ವಹೀದಾ ರೆಹಮಾನ್
ವಹೀದಾ ರೆಹಮಾನ್
ಆಕರ್ಷಕ ರೂಪ, ಕಲಾಭಿವ್ಯಕ್ತಿ, ನೃತ್ಯ ಪರಿಣತಿ, ಸಮರ್ಥ ಚಿತ್ರಗಳ ಆಯ್ಕೆಯ ಪ್ರಬುದ್ಧತೆ, ಸುದ್ಧಿಗಳ ಸಣ್ಣತನಕ್ಕೆ ಕಿವಿಗೊಡದ ವಿವೇಕ ಹೀಗೆ ಹಲವು ವಿಧದಲ್ಲಿ ಎದ್ದುಕಾಣುವ ವಿಶಿಷ್ಟ ಕಲಾವಿದೆ ವಹೀದಾ ರೆಹಮಾನ್. ಚಿತ್ರರಸಿಕರು ಮತ್ತು ಕಲಾ ವಿಮರ್ಶಕರನ್ನು ಸಮಾನ ಶ್ರೇಷ್ಠತೆಯಲ್ಲಿ ಮೆಚ್ಚಿಸಿದ ಅವರಂತಹ ಕಲಾವಿದೆ ಅಪರೂಪ ಎಂದರೂ ತಪ್ಪಿಲ್ಲ. ವಹೀದಾ ರೆಹಮಾನ್ ತಮ್ಮ ಪ್ರಸಿದ್ಧವಾದ ಚಿತ್ರ 'ಚೌದವಿ ಕಾ ಚಾಂದ್' ಹೆಸರಿನಂತೆ ಅಂದಿನ ಕಲಾಪ್ರಿಯರಿಗೆ 'ಬೆಳದಿಂಗಳ ಬಾಲೆ’ಯೇ ಆಗಿ ಗೋಚರಿಸುತ್ತಿದ್ದವರು.
ವಹೀದಾ ರೆಹಮಾನ್ 1938ರ ಫೆಬ್ರವರಿ 3ರಂದು ತಮಿಳುನಾಡಿನ ಚೆಂಗಲ್ಪೇಟು ಎಂಬಲ್ಲಿ ಜನಿಸಿದರು. ತಂದೆ ಮೊಹಮದ್ ಅಬ್ದುರ್ ರೆಹಮಾನ್ ಅವರು ಭಾರತೀಯ ಆಡಳಿತಾತ್ಮಕ ಸೇವೆಯ ಉದ್ಯೋಗಿಯಾಗಿದ್ದರು. ತಾಯಿ ಮಮ್ತಾಜ್ ಬೇಗಮ್. ಈ ದಂಪತಿಗಳ ನಾಲ್ಕು ಪುತ್ರಿಯರಲ್ಲಿ ವಹೀದಾ ಕೊನೆಯವರು. ಈ ನಾಲ್ಕು ಮಕ್ಕಳೂ ತಮಿಳುನಾಡಿನಲ್ಲಿ ಭರತನಾಟ್ಯವನ್ನು ಕಲಿತರು. ಮುಂದೆ ತಂದೆಯವರಿಗೆ ಅಂದಿನ ಮದ್ರಾಸು ಪ್ರೆಸಿಡೆನ್ಸಿಗೆ ಸೇರಿದ ವಿಶಾಖಪಟ್ಟಣಕ್ಕೆ ವರ್ಗವಾದಾಗ ವಹೀದಾ ಅಲ್ಲಿನ ಸೈಂಟ್ ಜೋಸೆಫ್ಸ್ ಕಾನ್ವೆಂಟಿನ ಶಾಲೆಯಲ್ಲಿ ಓದಿದರು. ಜಿಲ್ಲಾಧಿಕಾರಿಗಳಾಗಿದ್ದ ತಂದೆ 1951ರಲ್ಲಿ ನಿಧನರಾದಾಗ ವಹೀದಾ ಇನ್ನೂ 13 ವರ್ಷದ ಬಾಲೆ. ವೈದ್ಯೆ ಆಗಬೇಕೆಂದು ಆಸೆ ಹೊತ್ತಿದ್ದ ವಹೀದಾ ತಂದೆಯ ಅಗಲಿಕೆ ಮತ್ತು ತಾಯಿಯ ಕಾಹಿಲೆಗಳ ಕಾರಣ ಓದಿಗೆ ಶರಣು ಹೇಳಬೇಕಾಯಿತು. ಸೌಂದರ್ಯ ಮತ್ತು ಭರತನಾಟ್ಯಗಳ ಸಂಗಮರಾಗಿದ್ದ ವಹೀದಾಗೆ ಚಲನಚಿತ್ರರಂಗ ಗಾಳಹಾಕತೊಡಗಿತ್ತು.
1950ರ ದಶಕದ ಮಧ್ಯಭಾಗದಲ್ಲಿ ಚಿತ್ರರಂಗದಲ್ಲಿ ಕೆಲವು ನೃತ್ಯ ಅವಕಾಶಗಳಲ್ಲಿ ವಹೀದಾ ನಟಿಸಲು ಪ್ರಾರಂಭಿಸಿದರು. 1955ರಲ್ಲಿ ರೋಜುಲು ಮಾರಾಯಿ ತೆಲುಗು ಚಿತ್ರದಲ್ಲಿ ಅವರು ನಟಿಸಿದರು. ಮುಂದೆ ತೆಲುಗಿನ 'ಜಯಸಿಂಹ', 'ತಮಿಳಿನ ಕಾದಲ್ ಮಾರಿ ಪೋಚ್ಚು' ಮತ್ತು 'ಆಲಿಬಾಬಾವುಮ್ 40 ತಿರುಡರ್ಗಳುಮ್' ಚಿತ್ರಗಳಲ್ಲಿ ಪಾತ್ರವಹಿಸಿದರು.
ರೋಜುಲು ಮಾರಾಯಿ ಚಿತ್ರದ ಯಶಸ್ಸಿನ ಕೂಟದಲ್ಲಿ ವಹೀದಾ ಅವರು ಗುರುದತ್ ಕಣ್ಣಿಗೆ ಬಿದ್ದರು. ವಹೀದಾ ಅವರು ಗುರುದತ್ ಅವರನ್ನು ತಮ್ಮ ಮೆಂಟಾರ್ ಎಂದು ಹೇಳುತ್ತಾರೆ. ಮಹಾನ್ ಪ್ರತಿಭೆ ಗುರುದತ್ ಅವರು ಸೌಂದರ್ಯವತಿ ಮತ್ತು ನೃತ್ಯ ಪ್ರತಿಭಾವಂತೆ ವಹೀದಾಗೆ ತಮ್ಮ 'ಸಿಐಡಿ' ಚಿತ್ರದಲ್ಲಿ ಸಹನಟಿ ಪಾತ್ರ ನೀಡಿದರು. 'ಸಿಐಡಿ' ಬಿಡುಗಡೆ ಕಂಡ ಬೆನ್ನಲ್ಲೆ, ಗುರುದತ್ ಅವರ 'ಪ್ಯಾಸಾ' ವಹೀದಾ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತು. ಗುರುದತ್ ಅವರೊಂದಿಗೆ ‘ಸಿಐಡಿ’, ‘ಪ್ಯಾಸಾ’, '12 ಓ ಕ್ಲಾಕ್', 'ಕಾಗಜ್ ಕೆ ಫೂಲ್’, ‘ಚೌದವಿ ಕಾ ಚಾಂದ್’, ‘ಸಾಹಿಬ್ ಬೀಬಿ ಔರ್ ಗುಲಾಮ್’ನಲ್ಲಿನ ಇವರ ಅಭಿನಯ ಒಂದಕ್ಕಿಂತ ಒಂದು ಎಂಬಂತೆ ಕಂಗೊಳಿಸಿದವು.
ದೇವಾನಂದ್ ಅವರ ಜೊತೆ ಸಹಾ ವಹೀದಾ ರೆಹಮಾನ್ ಅವರು 'ಬಾತ್ ಏಕ್ ರಾತ್ ಕಿ’, ‘ಸೋಲ್ವಾ ಸಾಲ್’, ‘ಕಾಲಾ ಬಜಾರ್’, 'ರೂಪ್ ಕಿ ರಾಣಿ ಚೋರೋಂ ಕಾ ರಾಜಾ', ‘ಪ್ರೇಮ್ ಪೂಜಾರಿ’ ಹಾಗೂ ‘ಗೈಡ್’ ಮುಂತಾದ ಯಶಸ್ವೀ ಚಿತ್ರಗಳ ಜೋಡಿಯಾಗಿದ್ದರು. 1965ರಲ್ಲಿ ತೆರೆಕಂಡ ಗೈಡ್ ಸಿನಿಮಾ ವಹೀದಾ ಅವರಿಗೆ ತಂದುಕೊಟ್ಟ ಜನಪ್ರಿಯತೆ ಅಪಾರವಾದದ್ದು. ಸುನಿಲ್ ದತ್, ಬಿಸ್ವಜಿತ್, ನಿರೂಪರಾಯ್ ಮುಂತಾದವರ ಜೊತೆ ಅಭಿನಯಿಸಿದ ಅವರ ಚಿತ್ರಗಳೂ ಹೆಸರಾದವು.
ಮುಂದೆ. ವಹೀದಾ ಸತ್ಯಜಿತ್ ರೇ ಅವರ ನಿರ್ದೇಶನದ 'ಅಭಿಜನ್' ಬಂಗಾಳಿ ಚಿತ್ರದಲ್ಲೂ ಅಭಿನಯಿಸಿದರು. ಅಂದಿನ ಖ್ಯಾತ ನಟರಾದ ದಿಲೀಪ್ ಕುಮಾರ್ ಹಾಗೂ ರಾಜ್ ಕಪೂರ್ ಅವರಿಗೆ ಜೋಡಿಯಾದ ವಹೀದಾ, ಹೊಸ ನಟರಾದ ರಾಜೇಶ್ ಖನ್ನಾ ಹಾಗೂ ಅಮಿತಾಭ್ ಬಚ್ಚನ್ ಜೊತೆಗೂ ಅಭಿನಯಿಸಲು ಹಿಂದೇಟು ಹಾಕಲಿಲ್ಲ. ರಾಜೇಶ್ ಖನ್ನಾ ಜೊತೆ ಅಭಿನಯಿಸಿದ 'ಖಾಮೋಶಿ' ವಹೀದಾ ವೃತ್ತಿ ಬದುಕಿನ ಅತೀ ಯಶಸ್ವೀ ಚಿತ್ರಗಳಲ್ಲೊಂದು. 'ರೇಶ್ಮಾ ಔರ್ ಶೇರಾ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದರು. 'ಏಕ್ ಪೂಲ್ ಚಾರ್ ಕಾಂಟೆ', 'ಮುಜೆ ಜೀನೇ ದೊ’, 'ನೀಲ್ ಕಮಲ್’, ‘ತೀಸ್ರಿ ಕಸಂ’ , 'ರಾಮ್ ಔರ್ ಶ್ಯಾಮ್', 'ಬೀಸ್ ಸಾಲ್ ಬಾದ್' ಮುಂತಾದವು ವಹೀದಾ ಅವರ ಇನ್ನಿತರ ಕೆಲವು ಚಿತ್ರಗಳು.
‘ಶಗುನ್’ ಚಿತ್ರದ ಸಹನಟ ಕಮಲಜೀತ್ ಅವರನ್ನು ವರಿಸಿದ ವಹೀದಾ ಹಲವು ವರ್ಷ ಬೆಂಗಳೂರಿನಲ್ಲಿ ನೆಲೆಸಿದ್ದರು. ಒಂದು ದಶಕಕ್ಕೂ ಹೆಚ್ಚುಕಾಲ ಚಿತ್ರರಂಗದಿಂದ ಹೊರಗಿದ್ದ ವಹೀದಾ 'ಕಭೀ ಕಭೀ', 'ನಮಕ್ ಹಲಾಲ್’, ‘ತ್ರಿಶೂಲ್’, ‘ಮಶಾಲ್’, ‘ಚಾಂದನಿ’, ‘ಲಮ್ಹೆ', ‘ವಾಟರ್’, ‘ರಂಗ್ ದೇ ಬಸಂತಿ’, ‘ದಿಲ್ಲಿ 6’ ಹಾಗೂ ತಮಿಳಿನ ‘ವಿಶ್ವರೂಪಂ 2’ ಮುಂತಾದ ಚಿತ್ರಗಳಲ್ಲಿ ಹಿರಿಯ ಪಾತ್ರಗಳಲ್ಲಿ ನಟಿಸಿದ್ದರು.
ವಹೀದಾ ಅವರ ಬಗ್ಗೆ ''ಕಾನ್ವರ್ಸೇಷನ್ ವಿತ್ ವಹೀದಾ ರೆಹಮಾನ್" ಎನ್ನುವ ಜೀವನ ಚರಿತ್ರೆಯನ್ನು ಲೇಖಕ ಮತ್ತು ನಿರ್ದೇಶಕ ನಸ್ರೀನ್ ಮುನ್ನಿ ಕಬೀರ್ ಬರೆದಿದ್ದಾರೆ. ಛಾಯಾಗ್ರಹಣ ಪ್ರಿಯರಾದ ವಹೀದಾ ಅವರು ತಮ್ಮ ಈ ಹಿರಿಯ ವಯಸ್ಸಿನಲ್ಲೂ ಈ ಹವ್ಯಾಸವನ್ನು ಮುಂದವರೆಸಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರಾದ ವಹೀದಾ ರೆಹಮಾನ್ ಅವರು ವಿದ್ಯಾಭ್ಯಾಸಕ್ಕೆ ಪ್ರೇರಣೆ ಮತ್ತು ಬಡಜನರ ಉದ್ಧಾರದ ಹಲವು ಕಾರ್ಯಕ್ರಮಗಳಿಗೆ ರಾಯಭಾರಿಯೂ ಆಗಿದ್ದಾರೆ.
On the birth day of an actress of grace Waheeda Rehman
ಕಾಮೆಂಟ್‌ಗಳು