ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್.ಎಂ. ಹಡಪದ


 ಆರ್.ಎಂ. ಹಡಪದ 


ಡಾ. ರುದ್ರಪ್ಪ ಮಲ್ಲಪ್ಪ ಹಡಪದ ಅವರು ಸದಾ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಗೆ ಅಭಿವ್ಯಕ್ತಿ ತಂದರು. ಈ ನಾಡಿನಲ್ಲಿ ಅನೇಕ ಭವ್ಯ ಪ್ರತಿಭೆಗಳು ಮೂಡಲು ಕಾರಣರಾದರು.

ಹಡಪದ ಅವರು  ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ 1936ರ ಮಾರ್ಚ್ 1ರಂದು
ಜನಿಸಿದರು. ಕಲೆಯ ಬೀಡಾದ ಬಾದಾಮಿಯೇ ಬಾಲಕನ ಮೇಲೆ ಅಪಾರವಾದ ಪ್ರಭಾವ ಬೀರಿದವು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಚಿತ್ರ ಬರೆಯುವ ಗೀಳು ಹತ್ತಿಸಿಕೊಂಡ ಹಡಪದ ಅವರು ಸ್ನೇಹಿತರ ಪಾಟಿಯ ಮೇಲೆ ಬಿಡಿಸುತ್ತಿದ್ದ ಚಿತ್ರಗಳನ್ನು ಕಂಡ ಉಪಾಧ್ಯಾಯ ಬಿರಾದಾರ ಅವರು, ಇವರ ಪ್ರತಿಭೆಗೆ ನೀರೆರೆದರು.   ಎಸ್.ಎಸ್.ಎಲ್.ಸಿ. ಮುಗಿಸಿ ಹುಬ್ಬಳ್ಳಿಯ ಕಲಾಶಾಲೆಯಿಂದ ಶಿಕ್ಷಣ ಪಡೆದರು.

1961ರಲ್ಲಿ ಮಿಣಜಿಗಿಯವರು ಡ್ರಾಯಿಂಗ್ ಟೀಚರ್ಸ್ ಇನ್‌ಸ್ಟಿಟ್ಯೂಟನ್ನು ಬೆಂಗಳೂರಲ್ಲಿ ತೆರೆದಾಗ ಹಡಪದರವರು ಬೆಂಗಳೂರಿಗೆ ಬಂದರು. 1963ರ ವರ್ಷದಲ್ಲಿ ಕಲಿಯುತ್ತಿದ್ದ ದಿನಗಳಲ್ಲೇ  ಏಕವ್ಯಕ್ತಿ ಪ್ರದರ್ಶನ ನಡೆಸಿದರು.  1966ರಲ್ಲಿ ‘ವಿ ಫೋರ್’ (ನಾವು ನಾಲ್ವರು) ಸಂಸ್ಥೆ ಕಟ್ಟಿ (ಟಿ.ಕೆ. ಪಟೇಲ್, ಎಸ್.ಎಸ್. ಮುನೋಳಿ, ಹಡಪದ, ಜಿ.ವೈ. ಹುಬ್ಳೀಕರ್) ಬೆಂಗಳೂರಿನಲ್ಲಿ ಕಲಾ ಪ್ರದರ್ಶನ ನಡೆಸಿದರು.

ಮಿಣಜಿಗಿಯವರಿಗೆ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಬಂದಾಗ ಅದನ್ನು ಹಡಪದರವರು ವಹಿಸಿಕೊಂಡು ಕೆನ್‌ ಕಲಾಶಾಲೆಯಾಗಿ ಪರಿವರ್ತನೆಗೊಳಿಸಿ ನೂರಾರು ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ಮೂಡಿಸಿದರು. ಚಂದ್ರನಾಥ ಆಚಾರ್ಯ, ಸಿ. ಚಂದ್ರಶೇಖರ್, ಪ.ಸ. ಕುಮಾರ್, ಕಾಮದಾಸ್, ಶ್ಯಾಮಸುಂದರ್, ಶೀಲಾ ಗೌಡ, ಬಿ.ಎ. ಅರಸ್ ಮುಂತಾದವರೆಲ್ಲ ಹಡಪದರವರ ಕೆನ್ ಕಲಾಶಾಲೆಯ ವಿದ್ಯಾರ್ಥಿಗಳೇ. ಕೆನ್ ಕಲಾಶಾಲೆಯಲ್ಲಿ ಹಡಪದರು ಹಲವಾರು ವರ್ಷಗಳ ಕಾಲ ಪ್ರಾಂಶುಪಾಲ ಹುದ್ದೆ ನಿರ್ವಹಿಸಿದರು.

1987-90 ರ ಅವಧಿಯಲ್ಲಿ ಹಡಪದರು  ಲಲಿತ ಕಲಾ ಅಕಾಡಮಿ ಅಧ್ಯಕ್ಷರಾಗಿ  ಕಾರ್ಯ ನಿರ್ವಹಿಸಿದರು. ಕಲಾ ಸಂಗ್ರಹಣ ಶಿಬಿರ, ಕಲಾ ಪುಸ್ತಕ ಪ್ರಕಟಣೆ, ಗ್ರಾಫಿಕ್ ಸ್ಟುಡಿಯೋ ಸ್ಥಾಪನೆ, ಅಂತರ ರಾಜ್ಯ ವಿನಿಮಯ ಕಲಾ ಕೇಂದ್ರ ಪ್ರದರ್ಶನ ಮುಂತಾದುವು ಅವರು ನಡೆಸಿದ ಮಹತ್ವದ ಕಾರ್ಯಗಳಾಗಿವೆ.

ಲಲಿತಕಲಾ ಅಕಾಡಮಿ, ನವದೆಹಲಿ, ಭಾರತ್ ಭವನ್-ಭೂಪಾಲ್ ಅಲ್ಲದೆ ಆಸ್ಟಿನ್, ಅಮೆರಿಕಾ, ಜರ್ಮನಿ ಮುಂತಾದೆಡೆ ವ್ಯಾಪಕ ಪ್ರವಾಸಮಾಡಿ  ಕಲಾ ಪ್ರದರ್ಶನ ನಡೆಸಿದ ಕೀರ್ತಿ ಹಡಪದ ಅವರದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಉತ್ತಮ ಕಲಾವಿದ ಮತ್ತು ಅಧ್ಯಾಪಕ ಪುರಸ್ಕಾರ, ಕರ್ನಾಟಕ ಲಲಿತಕಲಾ ಅಕಾಡಮಿ ಸೀನಿಯರ್ ಫೆಲೊಷಿಪ್ ಮುಂತಾದ ಹಲವಾರು ಗೌರವಗಳು ಹಡಪದ ಅವರಿಗೆ ಸಂದಿದ್ದವು.

ಆರ್ ಎಂ ಹಡಪದ ಅವರು 2003ರ ವರ್ಷದಲ್ಲಿ ಈ ಲೋಕವನ್ನಗಲಿದರು.

On the birth anniversary of great artiste R. M. Hadapad

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ