ಸರಿತಾ ದೇಸಾಯಿ
ಸರಿತಾ ಕುಸುಮಾಕರ ದೇಸಾಯಿ
ಸರಿತಾ ಕುಸುಮಾಕರ ದೇಸಾಯಿಯವರು ವೃತ್ತಿಯಿಂದ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಸಮಾಜ ಸೇವೆ, ಸಂಸ್ಕೃತಿ, ಸಾಹಿತ್ಯ, ಲಲಿತಕಲೆ ಮುಂತಾದ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದವರು.
ಸರಿತಾ ಕುಸುಮಾಕರ ದೇಸಾಯಿಯವರು ಈಗಿನ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ 1941ರ ಮಾರ್ಚ್ 9ರಂದು ಜನಿಸಿದರು. ವಿವಾಹಕ್ಕೆ ಮುಂಚಿತವಾದ ಅವರ ಹೆಸರು ಸರಸ್ವತಿ ರಾಯಸಂ. ತಂದೆ ರಾಘವೇಂದ್ರ ರಾಯಸಂ. ತಾಯಿ ಜಾನಮ್ಮ.
ಸರಿತಾ ಅವರ ಅವರ ಪ್ರಾರಂಭಿಕ ಶಿಕ್ಷಣ ಹರಪನಹಳ್ಳಿಯಲ್ಲಿ ನೆರವೇರಿತು. ಕಾಲೇಜು ಓದಲು ಹೈದರಾಬಾದಿನ ಆರ್.ಬಿ.ವಿ.ಆರ್.ಆರ್. ರೆಡ್ಡಿಯವರ ಕಾಲೇಜು ಸೇರಿದರೂ ಕಾರಣಾಂತರದಿಂದ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟಿಗೆ ಸೇರಿದರು. ವೈದ್ಯೆಯಾಗಬೇಕೆಂಬ ಹಂಬಲದಿಂದ ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಿಕೊಂಡರೂ ಇಲ್ಲೂ ವಿದ್ಯೆ ಕೈಗೂಡದೆ ಪುನಃ ಹರಪನಹಳ್ಳಿಗೆ ವಾಪಸ್ಸಾದರು. ಮನೆಯಲ್ಲಿ ಕುಳಿತು ಹಿಂದಿ-ರಾಷ್ಟ್ರಭಾಷಾ ವಿಶಾರದ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಪುನಃ ಅವರಿಗೆ ವಿದ್ಯಕಲಿಯಲು ಕಾಲಕೂಡಿಬಂದುದು ಮದುವೆಯ ನಂತರವೇ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ 1971ರಲ್ಲಿ ಬಿ.ಎ. ಮತ್ತು 1974ರಲ್ಲಿ ಎಲ್.ಎಲ್.ಬಿ. ಪದವಿಗಳನ್ನು ಪಡೆದರು. ಸಮಾಜಸೇವಕ - ವಕೀಲ - ರಾಜಕಾರಣಿ ಕುಸುಮಾಕರ ದೇಸಾಯಿ ಅವರನ್ನು ವರಿಸಿ ಸರಿತಾ ಕುಸುಮಾಕರ ದೇಸಾಯಿ ಆದರು. ಕಾನೂನನ್ನು ವೃತ್ತಿಯಾಗಿ ಕೈಗೊಂಡು ವಕೀಲರಾಗಿಯೂ ಹಲವಾರು ಇಲಾಖೆ ಮತ್ತು ಸಂಸ್ಥೆಗಳ ಕಾನೂನು ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು.
ಸರಿತಾರವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಒಲವನ್ನು ಮೂಡಿಸಿಕೊಂಡವರು. ಹರಪನಹಳ್ಳಿಯಲ್ಲಿದ್ದಾಗ ಪ್ರತಿದಿನ ತಾಯಿ ರಾಮಾಯಣ, ಮಹಾಭಾರತ, ಪುರಾಣದ ಸಂಗತಿಳನ್ನು ರೋಚಕವಾಗಿ ವಿವರಿಸುತ್ತಿದ್ದಾಗ ಸರಿತಾ ಅವರ ಮನಸ್ಸಿನಲ್ಲಿ ತಾನೂ ಕಥೆಗಾರ್ತಿಯಾಗಬೇಕೆಂಬ ಹಂಬಲ ಮೂಡತೊಡಗಿತ್ತು. ಇದಕ್ಕೆ ನೀರೆರೆದು ಪೋಷಿಸಿದವರು ಅಣ್ಣನಂತಿದ್ದ ಬೀಚಿಯವರು. ಕಾರಂತ, ಗೋಕಾಕ, ತರಾ.ಸು, ಅ.ನ.ಕೃ. ಮುಂತಾದವರ ಕಾದಂಬರಿಗಳನ್ನು ನಿರಂತರವಾಗಿ ಓದುತ್ತಾ ಬಂದರು.
ಹೈದರಾಬಾದಿನ ಡಿ.ಕೆ. ಭೀಮಸೇನರಾಯರ ಮನೆಯಲ್ಲಿ ಬಾಡಿಗೆಗಿದ್ದ ಅಕ್ಕಭಾವರೊಡನೆ ಇದ್ದಾಗ, ಅನೇಕ ಸಾಹಿತಿಗಳು ಭೀಮಸೇನರಾಯರನ್ನು ಕಾಣಲು ಬರುತ್ತಿದ್ದುದರಿಂದ ಸರಿತಾರವರಿಗೂ ಸಾಹಿತ್ಯದ ಲಾಭ ದೊರಕತೊಡಗಿತು. ತಾವು ಬರೆದ ಬರಹಗಳನ್ನು ಹಿರಿಯ ಸಾಹಿತಿಗಳಿಗೆ ತೋರಿಸಿ ಅವರಿಂದ ದೊರೆತ ಪ್ರೋತ್ಸಾಹಯುತ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಂಡು ಕಥಾರಚನೆಯಲ್ಲಿ ತೊಡಗಿದರು. ಹೀಗೆ ಬರೆದ ಅವರ ಕಥೆಗಳು ಸುಧಾ, ಮಯೂರ, ಕಸ್ತೂರಿ, ಕರ್ಮವೀರ ಮುಂತಾದ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ‘ಕಾಶಿಯಲ್ಲಿ ಕಂಡದ್ದೇನು’ ಕಥಾ ಸಂಕಲನಕ್ಕೆ ಬೀಚಿಯವರು ಮುನ್ನುಡಿ ಬರೆದು ಹಾರೈಸಿದರೆ, ‘ನಾನು ಲಕ್ಕಿ’ ಕಥಾಸಂಕಲನ ಹಾಗೂ ‘ಸ್ಪಂದನ’ ವೈಚಾರಿಕ ಬರಹಗಳ ಸಂಕಲನಕ್ಕೆ ಎಲ್.ಎಸ್. ಶೇಷಗಿರಿರಾಯರು ಮುನ್ನುಡಿ ಬರೆದು ಶುಭ ಕೋರಿದರು.
ಹರಪನಹಳ್ಳಿಯ ಟೆಂಟ್ ಸಿನಿಮಾದಿಂದ ಪ್ರಭಾವಿತರಾದ ಸರಿತಾ ಕುಸುಮಾಕರರು ಭರತನಾಟ್ಯ, ಸಂಗೀತ, ಲಲಿತಕಲೆಗಳಲ್ಲಿಯೂ ಪ್ರಾವೀಣ್ಯತೆ ಗಳಿಸಿದ್ದರು, ದೂರದರ್ಶನದ ಧಾರವಾಹಿಗಳಾದ ‘ಮನೆತನ’, ‘ಋಣಾನುಬಂಧ’ ಮತ್ತು ‘ಒಲವು-ಚೆಲುವು’ ಧಾರವಾಹಿಗಳಲ್ಲಿ ದಂಪತಿಗಳಿಬ್ಬರೂ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದರು.
ಸಾಹಿತ್ಯದಲ್ಲಿ ಅಭಿರುಚಿ ಇದ್ದಂತೆ ಕಲಾವಿದರು, ರಾಜಕಾರಣಿಗಳಲ್ಲಿ ಇವರ ಆತಿಥ್ಯಪಡೆದವರು ಬಹುಮಂದಿ. ಜಾರ್ಜ್ ಫರ್ನಾಂಡಿಸ್, ಮಧುಲಿಮಯೆ, ಮಧುದಂಡವತೆ, ಪ್ರಮೀಳಾ ದಂಡವತೆ, ರಾಜನಾರಾಯಣ್, ಜೆ.ಎಚ್. ಪಟೇಲ್, ರಾಮನಾಥ ಗೋಯಂಕ, ಖಾದ್ರಿ ಶಾಮಣ್ಣ ಮುಂತಾದ ಬಹಳಷ್ಟು ಮಹನೀಯರು ಈ ದಂಪತಿಗಳಿಂದ ಆತಿಥ್ಯ ಪಡೆದಿದ್ದರು.
ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿದ್ದ ಸರಿತಾರವರು ಕನ್ನಡ ಕಾನೂನು ಪದಕೋಶ ರಚನಾ ಸಮಿತಿ, ಭಾರತೀಯ ಗೆಜೆಟಿಯರ್ ಕನ್ನಡ ಆವೃತ್ತಿ ಸಮಿತಿ, ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಮಿತಿ, ಕನಾಟಕ ಸಾಹಿತ್ಯ ಅಕಾಡಮಿ ಮುಂತಾದವುಗಳ ಸದಸ್ಯರಾಗಿ ಭಾಗಿಯಾಗಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಲೋಕಶಿಕ್ಷಣ ಟ್ರಸ್ಟಿನ ಸದಸ್ಯರಾಗಿ ಸಹಾ ಸರಿತಾ ಸೇವೆ ಸಲ್ಲಿಸಿದ್ದರು.
ಇಂಗ್ಲಿಷ್, ಹಿಂದಿ, ಮರಾಠಿ, ತೆಲುಗು, ತಮಿಳು, ಕನ್ನಡ ಭಾಷೆಗಳ ಮೇಲೆ ಪ್ರಭುತ್ವ ಪಡೆದಿದ್ದ ಸರಿತಾ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕಾಶಿಯಲ್ಲಿ ಕಂಡದ್ದೇನು, ನಾನು ಲಕ್ಕಿ, ಧ್ರುವಮಿಲನ, ಮಿಡಿಗಾದ ಮಿಡುಕು ಮುಂತಾದವು ಅವರ ಕಥಾ ಸಂಕಲನಗಳು. 'ಸ್ಪಂದನ' ವೈಚಾರಿಕ ಲೇಖನಗಳ ಸಂಕಲನ. 'ಹೀಗಿದ್ದರು ಬೀಚಿ’ ಅವರ ಸಂಪಾದಿತ ಕೃತಿ; ನಂತರದಲ್ಲಿ ಇದರ ವಿಸ್ತೃತ ಆವೃತ್ತಿ 'ಇವರೇ ನಮ್ಮ ಬೀಚಿ’ ಕೃತಿಯನ್ನು 2004ರಲ್ಲಿ ಪ್ರಕಟಿಸಿದರು. ‘ಮಹಡಿ ಮನೆ’ ಕಥಾ ಸಂಕಲನ ಸಾಹಿತಿ ಭಗವತಿ ಚರಣ ವರ್ಮರ ಹಿಂದೀ ಕಥೆಗಳು ಮತ್ತು ಶಂಕರರಾವ್ ಖರತ್ ಅವರ ಮರಾಠಿ ಸಣ್ಣ ಕಥೆಗಳ ಅನುವಾದವಾಗಿವೆ. 'ನೆಲಕಡಲು' ಶ್ರೀಮತಿ ಮನ್ನೂ ಭಂಡಾರಿ ಮತ್ತು ಇತರರ ಜನಪ್ರಿಯ ಕಿರು ಕಾದಂಬರಿಗಳ ಅನುವಾದಿತ ಕೃತಿಗಳಾಗಿವೆ. ‘ಭೀಮೇಶ ಕೃಷ್ಣ’ ಹರಿದಾಸ ಸಾಹಿತಿ ಹರಪನ ಹಳ್ಳಿ ಭೀಮವ್ಪನವರ ಜೀವನ ಹಾಗೂ ಕೃತಿಪರಿಚಯವಾಗಿದೆ. ‘ಹರಪನಹಳ್ಳಿ ಭೀಮವ್ವನನವರ ಹಾಡುಗಳು ಒಂದು ಅಧ್ಯಯನ’ ಎಂಬ ಕೃತಿ ಎಲ್ಲ ಹಾಡುಗಳ ವಿಶ್ಲೇಷಣಾತ್ಮಕ ಬರಹಗಳನ್ನು ಒಳಗೊಂಡಿವೆ. ‘ನಮ್ಮನ್ನು ಸಾಕಿದ ಪ್ರಾಣಿಗಳು' ಪ್ರಾಣಿ ದಯೆಯ ಬಗ್ಗೆ ಬರೆದ ವಿಶಿಷ್ಟ ಕೃತಿ. ಇವುಗಳಲ್ಲದೆ ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳು. ಪ್ರಬಂಧಗಳು, ಮಹಿಳಾ ಸಮಸ್ಯೆ, ಬಾಲ್ಯವಿವಾಹ ಕುರಿತ ಕಿರುನಾಟಕಗಳು ಮುಂತಾದ ಅನೇಕ ಲೇಖನಗಳು ಸಹಾ ಸರಿತಾ ಅವರ ಬರವಣಿಗೆಯಲ್ಲಿ ಮೂಡಿಬಂದಿವೆ. ದೂರದರ್ಶನದಲ್ಲಿ ಇವರ ‘ಕಥೆಗಳಲ್ಲಿ ಕಾನೂನು’ ಮುಂತಾದವು ಧಾರವಾಹಿಗಳಾಗಿ ಪ್ರಸಾರಗೊಂಡಿವೆ.
ಭೀಮೇಶ ಕೃಷ್ಣ ಸಂಗೀತರೂಪಕಕ್ಕೆ ಅಖಿಲಭಾರತ ಆಕಾಶವಾಣಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ‘ಉತ್ತಮಲೇಖಕಿ’, ಕನ್ನಡ ಲೇಖಕಿಯರ ಪರಿಷತ್ತಿನಿಂದ ‘ವರ್ಷದ ಲೇಖಕಿ’ ಮುಂತಾದ ಪ್ರಶಸ್ತಿಗಳು ಸರಿತಾ ಅವರಿಗೆ ಸಂದಿದ್ದವು. ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಸಹನಾ’.
ಸ್ವತಃ ವಿದ್ಯೆ ಕಲಿಯಲು ಹಲವಾರು ಬಾರಿ ಅಡೆತಡೆಗಳುಂಟಾಗಿದ್ದರೂ ಛಲಬಿಡದೆ ಸಾಧಿಸಿದ್ದಲ್ಲದೆ, ವಿದ್ಯೆಗಾಗಿ ಹಳ್ಳಿಯಿಂದ ಗುಲ್ಬರ್ಗ ಷಹರಕ್ಕೆ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪೋಷಕರಾಗಿ, ಅಬಲೆಯರಿಗೆ ಆತ್ಮೀಯರಾಗಿ, ಕಾನೂನು ತಿಳುವಳಿಕೆ ನೀಡುವ ಕಾರ್ಯಕರ್ತೆಯಾಗಿ, ನೊಂದ ಹೃದಯಗಳಿಗೆ ಸಾಂತ್ವನ ಹೇಳುವ ಮಾತೆಯಾಗಿ, ಸದಾ ಹೋರಾಟದ ಬದುಕನ್ನೇ ಪ್ರೀತಿಸುತ್ತಿದ್ದ ಸರಿತಾ ಕುಸುಮಾಕರ ದೇಸಾಯಿಯವರು 2008ರ ಏಪ್ರಿಲ್ 13ರಂದು ಈ ಲೋಕವನ್ನಗಲಿದರು.
On the birth anniversary of writer and social worker Sarita Kusumakara Desai
ಕಾಮೆಂಟ್‌ಗಳು