ಶೇಷಗಿರಿರಾವ್
ಎಲ್ ಎಸ್. ಶೇಷಗಿರಿರಾವ್
ಪ್ರೊ. ಎಲ್. ಎಸ್. ಶೇಷಗಿರಿರಾವ್ ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ, ಹೋರಾಟಗಾರ, ಪ್ರಾಧ್ಯಾಪಕ, ಬರಹಗಾರ, ಹಾಗೂ ಇವೆಲ್ಲವುಗಳ ಜೊತೆಗೆ ಸರಳ ಸಜ್ಜನಿಕೆಗಳಿಗೆ ಹೆಸರಾಗಿದ್ದವರು.
ಎಲ್. ಎಸ್. ಶೇಷಗಿರಿರಾವ್ 1925ರ ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಮೂಲತಃ ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದವರು. ತಮ್ಮ ತಂದೆ ಎಲ್. ಸ್ವಾಮಿ ರಾವ್ ಅವರಂತೆಯೇ ಅಧ್ಯಾಪನ ವೃತ್ತಿಗೆ ಆಕರ್ಷಿತರಾದ ಎಲ್ಎಸ್ಎಸ್ ಸಾಹಿತ್ಯದ ವಿಚಾರದಲ್ಲಿಯೂ ತಂದೆಯವರ ಆಸಕ್ತಿಯನ್ನೇ ಹಿಂಬಾಲಿಸಿದರು. ಇಂಗ್ಲಿಷ್ ಅಧ್ಯಾಪಕರಾಗಿ ತಮ್ಮ ಪ್ರಿಯ ಶಿಷ್ಯವರ್ಗದವರಿಗೆ ಎಂದೆಂದೂ ಮೇಷ್ಟ್ರು ಎನಿಸಿದ್ದ ಎಲ್ಎಸ್ಎಸ್ ಕನ್ನಡದ ‘ಸಾಕ್ಷೀಪ್ರಜ್ಞೆ’ಯ ಪ್ರತೀಕವೆಂದು ಹೆಸರಾದವರು.
ಸುದೀರ್ಘಕಾಲದ ಅಧ್ಯಾಪನವೇ ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಆರ್. ಗುಂಡೂರಾಯರ ಪತ್ರಿಕಾ ಕಾರ್ಯದರ್ಶಿಯಾಗಿ, ಪುಸ್ತಕ ಪ್ರಾಧಿಕಾರದ ಪ್ರಥಮಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯಾದರ್ಶಿಯಾಗಿ ಎಲ್ ಎಸ್ ಎಸ್ ದುಡಿದಿದ್ದರು.
ಎಲ್ ಎಸ್ ಶೇಷಗಿರಿರಾಯರು ರಾಷ್ಟ್ರೋತ್ತಾನ ಪರಿಷತ್ತಿನ ಪುಟ್ಟ ಮಕ್ಕಳಿಗಾಗಿನ ಸಚಿತ್ರ ಪುಸ್ತಕಗಳ ಮೂಲಕ ಚಿಕ್ಕ ಮಕ್ಕಳಿಗೆ ಹೇಗೆ ಪ್ರಿಯರಾಗಿದ್ದರೋ ಹಾಗೆಯೇ, ತಮ್ಮ ಉನ್ನತ ವ್ಯಾಖ್ಯಾನ, ಉಪನ್ಯಾಸ, ವಿಶಾಲ ವ್ಯಾಪ್ತಿಯ ಬರಹ, ವಿಮರ್ಶೆ, ಸಂಪಾದನೆ ಮತ್ತು ಕನ್ನಡ ಪರ ಹೋರಾಟಗಳ ಮೂಲಕ ನಾಡಿನ ಎಲ್ಲ ವರ್ಗದ ಹಿರಿಯರಿಗೂ ಪ್ರಿಯರಾಗಿದ್ದರು. ಅವರ ಸಂಪಾದನೆಯಲ್ಲಿ ಮೂಡಿಬಂದ ಬೆಂಗಳೂರು ದರ್ಶನ ಸಂಪುಟಗಳು ಪಡೆದ ಜನಪ್ರಿಯತೆ ಅಪಾರವಾದದ್ದು. ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಅವರ ಹೆಸರು ನಿರಂತರವಾಗಿ ಬೆಳಗುತ್ತಿರುವಂತದ್ದು. ಕನ್ನಡ ಪುಸ್ತಕ ಪ್ರಾಧಿಕಾರದಂತಹ ಅಧಿಕಾರ ನಿರ್ವಹಣೆಯಲ್ಲಿ ಅವರು ಕೈಗೊಂಡ ಕಾರ್ಯಕ್ರಮಗಳು ಕೂಡಾ ಅಷ್ಟೇ ಮಹತ್ವಪೂರ್ಣವಾದವು.
ಅಂದಿನ ದಿನಗಳಲ್ಲಿ ನಾವು ಸಂಘಟಿಸಿದ್ದ ಮಾಸ್ತಿ ಜನ್ಮ ಶತಾಬ್ಧಿ ಕಾರ್ಯಕ್ರಮ, ನೀನಾಸಂ ಅವರ ‘ಆಧುನಿಕ ಕನ್ನಡ ಸಾಹಿತ್ಯ ಶಿಬಿರ’ದ ಉದ್ಘಾಟನಾ ಸಂದರ್ಭಗಳಲ್ಲಿ ಅವರು ನೀಡಿದ ಉಪನ್ಯಾಸಗಳು ನಮ್ಮ ಮನಸ್ಸಿನಲ್ಲಿ ಈಗಲೂ ಆಳವಾಗಿ ಬೇರೂರಿವೆ. ಒಂದು ರೀತಿಯಲ್ಲಿ ಇದು ಆಗತಾನೆ ಕನ್ನಡದ ಸಾಸ್ಕೃತಿಕ ಪರಿಸರದಲ್ಲಿ ಆಸಕ್ತಿ ತಾಳಿದ್ದ ನಮ್ಮಂತಹವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮೊದ ಮೊದಲಿಗೆ ದೊರೆತ ಅಪೂರ್ವ ಬೆಳಕು ಎಂದರೆ ತಪ್ಪಾಗಲಾರದು. ಕಥಾನಕ ರೂಪದಲ್ಲಿ ಅವರು ನಮ್ಮಲ್ಲಿ ತುಂಬಿದ್ದ ಮಾಸ್ತಿಯವರ ಮಾಹಿತಿ, ಮಾಸ್ತಿಯವರ ಸಾಹಿತ್ಯದ ವಿಸ್ತಾರ ಮತ್ತು ಆಳ, ಆಧುನಿಕ ಕನ್ನಡ ಸಾಹಿತ್ಯದ ವಿವಿಧ ನೆಲೆಗಳು ಇತ್ಯಾದಿ ವಿಚಾರಗಳು ಇಂದಿಗೂ ಮರೆಯಲಾರದಂತೆ ಹಸುರಾಗಿವೆ. ವಿವಿಧ ಕನ್ನಡ ಸಮಾರಂಭಗಳು – ಚಳುವಳಿಗಳಲ್ಲಿ ಅವರು ನಮಗೆ ನೀಡಿದ ಬೋಧೆ ಮತ್ತು ಸ್ಪೂರ್ತಿ ಮನನೀಯವಾದದ್ದು.
ಕನ್ನಡ ಸಾಹಿತ್ಯ ಮಾತ್ರವಲ್ಲದೆ ವಿಶ್ವದೆಲ್ಲೆಡೆಯ ಸಾಹಿತ್ಯದಲ್ಲಿನ ಪ್ರಗತಿಯನ್ನು ತೀವ್ರ ಆಸಕ್ತಿಯಿಂದ ಗಮನಿಸುತ್ತ ಬಂದಿದ್ದ ಎಲ್ಎಸ್ಎಸ್ ಕನ್ನಡ ಸಾಹಿತ್ಯ ಲೋಕದಲ್ಲಿ ಕಂಡು ಬಂದಿರುವ ಎಲ್ಲಾ ಸಾಹಿತ್ಯ ಪ್ರಗತಿಗಳನ್ನೂ ಸಮಚಿತ್ತ ಸಮಗೌರವದಿಂದ ಕಾಣುತ್ತಾ ಸಾಗಿದ್ದವರು. ಕಳೆದ ಹಲವು ವರ್ಷಗಳಲ್ಲಿ ಸಾಹಿತ್ಯವು ಪಡೆದುಕೊಂಡಿರುವ ವಿಶಾಲ ವ್ಯಾಪ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದ ಎಲ್ಎಸ್ಎಸ್ ವಿವಿಧ ಜ್ಞಾನ ಪ್ರಕಾರಗಳಾದ ಮನಃಶಾಸ್ತ್ರ, ಸಮಾಜಶಾಸ್ತ್ರಗಳ ಜೊತೆಗೆ ಅರ್ಥಶಾಸ್ತ್ರ, ರಾಜಕೀಯದಂತಹ ವಿಚಾರಗಳನ್ನು ಕೂಡಾ ಸಮರ್ಥವಾಗಿ ಅರ್ಥೈಸಿರುವ ಜನ ಇಂದು ಬರಹದಲ್ಲಿ ತೊಡಗಿರುವುದನ್ನು ಸಂತೋಷಿಸುತ್ತಿದ್ದರು. ದಲಿತ ಸಾಹಿತ್ಯ ಶಕ್ತಿಶಾಲಿಯಾಗಿ ಹೊರಹೊಮ್ಮಿರುವುದರ ಬಗ್ಗೆ ವಿಶೇಷ ಮಹತ್ವ ನೀಡುತ್ತಿದ್ದ ಎಲ್ಎಸ್ಎಸ್ ದಲಿತ ಸಾಹಿತ್ಯ ಪ್ರಕಾರದಲ್ಲಿನ ಲೇಖಕರು ತಮ್ಮ ಅಸಾಮಾನ್ಯ ಪ್ರತಿಭೆಯ ಜೊತೆಗೆ ತೀವ್ರವಾದ ಅನುಭವಗಳ ಸಹಿತವಾಗಿ ಆತ್ಮಗೌರವ ಮತ್ತು ಸತ್ಯಪ್ರದಿಪಾದನೆಯ ಹಾದಿಯಲ್ಲಿ ಸಾಹಿತ್ಯ ಮೂಡಿಸುತ್ತಾ ಸಾಗಿದ್ದು ದಲಿತ ಸಾಹಿತ್ಯಕ್ಕೆ ಅಪಾರ ಶಕ್ತಿ ಒದಗಿಸಿತ್ತು ಎಂದು ಅಭಿಪ್ರಾಯಪಡುತ್ತಿದ್ದರು.
ಕನ್ನಡ ಪರವಾದ ಎಲ್ಲಾ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಎಲ್ಎಸ್ಎಸ್ ಅವರು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂಡಾ ಕನ್ನಡಕ್ಕೆ ಸೂಕ್ತವಾಗಿ ಸಿಗದಿರುವ ಪುರಸ್ಕಾರ, ಸಂಪನ್ಮೂಲ, ನಾಯಕತ್ವಗಳ ಬಗೆಗೆ ವ್ಯಕ್ತಪಡಿಸಿದ್ದ ಕಾಳಜಿಗಳು ಮನನೀಯವಾದದ್ದು.
ನಾವು ನಿರೀಕ್ಷಿಸುವಂತಹ ಸಾಹಿತ್ಯ ಕ್ಷೇತ್ರದ ಮಾರ್ಗದರ್ಶಿಗಳು ಮಾರುಕಟ್ಟೆಯಲ್ಲಿ ಉದ್ದ್ಭವಿಸುವುದಿಲ್ಲ, “ಕುವೆಂಪು, ಮಾಸ್ತಿ, ಬೇಂದ್ರೆ, ಶಿವರಾಮ ಕಾರಂತರು ತಮ್ಮನ್ನು ರೋಲ್ ಮಾಡೆಲ್ಲುಗಳೆಂದು ಘೋಷಿಸುತ್ತಾ ಬಂದವರಲ್ಲ” ಎನ್ನುತ್ತಿದ್ದ ಎಲ್ಎಸ್ಎಸ್ ಬರವಣಿಗೆಯ ಕಲೆಯನ್ನು ಶಾಲೆಯ ಕೊಟಡಿಗಳಲ್ಲಿ ಕಲಿಸುವುದು ಸಾಧ್ಯವಿಲ್ಲ, ಅದು ಸ್ವಾಭಾವಿಕವಾಗಿಯೇ ವ್ಯಕ್ತಿತ್ವದಲ್ಲಿ ಮೂಡಬೇಕು. ಬರಹಗಾರನಾಗಬೇಕಾದವ ತನ್ನ ಪರಿಸರ ಮತ್ತು ಬದುಕಿನೊಡನೆ ಸಾಕ್ಷೀಭೂತವಾದ ಅನುಭಾವವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ” ಎನ್ನುತ್ತಿದ್ದರು.
ತಮ್ಮ ಮೇಲ್ಕಂಡ ನಿಲುವಿನ ಬಗ್ಗೆ ವಿವರಿಸುವ ಎಲ್ ಎಸ್ ಎಸ್ ‘ಜೇನ್ ಆಸ್ಟಿನ್’ ತನ್ನ ಬದುಕಿನತ್ತ ಹೊಂದಿದ್ದ ಸೂಕ್ಷ್ಮ ದೃಷ್ಟಿ ಮತ್ತು ಅನುಭಾವಗಳಿಂದ ಶ್ರೇಷ್ಠ ಬರಹಾಗರ್ತಿಯಾಗಿ ರೂಪಗೊಂಡಿದ್ದನ್ನು ಉದಾಹರಿಸುತ್ತಿದ್ದರು. ಬೇಂದ್ರೆಯವರು ಪ್ರೇಮ ಕವಿಯಾದದ್ದು ಯಾವುದರಿಂದ? ಶೆಲ್ಲಿ ಸಾವಿನ ಬಗ್ಗೆ ಅಷ್ಟೊಂದು ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದಾದರೂ ಹೇಗೆ? ನಲವತ್ತು ವಯಸ್ಸು ಕಳೆದ ನಂತರ ಬರಹಕ್ಕೆ ತೊಡಗಿದ ಇಲಿಯಟ್ ಮುಂಬಂದ ಹಲವಾರು ತಲೆಮಾರುಗಳಿಗೆ ಪ್ರಭಾವ ಬೀರಲು ಸಾಧ್ಯವಾದದ್ದಾದರೂ ಹೇಗೆ? ಹೀಗೆ ಸಾಹಿತ್ಯ ಕರ್ತೃತ್ವ ಶಕ್ತಿಯನ್ನು ಎಳೆ ಎಳೆಯಾಗಿ ಬಿಡಿಸಿ ನೋಡುತ್ತಿದ್ದ ಎಲ್ಎಸ್ಎಸ್, ನಮ್ಮ ಎಸ್. ಎಲ್. ಭೈರಪ್ಪನವರು ತಮ್ಮ ಕಾದಂಬರಿಗಳ ರಚನೆಯ ಕ್ರಿಯೆಯಲ್ಲಿ ನೇರವಾಗಿ ವಿಚಾರ ಅರಿತುಕೊಳ್ಳುವ ಸಲುವಾಗಿ ಕೈಗೊಳ್ಳುವ ಸಾಹಸಕರ ಸುದೀರ್ಘ ಯಾತ್ರೆಗಳನ್ನು ಸಹಾ ನಮ್ಮ ಗಮನಕ್ಕೆ ತಂದಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಎಲ್ಎಸ್ಎಸ್ ಕನ್ನಡ ಪುಸ್ತಕಗಳ ಹೆಚ್ಚಿನ ಪ್ರಸಾರಕ್ಕೆ ಗಮನಾರ್ಹ ಕಾರ್ಯಗಳನ್ನು ನಡೆಸಿದರು. ದೂರದರ್ಶನದಂತಹ ಮಾಧ್ಯಮಗಳು ಓದುಗರ ಅಭಿರುಚಿಯ ಮೇಲೆ ಬೀರಿರುವ ಪ್ರಭಾವಗಳನ್ನು ಎಲ್ಎಸ್ಎಸ್ ಅವರು ಅಲ್ಲಗೆಳೆಯುತ್ತಿರಲಿಲ್ಲವಾದರೂ, ಪುನಃ ಜನರ ಪ್ರವೃತ್ತಿ ನಿಧಾನವಾಗಿ ಓದುವಿಕೆಯತ್ತ ಜಾರುತ್ತಿರುವುದರ ಬಗ್ಗೆ ಆಶಾದಾಯಕವಾದ ನಿಲುವು ಹೊಂದಿದ್ದರು. ಆದರೂ ಕನ್ನಡದ ಪುಸ್ತಕಗಳ ಮಾರಾಟದ ವಿಚಾರದಲ್ಲಿ ಅನೇಕ ಗಂಭೀರವಾದ ಸವಾಲುಗಳಿರುವುದನ್ನು ಒತ್ತಿ ಹೇಳುತ್ತ ಬಂದಿದ್ದ ಎಲ್ಎಸ್ಎಸ್, ಕನ್ನಡ ಪುಸ್ತಕದ ಮಾರಾಟ ಕ್ರಿಯೆ ಇನ್ನೂ ಸಾಕಷ್ಟು ವ್ಯವಸ್ಥಿತವಾಗಬೇಕಿರುವ ಅವಶ್ಯಕತೆಯನ್ನು ಒತ್ತಿ ಹೇಳುತ್ತಿದ್ದರು.
ಶೇಷಗಿರಿರಾಯರು ‘ಇದು ಜೀವನ’ ಎಂಬ ಕಥಾಸಂಕಲನವನ್ನು ಮೊದಲು ಪ್ರಕಟಿಸಿದರು. ನಂತರ ‘ಜಂಗಮಜಾತ್ರೆಯಲ್ಲಿ’, ‘ಮುಟ್ಟಿದ ಗುರಿ ಮತ್ತು ಇತರ ಕಥೆಗಳು’, ‘ಮುಯ್ಯಿ’ ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದರು.
ವಿಚಾರ ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗಳಲ್ಲಿ ಬಹಳಷ್ಟು ಪ್ರಸಿದ್ಧರಾಗಿರುವ ಎಲ್ ಎಸ್ ಎಸ್ ‘ಕಾದಂಬರಿ – ಸಾಮಾನ್ಯ ಮನುಷ್ಯ’, ಆಲಿವರ್ ಗೋಲ್ಡ್ ಸ್ಮಿತ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯವಿಹಾರ. ಸಾಹಿತ್ಯ ವಿಶ್ಲೇಷಣೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆ, ಹೊಸಗನ್ನಡ ಸಾಹಿತ್ಯ ಚರಿತ್ರೆ, ಫ್ರಾನ್ಸ್ ಕಾಫ್ಕಾ, ಗ್ರೀಕ್ ರಂಗಭೂಮಿ ಮತ್ತು ನಾಟಕ, ವಿಲಿಯಮ್ ಶೇಕ್ಸ್ ಪಿಯರ್, ಸಾಹಿತ್ಯ-ಬದುಕು, ಟಿ. ಪಿ. ಕೈಲಾಸಂ, ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ, ಮಾಸ್ತಿ : ಜೀವನ ಮತ್ತು ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ಚರಿತ್ರೆ, ಸಾಹಿತ್ಯದ ಕನ್ನಡಿಯಲ್ಲಿ, ಪಾಶ್ಚಾತ್ಯ ಸಾಹಿತ್ಯಲೋಕದಲ್ಲಿ, ಎಲ್. ಎಸ್. ಎಸ್. ಕಂಡ ತ. ರಾ. ಸು, ಮಹಾಭಾರತ (ನಾಲ್ಕು ಸಂಪುಟಗಳು) ಇವೇ ಮುಂತಾದ ವಿಶಾಲ ವ್ಯಾಪ್ತಿಯ ಕಾರ್ಯ ನಡೆಸಿದ್ದರು.
ಎಲ್ ಎಸ್ ಎಸ್ ಅವರು ರಚಿಸಿರುವ ಇನ್ನಿತರ ಬರಹಗಳಲ್ಲಿ ಆಕಾಂಕ್ಷೆ ಮತ್ತು ಆಸ್ತಿ, ಜೀವನ ಚರಿತ್ರೆಗಳಾದ ಸಾರ್ಥಕ ಸುಬೋಧ, ಎಂ. ವಿಶ್ವೇಶ್ವರಯ್ಯ ಮುಂತಾದ ಬರಹಗಳು ಪ್ರಮುಖವಾಗಿವೆ.
ಎಲ್ಎಸ್ಎಸ್ ಅವರು ಐ.ಬಿ.ಎಚ್ ಅಂತಹ ಸಂಸ್ಥೆಗಳಿಗಾಗಿ ಹಲವು ರೀತಿಯ ನಿಘಂಟುಗಳನ್ನು ಸಂಪಾದಿಸಿರುವ ಕೆಲಸವೇ ಬೃಹತ್ ಮಟ್ಟದ್ದು. ಅವುಗಳಲ್ಲಿ ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು, ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು, ಐ. ಬಿ. ಎಚ್ ಕನ್ನಡ - ಕನ್ನಡ ನಿಘಂಟು, ಸುಭಾಶ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು, ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ ನಿಘಂಟು, ಸುಲಭ ಇಂಗ್ಲೀಷ್ ಪ್ರಮುಖವಾದವು.
ಮಕ್ಕಳ ಸಾಹಿತ್ಯದಲ್ಲಿ ರಚಿಸಿರುವ ಹಲವರು ಕೃತಿಗಳು, ಹಲವಾರು ಅನುವಾದಿತ ಗ್ರಂಥಗಳು, ಹಲವರು ಸಂಪಾದನೆಗಳು, ರಾಷ್ಟ್ರೋತ್ತಾನ ಪುಸ್ತಕ ಮಾಲೆಯ 500ಕ್ಕೂ ಹೆಚ್ಚು ಕಿರುಪುಸ್ತಕಗಳು, ಹಂಪಿ ವಿಶ್ವವಿದ್ಯಾಲಯದ ‘ಕಿರಿಯರ ಕರ್ಣಾಟಕ’, ಹಲವಾರು ವಿಶೇಷ ಲೇಖನಗಳು, ಪ್ರಬಂಧಗಳು ಹೀಗೆ ಎಲ್ಎಸ್ಎಸ್ ಅವರು ನಡೆಸಿರುವ ಲೇಖಣಿಯ ಕೆಲಸ ಸಾಮಾನ್ಯಮಟ್ಟದ ಊಹೆಗೆ ಸಿಲುಕಲಾರದಷ್ಟು ವಿಶಾಲ ವ್ಯಾಪ್ತಿಯದ್ದು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಮಾಸ್ತಿ ಪಶಸ್ತಿ, ಅ. ನ. ಕೃ ಪ್ರತಿಷ್ಠಾನ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ದೇವರಾಜ ಬಹದ್ದೂರ್ ಪ್ರಶಸ್ತಿ ಹೀಗೆ ಅವರಿಗೆ ಹಲವಾರು ಪ್ರಶಸ್ತಿಗಳು, ಗೌರವಗಳು ಎಲ್ ಎಸ್ ಶೇಷಗಿರಿರಾವ್ ಅವರಿಗೆ ಸಂದಿದ್ದವು.
94ರ ವರ್ಷದ ಜೀವನ ಯಾತ್ರೆಯನ್ನು 2019 ವರ್ಷದ ಡಿಸೆಂಬರ್ 20ರಂದು ಮುಗಿಸಿದ ಪ್ರೊ. ಎಲ್ ಎಸ್ ಶೇಷಗಿರಿರಾಯರು, ನಮಗೆ ನಮ್ಮ ಸುತ್ತಮುತ್ತಲಲ್ಲೇ ಹತ್ತಿರದಲ್ಲೇ ಇದ್ದರು ಎಂಬ ಭರವಸೆ ಅಂತಿಂಥದ್ದಾಗಿರಲಿಲ್ಲ. ಅದೊಂದು ಅಳಿಸಲಾಗದ ಬೆಳಕಿನ ಸಾಹಿತ್ಯ, ಸಂಸ್ಕೃತಿ, ಸರಳ ಸಜ್ಜನಿಕೆ, ಸವಿ ಮಾತುಗಳ, ಅಂತರಂಗದಲ್ಲಿ ಬೇಕು ಬೇಕು ಎಂದು ಧ್ವನಿಸುವ ಅಮರ ಸಂಗೀತ. ಅದು ಮರೆಯಾಯಿತು ಎನ್ನಬೇಕೋ, ಇಲ್ಲ ಒಳಗೇ ಇದೆ ಎನ್ನಬೇಕೋ ಎಂಬುದು ನನ್ನಲ್ಲಿ ಹೊಳೆಯುತ್ತಿಲ್ಲ.
ಅವರನ್ನು ನೋಡಿ ಹಲವು ವರ್ಷವಾಯಿತು. ಆದರೂ ಇದ್ದರು. ಅವರಿಲ್ಲ ಎಂದು ಓದಿದ್ದು ಸುದ್ಧಿ ಮಾತ್ರಾ. ನನ್ನಲ್ಲಿ ಅವರಿದ್ದಾರೆ, ಎಂದೆಂದೂ ಇರುತ್ತಾರೆ.
On the birth anniversary of great scholar and writer Prof. L.S. Sheshagiri Rao
ಕಾಮೆಂಟ್‌ಗಳು