ಮಧುಬಾಲಾ
ಮಧುಬಾಲಾ
ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂಧರ್ಯಗಳಿಂದ ಬೆಳಗಿನ ಕಲಾವಿದರಲ್ಲಿ ಮಧುಬಾಲಾ ಪ್ರಮುಖ ಹೆಸರು.
ಮಧುಬಾಲಾ 1933ರ ಫೆಬ್ರುವರಿ 14ರಂದು ಜನಿಸಿದರು. ಇಂದಿನ ಪಾಕಿಸ್ಥಾನದ ಭಾಗವಾಗಿರುವ ಪ್ರದೇಶದಿಂದ ಬದುಕನ್ನು ಅರಸಿ ಮುಂಬೈಗೆ ಬಂದ ಕುಟುಂಬಕ್ಕೆ ಸೇರಿದ ಮಧುಬಾಲಾ, ಸಂಸಾರ ನಿರ್ವಹಣೆಯ ಸಲುವಾಗಿ ಪುಟ್ಟ ವಯಸ್ಸಿನಿಂದಲೇ ಚಲನಚಿತ್ರಗಳಲ್ಲಿ ಅಭಿನಯಿಸತೊಡಗಿದರು.
ಆ ಕಾಲದ ಎಲ್ಲ ಪ್ರಸಿದ್ಧ ನಟರಾದ ಅಶೋಕ್ ಕುಮಾರ್, ಭರತ್ ಭೂಷಣ್, ದಿಲೀಪ್ ಕುಮಾರ್, ರಾಜ್ ಕಪೂರ್, ಗುರುದತ್, ಕಿಶೋರ್ ಕುಮಾರ್ ಮುಂತಾದ ಪ್ರಸಿದ್ಧರೊಡನೆ ಆ ನಟರ ಪ್ರತಿಭೆಯನ್ನೂ ಮೀರಿಸುವಂತಹ ಅಭಿನಯ ನೀಡಿ ಚಿತ್ರರಂಗದಲ್ಲಿ ರಾರಾಜಿಸಿದವರು ಮಧುಬಾಲಾ. ಮಹಲ್, ಅಮರ್, Mr. and Mrs 55, ಮೊಘಲ್ ಎ ಅಜಂ, ಬಾದಲ್, ಕಲ್ ಹಮಾರಾ ಹೈ, ಹೌರಾ ಬ್ರಿಡ್ಜ್, ಕಾಲಾಪಾನಿ, ಚಲ್ತಿ ಕ ನಾಮ್ ಗಾಡಿ, ಬರಸಾತ್ ಕಿ ರಾತ್, ಬಹುತ್ ದಿನ್ ಹುಯೆ, ಜುಮ್ ರೂ, ಹಾಫ್ ಟಿಕೆಟ್, ಶರಾಬಿ, ಜ್ವಾಲಾ ಮುಂತಾದ ಸುಮಾರು ಎಂಭತ್ತು ಚಿತ್ರಗಳಲ್ಲಿ ನಟಿಸಿ ವಿವಿಧ ಪಾತ್ರಗಳ ನಿರ್ವಹಣೆ ಮತ್ತು ಆಕರ್ಷಕ ಅಭಿವ್ಯಕ್ತಿಗಳಿಂದ ಮಧುಬಾಲಾ ಅವರು ಪ್ರೇಕ್ಷಕರ ಕಣ್ಮಣಿಯೇ ಆಗಿದ್ದರು.
ದೈಹಿಕವಾಗಿ ಹೃದಯದ ತೊಂದರೆಗಳಿಂದ ಬಳಲುವುದರ ಜೊತೆಗೆ ದಿಲೀಪ್ ಕುಮಾರ್ ಮತ್ತು ಕಿಶೋರ್ ಕುಮಾರ್ ಅಂತಹ ನಟರೊಂದಿಗಿನ ಸಂಬಂಧಗಳಲ್ಲಿ ಮೂಡಿದ ನಿರಾಸೆಯ ಬಳಲಿಕೆಗಳು, ಬಿಡುವಿಲ್ಲದ ದುಡಿಮೆಯ ಒತ್ತಡ ಇವೆಲ್ಲಾ ಈ ಸೌಂಧರ್ಯವತಿ ಹಾಗೂ ಮಹಾನ್ ನಟಿಯ ಬದುಕನ್ನು ಕೇವಲ 36 ವರ್ಷಗಳಿಗೇ ಸೀಮಿತವಾಗುವಂತೆ ಮಾಡಿತು. ಅವರು 1969ರ ಫೆಬ್ರವರಿ 23ರಂದು ನಿಧನರಾದರು.
ಆ ಕಾಲದಲ್ಲಿ ಹಾಲಿವುಡ್ ಚಿತ್ರಗಳಲ್ಲೂ ಅಭಿನಯಿಸಲು ಆಹ್ವಾನವನ್ನು ಮಧುಬಾಲಾ ಪಡೆದಿದ್ದರೂ ಮನೆಯಲ್ಲಿ ಒಪ್ಪಿಗೆ ದೊರೆಯದ ಕಾರಣ ಅವರ ಆಶಯ ನೆರವೇರಲಿಲ್ಲ. ಅವರು ಥಿಯೇಟರ್ ಆರ್ಟ್ಸ್ ನಂತಹ ಹಲವು ಅಮೇರಿಕನ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು. 1952ರ ಆಗಸ್ಟ್ ಸಂಚಿಕೆಯಲ್ಲಿ, ಮಧುಬಾಲಾರ ಪೂರ್ಣಪುಟದ ಭಾವಚಿತ್ರದೊಂದಿಗಿನ ದೊಡ್ಡದೊಂದು ಲೇಖನ ಪ್ರಕಟಗೊಂಡಿತ್ತು. ಆ ಲೇಖನದ ಶೀರ್ಷಿಕೆ ಹೀಗಿದೆ: “ದಿ ಬಿಗ್ಗೆಸ್ಟ್ ಸ್ಟಾರ್ ಇನ್ ದಿ ವರ್ಲ್ಡ್ (ಅಂಡ್ ಶಿ ಈಸ್ ನಾಟ್ ಇನ್ ಬೆವೆರ್ಲಿ ಹಿಲ್ಸ್)” .
ಈ ಎಲ್ಲ ನಿಟ್ಟಿನಲ್ಲಿ ಮಧುಬಾಲಾ ಭಾರತೀಯ ಚಿತ್ರರಂಗದಲ್ಲಿ ಒಂದು ಅಮರ ಹೆಸರು.
On the birth anniversary of Madhubala who illuminated cinema world with her talent and beauty....
ಕಾಮೆಂಟ್‌ಗಳು