ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದತ್ತಾತ್ರೇಯ ಅರಳಿಕಟ್ಟೆ


 ದತ್ತಾತ್ರೇಯ ಅರಳಿಕಟ್ಟೆ


ದತ್ತಾತ್ರೇಯ ಅರಳಿಕಟ್ಟೆ ಅವರು ಸಲಾಖೆಗೊಂಬೆಯಾಟದ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ಕಲಾವಿದರು.  

ದತ್ತಾತ್ರೇಯ ಅರಳಿಕಟ್ಟೆ  1953ರ ಫೆಬ್ರವರಿ 22ರಂದು, ಶೃಂಗೇರಿ ಸಮೀಪದ ಅರಳೀಕಟ್ಟೆ ಎಂಬಲ್ಲಿ ಜನಿಸಿದರು. ತಂದೆ ಅರಳೀಕಟ್ಟೆ ರಾಮರಾಯರು ಮತ್ತು ತಾಯಿ ಲಲಿತಮ್ಮನವರು.

ದತ್ತಾತ್ರೇಯರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ., ಬಿ.ಎಡ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಎಡ್. ಪದವಿ ಪಡೆದು ಆಧ್ಯಾಪನ ನಡೆಸಿದರು. ಜೊತೆಗೆ ಗೊಂಬೆಯಾಟದಲ್ಲಿನ ಅಪಾರ ಸಾಧನೆ ಅವರ ಜೊತೆ ಜೊತೆಗೆ ಸಾಗಿ ಬಂತು. 

ವಿದ್ಯಾರ್ಥಿ ದೆಸೆಯಿಂದಲೇ ದತ್ತಾತ್ರೇಯ ಅವರಿಗೆ ರಂಗಭೂಮಿಯ ನಂಟು ಬೆಳೆಯಿತು. ಜೊತೆಗೆ ಗೊಂಬೆಯಾಟದ ಬಗ್ಗೆ  ಅಪಾರ ಆಸಕ್ತಿ ಬೆಳೆಯಿತು. ಸುಮಾರು 8-10 ಕೆ.ಜಿ. ತೂಗುವ ಗೊಂಬೆಗಳನ್ನು  ಸಲಾಖೆಯಿಂದ ಹತೋಟಿಗೊಳಪಡಿಸಿ, ಸಂಗೀತ, ನೃತ್ಯ, ನಾಟಕದ ಮತ್ತು ಸರಳ ಮಾತುಗಾರಿಕೆಗಳ ಮೂಲಕ ನೋಡುಗರಿಗೆ ಕಥಾನಕವನ್ನು ಬಿಂಬಿಸುವ ಕಲೆಯಲ್ಲಿ ದತ್ತಾತ್ರೇಯ ಅವರದು  ಬಹು ದೊಡ್ಡ ಸಾಧನೆ. ಗೊಂಬೆಯಾಟ ಕಲೆಯ ಮಹಾನ್ ಸಾಧಕರಾದ ಎಂ.ಆರ್. ರಂಗನಾಥ್‌ರಾವ್ ಅವರೇ ಇವರ ಗುರುಗಳು.  

ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಗೊಂಬೆಯಾಟದ ಕರಿತು ಸಂಶೋಧನೆ ನಡೆಸಿದ ದತ್ತಾತ್ರೇಯರು ಸ್ಥಾಪಿಸಿದ್ದು ‘ಪುತ್ಥಳಿ’ ಕಲಾರಂಗ.  ಒಂದು ಕಾಲದಲ್ಲಿ ಮನೆಮನೆಯ ಮಾತಾಗಿದ್ದ ಗೊಂಬೆಯಾಟ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಾ ಬಂತು. ಈ ಪುರಾತನ ಕಲೆಯನ್ನು ಜೀವಂತವಾಗಿರಿಸಲು ಪ್ರಯತ್ನಗಳು ನಡೆಯುತ್ತಲೇ ಇದ್ದು, ಆ ನಿಟ್ಟಿನಲ್ಲಿ ಪುತ್ಥಳಿ ಕಲಾರಂಗ ಸಂಚಾರಿ ಸೂತ್ರಗೊಂಬೆಯಾಟ ಮಾಡಿರುವ ರಂಗಶಾಲೆಯ ಕೆಲಸ ಮಹತ್ವದ್ದು. 

ಗೊಂಬೆಯಾಟದಲ್ಲಿ ಒಟ್ಟು 5 ಪ್ರಕಾರಗಳಿವೆ. ಸೂತ್ರ ಗೊಂಬೆ, ಸಲಾಕೆ ಗೊಂಬೆ, ಸೂತ್ರ ಸಲಾಕೆ ಗೊಂಬೆ, ತೊಗಲು ಗೊಂಬೆ ಹಾಗೂ ಕೈಗೊಂಬೆ. ಪುತ್ಥಳಿ ಕಲಾರಂಗಶಾಲೆ, ಸೂತ್ರ ಸಲಾಕೆ ಗೊಂಬೆಗಳ ಪ್ರದರ್ಶನದಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಈ ಗೊಂಬೆಗಳು ಮೂರೂವರೆ ಅಡಿ ಎತ್ತರವಿದ್ದು, ಸುಮಾರು 8 ಕೆ.ಜಿ. ತೂಗುತ್ತವೆ. ಮರದಿಂದ ಮಾಡುವ ಈ ಗೊಂಬೆಗಳನ್ನು, ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ಅಲಂಕರಿಸಲಾಗುತ್ತದೆ.

ಕುಮಾರ ಸಂಭವ, ಗಿರಿಜಾ ಕಲ್ಯಾಣ, ಕೃಷ್ಣ ತುಲಾಭಾರ, ಶ್ರೀಕೃಷ್ಣ ಪಾರಿಜಾತ, ಹನುಮತ್‌ ವಿಲಾಸ್‌, ಲಂಕಾದಹನ ಇತ್ಯಾದಿ ಪ್ರಸಂಗಗಳ ಮೂಲಕ ಜನರನ್ನು ರಂಜಿಸಿರುವದೇ ಅಲ್ಲದೆ , ಜನಸಂಖ್ಯಾಸ್ಫೋಟ, ಪರಿಸರ ಮಾಲಿನ್ಯ, ಸ್ತ್ರೀ ಶಿಕ್ಷಣ ಮುಂತಾದ ಸಮಸ್ಯೆಗಳನ್ನೂ ಗೊಂಬೆಯಾಟಕ್ಕೆ ಅಳವಡಿಸಿ ಅರಿವು ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಗೊಂಬೆ ರಚನೆ ತರಬೇತಿಯನ್ನೂ ದತ್ತಾತ್ರೇಯ ಮತ್ತು ತಂಡ ನೀಡುತ್ತಿದೆ. ಈ ಕಾರ್ಯಾಗಾರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ದತ್ತಾತ್ರೇಯ ಅರಳಿಕಟ್ಟೆ ಅವರು ತಮ್ಮ ಗೊಂಬೆಯಾಟಕ್ಕೆ ದೇಶ ವಿದೇಶಗಳಿಂದ ಆಹ್ವಾನಿಸಲ್ಪಡುತ್ತಿದ್ದಾರೆ.

ದತ್ತಾತ್ರೇಯ ಅವರ ಸಾಧನೆಗೆ ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿ,  ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಇಲಾಖಾ ಪ್ರಶಸ್ತಿ, 2003ರಲ್ಲಿ ರಾಷ್ಟ್ರ ಪ್ರಶಸ್ತಿ, ಶಿಕ್ಷಕರತ್ನ, ಕಲಾರತ್ನ, ಪುತ್ಥಳಿ ಚಕ್ರವರ್ತಿ ಬಿರುದು, ರಾಜ್ಯ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಅಮೆರಿಕನ್ ಬಯಾಗ್ರಫಿಕಲ್ ಇನ್‌ಸ್ಟಿಟ್ಯೂಟಿನ ವರ್ಷದ ವ್ಯಕ್ತಿ ಪ್ರಶಸ್ತಿ, ಇಂಟರ್ ನ್ಯಾಷನಲ್ ಬಯಾಗ್ರಫಿಕಲ್ ಸೆಂಟರ್‌ನ ಮ್ಯಾನ್ ಆಫ್ ದಿ ಮಿಲೇನಿಯಂ, ಮ್ಯಾನ್ ಆಫ್ ದಿ ಇಯರ್ 1999 ಪ್ರಶಸ್ತಿ, ಏಷಿಯಾದ ಹೂ ಈಸ್ ಹೂ, ಜನರಲ್ ನಾಲೆಡ್ಜ್‌ನಲ್ಲಿ ಹೆಸರು ಸೇರ್ಪಡೆ, ಪೆಸಿಫಿಕ್ ಮ್ಯಾನ್ ಆಫ್ ಆರ್ಟ್ ಅಂಡ್ ಕಲ್ಚರ್, ಇಂಟರ್ನ್ಯಾಶನಲ್ ವರ್ಚುಯಲ್ ಯೂನಿವರ್ಸಿಟಿ ಆಫ್ ಪಪ್ಪೆಟಿ ಅಂಡ್ ಟೀಚಿಂಗ್ ಇಂದ ಡಾಕ್ಟೊರೆಟ್ ಮುಂತಾದ ಅನೇಕ ಗೌರವಗಳು ಸಂದಿವೆ.

ದತ್ತಾತ್ರೇಯ ಅವರು ಪ್ರಪಂಚದ ಗೊಂಬೆಯಾಟ ಕಲಾವಿದರ ವಿಶ್ವಕೋಶಕ್ಕೆ ಸೇರ್ಪಡೆಯಾದ ಭಾರತೀಯ ಕಲಾವಿದನೆಂಬ ಹೆಗ್ಗಳಿಕೆ ಪಡೆದಿದ್ದಾರೆ.  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸುದ್ಧಿ ಮಾಧ್ಯಮಗಳು ಇವರ ಸಂದರ್ಶನ, ಕಲಾಪರಿಚಯ ಮತ್ತು ಸಾಕ್ಷ್ಯಚಿತ್ರಗಳನ್ನು ಪ್ರಸಾರಮಾಡುತ್ತ ಬಂದಿವೆ. ಬಯಲಾಟ ಅಕಡೆಮಿ ಸದಸ್ಯರಾಗಿಯೂ ಅವರ ಸೇವೆ ಸಂದಿದೆ.

On the birth day of Dr. Dattatreya Aralikatte, a puppeteer of international fame and a teacher.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ