ಶ್ರೀನಿವಾಸ್ ಜಿ. ಕಪ್ಪಣ್ಣ
ಶ್ರೀನಿವಾಸ್ ಜಿ. ಕಪ್ಪಣ್ಣ
ಶ್ರೀನಿವಾಸ್ ಜಿ ಕಪ್ಪಣ್ಣನವರು ರಂಗ ಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಪ್ರಮುಖ ಸಾಂಸ್ಕೃತಿಕ ಸಂಘಟಕರೆಂದು ಖ್ಯಾತರಾಗಿದ್ದಾರೆ.
ಶ್ರೀನಿವಾಸ್ ಜಿ ಕಪ್ಪಣ್ಣನವರು 1948ರ ಫೆಬ್ರುವರಿ 13ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಗಿರಿಯಪ್ಪನವರು. ತಾಯಿ ಶ್ರೀಮತಿ ಜಯಮ್ಮನವರು. ನ್ಯಾಷನಲ್ ಕಾಲೇಜಿನಿಂದ ಪದವಿ ಪಡೆದ ಕಪ್ಪಣ್ಣನವರು ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು.
ಶಾಲಾ ದಿನಗಳಿಂದಲೇ ನಾಟಕದತ್ತ ಒಲವು ಮೂಡಿಸಿಕೊಂಡ ಶ್ರೀನಿವಾಸ ಕಪ್ಪಣ್ಣನವರು, 1964ರ ವರ್ಷದಲ್ಲಿ ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್ ಮೂಲಕ ತಮ್ಮ ಮೊದಲ ರಂಗ ಚಟುವಟಿಕೆಗಳನ್ನು ಪ್ರಾರಂಭಿಸಿದರು. ನಾಟಕಗಳಿಗೆ ರಂಗಸಜ್ಜಿಕೆ, ಬೆಳಕು ವಿನ್ಯಾಸ ಮುಂತಾದ ಕ್ಷೇತ್ರಗಳಲ್ಲಿ ಅವರದ್ದು ವಿಶೇಷ ಪರಿಶ್ರಮ.
1972 ನಟರಂಗ ನಾಟಕ ತಂಡ ಹುಟ್ಟಿಕೊಂಡ ಸಂದರ್ಭದಲ್ಲಿ, ಆ ತಂಡದ ಸಂಘಟನೆಯ ಜವಾಬ್ದಾರಿ ಹೊತ್ತ ಶ್ರೀನಿವಾಸ ಕಪ್ಪಣ್ಣರು ಪೋಲಿಕಿಟ್ಟಿ, ಕಾಕನ ಕೋಟೆ, ತುಘಲಕ್, ಜೆಗೆವಾರ, ವೆಯಿಟಿಂಗ್ ಫಾರ್ ಗಾಡ್, ಮಿಡ್ ಸಮರ್ ನೈಟ್ಸ್‌ಡ್ರೀಮ್, ಕಾಕೇಶಿಯನ್ ಜಾಕ್ ಸರ್ಕಲ್, ಸಂಕ್ರಾಂತಿ, ಶೋಕ ಚಕ್ರ, ಸಿರಿಸಂಪಿಗೆ, ಅಧಃಪಾತಾಳ, ನಮ್ಮೊಳಗೊಬ್ಬ ನಾಜೂಕಯ್ಯ, ತಲೆದಂಡ ಮುಂತಾದ ನಾಟಕ ಪ್ರದರ್ಶನಗಳ ನಿರ್ವಹಣೆಯಲ್ಲಿ ಪಾಲ್ಗೊಂಡರು. ಇದೇ ಕಲಾವಿದರ ತಂಡದಿಂದ ಕಾಕನ ಕೋಟೆ ಚಲನ ಚಿತ್ರ ಸಹಾ ನಿರ್ಮಾಣಗೊಂಡಿತು.
ಸಿಯೋಲ್, ದಕ್ಷಿಣ ಕೊರಿಯಾ, ಜಪಾನ್, ಹಾಂಗ್‌ಕಾಂಗ್, ಸಿಂಗಪೂರ್ ದೇಶಗಳ ನಾಟಕೋತ್ಸವ, ವಿಚಾರ ಸಂಕೀರ್ಣಗಳಲ್ಲಿ ಭಾಗಿಯಾದ ಶ್ರೀನಿವಾಸ ಕಪ್ಪಣ್ಣನವರು, ನೃತ್ಯ, ರಂಗಭೂಮಿಯ ಅಂತಾರಾಷ್ಟ್ರೀಯ ವಿಚಾರ ಸಂಕೀರ್ಣ, ನೃತ್ಯೋತ್ಸವ ಸಂಘಟನೆ ಮುಂತಾದ ವಿವಿಧ ರೀತಿಯ ಜವಾಬ್ದಾರಿಗಳನ್ನು ಸಹಾ ನಿರ್ವಹಿಸಿದ್ದಾರೆ. ಸಾರ್ಕ್ ಉತ್ಸವ, ರಷ್ಯಾ ಸಾಂಸ್ಕೃತಿಕ ಉತ್ಸವ, ಪೀಟರ್ ಬ್ರೂಕ್ ಮಹಾಭಾರತದ ಬಗ್ಗೆ ನಡೆದ ರಾಷ್ಟ್ರೀಯ ಗೋಷ್ಠಿ, ರಾಷ್ಟ್ರೀಯ ಕ್ರೀಡಾಮೇಳ, ಮಕ್ಕಳ ಚಲನ ಚಿತ್ರೋತ್ಸವ ಮುಂತಾದುವುಗಳ ಸಂಘಟನಾ ಹೊಣೆಯನ್ನು ನಿರ್ವಹಿಸಿದ್ದಾರೆ. ಕೊಲಂಬೊ, ಬಾಂಗ್ಲಾ, ಜರ್ಮನಿ ಎಕ್ಸ್‌ಪೊ, ವಿಶ್ವ ಕನ್ನಡ ಸಮ್ಮೇಳನ, ದೆಹಲಿಯ ಗಣರಾಜ್ಯೋತ್ಸವ ಮುಂತಾದೆಡೆಗಳ ಸಾಂಸ್ಕೃತಿಕ ತಂಡದ ಕಲಾ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ. ‘ಕಾಡು’, ‘ಕಾನೂರು ಹೆಗ್ಗಡತಿ’ ಮುಂತಾದ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿರುವ ಕಪ್ಪಣ್ಣನವರು ಮಾಲ್ಗುಡಿ ಡೇಸ್, ಮುಕ್ತ ಮುಕ್ತ ಮುಂತಾದ ದೂರದರ್ಶನ ಧಾರಾವಾಹಿಗಳಲ್ಲೂ ಪಾತ್ರ ನಿರ್ವಹಿಸಿದ್ದಾರೆ.
ರಂಗ ಚಟುವಟಿಕೆಗಳು, ಜಾನಪದ, ಕಲಾಚಟುವಟಿಕೆಗಳನ್ನು, ಸಾಂಸ್ಕೃತಿಕ ಉತ್ಸವಗಳನ್ನು, ಸಹಸ್ರಾರು ಕಲಾವಿದರನ್ನು ಒಂದೆಡೆ ತರುವುದರ ಮೂಲಕ ಶ್ರೀನಿವಾಸ ಕಪ್ಪಣ್ಣ ಅವರು ಸಂಘಟಿಸಿದ ಉತ್ಸವಗಳು ಅನೇಕ ತೆರನಾದದ್ದು.
ಶ್ರೀನಿವಾಸ ಕಪ್ಪಣ್ಣನವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗ ಪ್ರತಿಷ್ಠಾನ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ. ಈ ರಂಗ ಕ್ರಿಯಾಶೀಲರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.
On the birth day of creative theatre activist Srinivasa G Kappanna
ಕಾಮೆಂಟ್‌ಗಳು