ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯ್ ಹಜಾರೆ


 ವಿಜಯ್ ಹಜಾರೆ


ವಿಜಯ್ ಸ್ಯಾಮ್ಯುಯೆಲ್ ಹಜಾರೆ ಭಾರತೀಯ ಕ್ರಿಕೆಟ್ಟಿನ ಅತ್ಯುತ್ತಮ ಆಲ್‍ರೌಂಡರ್‍ಗಳಲ್ಲಿ ಒಬ್ಬರು. 

ವಿಜಯ್ ಹಜಾರೆ 1915ರ ಮಾರ್ಚ್ 11 ರಂದು ಸಾಂಗ್ಲಿಯಲ್ಲಿ ಜನಿಸಿದರು. ಬರೋಡ ಸಂಸ್ಥಾನದ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದರು. ಅಲ್ಲಿನ ರಾಜಾವಿಕ್ರಮಸಿಂಗ್ ಕ್ರಿಕೆಟ್‍ನ ಅಪಾರ ಪ್ರೇಮಿ ಮತ್ತು ಪೋಷಕನಾಗಿದ್ದ. ವಿಜಯ ಹಜಾರೆಗೆ ಕ್ರಿಕೆಟ್ ಕಲಿಸಲು ಇಂಗ್ಲೆಂಡಿನಿಂದ ಕ್ಲಾರೀ ಗ್ರಿಮೆಟ್ ಎಂಬ ತರಬೇತುದಾರನನ್ನು ಕರೆಸಿಕೊಳ್ಳಲಾಗಿತ್ತು. ಗುರುಶಿಷ್ಯರು ಟೆನಿಸ್ ಚೆಂಡಿನಲ್ಲೇ ಅಭ್ಯಾಸ ನಡೆಸಿದ್ದರು. 

ಹಜಾರೆ ಇಂಗ್ಲೆಂಡ್‍ಗೆ ಖಾಸಗಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ (1938) ಡಾನ್ ಬ್ರಾಡ್‍ಮನ್ ಸೇರಿದಂತೆ ಅನೇಕ ಶ್ರೇಷ್ಠ ಆಟಗಾರರ ಆಟ ನೋಡಿ ಸ್ಫೂರ್ತಿಪಡೆದರು. ಮರಳಿ ಬಂದು ದೇವಧರರ ಮಹಾರಾಷ್ಟ್ರ ತಂಡಕ್ಕೆ ಆಯ್ಕೆಯಾದರು. ಆಡಿದ ಮೊದಲ ರಣಜಿ ಟ್ರೋಫಿಯಲ್ಲಿ ಗಳಿಸಿದ್ದು 40 ರನ್ ಮತ್ತು ಪಡೆದದ್ದು 94 ರನ್‍ಗೆ 7 ವಿಕೆಟ್.

1940ರಲ್ಲಿ ಮತ್ತೆ ಪೂನಾ ಕ್ಲಬ್‍ನಲ್ಲಿ ಬರೋಡದ ವಿರುದ್ಧ ಮೊದಲನೆಯ ದಿನ ಔಟಾಗದೆ 165 ರನ್ ಮಾಡಿ ಮರುದಿನ 200 ರನ್ ದಾಟಿದರು. 10ನೆಯ ಬ್ಯಾಟುದಾರರಾಗಿ ನಗರವಾಲಾ ಜೊತೆಯಲ್ಲಿ 245ರನ್‍ಗಳಿಸಿ 9ನೆಯ ಬ್ಯಾಟುದಾರರೊಂದಿಗಿನ ಜೊತೆಯಾಟದ ಭಾರತದ ದಾಖಲೆ ನಿರ್ಮಿಸಿದರು. ಅನಂತರ 11ನೆಯ ಬ್ಯಾಟುದಾರ ಪಟವರ್ಧನ್ ಜೊತೆಗೆ ಆಡಿ ವೈಯಕ್ತಿಕ ಸ್ಕೋರನ್ನು ಔಟಾಗದೆ 316ಕ್ಕೂ ತಂಡದ ರನ್ನುಗಳನ್ನು 650ಕ್ಕೂ ಏರಿಸಿದರು. ಈ ಮೂಲಕ ತ್ರಿಶತಕ ಬಾರಿಸಿದ ಮೊದಲ ಭಾರತೀಯರಾದರು. ಆ ಕಾಲದ ಅತ್ಯುತ್ತಮ ಬ್ಯಾಟ್ಸ್‍ಮನ್ ಆಗಿದ್ದ ವಿಜಯ ಮರ್ಚೆಂಟ್‍ರನ್ನೂ ಹಿಂದಿಕ್ಕಿದರು. ಇವರ ಆಟದ ಶೈಲಿ ಆಕರ್ಷಕವಾಗಿರಲಿಲ್ಲ. ಆದರೆ ಇವರ ದೃಢ ನಿರ್ಧಾರ, ಸಡಿಲ ಚೆಂಡುಗಳಿಗೆ ಶಿಕ್ಷೆ ಕೊಟ್ಟು ಬಾರಿಸುತ್ತಿದ್ದುದು ವಿಶಿಷ್ಟವಾಗಿದ್ದವು. ಬೌಲಿಂಗ್‍ನಲ್ಲಿ ಇವರದು ವಿಶಿಷ್ಟವಾದ ವೇಗ. ಮೀಡಿಯಂಗಿಂತ ಸ್ವಲ್ಪ ಹೆಚ್ಚು; ವೇಗ ಎನ್ನಲಾಗದಷ್ಟು ನಿಧಾನ. ನಾಲ್ಕು ಬೆರಳ ಹಿಡಿತದ, ಚಕ್ಕನೆ ಲೆಗ್ ಬ್ರೇಕ್ ಆಗುತ್ತಿದ್ದ ಇವರ ಎಸೆತವನ್ನು ಆಡಲು ಕಷ್ಟವಾಗುತ್ತಿತ್ತು.

ಇವರು ಹಿಂದು ತಂಡದ ವಿರುದ್ಧ ಇತರರ ಪರವಾಗಿ ಆಡಿದಾಗ ವೈಯಕ್ತಿಕ ಔಟಾಗದ 309ರನ್ ಮಾಡಿ ತಂಡದ ಒಟ್ಟು 387 ರನ್‍ಗಳ ಶೇಕಡಾ 80ರನ್ ಗಳಿಸುವ ದಾಖಲೆ ಸ್ಥಾಪಿಸಿದರು. 4ನೆಯ ವಿಕೆಟ್ ಜೊತೆಯಾಟದಲ್ಲಿ 577ರನ್ ಮಾಡಿ ಗುಲ್ ಮಹಮದ್‍ನ ದಾಖಲೆಯನ್ನು ಸರಿಗಟ್ಟಿದರು (1946-47). ಇವರ ಹೆಸರಿನ ಪೂರ್ವಾರ್ಧವುಳ್ಳ ಇನ್ನೊಬ್ಬ ಆಟಗಾರ ವಿಜಯ ಮರ್ಚೆಂಟ್ ಇವರ ಸಹ ಆಟಗಾರನೂ ಎದುರಾಳಿಯೂ ಪ್ರತಿಸ್ಪರ್ಧಿಯೂ ಆಗಿದ್ದರು. ಇವರಿಬ್ಬರ ಆಟದ ಅವಧಿಯನ್ನು ಜೋಡಿ 'ವಿ' ಗಳ ಕಾಲ ಎಂದು ಕರೆಯಲಾಗುತ್ತಿತ್ತು.
ಅನಂತರ ಹಜಾರೆಯವರು ಬರೋಡ ತಂಡವನ್ನು ಸೇರಿದರು (1941). ಬಿಜಾಪುರದ ಭೀಕರ ಕ್ಷಾಮ ಮತ್ತು ಬಂಗಾಲದ ಚಂಡಮಾರುತ ಸಂತ್ರಸ್ತರ ನೆರವಿಗಾಗಿ ಅವಿಸ್ಮರಣೀಯ ಪಂದ್ಯವಾಡಿದರು (1943). ಈ ಪಂದ್ಯದಲ್ಲಿ ಬೊಂಬಾಯಿ-ಬರೋಡ ಎರಡೂ ತಂಡಗಳ ಒಟ್ಟು ಸ್ಕೋರು 1,376 ರನ್‍ಗಳು. ಇದೊಂದು ಪ್ರಪಂಚ ದಾಖಲೆ, ಬೊಂಬಾಯಿ ತಂಡದ ವಿಜಯ ಮರ್ಚೆಂಟ್ ಕೇವಲ 1 ರನ್ ಮಾಡಿದ್ದರೆ ಹಜಾರೆ 250 ರನ್ ಪೇರಿಸಿದ್ದರು.
ಇವರು ತಮ್ಮ ಕಿರಿಯ ಸಹೋದರ ವಿವೇಕ ಹಜಾರೆಯ ಜೊತೆಯಾಟದಲ್ಲಿ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮರ್ಚೆಂಟ್‍ರ ದಾಖಲೆ ಮುರಿದರು. 295ರನ್ ಆಗಿದ್ದಾಗ ತಮಗೆ ಅಪರೂಪವೆನಿಸುವ ಸಿಕ್ಸರ್ ಬಾರಿಸಿ 301 ರನ್ ಗಳಿಸಿದರು. ಮುಂದುವರಿದು 309 ರನ್ ಆಯಿತು. ತಂಡದ ಒಟ್ಟು ರನ್‍ಗಳು 387. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಇದೊಂದು ಪ್ರಪಂಚದಾಖಲೆ. ಇವರು ಒಂದೇ ಸೀಸನ್‍ನಲ್ಲಿ 1,000 ರನ್‍ಗಳಿಸಿದ ಮೊದಲ ಭಾರತೀಯರು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದರು. ವೆಸ್ಟ್ ಇಂಡಿಸ್ ಪ್ರವಾಸದಿಂದ ವಾಪಸಾದ ಮೇಲೆ ಇವರು ನಾಯಕತ್ವವನ್ನು ತೊರೆದರು (1952-53). 

ವಿಜಯ್ ಹಜಾರೆ 2004 ಡಿಸೆಂಬರ್ 18ರಂದು ಬರೋಡದಲ್ಲಿ ನಿಧನರಾದರು.

On the birth anniversary of great cricket all rounder Vijay Hazare


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ