ರುಕ್ಮಿಣಿದೇವಿ
ರುಕ್ಮಿಣಿದೇವಿ ಅರುಂಡೇಲ್
ರುಕ್ಮಿಣಿದೇವಿ ಅರುಂಡೇಲ್ ಅವರು ಥಿಯೋಸೋಫಿಸ್ಟರಾಗಿ, ಭರತನಾಟ್ಯ ಕಲಾವಿದೆಯಾಗಿ, ನೃತ್ಯ ದಿಗ್ದರ್ಶಕರಾಗಿ, ನೃತ್ಯ ಸಂಯೋಜಕರಾಗಿ, ಕಲಾಕ್ಷೇತ್ರ ಹುಟ್ಟುಹಾಕಿದವರಾಗಿ ಭಾರತದಲ್ಲಿ ಜನಜನಿತರು.
ರುಕ್ಮಿಣಿದೇವಿ ಅರುಂಡೇಲ್ 1904ರ ಫೆಬ್ರುವರಿ 29ರಂದು ಜನಿಸಿದರು. ಭಾರತಿಯ ಸಾಂಸ್ಕೃತಿಕ ಇತಿಹಾಸದಲ್ಲಿ ಭರತನಾಟ್ಯಕಲೆಯನ್ನು ಅದರ ಮೂಲಸ್ವರೂಪವಾದ ‘ಸಾಧಿರ್’ ಎಂಬ ಪದ್ಧತಿಯಲ್ಲಿ ಪುನರೋತ್ಥಾನಗೈದವರೆಂದು ರುಕ್ಮಿಣಿದೇವಿಯವರನ್ನು ನಮ್ಮ ದೇಶದ ವಿದ್ವಾಂಸರು ಪರಿಗಣಿಸಿದ್ದಾರೆ. ಅಂದಿನ ದಿನಗಳಲ್ಲಿ ಭರತನಾಟ್ಯವೆಂಬುದು ಕೇವಲ ದೇವಸ್ಥಾನಗಳ ಸೇವಾಕರ್ತೆಯರು ಮತ್ತು ದೇವದಾಸಿಯರಿಗೆ ಸೀಮಿತವಾಗಿದ್ದು, ಅದನ್ನು ಭಾರತೀಯ ಸಾಂಸ್ಕೃತಿಕ ರಂಗದ ಮುಖ್ಯವೇದಿಕೆಗೆ ತಂದ ಶ್ರೇಯಸ್ಸು ರುಕ್ಮಿಣಿದೇವಿ ಅವರಿಗೆ ಸಲ್ಲುತ್ತದೆ. ಭರತನಾಟ್ಯ ಮಾತ್ರವಲ್ಲದೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿನ, ಕಲೆ ಮತ್ತು ಕೌಶಲ್ಯದ ಪುನರುತ್ಥಾನಕ್ಕಾಗಿ ರುಕ್ಮಿಣಿದೇವಿ ಅವರು ಅಪಾರ ಸಾಧನೆ ಮಾಡಿದವರಾಗಿದ್ದಾರೆ. ಪ್ರಾಣಿಸಂಕುಲದ ಉಳಿವಿನ ಬಗ್ಗೆ ಕೂಡಾ ಅವರು ವಹಿಸಿದ ಶ್ರಮ ಗಣನೀಯ ಪ್ರಮಾಣದ್ದಾಗಿದೆ.
ಅಂದಿನ ದಿನಗಳಲ್ಲಿ ಮೇಲ್ಪಂಗಡದ ಜನ ಭರತನಾಟ್ಯದಲ್ಲಿ ಪಾಲ್ಗೊಳ್ಳುವುದು ಅಶ್ಲೀಲವಾದ ಕಾರ್ಯವೆನ್ನುವಂತಹ ಸಂಕುಚಿತ ಮನೋಭಾವವುಳ್ಳ ವಾತಾವರಣವಿತ್ತು. ಭರತನಾಟ್ಯದಲ್ಲಿದ್ದ ಕಲೆ, ಸೌಂದರ್ಯ ಮತ್ತು ಆಧ್ಯಾತ್ಮ ದರ್ಶನಗಳನ್ನು ಮನಗಂಡ ರುಕ್ಮಿಣಿದೇವಿ ಅವರು ಭರತನಾಟ್ಯವನ್ನು ಸ್ವತಃ ಅಭ್ಯಸಿಸಿ ಸಾರ್ವಜನಿಕ ಪ್ರತಿಭಟನೆಗಳನ್ನೂ ಲೆಕ್ಕಿಸದೆ ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶಿಸಿದರು.
ಇಂಡಿಯಾ ಟುಡೇ ಪತ್ರಿಕೆ ಪರಿಗಣಿಸಿರುವ ನೂರು ಪ್ರಮುಖ ದೇಶ ನಿರ್ಮಾಪಕರಲ್ಲಿ ರುಕ್ಮಿಣಿ ದೇವಿ ಅವರು ಓರ್ವ ಪ್ರಮುಖರಾಗಿ ಪ್ರಸ್ತಾಪಿತರಾಗಿದ್ದು, ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಕಾಳಿದಾಸ್ ಸಂಮಾನ್ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ರಾಜ್ಯಸಭೆಯ ಪ್ರಥಮ ಮಹಿಳಾ ಸದಸ್ಯರಾಗಿ ಕೂಡಾ ಹಲವು ಕಾಲ ರುಕ್ಮಿಣಿ ದೇವಿ ಅವರು ಸೇವೆ ಸಲ್ಲಿಸಿದ್ದರು. ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ರುಕ್ಮಣಿ ದೇವಿ ಅರುಂಡೇಲ್ ಅವರನ್ನು ರಾಷ್ಟ್ರಪತಿಯಾಗುವಂತೆ ಆಹ್ವಾನಿಸಿದ್ದನ್ನು ಅವರು ನಿರಾಕರಿಸಿದರು.
ಥಿಯೋಸೋಫಿಸ್ಟರಾಗಿ ವಿಶ್ವದೆಲ್ಲೆಡೆ ಸಂಚರಿಸಿದ ರುಕ್ಮಿಣಿದೇವಿ ಅವರು ಪ್ರಖ್ಯಾತ ಶಿಕ್ಷಣ ತಜ್ಞರೆನಿಸಿದ್ದ ಮಾರಿಯಾ ಮೊಂತೆಸ್ಸರಿ, ಪ್ರಖ್ಯಾತ ಕವಿ ಜೇಮ್ಸ್ ಕಸಿನ್ಸ್ ಮತ್ತು ರಷ್ಯಾದ ಬ್ಯಾಲೆ ತಜ್ಞೆ ಅನ್ನ ಪಾವಲೋವ ಮುಂತಾದ ಪ್ರಸಿದ್ಧರ ಆತ್ಮೀಯತೆ ಗಳಿಸಿದ್ದರು. ಪ್ರಖ್ಯಾತ ಥಿಯೋಸೋಫಿಸ್ಟ್ ಹಾಗೂ ವಾರಣಾಸಿಯಾ ಸೆಂಟ್ರಲ್ ಹಿಂದೂ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಡಾ. ಜಾರ್ಜ್ ಅರುಂಡೇಲ್ ಅವರು ರುಕ್ಮಿಣಿ ಅವರನ್ನು ವರಿಸಿದರು. ಈ ದಂಪತಿಗಳು 1936ರಲ್ಲಿ ಚೆನ್ನೈನ ಅಡ್ಯಾರಿನಲ್ಲಿರುವ ಕಲಾಕ್ಷೇತ್ರವನ್ನು ಹುಟ್ಟುಹಾಕಿದರು. ಭಾರತೀಯ ಗುರುಕುಲ ಸಂಸ್ಕೃತಿಯಲ್ಲಿ ನಿರ್ಮಾಣಗೊಂಡ ಈ ಸಂಸ್ಥೆ, ಇಂದು ‘ಕಲಾಕ್ಷೇತ್ರ ಫೌಂಡೆಶನ್’ ಎಂಬ ರೂಪದಲ್ಲಿ ನೂರು ಏಕರೆಗಳಿಗೂ ಮೀರಿದ ವಿಶಾಲವ್ಯಾಪ್ತಿಯಲ್ಲಿ ಹಬ್ಬಿರುವುದರ ಜೊತೆಗೆ ವಿಶ್ವಪ್ರಸಿದ್ಧರಾದ ರಾಧಾ ಬರ್ನಿಯರ್, ಶಾರದಾ ಹಾಫ್ ಮನ್, ಕಮಲಾದೇವಿ ಚಟ್ಟೋಪಾಧ್ಯಾಯ, ಸಂಜುಕ್ತಾ ಪಾಣಿಗ್ರಾಹಿ , ಸಿ.ವಿ. ಚಂದ್ರಶೇಖರ್, ಯಾಮಿನಿ ಕೃಷ್ಣಮೂರ್ತಿ ಮತ್ತು ಲೀಲಾ ಸಾಮ್ಸನ್ ಅಂತಹವರ ಪ್ರಸಿದ್ಧಿಗೆ ಪ್ರಮುಖ ಕುರುಹಾಗಿ ನಿಂತಿದೆ.
ಭರತನಾಟ್ಯ ಶಾಸ್ತ್ರದ ಮೂಲಕ ಮೈಸೂರು ವಾಸುದೆವಾಚಾರ್ಯರೇ ಮೊದಲಾದ ಪ್ರಸಿದ್ಧವಿದ್ವಾಂಸರ ಸಹಯೋಗದಲ್ಲಿ ‘ಸೀತಾ ಸ್ವಯಂವರ’, ‘ಶ್ರೀರಾಮ ವನಾಗಮನ’, ‘ಪಾದುಕಾ ಪಟ್ಟಾಭಿಷೇಕ’, ‘ಶಬರಿಮೊಕ್ಷ’, ‘ಕುಟ್ರಾಲ ಕುರವಂಜಿ’, ‘ರಾಮಾಯಣ’, ‘ಕುಮಾರಸಂಭವ’, ‘ಗೀತ ಗೋವಿಂದ’, ‘ಉಷಾ ಪರಿಣಯ’ ಮುಂತಾದ ನೃತ್ಯರೂಪಕಗಳನ್ನು ರುಕ್ಮಿಣಿದೇವಿಯವರು ಭವ್ಯವಾಗಿ ಪ್ರಸ್ತುತ ಪಡಿಸಿದರು.
ದೇಶ ವಿದೇಶಗಳಲ್ಲಿ ವಿವಿಧ ಕಲಾ ಸಂಘಟನೆಗಳು, ಪ್ರಾಣಿ ಸಂರಕ್ಷಣೆ, ಕಲಾ ಫೋಷಣೆ, ಸಸ್ಯಾಹಾರ ಪ್ರಚಾರ ಮುಂತಾದ ಕೆಲಸಗಳಲ್ಲಿ ನಿರಂತರವಾಗಿ ದುಡಿದ ರುಕ್ಮಿಣಿದೇವಿ ಅರುಂಡೇಲ್ ಅವರು 1986ರ ಫೆಬ್ರುವರಿ 24ರಂದು ತಮ್ಮ 81ನೆಯ ವಯಸ್ಸಿನಲ್ಲಿ ನಿಧನರಾದರು. ಅವರು ಬೆಳಗಿದ ಕಲೆ, ಬೆಳೆಸಿದ ಸಂಸ್ಥೆ, ಬೆಳಗಿಸಿದ ಕಲಾ ಕುಸುಮಗಳು ಮತ್ತು ಮಾಡಿದ ಕೆಲಸಗಳು ಅವರನ್ನು ಈ ದೇಶದಲ್ಲಿ ನಿರಂತರವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿವೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.
On the birth anniversary of great artiste and choreographer Rukmini Devi Arundale

ಕಾಮೆಂಟ್‌ಗಳು