ಗೋವಿಂದ ಭಟ್
ಸೂರಿಕುಮೇರು ಗೋವಿಂದ ಭಟ್
ಯಕ್ಷಗಾನದ ಮಹಾನ್ ಕಲಾವಿದರ ಲೋಕದಲ್ಲಿ ಸೂರಿಕುಮೇರು ಗೋವಿಂದ ಭಟ್ ಅವರದು ಮಹಾನ್ ಸಾಧನೆ.
ಸೂರಿಕುಮೇರು ಗೋವಿಂದ ಭಟ್ಟರು 1940ರ ಮಾರ್ಚ್ 22 ರಂದು ಜನಿಸಿದರು. ತಂದೆ ಕಿನಿಲ ಶಂಕರನಾರಾಯಣ ಭಟ್ಟರು ಮತ್ತು ತಾಯಿ ಲಕ್ಷ್ಮೀ ಅವರು. ಭಟ್ಟರು ಕೋಡಪದವು, ವಿಟ್ಲದಲ್ಲಿ 7ನೇ ತರಗತಿವರೆಗೆ ಕಲಿತರು.
ಬಾಲ್ಯದಲ್ಲೇ ಸಂಕಷ್ಟದ ಜೀವನ ಎದುರಿಸಿದರೂ ಕಂಗೆಡದೆ ಧೈರ್ಯದಿಂದ ಎದುರಿಸಿ ಮುನ್ನಡೆದ ಭಟ್ಟರು, ಜೀವನೋಪಾಯಕ್ಕಾಗಿ ಯಕ್ಷಗಾನಕ್ಕೆ ಸೇರಿದರಾದರೂ, ಹಿರಿಯ ಕಲಾವಿದರ ಜೊತೆ ಪಳಗಿ ರಂಗಸ್ಥಳದ ಮಹಾನ್ ಕಲಾವಿದರಾಗಿ ರಾರಾಜಿಸಿದರು. ಕುರಿಯ ವಿಠಲ ಶಾಸ್ತ್ರಿ, ಪರಮಶಿವನ್, ಮಾಧವ ಮೆನನ್ ಮತ್ತು ರಾಜನ್ ಅಯ್ಯರ್ ಅವರಿಂದ ನಾಟ್ಯಾಭ್ಯಾಸ ಮಾಡಿ 1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಗೊಂಡರು.
ಸಹಕಲಾವಿದರಿಂದ ಗುರು ಗೋವಿಂದ ಭಟ್ಟರು ಎನಿಸಿಕೊಂಡ ಭಟ್ಟರು, ಪ್ರಾರಂಭದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡರು. ಬಳಿಕ ವೈವಿಧ್ಯಮಯ ಪಾತ್ರ ನಿರ್ವಹಣೆ ಮೂಲಕ ಯಾವುದೇ ವೇಷಕ್ಕೂ ಸೈ ಎಂದು ಮೇಳಕ್ಕೆ ಅನಿವಾರ್ಯರಾದರು. ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ ಮೇಳಗಳಲ್ಲಿ ಕೆಲಸ ಮಾಡಿದ ಬಳಿಕ ಧರ್ಮಸ್ಥಳ ಮೇಳ ಸೇರಿದ ಸೂರಿಕುಮೇರು ಗೋವಿಂದ ಭಟ್ಟರ ಕುಮಾರಯ್ಯ ಹೆಗ್ಗಡೆ, ಋುತುಪರ್ಣ, ಕೌರವ ಮುಂತಾದ ಪಾತ್ರಗಳು ಪ್ರಸಿದ್ಧ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ. ಅವರ ಕೌರವ ಪಾತ್ರಕ್ಕೆ ತನ್ನದೇ ಆದ ವಿಶೇಷತೆಯಿದೆ. ಭಟ್ಟರ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗ್ಗಡೆ, ಗಣಮಣಿ, ಈಶ್ವರ, ಶ್ರೀದೇವಿ ಮಹಾತ್ಮೆಯ ರಕ್ತಬೀಜ, ಶ್ರೀದೇವಿ ಸಹಿತ ದೇವೇಂದ್ರ, ಕೌರವ, ಶತ್ರುಘ್ನ, ಕೀಚಕ, ದಕ್ಷ , ಮಾಗಧ, ಶಿಶುಪಾಲ ಮುಂತಾದ ಪಾತ್ರಗಳು ಅವಿಸ್ಮರಣೀಯವೆನಿಸಿವೆ.
ಸೂರಿಕುಮೇರು ಗೋವಿಂದ ಭಟ್ಟರು ಮಣಿಮೇಖಲೆ, ಕನಕರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ.
ಯಕ್ಷಗಾನದ ಮಹಾನ್ ಕಲಾವಿದರೆನಿಸಿರುವ ಸೂರಿಕುಮೇರು ಗೋವಿಂದ ಭಟ್ಟರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೇ ಅಲ್ಲದೆ ಅನೇಕ ಪ್ರತಿಷ್ಟಿತ ಸಂಘ, ಸಂಸ್ಥೆಗಳಿಂದ ಗೌರವಗಳು ಸಂದಿವೆ.
On the birth day of great Yakshagana artiste Soorikumer Govinda Bhat
ಕಾಮೆಂಟ್‌ಗಳು