ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಓಂಶಿವಪ್ರಕಾಶ್


 ಎಚ್. ಎಲ್.  ಓಂಶಿವಪ್ರಕಾಶ್


ಎಚ್. ಎಲ್. ಓಂಶಿವಪ್ರಕಾಶ್ ಹೆಸರೇ ಸುಂದರ.  ಅವರು ಕನ್ನಡ ಡಿಜಿಟಲ್ ಲೋಕದಲ್ಲಿ ಪ್ರಕಾಶ ತಂದಿರುವ ಅಪೂರ್ವ ಸಾಹಸಿ. ಫೆಬ್ರವರಿ 13 ಈ ಅಪೂರ್ವ ಯುವ ಕನ್ನಡಿಗನ ಜನ್ಮದಿನ. 

ಓಂ ಶಿವಪ್ರಕಾಶ್‌ ಅಂದರೆ ಕನ್ನಡ ವಿಕಿಪೀಡಿಯಾ, ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ, ವಚನ ಸಾಹಿತ್ಯದ ಡಿಜಿಟಲೀಕರಣ, ಕನ್ನಡ ಪುಸ್ತಕಗಳ ಡಿಜಿಟಲೀಕರಣ, ರಂಗ ಗೀತೆಗಳು, ನಾಟಕಗಳನ್ನು ಡಿಜಿಟಲ್‌ ಸ್ವರೂಪಕ್ಕೆ ತರುವ ಸಾಹಸ ಮುಂತಾದ ಅನೇಕ  ವೈವಿಧ್ಯತೆಗಳ ಪರಿಧಿ ಕಣ್ಣಮುಂದೆ ಬರುತ್ತದೆ. 

ಕನ್ನಡ ಸಾಫ್ಟ್ವೇರ್ ಬಳಕೆಯ ಆರಂಭದ ವರ್ಷಗಳ ಕಾಲವಾದ  2006-07 ಹೊತ್ತಿನಲ್ಲಿಯೇ ಓಂಶಿವಪ್ರಕಾಶರ ಬ್ಲಾಗ್ ರೂಪ್   ಲಿನಕ್ಸಾಯಣ ಎಂಬ ಅಂಕಣ ಬರುತ್ತಿತ್ತು. ಅಂದಿನ ದಿನದಿಂದಲೂ ಹೊಸತಾದ ತಂತ್ರಜ್ಞಾನದ ಬಗ್ಗೆ, ಮುಕ್ತ ತಂತ್ರಾ0ಶದ ಕನ್ನಡಿಗರಿಗೆ ಸರಳವಾಗಿ ಅರ್ಥ ಮಾಡಿಸುತ್ತಾ ಬಂದವರು ಓಂಶಿವಪ್ರಕಾಶ್‌.

ಓಂಶಿವಪ್ರಕಾಶ್ ಅವರ ಕಿಂದರಿಜೋಗಿ ಡಾಟ್‌ಕಾಮ್‌ ಅಲ್ಲಿ ಮಕ್ಕಳ ತಿಳುವಳಿಕೆ ಹೆಚ್ಚಿಸುವ ಪ್ರಯತ್ನವಿದೆ. ಆ ಬಳಿಕ ಹುಟ್ಟಿದ್ದು  ಅವರ ‘ಸಂಚಯ’. ಇದರಲ್ಲಿ ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗೆ ಬಳಸುವ ಸಾಧ್ಯತೆಗಳ ಪರಿಶ್ರಮವಿದೆ. 

ಓಂಶಿವಪ್ರಕಾಶ್ ಅವರ 'ಸಂಚಯ' ಭಾಷಾ ಸಂಶೋಧನೆಯಲ್ಲಿ ಮಹತ್ತರ ಕೆಲಸ ಮಾಡಿದೆ. ವಚನ ಸಂಚಯ, ದಾಸ ಸಂಚಯ, ಸರ್ವಜ್ಞ ಸಂಚಯ, ರನ್ನ ಸಂಚಯ, ಜನ್ನ ಸಂಚಯ ಎಂಬ ಭಾಷಾ ಸಂಶೋಧನಾ ಸರಣಿ‌ ಇದರಲ್ಲಿವೆ. ಇದರಲ್ಲಿ ಶ್ರೇಷ್ಠವರೇಣ್ಯರ ಸಕಲ ವ್ಯಕ್ತಿ,  ಕೃತಿ ಮತ್ತು ಸಾಹಿತ್ಯಾಂತರಾಳದ ಮಾಹಿತಿ ಇದೆ. ‘ಪದ ಸಂಚಯ’, ‘ಪುಸ್ತಕಗಳ ಡಿಜಿಟಲೈಸೇಶನ್‌’ ಎಂಬ ಪುಟಗಳಿವೆ. ಸಮೂಹ ಸಂಚಯ ಎಂಬ ಕೊಂಡಿ‌ ಇದೆ. ಇದರಲ್ಲಿ ಕನ್ನಡ ಸಮೂಹಗಳ ಸಾಧ್ಯತೆಗಳ ಕುರಿತಾದ ಅಪೂರ್ವ ವಿವರಗಳಿವೆ. ಅದೇ ರೀತಿ ‘ಪುಸ್ತಕ ಸಂಚಯ’ಕ್ಕೆ ಹೋದರೆ ಡಿಜಿಟಲ್‌ ಲೈಬ್ರೆರಿಯಲ್ಲಿರುವ ಕನ್ನಡ ಪುಸ್ತಕಗಳ ವಿವರಗಳಿವೆ. ಆಳವಾದ ಅಧ್ಯಯನವೂ ಇದರಲ್ಲಿದೆ. ‘ಅರಿವಿನ ಅಲೆಗಳು’ ಪುಟದಲ್ಲಿ ಶಿವಪ್ರಕಾಶ್‌ ಸಂಪಾದಕತ್ವದ ತಂತ್ರಜ್ಞಾನದ ಕುರಿತಾದ ಕನ್ನಡದಲ್ಲಿನ ಮಹತ್ವದ ಲೇಖನಗಳಿವೆ.

ಓಂಶಿವಪ್ರಕಾಶ್ ಮತ್ತು ಅವರ ಗೆಳೆಯರ ಸಾಧನೆಯಿಂದ ಸಾವಿರಾರು ಪುಸ್ತಕಗಳು ಇಂದು ಡಿಜಿಟಲ್‌ ಮಾಧ್ಯಮದಲ್ಲಿ ಸಿಗುವಂತಾಗಿದೆ. 

ಓಂಶಿವಪ್ರಕಾಶ್ ಸಂಚಿ ಫೌಂಡೇಶನ್‌ ಎಂಬ ಅಂತರ್ಜಾಲ ತಾಣದ ಸಂಸ್ಥಾಪಕರಲ್ಲೊಬ್ಬರು ಮತ್ತು ಅಲ್ಲಿನ ನಿರ್ಮಾಪಕರು.  ಈ ತಾಣದ ಹಿಂದೆ ಓಂಶಿವಪ್ರಕಾಶರ ತಾಂತ್ರಿಕ ನೈಪುಣ್ಯವಿದೆ. ಇದರಲ್ಲಿ ನೀನಾಸಂನ ಅನೇಕ ನಾಟಕಗಳನ್ನು ಕಾಣಬಹುದು. ಹಲವು ರಂಗಗೀತೆಗಳನ್ನು ಆನಂದಿಸಬಹುದು. ಕಾವ್ಯ ಕನ್ನಡಿ ಎಂಬ ವಿಭಿನ್ನ ಪ್ರಯೋಗವೂ ಇಲ್ಲಿ ಸಿಗುತ್ತದೆ. ಯಕ್ಷಗಾನ, ಜ್ಞಾನ ಸರಣಿ ಎಂಬ ಪುಟಗಳೂ ಇವೆ. ಅನೇಕ ಯಕ್ಷಗಾನ ದಿಗ್ಗಜರ ಭಾಗವತಿಕೆ, ತಾಳಮದ್ದಳೆ, ಯಕ್ಷಗಾನಗಳನ್ನೂ ನೋಡಬಹುದು. ಜ್ಞಾನ ಸರಣಿಯಲ್ಲಿ ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳಿವೆ.

"ನಾನೀಗ ಮಾಡುತ್ತಿರುವ ಕೆಲಸ ಒಂಥರಾ ಜೇನುಗೂಡಿಗೆ ಕೈ ಹಾಕಿದ ಹಾಗೆ. ಈ ಕೆಲಸ ಮುಗಿಯುವುದು ಅಂತಿಲ್ಲ. ನಾನು ಹಾಗೂ ನಮ್ಮ ಸಮಾನಾಸ್ತಕ ಮಿತ್ರರ ಬಿಡುವಿನ ವೇಳೆಯೆಲ್ಲ ಇದಕ್ಕೇ ಮೀಸಲು. ಕನ್ನಡಿಗರು ಹೆಚ್ಚೆಚ್ಚು ತಂತ್ರಜ್ಞಾನದ ಬಳಕೆ ಮಾಡಬೇಕು. ಅಪ್‌ಡೇಟ್‌ ಆಗಬೇಕು ಅನ್ನುವ ಇಂಗಿತ ನಮ್ಮದು. ಈ ನೆಲೆಯಲ್ಲಿ ಇನ್ನಷ್ಟುದುಡಿಯುವ ಮನಸ್ಸಿದೆ. ಆದರೆ ಫಂಡಿಂಗ್‌ ಸಮಸ್ಯೆ, ಸಮಯದ ಅಭಾವ ಸೇರಿದಂತೆ ಅನೇಕ ಸವಾಲುಗಳೂ ಎದುರಿಗಿವೆ" ಎನ್ನುತ್ತಾರೆ ಓಂಶಿವಪ್ರಕಾಶ್.

ಸಾಧನೆಯ ಕಡೆಗೆ ದೃಷ್ಟಿ ನೆಟ್ಟವರೇ ಧನ್ಯರು.  ಅವರಿಗೆ ಯಾವ ಸಣ್ಣ ಚಿಂತನೆಗಳು, ನೋವೂ ಇರುವುದಿಲ್ಲ.  ಅವರು ಗೆಲ್ಲುತ್ತ ಹೋಗುತ್ತಾರೆ.  ಕನ್ನಡದ ಅಪೂರ್ವ ಯುವಪ್ರತಿಭೆ ನಮ್ಮ ಓಂಶಿವಪ್ರಕಾಶ್.
 
ಅಪರಿಮಿತ ಸಾಧ್ಯತೆಗಳ ಆಗರ, ಮಹಾನ್ ಪ್ರತಿಭೆ, ಸಾಹಸಿ ಓಂಶಿವಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

Happy birthday to our young great Omshivaprakash HL

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ