ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರ್ಡೇಕರ್ ಮಂಜಪ್ಪ


ಹರ್ಡೇಕರ್ ಮಂಜಪ್ಪ 


ದೇಶದ ಸ್ವಾತಂತ್ರಕ್ಕಾಗಿನ ಹೋರಾಟದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಮತ್ತು ಕರಕುಶಲ ಕಲೆಗಳಲ್ಲಿ ನುರಿತರಾದ ಹಲವಾರು ಮಂದಿ ಹೆಸರಾಗಿದ್ದಾರೆ.  ಮಹಾತ್ಮ ಗಾಂಧೀಜಿಯವರ ನೇರ ಪ್ರಭಾವಕ್ಕೆ ಒಳಗಾದ ಕರ್ನಾಟಕದ ಹಲವಾರು ಮಹಾಪುರುಷರು ಮತ್ತು ಮಹಿಳೆಯರು ಕೂಡಾ ಇಂತಹ ಮಹನೀಯರ ಸಾಲಿನಲ್ಲಿ  ಪ್ರಮುಖರಾಗಿದ್ದು ಈ ನಿಟ್ಟಿನಲ್ಲಿ, ಉಮಾಬಾಯಿ ಕುಂದಾಪುರ್, ಕಮಲಾದೇವಿ ಚಟ್ಟೋಪಾದ್ಯಾಯ, ಎನ್. ಎಸ್. ಹರ್ಡೇಕರ್ ಅವರುಗಳು ಸಮಾಜ ಸೇವೆಯಲ್ಲಿ ಮಹತ್ವವಾದ ಸೇವೆ ಸಲ್ಲಿಸಿದವರಾಗಿದ್ದಾರೆ.  ಹರ್ಡೇಕರ್ ಮಂಜಪ್ಪನವರು ಈ ಪೈಕಿ ಒಂದು ಹೆಜ್ಜೆ ಮುಂದು.  

ಮಂಜಪ್ಪನವರು ಗಾಂಧಿಜಿಯಂತೆ ಬದುಕಿ, ಭುಜಿಸಿ, ಬೋಧಿಸಿ, ಬರೆದು, ಸಂಪೂರ್ಣ ಬ್ರಹ್ಮಚರ್ಯೆ ಮತ್ತು ತಪಸ್ವೀ ಜೀವನ ನಡೆಸಿದವರು.  ತಮ್ಮ ಜೀವನದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ ಬಹಳಷ್ಟು ಮಂದಿ ಇದ್ದಾಗ್ಯೂ ಹರ್ಡೇಕರ್ ಮಂಜಪ್ಪನವರಂತೆ ಅತ್ಯಂತ ಕಟ್ಟುನಿಟ್ಟಿನ ಸ್ವಯಂ ನಿಯಂತ್ರಣದಲ್ಲಿ ಬದುಕನ್ನು ಸಾಧಿಸಿದವರು ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಬಡತನದ ಬವಣೆ ಅನುಭವಿಸುತ್ತಿರುವವರಿಗಾಗಿ ಬದುಕಿದವರು ಅತ್ಯಂತ ವಿರಳವೆನ್ನಬೇಕು.

ಹರ್ಡೇಕರ್ ಮಂಜಪ್ಪನವರು ಪಂಪನ ಕಾವ್ಯಬಣ್ಣಿತವಾದ ಬನವಾಸಿಯಲ್ಲಿನ ಬಡ ಕುಟುಂಬವೊಂದರಲ್ಲಿ 1889ರ ಫೆಬ್ರವರಿ 18ರಂದು ಜನಿಸಿದರು.    ಅವರು 1903ರ ವರ್ಷದಲ್ಲಿ ಹತ್ತಿರದ ಸಿರಸಿಯಲ್ಲಿ ಮುಲ್ಕಿ ಪರೀಕ್ಷೆಯನ್ನು ಪಾಸುಮಾಡಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು.  ನಂತರದಲ್ಲಿ ಏಳು ರೂಪಾಯಿ ಮಾಸಿಕ ಸಂಬಳದ ಮೇಲೆ ಶಿಕ್ಷಕರಾಗಿ ನೇಮಕವಾದರು.

ಬರಹ ಪ್ರವೀಣರಾದ  ಹರ್ಡೇಕರ್ ಮಂಜಪ್ಪನವರು ಮಕ್ಕಳಿಗೆ ಅರ್ಥವಾಗುವ ಹಾಗೆ ಪದ್ಯಗಳ ರಚನೆ ಮಾಡಿದ್ದಲ್ಲದೆ ಅವನ್ನು ಮಕ್ಕಳ ಮನೋಧರ್ಮಕ್ಕೆ ರುಚಿಸುವ ಹಾಗೆ  ಹಾವಭಾವ ಪೂರಕವಾಗಿ ಬೋಧಿಸಿದರು.  ಅವರಿಗೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕೆಂಬ ಆಸೆ ಇದ್ದಿತಾದರೂ, ಆ ನಿಟ್ಟಿನಲ್ಲಿ ಗುರುಗಳನ್ನು ಪಡೆಯುವ ಸೌಲಭ್ಯ ಇಲ್ಲದಿದ್ದ ಕಾರಣಗಳಿಂದ ತಾವೇ ಸ್ವಯಂ ಆಚಾರ್ಯರಾಗಿ ಕಲಿಯಲಾರಂಭಿಸಿದರು.

ಸ್ವದೇಶೀ ಆಂದೋಲನ ಪ್ರಬಲವಾಗಿ ಮುಂಚೂಣಿಯಲ್ಲಿದ್ದ ದಿನಗಳವು.  ಹರ್ಡೇಕರ್ ಮಂಜಪ್ಪ ಮತ್ತು ಅವರ ಹಿರಿಯ ಸಹೋದರರು ತಿಲಕರ ಕೇಸರಿ ಪತ್ರಿಕೆಯಿಂದ ತೀವ್ರ ಪ್ರಭಾವಿತರಾಗಿ, ಅದರಲ್ಲಿನ ಲೇಖನಗಳನ್ನು ಕನ್ನಡದಲ್ಲಿ ಪ್ರಕಟಿಸಲು ಅನುಮತಿ ಪಡೆದುಕೊಂಡರು.  ಮರಾಠಿ ಭಾಷೆಯನ್ನು ಚೆನ್ನಾಗಿ ಅರಿತಿದ್ದ ಹರ್ಡೇಕರ್ ಸಹೋದರರು ‘ಧನುರ್ಧಾರಿ’ ಎಂಬ ಸಾಪ್ತಾಹಿಕವನ್ನು ಪ್ರಾರಂಭಿಸಿದಾಗ ಅದು ಕೆಲವೇ ದಿನಗಳಲ್ಲಿಯೇ ಹತ್ತು ಸಾವಿರ ಗ್ರಾಹಕರನ್ನು ಪಡೆದುಕೊಂಡಿತು.  ಆದರೆ ಹಸಿದ ಹೊಟ್ಟೆ ಸಾಕಷ್ಟು ಸೌಲಭ್ಯಗಳಿಲ್ಲದೆ ಪತ್ರಿಕೆಯನ್ನು ನಡೆಸಲಾರದಷ್ಟೇ!  ಧನುರಾದ್ರಿಯ ಕೆಲವೊಂದು ಪ್ರತಿಗಳು ಹಳೆಯ ಮೈಸೂರು ರಾಜ್ಯದಲ್ಲೂ ಅಲ್ಲಲ್ಲಿ ಭಿತ್ತರಗೊಂಡಾಗ ಆಗಿನ ಮೈಸೂರು ರಾಜ್ಯದ ದಿವಾನರಾಗಿದ್ದ ಮಾಧವರಾಯರು ಈ ಪತ್ರಿಕೆಯಲ್ಲಿನ  ಪ್ರಕಟಣೆಗಳು  ಪ್ರಚೋದನಕಾರಿಯಾಗಿದ್ದೆಂಬ ಕಾರಣದಿಂದ  ಪತ್ರಿಕೆಗೆ ನಿಷೇದ ಹಾಕಿ ಭೀಕರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.  ಹೀಗಾಗಿ ‘ಧನುರ್ಧಾರಿ’ ಪತ್ರಿಕಾಲಯ ತನ್ನ ಬಾಗಿಲನ್ನು ಮುಚ್ಚಬೇಕಾಯಿತು.

ಮಂಜಪ್ಪನವರು ಬ್ರಹ್ಮಚರ್ಯೆಯಿಂದ ಕೂಡಿದ ಸಾತ್ವಿಕ ತಪಶ್ಚರ್ಯೆಯ ಜೀವನವನ್ನು ಅಳವಡಿಸಿಕೊಂಡು ಅದಕ್ಕಾಗಿ ತಮ್ಮ ಬಡ ಅಕ್ಕಿ – ಬೇಳೆಯ ಆಹಾರದಲ್ಲಿ ಸಹಾ  ಉಪ್ಪು ಸಕ್ಕರೆಯಂತಹ ರುಚಿಗಳನ್ನು ಬಳಸುವುದನ್ನು ಬಿಟ್ಟರು.  ಆಹಾರದಲ್ಲಿನ ಸ್ವಯಂನಿರ್ಬಂಧಗಳು ಶುದ್ಧ ಮತ್ತು ಶಿಸ್ತಿನ ಜೀವನವನ್ನು ಸಾಗಿಸಲು ಸಹಾಯಕ ಎಂದು ಮಂಜಪ್ಪನವರ ನಂಬಿಕೆಯಾಗಿತ್ತು.  ಬಹುಶಃ ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು.  ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು  ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ ‘ಖಾದಿ ವಿಜಯ’ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರವನ್ನು ಕೈಗೊಂಡರು.  ‘ಖಾದಿಯ ವಿಜ್ಞಾನ’ ಎಂಬ ಗ್ರಂಥವನ್ನು ಸಹಾ ರಚಿಸಿದರು.

ಕಾಲಕ್ರಮೇಣದಲ್ಲಿ ಹರ್ಡೇಕರ್ ಅವರು ಬಸವೇಶ್ವರರ ತತ್ವಗಳಲ್ಲಿ ಆಕರ್ಷಿತರಾದರು.  ತಮ್ಮ ಪರಿಸರದಲ್ಲಿದ್ದ ವೀರಶೈವ ಜನಾಂಗದಲ್ಲಿ  ಅಷ್ಟೊಂದು ಪಂಗಡಗಳಿರುವುದು ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು.  ವೀರಶೈವ ಚಿಂತನೆಗಳು  ಮತಧರ್ಮಗಳ ಗೋಡೆಗಳನ್ನು ಉರುಳಿಸಿ ಆ ಮೂಲಕ ಆಚರಣೆಗಳಲ್ಲಿದ್ದ ದುಷ್ಟಪದ್ಧತಿಗಳನ್ನು ಮತ್ತು ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಮೂಲೋದ್ದೇಶವನ್ನು ಹೊಂದಿದ್ದ ಹಿನ್ನಲೆಯಲ್ಲಿ ಆ ಜನಾಂಗದಲ್ಲೂ ಪಂಗಡ, ಉಪಪಂಗಡಗಳು ಹುಟ್ಟಿಕೊಂಡಿದ್ದುದು ಅವರಿಗೆ ನುಂಗಲಾರದ ತುತ್ತಾಗಿತ್ತು.  ಹೀಗಾಗಿ ಬಸವೇಶ್ವರರ ತತ್ವಗಳನ್ನು ಪ್ರಸ್ತುತ ಪಡಿಸುವ ಹಲವಾರು ಪುಸ್ತಿಕೆಗಳನ್ನು ಹೊರತಂದು ಅವನ್ನು ಉಚಿತವಾಗಿ ಹಂಚಿ  ಆ ಜನಾಂಗವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು.  ಈ ಕಾರ್ಯದಲ್ಲಿ ಲಿಂಗಾಯತ ಧರ್ಮ ಸಹೃದಯಿಗಳಾದ ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿಯವರು ಹರ್ಡೇಕರ್ ಮಂಜಪ್ಪನವರಿಗೆ ಅಪಾರ ಬೆಂಬಲವಿತ್ತರು.   ಹರ್ಡೇಕರ್ ಮಂಜಪ್ಪನವರ ಈ  ಚಿಂತನೆಗಳಿಗೆ ಅನೇಕರು ಅನುಯಾಯಿಗಳಾಗಿ ಹೊರಹೊಮ್ಮಿದರು.

1927ರಲ್ಲಿ ಹರ್ಡೇಕರ್ ಮಂಜಪ್ಪನವರು ಆಲಮಟ್ಟಿಯಲ್ಲಿ ಆಶ್ರಮ ಶಾಲೆಯನ್ನು ಪ್ರಾರಂಭಿಸಿದರು.  ಇದಕ್ಕೆ ಮೊದಲು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿದ ಹರ್ಡೇಕರ್ ಅವರು ಗಾಂಧೀಜಿಯವರ ಕಾರ್ಯಕ್ರಮಗಳು ಮತ್ತು ಚಿಂತನೆಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಮಹತ್ತರವಾದ  ಕಾರ್ಯ ನಡೆಸಿದರು.  ಬಸವೇಶ್ವರರು ಮತ್ತು ಗಾಂಧೀಜಿಯವರ ಬೋಧನೆಗಳಲ್ಲಿ ತಾದ್ಯಾತ್ಮವನ್ನು ಕಂಡ ಮಂಜಪ್ಪನವರಿಗೆ, ಬಸವೇಶ್ವರರ ಬಗ್ಗೆ ಅರಿವಿದ್ದ  ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಗಾಂಧೀಜಿಯವರ ತತ್ವಗಳನ್ನು ತಲುಪಿಸುವ ಸಾಮರ್ಥ್ಯ ರೂಢಿಗೊಂಡಿತ್ತು.  ಸತ್ಯಾಗ್ರಹ, ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ, ಸ್ತ್ರೀಪುರುಷರಲ್ಲಿ ಸಮಾನತೆ ಮುಂತಾದ ಮಹತ್ವದ ವಿಚಾರಗಳಲ್ಲಿ ಮಂಜಪ್ಪನವರು ಸಹಸ್ರಾರು ಉಪನ್ಯಾಸಗಳನ್ನು ನೀಡಿದರು.  ಸಬರಮತಿ ಆಶ್ರಮದಲ್ಲಿ ಮೂರು ವಾರಗಳ ಕಾಲ ತಂಗಿದ್ದು ಸತ್ಯಾಗ್ರಹಿಗಿರಬೇಕಾದ ಮೂಲಭೂತಗುಣಗಳ ಅನುಭವವನ್ನು ನೇರವಾಗಿ ಪಡೆದುಕೊಂಡರು.  ಸ್ವತಃ  ಕಾಂಗ್ರೆಸ್ ಪಕ್ಷದ ಭಾಗವಾಗದಿದ್ದರೂ ಸಹಾ  ಮಂಜಪ್ಪನವರು ಕಾಂಗ್ರೆಸ್  ಪಕ್ಷಕ್ಕಾಗಿ ಹಲವಾರು ಸಮಾಜ ಸೇವಾ ಶಿಬಿರಗಳನ್ನು ಆಯೋಜಿಸಿಕೊಟ್ಟರು.   1924ರ ಬೆಳಗಾವಿ ಅಧಿವೇಶನದಲ್ಲಿ ಅವರು ಹಿರಿಯ ಪಾತ್ರವನ್ನು ನಿರ್ವಹಿಸಿದ್ದರು.

ತಮ್ಮ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಹರ್ಡೇಕರ್ ಮಂಜಪ್ಪನವರು ಇಪ್ಪತ್ತು ಕೃತಿಗಳನ್ನು ರಚಿಸಿದ್ದರು.  ತಮ್ಮ ಜೀವನಪರ್ಯಂತವಾಗಿ ನಮ್ಮ ದೇಶ ಸ್ವಾತಂತ್ರಗೊಳ್ಳಲು ಹಲವಾರು ಶಕ್ತಿಯುತ ಹೋರಾಟಗಳನ್ನು ನಡೆಸಿದ ಹರ್ಡೇಕರ್ ಮಂಜಪ್ಪನವರು ದೇಶ ಸ್ವಾತಂತ್ರ ಪಡೆಯಲು ಕೆಲವೇ ತಿಂಗಳುಗಳ ಮುಂಚೆ, 1947ರ  ಜನವರಿ 3ರಂದು ನಿಧನರಾದರು.

On the Birth anniversary of great social worker and freedom fighter Hardekar Manjappa 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ