ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉತ್ಪಲ್ ದತ್


 ಉತ್ಪಲ್ ದತ್


ಭಾರತೀಯ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಉತ್ಪಲ್ ದತ್ ಪ್ರಖ್ಯಾತ ಹೆಸರು.  

ಉತ್ಪಲ್ ದತ್ 1929ರ ಮಾರ್ಚ್ 29ರಂದು ಜನಿಸಿದರು.

ಉತ್ಪಲ್ ದತ್ ಅಂದರೆ ತಕ್ಷಣ ನೆನಪಾಗುವುದು ಗೋಲ್ ಮಾಲ್, ಶೌಕೀನ್, ನರಂ ಗರಂ, ರಂಗ್ ಬಿರಂಗಿ ಅಂತಹ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಹಾಸ್ಯ ಪಾತ್ರಗಳು.  ಈ ಚಿತ್ರಗಳಲ್ಲಿ   ಸಹಜವೋ ಎಂಬಂತೆ ಅದ್ಭುತವಾಗಿ ಅಭಿನಯಿಸಿದ  ಉತ್ಪಲ್ ದತ್ ಅವರ ಅಭಿನಯವನ್ನು ಮೆಚ್ಚದವರೇ ಇಲ್ಲ.  ಇಂತಹ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರಿಗೆ ಫಿಲಂಫೇರ್ ಅಂತಹ ಹಲವಾರು ಪ್ರಶಸ್ತಿಗಳೂ ಬಂದಿವೆ.  ಆದರೆ ಈ ಚಿತ್ರಗಳ ಬಗ್ಗೆಯಷ್ಟೇ ಹೇಳಿದರೆ ನಾವು ಅವರ ಬಗ್ಗೆ ಕಿಂಚಿತ್ತು ಮಾತ್ರ ಹೇಳಿದಂತಾದೀತು.

ಹಾಗೆ ನೋಡಿದರೆ ಉತ್ಪಲ್ ದತ್ ಹಿಂದೀ, ಬೆಂಗಾಳಿಯಲ್ಲಿ ನಟಿಸಿರುವ ಚಿತ್ರಗಳ ಸಂಖ್ಯೆಯೇ  ನೂರಾರಿವೆ.  ಅವರು ಸತ್ಯಜಿತ್ ರೇ ಅವರ 'ಆಗಂತುಕ್' ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರ ಪ್ರಶಸ್ತಿಯನ್ನೂ ಮೃಣಾಲ್ ಸೇನ್ ಅವರ ‘ಭುವನ್ ಶೋಮೆ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದವರು.  ಇಷ್ಟೇ ಅಲ್ಲದೆ ಅವರು ಅಭಿನಯಿಸಿದ ಸತ್ಯಜಿತ್ ರೇ, ಮೃಣಾಲ್ ಸೇನ್, ಗೌತಮ್ ಗೋಸ್, ರಿತುಪರ್ಣ ಘೋಷ್ ಮುಂತಾದ ಪ್ರಖ್ಯಾತರ ಹಲವಾರು ಚಿತ್ರಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದವು.  ಈ ಮಹಾನ್ ಕಲಾವಿದ ಉತ್ಪಲ್ ದತ್ ಅವರು  ಮಹಾನ್ ಕಲಾವಿದೆ ನೂತನ್ ಅವರೊಂದಿಗೆ ನಟಿಸಿದ್ದ 'ಮುಜ್ರಿಂ ಹಾಜಿರ್' ಎಂಬ ದೂರದರ್ಶನ ಧಾರಾವಾಹಿ ಮರೆಯಲಾಗದಂತದ್ದು.  

ಈ ಎಲ್ಲಕ್ಕೂ ಮೀರಿದ್ದು ಉತ್ಪಲ್ ದತ್ ಅವರ ರಂಗಭೂಮಿಯಲ್ಲಿನ ಸಾಧನೆ.  1942ರಷ್ಟು ಹಿಂದೆಯೇ ಬಂಗಾಳದಲ್ಲಿ ‘ಲಿಟ್ಲ್ ಥಿಯೇಟರ್ ಗ್ರೂಪ್’ ಅನ್ನು ಸ್ಥಾಪಿಸಿದವರು ಉತ್ಪಲ್ ದತ್.  ‘ನಾಟಕ ಮಹಾಕಾವ್ಯ’ದ ಅವಧಿ ಎಂದು ಕರೆಯಲಾಗುವ ಈ ಅವಧಿಯಲ್ಲಿ ಈ ತಂಡವು ಶೇಕ್ಸ್ ಪಿಯರ್, ಬ್ರೆಕ್ಟ್ ನಾಟಕಗಳನ್ನು ಅಭಿನಯಿಸಿದ್ದೇ ಅಲ್ಲದೆ. ರಾಜಕೀಯ ಸುಧಾರಣಾವಾದದ ನಾಟಕಶಾಲೆಯಾಗಿ ಕೂಡಾ ಹೊರಹೊಮ್ಮಿತು.  ಅವರು ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ನೀಡಿದ ಕೊಡುಗೆ ಮಹತ್ವಪೂರ್ಣವಾದದ್ದೆಂದು ನಾಟಕ ಲೋಕ ಅವರನ್ನು ಅಪಾರವಾಗಿ ಗೌರವಿಸಿತ್ತು.  ಹೀಗೆ ಒಂದು ರೀತಿಯಲ್ಲಿ ಉತ್ಪಲ್ ದತ್ ಅವರು ಆಧುನಿಕ ಭಾರತೀಯ ನಾಟಕರಂಗದ ಪ್ರವರ್ತಕರಲ್ಲಿ ಒಬ್ಬರೂ ಹೌದು.  ಅವರ ಸಾಮಾಜಿಕ ರಾಜಕೀಯ ನಾಟಕಗಳಾದ ಕಲ್ಲೋಲ್, ಮಾನುಷೇರ್ ಅಧಿಕಾರ್, ಲೌಹಾ ಮಾನೋಬ್, ಟೈನರ್ ಟೋಲೋರ್ ಮತ್ತು ಮಹಾ – ಬಿದ್ರೋಹ್ ಮುಂತಾದವು ಬಂಗಾಳೀ ನಾಟಕ ರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದಂತಹವು.  

ಉತ್ಪಲ್ ದತ್ ಅವರ ಈ ಮಹತ್ವದ ಜೀವಮಾನದ ಸಾಧನೆಯನ್ನು ಗೌರವದಿಂದ ಕಂಡ ಭಾರತೀಯ ಸಂಗೀತ ನಾಟಕ ಆಕಾಡೆಮಿಯು 1990ರ ವರ್ಷದಲ್ಲಿ ಉತ್ಪಲ್ ದತ್  ಅವರಿಗೆ ಅತ್ಯುನ್ನತ ಪ್ರಶಸ್ತಿಯಾದ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಅನ್ನು ಪ್ರದಾನ ಮಾಡಿತು.  

ಈ ಮಹಾನ್ ಕಲಾವಿದರು 1993ರ ಆಗಸ್ಟ್ 19ರಂದು ಈ ಲೋಕವನ್ನಗಲಿದರು.  ಅವರ ನೆನಪು ಅಮರ.

On the birth anniversary of great actor Utpal Dutt

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ