ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಾ ದಬ್ಬೆ


 ವಿಜಯಾ ದಬ್ಬೆ 


ವಿಜಯಾ ದಬ್ಬೆ ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದವರು.

1951ರ ಜೂನ್ 1ರಂದು ಬೇಲೂರಿನಲ್ಲಿ ಜನಿಸಿದ ವಿಜಯಾ ದಬ್ಬೆ ಅವರು  ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಪುಸ್ತಕ ಪ್ರಕಟಣೆ ಮತ್ತು ಪತ್ರಿಕಾ ಸಂಪಾದಕರಾಗಿ ಮತ್ತು ವಿಶಿಷ್ಟ ಲೇಖಕರಾಗಿ ವಿವಿಧಮುಖಿ ಸೇವೆ ಸಲ್ಲಿಸಿದ್ದರು.  

ಉದಯೋನ್ಮುಖ  ಕವಯತ್ರಿಯಾಗಿ ಪ್ರತಿಷ್ಟಿತ ವರ್ಧಮಾನ ಪ್ರಶಸ್ತಿ ಗಳಿಕೆಯಿಂದ ಮೊದಲ್ಗೊಂಡು, ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ,  ಅತ್ತಿಮಬ್ಬೆ ಪ್ರಶಸ್ತಿ, ಹಾಗೂ ಇನ್ನಿತರ ಗೌರವಗಳನ್ನು ಗಳಿಸಿದ್ದ ವಿಜಯಾ ದಬ್ಬೆ ಅವರದ್ದು ತಮ್ಮ ಸಾಹಿತ್ಯ ಮೌಲ್ಯದಂತೆಯೇ ಬದುಕನ್ನೂ ನಡೆಸಿದ್ದ ಹಿರಿಮೆಯುಳ್ಳ ಬದುಕು ಎಂಬುದು ಅವರನ್ನು ಬಲ್ಲ ಬಹುತೇಕರ ಆಪ್ತ ಧ್ವನಿ.  ವಿದ್ಯಾರ್ಥಿ ಜೀವನದ ದೆಸೆಯಲ್ಲೇ ಮಹಿಳಾ ಪರ ಚಳುವಳಿಗಳ ನೇತೃತ್ವ ವಹಿಸಿ ಅವರು ಮೂಡಿಸಿದ ಜಾಗೃತಿ ಅನೇಕ ಕಡೆಗಳಲ್ಲಿ ಪ್ರತಿಧ್ವನಿ ಕಂಡಿತ್ತು.  ಹೆಣ್ಣುಮಕ್ಕಳ  ಶಿಕ್ಷಣವನ್ನು ಪ್ರೋತ್ಸಾಹಿಸಲಿಕ್ಕಾಗಿ ಅನೇಕರಿಗೆ ತಾವೇ ಬೆಂಗಾವಲಾಗಿ ನಿಂತು, ಮುಂದೆ ಬರಲು ನೀರೆರೆದರು.  
  
ಇರುತ್ತವೆ (1975), ನೀರು ಲೋಹದ ಚಿಂತೆ (1985), ತಿರುಗಿ ನಿಂತ ಪ್ರಶ್ನೆ (1995) ಮುಂತಾದವು ವಿಜಯ ದಬ್ಬೆ ಅವರ ಕವನ ಸಂಕಲನಗಳು. ಉರಿಯ ಚಿಗುರು, ಉತ್ಕಲೆ  ಪ್ರವಾಸ ಕಥನಗಳು. ನಯಸೇನ, ನಾಗಚಂದ್ರ ಒಂದು ಅಧ್ಯಯನ (ಪಿಎಚ್.ಡಿ ಪ್ರಬಂಧ),  ಹಿತೈಷಿಯ ಹೆಜ್ಜೆಗಳು, ಸಾರಸರಸ್ವತಿ ಇವರ ಸಂಶೋಧನಾ ಕೃತಿಗಳು. ಹಿತೋಫಿಯಾ ಹೆಜ್ಜೆಗಳು , ಮಹಿಳಾಸಾಹಿತ್ಯ ಸಮಾಜ, ನಾರಿ ದಾರಿ ದಿಗಂತ(1977), ಮಹಿಳೆ ಮತ್ತು ಮಾನವತೆ, ಸಂಪ್ರತಿ ಇವರ ಚಿಂತನಾಪೂರ್ಣ ವಿಮರ್ಶಾ ಕೃತಿಗಳು.

ವಿಜಯಾ ದಬ್ಬೆ ಅವರು  2018 ವರ್ಷದ ಫೆಬ್ರವರಿ 23 ರಂದು ಈ ಲೋಕವನ್ನಗಲಿದರು.

Remembrance of Late Vijaya Dabbe

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ