ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಳೇಗೌಡ ನಾಗವಾರ


 ಕಾಳೇಗೌಡ ನಾಗವಾರ


ಪ್ತೊ. ಕಾಳೇಗೌಡ ನಾಗವಾರ ಅವರು ಬರಹಗಾರರಾಗಿ, ಜಾನಪದ ತಜ್ಞರಾಗಿ ಮತ್ತು ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ.

ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದವರು. ಅವರು 1947 ವರ್ಷದ ಹೋಳಿ ಹುಣ್ಣಿಮೆಯಂದು ಜನಿಸಿದರು. ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಾಹಿತ್ಯದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಇವರು ಅಪಾರ ವಿದ್ಯಾರ್ಥಿ ಬಳಗಕ್ಕೆ ಸ್ಫೂರ್ತಿಯಾಗಿದ್ದಾರೆ.  

ಸಂಶೋಧನೆ, ಜಾನಪದ ಸಾಹಿತ್ಯ,  ಸಂಗ್ರಹ ಇತ್ಯಾದಿಗಳಲ್ಲಿ  ತಮ್ಮನ್ನು ಹೆಚ್ಚು ತೊಡಗಿಸಿಕೊಂಡ ಕಳೇಗೌಡ ನಾಗವಾರ ಅವರು 'ಬೇವಿನಹಳ್ಳಿ ಹಾಡುಗೊಲ್ಲರ ಹಟ್ಟಿ' ಕುರಿತ ಮಹಾಪ್ರಬಂಧಕ್ಕೆ ಪಿಎಚ್.ಡಿ. ಗಳಿಸುವುದರ ಜೊತೆಗೆ  ಜಾನಪದ ಸಾಹಿತ್ಯಕ್ಕೆ ಆಧುನಿಕತೆಯ ಮೆರುಗು ನಿಡಿದವರಲ್ಲೊಬ್ಬರು. ಅವರು ಕ್ರಿಯಾಶೀಲ ಸಂಘಟಕರಾಗಿ ಬಂಡಾಯ ಸಾಹಿತ್ಯದ ಮುಂಚೂಣಿಯಲ್ಲಿಯೂ ಇದ್ದಾರೆ.  ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರ ಮಹತ್ವದ ಸೇವೆ ಸಂದಿದೆ.

ಕಾಳೇಗೌಡ ನಾಗವಾರ ಅವರ ಕತೆಗಳಲ್ಲಿ ಗ್ರಾಮೀಣ ಸಂವೇದನೆ ಮತ್ತು ಬಂಡಾಯ ಆಶಯಗಳು ಎದ್ದುಕಾಣುವಂತದ್ದು. ಕತೆಗಾರರಾಗಿ, ಕವಿಯಾಗಿ,  ಸಂಪಾದಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ ಹಾಗೂ ಜಾನಪದ ತಜ್ಞರಾಗಿ ಅವರು ಕನ್ನಡ ಸಾಹಿತ್ಯಲೋಕಕ್ಕೆ ನಿರಂತರವಾಗಿ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಬೆಟ್ಟಸಾಲು ಮಳೆ, ಅಲೆಗಳು, ಈ ಮಂಜಿನೊಳಗೆ, ಕಣ್ಣಾಚಿಕೆ, ಕಥಾಸಂಪುಟ (ಕಥಾ ಸಂಕಲನಗಳು), ಕರಾವಳಿಯಲ್ಲಿ ಗಂಗಾಲಗ್ನ ಕನ್ನೆಯ ಸ್ನೇಹ (ಕವನ ಸಂಕಲನಗಳು), ತ್ರಿಪದಿ ರಗಳೆ ಮತ್ತು ಜನಪದ ಸಾಹಿತ್ಯ, ಪ್ರೀತಿ ಮತ್ತು ನಿರ್ಭೀತಿ (ವಿಮರ್ಶಾ ಲೇಖನಗಳು), ಬೇಕಾದ ಸಂಗತಿ, ಬೀದಿಮಕ್ಕಳು ಬೆಳೆದೊ, ಗರಿಗೆದರಿದ ನವಿಲು, ಸಾಲು ಸಂಪಿಗೆ ನೆರಳು, ಹಲವು ತೋಟದ ಹೂಗಳು, ಬಯಲು ಸೀಮೆಯ ಲಾವಣಿಗಳು (ಜಾನಪದ), ಬೇವಿನಹಳ್ಳಿ ಹಾಡುಗೊಲ್ಲರ ಹಟ್ಟಿ (ಸಂಶೋಧನೆ), ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ರಾಮಮನೋಹರ ಲೋಹಿಯಾ ಸಂಪುಟಗಳು, ಜೀವನ ಪ್ರೀತಿ, ಕೊಡಗಿನ ಗೌರಮ್ಮ ಬರೆದ ಕಥೆಗಳು (ಸಂಪಾದನೆ), ಮಂಗಳಕರ ಚಿಂತನೆ (ಸಾಹಿತ್ಯದ ಮಗ್ಗಲುಗಳ ಕುರಿತಾದ ಚಿಂತನೆಗಳು) ಮುಂತಾದವು ಕಾಳೇಗೌಡ ನಾಗವಾರ ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ

ಪ್ರೊ. ಕಾಳೇಗೌಡ ನಾಗವಾರ ಅವರ 'ಬೆಟ್ಟ ಸಾಲು ಮಳೆ’ ಕಥಾಸಂಕಲನಕ್ಕೆ ಹಾಗೂ  ‘ಅಲೆಗಳು’ ಕಥಾಸಂಕಲನಕ್ಕೆ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ‘ಬೇಕಾದ ಸಂಗಾತಿ’ ಎಂಬ ಜನಪದ ಕಾವ್ಯಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುರಸ್ಕಾರ ಸಂದಿದೆ. 

ಹೋಳಿ ಹುಣ್ಣಿಮೆಯಂದು ಜನಿಸಿದ ಪ್ರೊ. ಕಾಳೇಗೌಡ ನಾಗವಾರ ಅವರಿಗೆ ರಂಗುರಂಗಿನ ಹಬ್ಬದೊಂದಿಗೆ ಬೆರೆತಿರುವ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Kalegowda Nagavara Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ