ್ವಹಿಸುತ್ತಿರುವ  ‘ವೇದಿಕೆ’ಯಲ್ಲಿ ಅವರ ಅಪ್ಪ ಅಮ್ಮ ಪ್ರಾರಂಭ ಮಾಡಿದ ತಂಡ ಜೊತೆಗಿದೆ. 'ವೇದಿಕೆ' ತಂಡ ಟಿಪಿಕಲ್ ಟಿ.ಪಿ. ಕೈಲಾಸಂ, ಭೈರವಿ, ರಸಋಷಿ, ಕರ್ಣ ಮುಂತಾದ ಅದ್ಭುತ ನಾಟಕಗಳ ಮೂಲಕ ಹೆಸರುವಾಸಿಯಾಗಿದೆ. ಈ ವೇದಿಕೆಯಿಂದ ನಿರಂತರವಾಗಿ ನಾಟಕಗಳು ಪ್ರದರ್ಶನ ಆಗುತ್ತಲೇ ಇವೆ. ಹೊಸ ಹೊಸ ಪ್ರಯೋಗಗಳೂ ಈ ಮೂಲಕ ನಡೆಯುತ್ತಿವೆ.   2000ದ ವರ್ಷದಲ್ಲಿ ಋತ್ವಿಕ್ ಸಿಂಹ ಮತ್ತು ಜಸಲೀನ್ ಸಿಂಹ ದಂಪತಿಗಳು ಪ್ರಾರಂಭಿಸಿದ 'ವೇದಿಕೆ ರಂಗಮಾಲಿಕೆ' 125 ವಾರಗಳ ಕಾಲ 'ವೀಕೆಂಡ್ ಥಿಯೇಟರ್’ ಹೆಸರಲ್ಲಿ ಪ್ರತಿ ಶನಿವಾರ ಒಂದೊಂದು ನಾಟಕಗಳ ಪ್ರದರ್ಶನ ನಡೆಸಿತು. ನಂತರ ಈ ತಂಡ ಮನೆ ಮನೆಗಳಿಗೆ ತೆರಳಿ ಸಹಾ ನಾಟಕ ಪ್ರದರ್ಶನ ಏರ್ಪಡಿಸುತ್ತಿತ್ತು. ಮನೆ ಟೆರಸ್ ಮತ್ತು ಪಾರ್ಕಿಂಗ್ ಪ್ಲೇಸ್‌ಲ್ಲೂ ನಾಟಕವಾಡಿದ್ದಿತ್ತು. ಅಲ್ಲದೇ ಹೊಸ ನಾಟಕಗಳನ್ನು ಓದಿಸುವ ಕಾರ್ಯಕ್ರಮಗಳೂ ನಡೆದವು.  1983ರಲ್ಲಿ ಸಿ. ಆರ್. ಸಿಂಹರಿಂದ ಆರಂಭಗೊಂಡ 'ವೇದಿಕೆ' ಋತ್ವಿಕ್ ಸಿಂಹರ ನಿರ್ವಹಣೆಯಲ್ಲಿ 42ನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆದಿದೆ.  ಇದೇ ತಂಡ 2019ರಲ್ಲಿ 'ವೇದಿಕೆ' ನಾಟಕ ಶಾಲೆ ಆರಂಭಿಸಿ ಅನೇಕ ಪ್ರತಿಭಾವಂತರನ್ನು ರಂಗಭೂಮಿಗೆ ಕರೆತರುವ ಕೆಲಸವನ್ನೂ ನಡೆಸುತ್ತಿದೆ. 

ಋತ್ವಿಕ್ ಸಿಂಹ ಬರಹಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.  ಸಿ. ಆರ್. ಸಿಂಹರು ಬರೆದಿರುವ 50 ವರ್ಷಗಳ ರಂಗಯಾತ್ರೆಯ ಅನುಭವಗಳನ್ನು 'ಸಿಂಹ ರಂಗಯಾತ್ರೆ' ಎಂಬ ಹೆಸರಲ್ಲಿ ಅಣಿಗೊಳಿಸಿದ್ದಾರೆ.  ಷೇಕ್ಸ್ ಪಿಯರ್ ಕನ್ನಡಾವತಾರ ಕೃತಿಯನ್ನು ಸಂಪಾದಿಸಿದ್ದಾರೆ. 'ಮದುವೆ ಮದುವೆ', 'ನಿರಾಸೆ.com’, ‘ ಹಾವು ಏಣಿ' ಮುಂತಾದ ಹಲವಾರು ನಾಟಕಗಳನ್ನು ತಾವೇ ರಚಿಸಿ, ಕೃತಿರೂಪದಲ್ಲಿ ಪ್ರಕಟಿಸಿ,  ಹಲವಾರು ಯಶಸ್ವೀ ರಂಗಪ್ರದರ್ಶನ ಮಾಡಿದ್ದಾರೆ. 

ಕಲೆಗಾಗಿ ನಿರಂತರ ದುಡಿಯುತ್ತಿರುವ ಋತ್ವಿಕ್ ಸಿಂಹ ಮತ್ತು ಅವರ ವೇದಿಕೆ ತಂಡಕ್ಕೆ ಸದಾ ಯಶಸ್ಸು ಜೊತೆಗೂಡಿರಲಿ ಎಂದು ಆಶಿಸುತ್ತಾ, ಋತ್ವಿಕ್ ಸಿಂಹ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.


Happy birthday Ritwik Simha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ