ರೇಣುಕಾಚಾರ್ಯ
ರೇಣುಕಾಚಾರ್ಯ
ಇಂದು ಜಗದ್ಗುರು ರೇಣುಕಾಚಾರ್ಯ ಜಯಂತಿ.
ರೇಣುಕಾಚಾರ್ಯರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಅವರು ಕೈಲಾಸದ ಪ್ರಮಥರಲ್ಲಿ ಒಬ್ಬರು. ಪಾಲ್ಕುರಿಕೆ ಸೋಮನಾಥನ ಗಣಸಹಸ್ರದಲ್ಲಿ ಪ್ರಮಥಗಣರಲ್ಲಿ ಇವರ ಉಲ್ಲೇಖವಿದೆ. ಇವರನ್ನು ಕುರಿತು ಸಂಸ್ಕೃತದಲ್ಲಿ ರೇಣುಕಾಗಸ್ತ್ಯ ಎಂಬ ಗ್ರಂಥವಿದೆ. ಇದರಲ್ಲಿ ವೀರಶೈವ ಏಕೋತ್ತರ ಷಟ್‍ಸ್ಥಲಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ.
ಆಗಮಗಳ ಪ್ರಕಾರ ರೇಣುಕಾಚಾರ್ಯರು ಈಗಿನ ಆಂಧ್ರ ಪ್ರಾಂತ್ಯದಲ್ಲಿನ ಕೊಲ್ಲಿಪಾಕಿ ಎಂಬಲ್ಲಿ ಜನಿಸಿದರು. ಇವರು ಮಲಯಾಚಲದಲ್ಲಿ ಅಗಸ್ತ್ಯರಿಗೆ ತತ್ತ್ವೋಪದೇಶ ಮಾಡಿದರೆಂಬ ಹೇಳಿಕೆ ಇದೆ. ಅನಂತರ ಲಂಕೆಗೆ ಹೋಗಿ ರಾವಣನ ತಮ್ಮ ವಿಭೀಷಣನ ಇಷ್ಟದಂತೆ ಮೂರುಕೋಟಿ ಲಿಂಗಗಳನ್ನು ಸ್ಥಾಪಿಸಿದರಂತೆ. ಇವರ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಚೋಳರೇಣುಕ ಸಂವಾದ ಗ್ರಂಥ ಸಂಸ್ಕೃತದಲ್ಲಿದೆ. ಇದನ್ನು ರೇಣುಕಾಚಾರ್ಯರ ಅವತಾರವೆನಿಸಿದ ರೇವಣಸಿದ್ಧರು (12ನೆಯ ಶತಮಾನ) ಕಂಚಿಯ ರಾಜೇಂದ್ರ ಚೋಳನಿಗೆ ಉಪದೇಶಿಸಿದ ಗ್ರಂಥವೆಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ರೇಣುಕಾಚಾರ್ಯ (ಸಿದ್ಧರೇವಣ)ರನ್ನು ಮಹಾನ್ ಸಿದ್ಧಪುರುಷರೆಂದು ಉಲ್ಲೇಖಿಸಲಾಗಿದೆ.
ರೇಣುಕಾಚಾರ್ಯರನ್ನು ಪುರಾಣದೊಂದಿಗೆ ಬೆಸೆದಿರುವುದರಿಂದ ಚಾರಿತ್ರಿಕವಾಗಿ ಇವರ ಬಗ್ಗೆ ಖಚಿತವಾದ ವಿಚಾರಗಳು ಲಭ್ಯವಾಗಿಲ್ಲ. ಅನೇಕ ವೀರಶೈವ ಮಠಗಳಲ್ಲಿ ರೇಣುಕಾಚಾರ್ಯರ ಲಿಂಗೋದ್ಭವಲೀಲೆಯ ಮೂರ್ತಿಪೂಜೆ ನಡೆಯುತ್ತಿದೆ.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
On Renukacharya Jayanti
ಕಾಮೆಂಟ್‌ಗಳು