ಶೇಷಾದ್ರಿ ಗವಾಯಿ
ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ
ಪಂಡಿತ್ ಶೇಷಾದ್ರಿ ಗವಾಯಿಗಳು ಸಂಗೀತ ಶಿಕ್ಷಕರಾಗಿ, ಪ್ರಸಾರಕರಾಗಿ, ಗಾಯಕರಾಗಿ ಮತ್ತು ವಾಗ್ಗೇಯಕಾರರಾಗಿ ಹೆಸರಾದವರು.
ಶೇಷಾದ್ರಿ ಗವಾಯಿಗಳು ದಾವಣಗೆರೆಯಲ್ಲಿ 1924ರ ಮಾರ್ಚ್ 21ರಂದು ಜನಿಸಿದರು. ಅವರ ತಂದೆ ರಾಜಾಪುರ ವೆಂಕಟಸುಬ್ಬರಾವ್. ತಾಯಿ ತಿಮ್ಮಮ್ಮ.
ಶೇಷಾದ್ರಿ ಗವಾಯಿಗಳು ಒಂಬತ್ತರ ಬಾಲ್ಯದಿಂದಲೇ ರಂಗಭೂಮಿ ಬಾಲನಟನಾಗಿ, ಬಾಲಕೃಷ್ಣ, ಪ್ರಹ್ಲಾದನಾಗಿ, ವಾಮನರಾವ್ ಮಾಸ್ತರ ಕಂಪನಿ, ತಳಕಲ್ ವೆಂಕಟರೆಡ್ಡಿ ಕಂಪನಿ, ಹಂದಿಗನೂರು ಸಿದ್ಧರಾಮಪ್ಪ ಕಂಪನಿ, ಕಲ್ಕೋಟಿ ಚನ್ನಬಸವಯ್ಯನವರ ಅರವಿಂದ ನಾಟಕ ಕಂಪನಿಯ ನಟನಾಗಿ ಖ್ಯಾತಿ ಪಡೆದಿದ್ದರು.
ಚನ್ನಬಸವಯ್ಯನವರಲ್ಲಿ ಹಾರ್ಮೋನಿಯಂ ವಾದನ ಕಲೆ ಕಲಿತ ಶೇಷಾದ್ರಿ ಗವಾಯಿಗಳು ಪಂಚಾಕ್ಷರಿ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತವನ್ನು ಕಲಿತರು. ಅವರ ಕಾಲದ ಗಾಯಕರಾದ ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲರು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸಿದರೆ ಶೇಷಾದ್ರಿ ಗವಾಯಿಗಳು ಹಿಂದೂಸ್ತಾನಿ ಸಂಗೀತದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದು ನಿಂತರು. ‘ಅರವಿಂದ ಸಂಗೀತ ವಿದ್ಯಾಲಯ’ವನ್ನು ಸ್ಥಾಪನೆ ಮಾಡಿ ನೂರಾರು ಶಿಷ್ಯರಿಗೆ ತರಬೇತಿ ನೀಡಿದರು. ಹೀಗಾಗಿ ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಭದ್ರ ಬುನಾದಿ ದೊರಕುವಂತಾಯಿತು.
ಶೇಷಾದ್ರಿ ಗವಾಯಿಗಳು ರಾಜ್ಯ ಸಂಗೀತ, ನೃತ್ಯ ಅಕಾಡಮಿ ಅಧ್ಯಕ್ಷರ ಜವಾಬ್ದಾರಿಯನ್ನು ಕೂಡಾ ಶ್ರದ್ಧೆ ದಕ್ಷತೆಗಳಿಂದ ನಿರ್ವಹಿಸಿದವರು. ಸಂಗೀತ, ಕಲೆ, ಸಾಹಿತ್ಯ ಪ್ರಚಾರಕ್ಕಾಗಿ ಅವರು ‘ಗಾಯನ ಗಂಗಾ’ ಎಂಬ ಸಂಗೀತ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ‘ಉರುಗಾಚಲ’ ಎಂಬ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚನೆ ಮಾಡಿದರು. 500ಕ್ಕೂ ಹೆಚ್ಚು ಭಕ್ತಿ ಗೀತೆಗಳಿಗೆ ಸ್ವರ ಸಂಯೋಜಿಸಿದರು.
ಶೇಷಾದ್ರಿ ಗವಾಯಿಗಳು ರಚಿಸಿದ ‘ಸಂಗೀತ ಕಲಾರವಿಂದ’ ಭಾಗ 1 ಮತ್ತು ಭಾಗ 2 ಕೃತಿಗಳು ಕರ್ನಾಟಕ ಸರಕಾರದಿಂದ ಪುರಸ್ಕಾರ ಪಡೆದಿವೆ. ಅವರ ‘ತತ್ವಗಾನ ರತ್ನಾಕರ’ ಬಹುಜನಪ್ರಿಯ ಪುಸ್ತಕ. ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರತಿಷ್ಠಾನ ಸ್ಥಾಪಿಸಿ ದೇಶದ ಪ್ರತಿಷ್ಠಿತ ಸಂಗೀತಗಾರರಿಗೆ ‘ಪಂಚಾಕ್ಷರಿ ಪ್ರಶಸ್ತಿ’ ನೀಡಿದ್ದು ಅವರ ಮತ್ತೊಂದು ಹೆಗ್ಗಳಿಕೆ.
ವಚನಗಳ ಗಾಯನದಲ್ಲಿ ಅತ್ಯಂತ ಶ್ರದ್ಧೆ ವಹಿಸಿದ ಶೇಷಾದ್ರಿ ಗವಾಯಿಗಳು ವಚನ ಗಾಯನ ವಿಭೂಷಣರೆಂದೇ ಪ್ರಸಿದ್ಧಿ ಪಡೆದವರು. ಹೆಸರಾಂತ ಹಿಂದೂಸ್ತಾನಿ ಗಾಯಕರಾದ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮುಂತಾದವರಿಗೆ ಅವರು ಹಾರ್ಮೋನಿಯಂ ವಾದನದಲ್ಲಿ ಜೊತೆ ನೀಡಿದ್ದರು. ಅವರು ಕರ್ನಾಟಕದಲ್ಲೇ ಅಲ್ಲದೆ ದೆಹಲಿ, ಕೋಲ್ಕತ್ತಾ, ಮುಂಬಯಿ, ನಾಗಪುರ, ಹೈದರಾಬಾದುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಜನಪ್ರಿಯತೆ ಗಳಿಸಿದ್ದರು. ಅವರ ಕಾರ್ಯಕ್ರಮ ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ಸಹಾ ನಡೆದಿತ್ತು.
ಸಂಗೀತ ಸಾಗರ, ಸಂಗೀತ ಕಲಾರತ್ನ, ಸಂಗೀತ ವಿಶಾರದ, ಸಂಗೀತ ಸುಧಾರ್ಣವ, ನಾದಶ್ರೀ ಬಿರುದುಗಳು; ರಾಜ್ಯ ಸಂಗೀತ ನೃತ್ಯ ಅಕಾಡಮಿ, ಚಂದ್ರಹಾಸ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಮಹೋಪಾಧ್ಯಾಯ ಬಿರುದು ಮುಂತಾದುವುಗಳ ಜೊತೆಗೆ ಸಂಗೀತದ ಸಮ್ಮೇಳನಗಳ ಅಧ್ಯಕ್ಷತೆ ಹಾಗೂ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷತೆಗಳಂತಹ ಅನೇಕ ಗೌರವಗಳು ಶೇಷಾದ್ರಿ ಗವಾಯಿಗಳನ್ನು ಅರಸಿಬಂದಿದ್ದವು.
ಮಹಾನ್ ಸಂಗೀತ ತಪಸ್ವಿಗಳಾದ ಪಂಡಿತ್ ಶೇಷಾದ್ರಿ ಗವಾಯಿಗಳು 2003ರ ಮಾರ್ಚ್ 19ರಂದು ತಮ್ಮ ಅಪಾರ ಶಿಷ್ಯವೃಂದ ಮತ್ತು ಕಲಾಭಿಮಾನಿಗಳನ್ನು ಅಗಲಿ ಈ ಲೋಕದಿಂದ ವಿಶ್ರಮಿಸಿದರು. ಅವರು ಕೊಟ್ಟ ಅನೇಕ ಕೊಡುಗೆಗಳು ಸಂಗೀತ ಲೋಕದಲ್ಲಿ, ಸಹೃದಯರ ಹೃದಯಗಳಲ್ಲಿ ನಿತ್ಯ ರಾರಾಜಿಸುತ್ತಿವೆ.
On the birth anniversary of great musician Pandit R.V. Sheshadri Gawai
ಕಾಮೆಂಟ್‌ಗಳು