ಶ್ರೀವಿದ್ಯಾ ಕಾಮತ್
ಶ್ರೀವಿದ್ಯಾ ಕಾಮತ್
ಶ್ರೀವಿದ್ಯಾ ಕಾಮತ್ ಸೃಜನಶೀಲ ಉದ್ಯಮಿ, ನುರಿತ ಮಾರ್ಗದರ್ಶಿ ಹಾಗೂ ಸಂಗೀತ, ನೃತ್ಯ, ನಾಟಕ, ಸಾಹಿತ್ಯ, ಸಂಸ್ಕೃತಿಗಳ ಬಹುಮುಖಿ ಪ್ರತಿಭೆ.
ಮಾರ್ಚ್ 11, ಶ್ರೀವಿದ್ಯಾ ಅವರ ಜನ್ಮದಿನ. ಇವರು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ಅಪ್ಪ ಅಮ್ಮ ಇಬ್ಬರೂ ಶಿಕ್ಷಕರು. ಅಪ್ಪ ಪಾಲಕ್ಕಾಡ್ ಅಯ್ಯರ್. ಅಮ್ಮ ಕೊಂಕಣಿಯವರು. ಮುಂದೆ ಇವರು ಮದುವೆಯಾಗಿದ್ದು ಕೊಂಕಣಿ ಕುಟುಂಬದ ನರಸಿಂಹ ಕಾಮತ್ ಅವರನ್ನು. ತಂದೆ ಇಂಗ್ಲಿಷ್ ಪ್ರಾಧ್ಯಾಪಕರಾದರೂ ಅಪ್ಪಟ ಕುವೆಂಪು ಅಭಿಮಾನಿ. ಹಾಗಾಗಿ ಶ್ರೀವಿದ್ಯಾ ಓದಿದ್ದು ಕನ್ನಡ ಮಾಧ್ಯಮದ ವನಿತಾ ಸದನದಲ್ಲಿ. ಹೀಗೆ ಬಹುಮುಖಿ ಸಂಸ್ಕೃತಿಗಳ ನಡುವೆಯೂ ಕನ್ನಡದ ನಲ್ಮೆಯಲ್ಲಿ ಅರಳಿದ ಶ್ರೀವಿದ್ಯಾ ಬಯೋಟೆಕ್ನಲ್ಲಿ ಬಿ.ಎಸ್‍ಸಿ ಮತ್ತು ಎಂ.ಎಸ್ ಸಿ ಓದಿದರು. ಸಣ್ಣ ವಯಸ್ಸಿನಿಂದಲೇ ಭರತನಾಟ್ಯ ಮತ್ತು ಸಂಗೀತಾಭ್ಯಾಸಗಳೂ ಇವರಿಗೆ ಜೊತೆಯಾದವು.
ಶ್ರೀವಿದ್ಯಾ ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿಯಾಗಿ 2 ವರ್ಷ ಮತ್ತ ಬೆಂಗಳೂರಿನ ಟಿ.ಜಾನ್ ಕಾಲೇಜಿನಲ್ಲಿ ಒಂದು ವರ್ಷ ಕೆಲಸ ಮಾಡಿದರು.
ಏತನ್ಮಧ್ಯೆ, ಇನ್ಫೋಸಿಸ್‍ನಲ್ಲಿ ನಡೆದ 'ಟ್ರೈನ್ ದ ಟ್ರೈನರ್' ಕಾರ್ಯಾಗಾರಕ್ಕೆ ಸೇರಿ ತರಬೇತಿ ಪಡೆದರು. ಜೊತೆಗೆ ತಂದೆಯವರು ಮಾಡುತ್ತಿದ್ದ ತರಬೇತಿಗಳನ್ನು ನೋಡುತ್ತಿದ್ದುದರ ಪ್ರಭಾವದ ಹಿನ್ನೆಲೆಯೂ ಇವರೊಂದಿಗಿತ್ತು. ಇದೇ ಸಮಯದಲ್ಲಿ ಜೀವಕಲೆ ಮತ್ತು ಆಂಗ್ಲಭಾಷಾ ತರಬೇತಿಗೆ ಹೆಚ್ಚುತ್ತಿದ್ದ ಬೇಡಿಕೆಯ ಹಿನ್ನೆಲೆಯಲ್ಲಿ, ಇದನ್ನೇ ವೃತ್ತಿಯಾಗಿ ಆರಿಸಿಕೊಂಡರು. ಅದಕ್ಕೆ ಪೂರಕವಾಗಿ TESOL, Diploma in phonetics, Diploma in training and Development, MA Mass Communication and Journalism, Diploma in English Language Training for Adults (DELTA), ಹಾಗೂ Certification in Instructional Designing ಮುಂತಾದ ಕುಶಲತೆಗಳ ಪದವಿಗಳನ್ನು ಪೋಣಿಸಿಕೊಂಡರು.
ಶ್ರೀವಿದ್ಯಾ ಅವರು ಸಣ್ಣ ವಯಸ್ಸಿನಲ್ಲೇ ಬ್ಲ್ಯಾಕ್ ಅಂಡ್ ವೈಟ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಮೂರೂವರೆ ವರ್ಷ ಮ್ಯಾನೇಜರ್ ಹುದ್ದೆ ನಿರ್ವಹಿಸಿದರು. ಈ ಅನುಭವದೊಂದಿಗೆ 2014ರಲ್ಲಿ ತಮ್ಮದೇ ಆದ ಸ್ವಂತ ಸಂಸ್ಥೆ 'Lead Training and Corporate Solutions' ಎಂಬ, ಕಾಲೇಜುಗಳಲ್ಲಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ತರಬೇತಿ ನೀಡುವ ಮತ್ತು ನೇಮಕಾತಿ ಮಾಡುವ ಸಂಸ್ಥೆಯನ್ನು ಆರಂಭಿಸಿದರು. 2017ರಲ್ಲಿ, ಕಾರ್ಪೊರೇಟ್ ಗಿಫ್ಟ್ ಅಗತ್ಯತೆಯನ್ನು ಪೂರೈಸಲು ಮನೆಯಲ್ಲೇ ಮಾಡಿದ ಸುಗಂಧಿತ ಮೇಣದಬತ್ತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಅವು ಜನಮನವನ್ನು ಅಪಾರವಾಗಿ ಗೆದ್ದವು. ಹೀಗಾಗಿ ಮನೆಯವರೆಲ್ಲರ ವಿರೋಧದ ನಡುವೆಯೂ ಇವರು ಆರಂಭಿಸಿದ Aura Candles ಸಂಸ್ಥೆ, ಈಗಾಗಲೇ 5 ದೇಶಗಳಿಗೆ ಸುಗಂಧಿತ ಡಿಸೈನರ್ ಲಕ್ಷುರಿ ಮೇಣದಬತ್ತಿಗಳನ್ನು ರಫ್ತು ವಹಿವಾಟು ನಡೆಸುತ್ತಿದೆ.
ಶ್ರೀವಿದ್ಯಾ ಅವರು ಸ್ವಯಂ ಉದ್ಯೋಗದ ಹಾದಿಯಲ್ಲಿ, ಇದುವರೆಗೂ ಸುಮಾರು 80 ಜನರಿಗೆ ತಮ್ಮ ಸಂಸ್ಥೆ ಯಲ್ಲಿ ಉದ್ಯೋಗ ನೀಡಿರುವುದಲ್ಲದೆ, ಸ್ವಯಂಉದ್ಯೋಗದ ಹಾದಿ ಹಿಡಿಯಬಯಸುವ ಎಲ್ಲರಿಗೂ ಮಾರ್ಗದರ್ಶನ ನೀಡುತ್ತ, ಇದುವರೆಗೂ ಸುಮಾರು 21 ಜನರಿಗೆ ಸ್ವಂತ ಉದ್ಯೋಗ ಆರಂಭಿಸುವಲ್ಲಿ ಸಹಾಯ ಮಾಡಿದ್ದಾರೆ. ಇವರೆಲ್ಲರ ಬ್ರ್ಯಾಂಡ್ ಲಾಂಚ್ ಕಾರ್ಯಕ್ರಮವು 2೦23ರ ನವೆಂಬರ್ ತಿಂಗಳಲ್ಲಿ ಮೈಸೂರಿನ ಕಿರುರಂಗಮಂದಿರದಲ್ಲಿ ನಡೆಯಿತು. ಇಂತಹ ಸ್ವಯಂಉದ್ಯೋಗಾಕಾಂಕ್ಷಿಗಳ ಬದುಕನ್ನಾಧಾರಿಸಿ 'ಇದು ನಾಟಕವಲ್ಲ ಬದುಕು' ಎಂಬ ಸಣ್ಣ ನಾಟಕವನ್ನು ಕಟ್ಟಿ ಆಡಿಸಿದರು.
ಶ್ರೀವಿದ್ಯಾ ಅವರು ಶಾಲೆ, ಕಾಲೇಜು ರಂಗಭೂಮಿ ಕಲಿಕೆಯ ನಂತರ, ಕೆ.ಎಸ್. ಶರತ್ ಅವರ ಸಮಷ್ಟಿ ತಂಡ ಏರ್ಪಡಿಸಿದ್ದ ಮೂರು ತಿಂಗಳ ರಂಗಕಾರ್ಯಾಗಾರದಲ್ಲಿ ರಂಗ ದಿಗ್ಗಜರುಗಳಿಂದ ಕಲಿಯುವ ಅವಕಾಶ ಮಾಡಿಕೊಂಡರು. ವಿವಾಹಾನಂತರ, ಬೆಂಗಳೂರಿನ ವೇಗ ಜೀವನದಲ್ಲಿ ಬಿಟ್ಟುಹೋಗಿದ್ದ ಕಲಾಸೇವೆಗೆ ಈಗ ಪುನಃ ಮರಳಿದ್ದಾರೆ.
ಶ್ರೀವಿದ್ಯಾ 2023ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷೆಯ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಕೊಂಕಣಿ, ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷಾ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿದ್ದಾರೆ. ಸಾಹಿತ್ಯ ಮತ್ತು ರಂಗಭೂಮಿ ಸೇವೆಗಾಗಿಯೇ ಮುಡಿಪಾದ 'ಅನುಭೂತಿ' ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. 'ದೀಪಧಾರಿಣಿ' ಎಂಬ ಪ್ರಯೋಗವನ್ನು ತಮ್ಮ ನಿರಂತರ ಪರಿಶ್ರಮದಿಂದ ರಂಗದ ಮೇಲೆ ಪ್ರಸ್ತುತಪಡಿಸಿ ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್, ತಮಿಳು ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
ಶ್ರೀವಿದ್ಯಾ ತಮ್ಮೆಲ್ಲ ಸಾಧನೆಗಳಿಗೂ ತಮ್ಮ ಕುಟುಂಬದ ಸಹಕಾರವನ್ನು ಆಪ್ತವಾಗಿ ನೆನೆಯುತ್ತಾರೆ. ಶ್ರೀವಿದ್ಯಾ ಅವರ ಪತಿ ನರಸಿಂಹ ಕಾಮತ್, ಹಣಕಾಸು ಶಾಖೆಯಲ್ಲಿ ಎಂ.ಬಿ.ಎ ಪದವೀಧರರಾಗಿದ್ದು, ಎಚ್‍ಎಸ್‍ಬಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಹಿಳಾದಿನದ ವಿದ್ಯಾ ಅವರ ಬರಹ ಓದುತ್ತಿದೆ. ಮಹಿಳೆಯಾಗಿ ಉದ್ಯಮದಲ್ಲಿ ಎದುರಿಸಬೇಕಾದ ಗಂಭೀರ ಸವಾಲುಗಳ ಬಗ್ಗೆ ಹೇಳುವ ಅವರು ಹೇಳುವ ಮಾತುಗಳು ನಮಗೂ ಪ್ರೇರಣೆ ಅನಿಸುವಂತಿವೆ:. "Every morning, I wake up, pray and face the day with the strongest weapon I've created! My smile 😍! I manage my family, work and all the social causes I support, with same passion equally for all! Because...
I decided long ago
Never to walk in anyone's shadows
If I fail, if I succeed
At least I'll live as I believe
No matter what anyone takes from me
They can't take away my dignity (Whitney)!!”
ಉತ್ಸಾಹಿ ಪ್ರತಿಭಾನ್ವಿತೆ ಆತ್ಮೀಯ ಶ್ರೀವಿದ್ಯಾ ಕಾಮತ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Srividya Kamath 🌷🌷🌷
ಕಾಮೆಂಟ್‌ಗಳು