ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿಲ್ಪಾ ಖಡಕಭಾವಿ


 ಶಿಲ್ಪಾ ಖಡಕಭಾವಿ


ಶಿಲ್ಪಾ ಖಡಕಭಾವಿ ಅವರು ಬೆಳಗಾವಿಯ ಪ್ರತಿಭಾನ್ವಿತ ಕಲಾಸಾಧಕಿ.

ಫೆಬ್ರವರಿ 21, ಶಿಲ್ಪಾ ಅವರ ಹುಟ್ಟುಹಬ್ಬ. ಇವರು ದಾವಣಗೆರೆಯಲ್ಲಿನ ಹೆಸರಾಂತ ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಶಿಲ್ಪಾ ಅವರು ತಮ್ಮ ಕಲಾ ಪಯಣದಲ್ಲಿ ಕಲಾವಿದರಾದ ತಮ್ಮ ತಂದೆ ಟಿ.ವಿ.ಗಣೇಶಗುಡಿ ಅವರ ಮಾರ್ಗದರ್ಶನ ಪಡೆದ ಸೌಭಾಗ್ಯವಂತೆ. ಅವರಿಗೆ ಜೀವನಾಧ್ಯಯನ ಕಲೆ ಮತ್ತು ಭಾವಚಿತ್ರಗಳ ಕಲೆಯಲ್ಲಿ ಬೆಳಗಾವಿಯ ಖ್ಯಾತ ಕಲಾವಿದರಾದ ಕೆ.ಬಿ.ಕುಲಕರ್ಣಿಯವರ ಮಾರ್ಗದರ್ಶನ ಲಭಿಸಿತು.  ದಾವಣಗೆರೆಯ ಯೂನಿವರ್ಸಿಟಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಿಂದ ಚಿತ್ರಕಲೆಯಲ್ಲಿ ಪರಿಣತಿ ಪಡೆದ ಶಿಲ್ಪಾ ಅವರು, ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.

ಶಿಲ್ಪಾ ಅವರಿಗೆ ಭಾವಚಿತ್ರಗಳು, ಜೀವನಾಧ್ಯಯನ ಮತ್ತು ಭೂದೃಶ್ಯಗಳ ಕಲೆಗಾರಿಕೆ ಆಪ್ತಾವಾದುದು. ಲಲಿತಕಲೆಯ ವಿದ್ಯಾರ್ಥಿಯಾಗಿರುವಾಗ ಅವರಿಗೆ ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನ ಲಭಿಸಿತ್ತು. ಶಿಲ್ಪಾ ಅವರು ಮುಂಬೈನ ಬಾಂಬೆ ಆರ್ಟ್ ಸೊಸೈಟಿಯ ಸದಸ್ಯರಾಗಿದ್ದಾರೆ.

ಶಿಲ್ಪಾ ಅವರು ತಮ್ಮ ಶಾಲಾ ದಿನಗಳಿಂದಲೇ 'ಆಲ್ ಇಂಡಿಯಾ ಕ್ಯಾಮೆಲ್  ಆರ್ಟ್ಸ್' ಸ್ಪರ್ಧೆಗಳೂ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆಲ್ಲಲು ಪ್ರಾರಂಭಿಸಿದರು. ಶಿಲ್ಪಾ ಅವರು 1995 ಮತ್ತು 1997 ರಲ್ಲಿ ಮೈಸೂರು ದಸರಾ ಪ್ರಶಸ್ತಿಗಳನ್ನು ಪಡೆದರು. ಅವರು ನಾಗಪುರದಲ್ಲಿನ ದಕ್ಷಿಣ ಮಧ್ಯ ವಲಯದ ಸಾಂಸ್ಕೃತಿಕ ಕೇಂದ್ರವು ಆಯೋಜಿಸುವ ಅನೇಕ ಕಲಾವಿದರ ಶಿಬಿರಗಳಲ್ಲಿ ಭಾಗವಹಿಸಿದರು. 2007 ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಆಯೋಜಿಸಿದ್ದ ಸುವರ್ಣ ಕರ್ನಾಟಕ ಕಲಾಮೇಳದಲ್ಲಿನ ಕಲಾವಿದರ ಶಿಬಿರದಲ್ಲಿ ಭಾಗವಹಿಸಿದ್ದರು.

ಶಿಲ್ಪಾ ಅವರು 2003ರಲ್ಲಿ ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆಯೋಜಿತಗೊಂಡಿದ್ದ ಕಲಾಮೇಳದಲ್ಲಿ ತಮ್ಮ ವರ್ಣಚಿತ್ರಗಳನ್ನು ಪ್ರದರ್ಶಿಸಿದರು. ಅವರು 'ತೆಲಂಗಾಣ' ರಾಜ್ಯದ ಉದಯದ  ದಿನವಾದ 2016ರ ಜೂನ್ 1 ರಂದು ಹೈದರಾಬಾದ್‌ನ ಸ್ಟೇಟ್ ಆರ್ಟ್ ಗ್ಯಾಲರಿಯಲ್ಲಿನ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದರು. ಅವರು ಕರ್ನಾಟಕದಲ್ಲಿನ  ಅನೇಕ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಧಾರವಾಡದ ಆರ್ಟ್‌ ಗ್ಯಾಲರಿಯಲ್ಲಿ ಅವರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಸಿದರು. ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಲಾವಿದರ ಶಿಬಿರದಲ್ಲಿ ಭಾಗವಹಿಸಿದ್ದ ಇವರು, ಅಲ್ಲಿ ನಡೆದ ಸಮೂಹ ಕಲಾ ಪ್ರದರ್ಶನದಲ್ಲಿಯೂ ಭಾಗವಹಿಸಿದ್ದರು. ಶಿಲ್ಪಾ ಅವರು ಬೆಳಗಾವಿಯ 'Gulmohar Bag’ ಸಂಘಟನೆಯ ಸಕ್ರಿಯ ಸದಸ್ಯೆ. 

ಶಿಲ್ಪಾ ಅವರ ವರ್ಣಚಿತ್ರಗಳು ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿ, ನವದೆಹಲಿಯ ಎಐಎಫ್‌ಎಸಿಎಸ್, ಆರ್ಟ್ ಟುಡೆ ಮ್ಯಾಗಜೀನ್, ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರಗಳ ಸಂಗ್ರಹದಲ್ಲಿವೆ. ಇವರ ಅನೇಕ ವರ್ಣಚಿತ್ರಗಳು ಯುಕೆ (ಲಂಡನ್), ಯುಎಸ್ಎ (ರೆಡ್ಡಿಂಗ್, ಕ್ಯಾಲಿಫೋರ್ನಿಯಾ), ಆಸ್ಟ್ರೇಲಿಯಾ (ಮೆಲ್ಬೋರ್ನ್) ಮತ್ತು ಮಲೇಷ್ಯಾದಲ್ಲಿನ ಕಲಾ ಪ್ರೇಮಿಗಳ ಖಾಸಗಿ ಸಂಗ್ರಹಗಳಲ್ಲಿವೆ.

ಆತ್ಮೀಯರಾದ ಕಲಾವಿದೆ ಶಿಲ್ಪಾ ಖಡಕಭಾವಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to our lovely artiste and friend Shilpa Khadakbhavi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ