ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ಕಲ್ಯಾಣಮ್ಮ


 ಆರ್. ಕಲ್ಯಾಣಮ್ಮ 


ಕಲ್ಯಾಣಮ್ಮನವರು ಸ್ತ್ರೀಸಮಾಜದ ಮತ್ತು ಮಕ್ಕಳ ಏಳಿಗೆಗಾಗಿ ಅವಿರತವಾಗಿ ದುಡಿದ ಮಹನೀಯೆ. ಇಂದು ಅವರ ಸಂಸ್ಮರಣಾ ದಿನ.

ಕಲ್ಯಾಣಮ್ಮನವರು 1892 ವರ್ಷದಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್. ತಾಯಿ ಜಾನಕಮ್ಮ.

ಕಲ್ಯಾಣಮ್ಮನವರಿಗೆ ಕೇವಲ ಹತ್ತು ವರ್ಷ ವಯಸ್ಸಿನಲ್ಲಿಯೇ ವಿವಾಹವಾಯಿತು. ಮೂರೇ ತಿಂಗಳಿನಲ್ಲಿ ವಿಧವೆಯಾದರು. ದುರ್ದೈವಕ್ಕೆ ಅಂಜದೆ ಧೈರ್ಯದಿಂದ ಬದುಕಿನತ್ತ ಕ್ರಿಯಾಶೀಲ ನೋಟವನ್ನು ಹರಿಸಿದ ಅವರು ಪ್ರಗತಿಶೀಲ ವಿಚಾರವಂತ ಮನೋಧರ್ಮವನ್ನು ಎತ್ತಿಹಿಡಿದರು.  ಹಲವು ವಿರೋಧಗಳ ನಡುವೆಯಯೂ  1906ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಸಂಸ್ಕೃತ, ತಮಿಳು ಮತ್ತು ಕನ್ನಡ ಭಾಷೆಗಳ ಮೇಲೆ ಪ್ರೌಢಿಮೆ ಸಾಧಿಸಿದರಲ್ಲದೆ, ನಿರಂತರ ಓದಿನಿಂದ ಧರ್ಮ, ಸಂಸ್ಕೃತಿ ಮತ್ತು ಸಮಾಜದ ಕುರಿತಾದ ಅರಿವು ಹೆಚ್ಚಿಸಿಕೊಂಡು ಸಮಕಾಲೀನ ಭಾರತದಲ್ಲಿ ದಟ್ಟವಾಗಿದ್ದ ಸುಧಾರಣಾವಾದಿ ವಿಚಾರಗಳಿಂದ ಪ್ರಭಾವಿತರಾದರು.  

ಕಲ್ಯಾಣಮ್ಮನವರು 1913ರಲ್ಲಿ  ಬೆಂಗಳೂರಿನಲ್ಲಿ ಶಾರದಾ ಸ್ತ್ರೀ ಸಮಾಜವನ್ನು ಸ್ಥಾಪಿಸಿದರು. 1926ರವರೆಗೆ ಶಾರದಾ ಸಮಾಜದ ಕಾರ್ಯದರ್ಶಿಯಾಗಿದ್ದರು. ಆ ಮೂಲಕ ಅಸಹಾಯಕ ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ರೂಪಿಸಲು ಶ್ರಮಿಸಿದರು. ಅವರ ನಿಸ್ವಾರ್ಥ ಸೇವೆಯ ಫಲವಾಗಿ ಶಾರದಾ ಸ್ತ್ರೀ ಸಮಾಜವು ಸಮಾಜಿಕ ಗೌರವ ಪಡೆಯಿತು.

ಕೇವಲ ಮುಲ್ಕಿ ಪರೀಕ್ಷೆ ಪಾಸು ಮಾಡಿದ ಕಲ್ಯಾಣಮ್ಮನವರು ಕಥೆ, ಕಾದಂಬರಿ, ನಾಟಕ, ಶಿಶುಸಾಹಿತ್ಯ ಮುಂತಾದ ಹಲವು ಪ್ರಕಾರಗಳಲ್ಲಿ  ವಿಫುಲವಾಗಿ ಬರೆದರು. ತಮ್ಮ ಬರಹಗಳಲ್ಲೆಲ್ಲ ಸ್ತ್ರೀಯರ, ಅಬಲೆಯರ, ಕಷ್ಟ ಸುಖಗಳನ್ನೂ, ಸಮಾಜದ ಸಮಸ್ಯೆಗಳನ್ನೂ ಚಿತ್ರಿಸಿದರು. ಮಕ್ಕಳ ಕುರಿತಾಗಿಯೂ ಅವರ ಸಾಹಿತ್ಯಕೃಷಿಯು ದೃಷ್ಟಿ ಹರಿಸಿತು.

ಕಲ್ಯಾಣಮ್ಮನವರ ಬರಹಗಳಲ್ಲಿ ಪ್ರಿಯಂವದ, ಸುಖಲತಾ, ಭಕ್ತಮೀರಾ ಮಾಧವಿ, ನಿರ್ಮಲಾ, ನೀರದಾ, ರಣಕೇಸರಿ, ಷಹಜಹಾನ್ ಮೊದಲಾದವು  ಕಾದಂಬರಿಗಳು. ವಸುಂಧರಾ, ನೀಳ್ಗತೆ.  ಒಲ್ಲದ ಹೆಂಡತಿ, ರಾಣಿ ದುರ್ಗಾವತಿ ಮುಂತಾದವು ಕಥೆಗಳು. ವರದಕ್ಷಿಣೆ, ಯದುರಾಯ, ದರಿದ್ರನಾರಾಯಣ, 20ನೇ ಶತಮಾನದ ಅಳಿಯ, ಬ್ಯಾರಿಸ್ಟರ್ ರಾಮಚಂದ್ರನ್, ಯದುರಾಯ, ಸತಿ ಪದ್ಮಿನಿ ಮೊದಲಾದವು ನಾಟಕಗಳು. ಪಂಚಕಜ್ಜಾಯ, ಪುಟಾಣಿ ಕಥೆಗಳು, ವಿಕಟಕವಿ, ಕನ್ನಡಿ, ನಮ್ಮ ಹಿಂದೂಸ್ಥಾನ ಮೊದಲಾದವು  ಮಕ್ಕಳಿಗಾಗಿ ಬರೆದದ್ದು.

ಕಲ್ಯಾಣಮ್ಮನವರು 1917ರಲ್ಲಿ 'ಸರಸ್ವತಿ' ಹೆಸರಿನ ಮಹಿಳಾ ಪತ್ರಿಕೆಯನ್ನು ಆರಂಭಿಸಿದರು. ಮಹಿಳೆಯರ ಅರಿವಿನ ಜಗತ್ತನ್ನು ವಿಸ್ತರಿಸುವುದು ಈ ಪತ್ರಿಕೆಯ ಉದ್ದೇಶವಾಗಿತ್ತು.  ಈ ಪತ್ರಿಕೆಯನ್ನು ಅವರು  ನಾಲ್ಕು ದಶಕಗಳಕಾಲ ಏಕಾಂಗಿಯಾಗಿ ನಡೆಸಿದರು. ಕನ್ನಡ ಪತ್ರಿಕೋದ್ಯಮದ ಚರಿತ್ರೆಯಲ್ಲಿ ಮಹಿಳಾ ಸಂಪಾದಕತ್ವದಲ್ಲಿ ಅತೀ ದೀರ್ಘ ಕಾಲ ನಡೆದ ಮಹಿಳಾ ಪತ್ರಿಕೆ 'ಸರಸ್ವತಿ'.

ಮಕ್ಕಳ ಅಭಿವೃದ್ಧಿಯಲ್ಲಿ ಅಪಾರ ಪ್ರೀತಿ ಹೊಂದಿದ್ದ ಕಲ್ಯಾಣಮ್ಮನವರು 1938ರಲ್ಲಿ ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು  ಸ್ಥಾಪಿಸಿದರು. ದೇಶಪ್ರೇಮ, ಸಾಮಾಜಿಕ ಪ್ರಜ್ಞೆ, ಸಾಹಿತ್ಯ ಮತ್ತು ಕಲಾಸಕ್ತಿಯನ್ನು ಪ್ರೇರೇಪಿಸುವ ಅನೇಕ ಕಾರ್ಯಯೋಜನೆಗಳನ್ನು ಜಾರಿಗೊಳಿಸಿದರು. 

ಕಲ್ಯಾಣಮ್ಮನವರು ಬೆಂಗಳೂರು ನಗರ ಸಭೆಯ ಪ್ರಪ್ರಥಮ  ಮಹಿಳಾ ಸದಸ್ಯೆಯಾಗಿ,  ನಗರ ಸಭೆಯ ಉಪಾಧ್ಯಕ್ಷೆಯಾಗಿ, ಅಸೆಂಬ್ಲಿ ಮತ್ತು ಸೆನೆಟ್ಟಿನಲ್ಲಿ ಸದಸ್ಯೆಯಾಗಿ ಹೀಗೆ ವಿಧವಿಧದಲ್ಲಿ ಯಶಸ್ವಿಯಾಗಿ ಸಾಮಾಜಿಕ ಜವಾಬ್ಧಾರಿಗಳನ್ನು ನಿರ್ವಹಿಸಿದರು. 

1949ರಲ್ಲಿ  'ಸರಸ್ವತಿ' ಪತ್ರಿಕೆಯ ರಜತೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಇವರಿಗೆ ಒಂದು ನಿಧಿಯನ್ನು ಅರ್ಪಿಸಲಾಯಿತು. 1935ರಲ್ಲಿ ಶ್ರೀಮನ್ಮಹಾರಾಜರವರು ಸುವರ್ಣ ಪದಕವನ್ನಿತ್ತು ಗೌರವಿಸಿದರು. ವಂಗ ಸಾಹಿತ್ಯ ಸಂಫದವರು ಇವರಿಗೆ ವಿದ್ಯಾವಿನೋದಿನಿ ಎಂಬ ಬಿರುದನ್ನಿತ್ತರು. ಇವರ ಕಾರ್ಯಚಟುವಟಿಕೆಗಳನ್ನು ಕಂಡು ಮೆಚ್ಚಿ ಅಮೆರಿಕದಿಂದಲೂ ಇವರಿಗೆ ಆಹ್ವಾನ ಬಂದಿತ್ತು. ಕಲ್ಯಾಣಮ್ಮನವರ ಜ್ಞಾಪಕಾರ್ಥವಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟವು ಸ್ಮಾರಕನಿಧಿಯೊಂದನ್ನು ಸ್ಥಾಪಿಸಿತು.

ಬದುಕಿನುದ್ದಕ್ಕೂ ತಮಗಾದ ನಷ್ಟಕ್ಕೆ ದುಃಖಿಸದೆ ಸಮಾಜಮುಖಿಯಾಗಿ ಚಿಂತಿಸುತ್ತಾ ಅವಿಶ್ರಾಂತವಾಗಿ ದುಡಿದ ಕಲ್ಯಾಣಮ್ಮನವರು 1965 ವರ್ಷದ ಫೆಬ್ರವರಿ 24ರಂದು ಈ ಲೋಕದ ಬದುಕಿಗೆ ವಿದಾಯ ಹೇಳಿದರು. ಈ ಮಹಾನ್ ತಾಯಿಗೆ ನಮನ. 

Great writer and social worker R Kalyanamma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ