ಯಾಮಿನಿ ಕೃಷ್ಣಮೂರ್ತಿ
ಯಾಮಿನಿ ಕೃಷ್ಣಮೂರ್ತಿ
ಮಹಾನ್ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಪ್ರಕಾರಗಳಲ್ಲಿ ಪ್ರಸಿದ್ಧರಾದವರು.
ಯಾಮಿನಿ ಕೃಷ್ಣಮೂರ್ತಿ 1940ರ ಡಿಸೆಂಬರ್ 20ರಂದು ತಮಿಳುನಾಡಿನ ಚಿದಂಬರಂನಲ್ಲಿ ತೆಲುಗು ಕುಟುಂಬವೊಂದರಲ್ಲಿ ಜನಿಸಿದರು. ಹುಣ್ಣಿಮೆಯ ದಿನ ಜನಿಸಿದ ಇವರಿಗೆ ಯಾಮಿನಿ ಎಂದು ಅವರ ಅಜ್ಜ ಪ್ರೀತಿಯಿಂದ ನಾಮಕರಣ ಮಾಡಿದರಂತೆ.
ಪ್ರಾಥಮಿಕ ಶಿಕ್ಷಣದ ನಂತರ, ತಂಜಾವೂರಿನ ಕಿಟ್ಟಪ್ಪಪಿಳ್ಳೆಯವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದ ಯಾಮಿನಿಯವರು ಮುಂದೆ ರುಕ್ಮಿಣಿದೇವಿ ಅರುಂಡೇಲ್, ಧಂಡಾಯುಧ ಪಿಳ್ಳೆ, ಕಂಚೀಪುರಂ ಎಲ್ಲಪ್ಪ ಪಿಳ್ಳೆ ಮತ್ತು ಮೈಸೂರು ಗೌರಮ್ಮ ಮುಂತಾದವರ ಮೂಲಕ ತಮ್ಮ ಪ್ರತಿಭೆಯನ್ನು ವಿಶಿಷ್ಟರೀತಿಯಲ್ಲಿ ಪೋಷಿಸಿಕೊಂಡರು.
ಐದನೆಯ ವಯಸ್ಸಿನಿಂದಲೇ ನೃತ್ಯದಲ್ಲಿ ಆಸಕ್ತಿ ಮೂಡಿಸಿಕೊಂಡ ಯಾಮಿನಿಯವರು 1957ರ ವರ್ಷದಲ್ಲಿ ಪ್ರದರ್ಶನಗಳನ್ನು ನೀಡುವುದನ್ನು ಆರಂಭಿಸಿ, ದೇಶ ವಿದೇಶಗಳಲ್ಲೆಲ್ಲಾ ತಮ್ಮ ಪ್ರತಿಭೆಯಿಂದ ಪ್ರಸಿದ್ಧರಾದರು.
ನೃತ್ಯಕಲಾ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಪರಂಪರೆಯನ್ನೇ ನಿರ್ಮಿಸಿದ ಯಾಮಿನಿ ಕೃಷ್ಣಮೂರ್ತಿಯವರು ರಾಷ್ಟ್ರದ ಮೂಲೆ ಮೂಲೆಗಳಲ್ಲೂ ಪ್ರಸಿದ್ಧಿ ಪಡೆದು, ತಮ್ಮ ನಿರಂತರ ಪರಿಶ್ರಮದಿಂದ ತಮಗೆ ಪ್ರಿಯವೆನಿಸಿದ ನೃತ್ಯಕ್ಷೇತ್ರವನ್ನು ಅಪಾರವಾಗಿ ಬೆಳಗಿದರು. ನವದೆಹಲಿಯಲ್ಲಿ ವಾಸ್ತವ್ಯಹೂಡಿದ್ದ ಯಾಮಿನಿಯವರು ಅಲ್ಲಿಯೇ ತಮ್ಮ ನೃತ್ಯ ಶಿಕ್ಷಣಶಾಲೆಯನ್ನು ತೆರೆದು ಯುವಕಲಾ ಪ್ರತಿಭೆಗಳನ್ನು ಬೆಳೆಸುವ ಕಾಯಕದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು.
ಅವರಿಗಿರುವ ನೃತ್ಯದ ಕುರಿತಾದ ಪ್ರೀತಿ ಗೌರವಗಳಿಗೆ ಪೂರಕವೋ ಎಂಬಂತೆ ಅವರ ಆತ್ಮಚರಿತ್ರೆ ‘A Passion for Dance’ ಎಂಬ ಹೆಸರನ್ನು ಹೊಂದಿದೆ.
ತಿರುಪತಿ ತಿರುಮಲ ದೇವಸ್ಥಾನದ ಆಸ್ಥಾನ ನರ್ತಕಿ ಗೌರವ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೇಂದ್ರ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿಗಳನ್ನೊಳಗೊಂಡಂತೆ ಅವರಿಗೆ ಅನೇಕ ಗೌರವಗಳು ಸಂದಿದ್ದವು.
ಯಾಮಿನಿ ಕೃಷ್ಣಮೂರ್ತಿ ಅವರು 2024ರ ಆಗಸ್ಟ್ 3ರಂದು ನಿಧನರಾದರು.
ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
Respects to departed soul Great dancer Yamini Krishnamurthy 🌷🙏🌷
ಕಾಮೆಂಟ್‌ಗಳು