ರಾಘವೇಂದ್ರ ಗುರೂಜಿ
ಬಸವಾಪಟ್ಟಣದ ಶ್ರೀ ರಾಘವೇಂದ್ರ ಗುರೂಜಿ
ಲೇಖಕರು: ಸಂಪಿಗೆ ತೋಂಟದಾರ್ಯ
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರವೆಂದು ನಂಬಿ , ಅವರ ಕೃಪೆಗಾಗಿ ಕೋಟ್ಯಾನುಕೋಟಿ ಭಕ್ತರು ಶ್ರದ್ಧಾಭಕ್ತಿಗಳಿಂದ ಮೊರೆ ಹೋಗುತ್ತಾರೆ. ಶ್ರೀ ಗುರುರಾಯರು ತಾವು ಸಜೀವವಾಗಿ ವೃಂದಾವನಸ್ಥರಾದರೂ, ಭಕ್ತ ಜನರ ಉದ್ಧಾರಕ್ಕಾಗಿ ತಮ್ಮ ಜೀವಿತ ಕಾಲಾವಧಿಯನ್ನು ಏಳು ನೂರು ವರ್ಷಗಳಿಗೆ ಹೆಚ್ಚಿಸಿಕೊಂಡು , ಬೇಡಿ ಬಂದ ಭಕ್ತ ಜನರ ದುರಿತ ಕಷ್ಟಗಳ ನಿವಾರಿಸಿ ಕೃಪೆದೋರುತ್ತಿದ್ದಾರೆ ಎಂದು ನಂಬಲಾಗಿದೆ. ಇದೆಲ್ಲಾ ‘ನಂಬಿಕೆ' ಎಂದು ಹೇಳಿ ತಳ್ಳಿಹಾಕಿ ಬಿಡಬಹುದು. ಆದರೆ 1964ನೆ ಇಸವಿಯಲ್ಲಿ ,ದಾವಣಗೆರೆ ಜಿಲ್ಲಾ , ಚನ್ನಗಿರಿ ತಾಲೂಕಿನ , ಬಸವಾ ಪಟ್ಟಣ ಎಂಬ ಗ್ರಾಮದಲ್ಲಿ ನಡೆದ ಪವಾಡ ಸದೃಶ ಘಟನೆಯೊಂದು , ಶ್ರೀ ಗುರು ರಾಯರ ದಿವ್ಯಶಕ್ತಿಗೆ ಸಾಕ್ಷಿಯಾಗಿ, ಬಸವಾ ಪಟ್ಟಣದ ಕರಡಿ ಗುಡ್ಡವೆಂಬ ಬಂಜರು ಗುಡ್ಡದ ತಪ್ಪಲಿನ ವಿಸ್ತಾರ ಪ್ರದೇಶದಲ್ಲಿ, ವಿವಿಧ ದೇವ ಮಂದಿರಗಳೂ , ಮಂಟಪಗಳೂ , ವಸತಿ ಗೃಹಗಳೂ , ವಾಹನ ನಿಲ್ದಾಣ , ಗಿಡ ಮರಗಳೂ ಇತ್ಯಾದಿಗಳಿಂದ ತುಂಬಿ ' ಪುಣ್ಯ ಸ್ಥಳ 'ವಾಗಿ, ಲಕ್ಷಾಂತರ ಜನ ಭಕ್ತರಿಗೆ ಯಾತ್ರಾಸ್ಥಳವಾಗಲು ಕಾರಣವಾಗಿದೆ.
ಮತ್ತು ಇಲ್ಲಿನ ವಿಶಿಷ್ಟತೆ ಎಂದರೆ ಇಲ್ಲಿಗೆ ಯಾರು ಬೇಕಾದರೂ ಬರಬಹುದು, ಜಾತಿ ಮತ ಪಂಥಗಳ ಬೇಧವಿಲ್ಲ, ಕಾಣಿಕೆ ಹರಕೆಗಳ ಒತ್ರಾಯ, ಗೊಂದಲಗಳಿಲ್ಲ .
ಸರ್ವ ಧರ್ಮಗಳನ್ನೂ ಸಮಭಾವದಿಂದ ಕಾಣುವ, ಆ ಸಂದೇಶ ಸಾರುವ, ವಿವಿಧ ಧರ್ಮ ಗ್ರಂಥಗಳ ಪವಿತ್ರ ಮಂದಿರವೂ ಇದೆ. ಒಟ್ಟಾರೆ ಈ ಪುಣ್ಯ ಸ್ಥಳಕ್ಕೆ ಬಂದು ಹೋಗುವವರಿಗೆ ಯಾವುದೇ ಅನಾನುಕೂಲ ಆಗದ ಹಾಗೆ ಮೂಲಭೂತ ಸೌಕರ್ಯಗಳನ್ನೆಲ್ಲಾ ಒದಗಿಸಲಾಗಿದೆ.
ಈ ಮಹಾ ಪರಿವರ್ತನೆಯ, ಹಾಗೂ ಕಾರ್ಯ ಸಿದ್ಧಿಗಳ ರೂವಾರಿ ಆಗಿರುವವರು, ಆ 1964 ರ ಘಟನೆಗೆ ಒಳಗಾಗಿದ್ದ, ಬಸವಾ ಪಟ್ಟಣದ ಶ್ಯಾನುಭೋಗರಾಗಿದ್ದ ನಾಡಿಗ ರಾಘವೇಂದ್ರ ಅಥವಾ ರಾಘಣ್ಣನವರು ಎಂಬ ಒಬ್ಬ ವ್ಯಕ್ತಿ!
ಒಬ್ಬನೇ ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧಿಸಿರುವುದು ಕಂಡಾಗ, ಸೋಜಿಗವೂ , ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಗೌರವವೂ ಸಹಜವಾಗೇ ಮೂಡುತ್ತವೆ. ಅವರಿಗೆ ಅಂತಹ ಮಹಾ ಚೈತನ್ಯ ಹೇಗೆ ಬಂತೆಂಬುದೂ, ಮತ್ತು ಅವರು ಇದನ್ನೆಲ್ಲಾ ಸಾಧಿಸಿದ ರೀತಿಯೂ ಅತಿ ರೋಚಕವಾಗಿದ್ದು , ಅವರ ಜೀವನ ಚರಿತ್ರೆ ಯಲ್ಲಿ ದಾಖಲಾಗಿದೆ.
'ರಾಘವೇಂದ್ರ' ಅವರು ಹೊನ್ನಾಳಿ ಸಮೀಪದ ಚಿರುಡೋಣಿ ಎಂಬ ಊರಿನಲ್ಲಿ , ನಾಡಿಗ ರಾಮರಾಯ ಮತ್ತು ಸಾವಿತ್ರಮ್ಮ ದಂಪತಿಗಳ ಎರಡನೆ ಮಗುವಾಗಿ ಜನಿಸಿದರು. ಆದರೆ ಮೊದಲನೆ ಮಗು ಬೇಗ ತೀರಿಹೋಗಿದ್ದರಿಂದ ಇವರೆ ಕುಟುಂಬದ ಹಿರಿಯ ಪುತ್ರ ಎನಿಸಿದರು. ಇವರಿಗೆ
'ರಾಘವೇಂದ್ರ' ಎಂದು ಹೆಸರಿಡಲು ಕಾರಣವೆಂದರೆ , ಯೋಗಾಯೋಗವೆಂಬಂತೆ ಶೃಂಗೇರಿ ಪೀಠದ ಭಕ್ತರಾಗಿದ್ದ ರಾಮರಾಯರ ಮನೆಯಲ್ಲಿ ಒಮ್ಮೆ ಮಂತ್ರಾಲಯದ ಆಗಿನ ಪೀಠಾಧಿಪತಿಗಳಾಗಿದ್ದ, ಶ್ರೀ ಶ್ರೀ ಸುಶೀಲೇಂದ್ರ ತೀರ್ಥಂಗಳು ವಾಸ್ತವ್ಯ ಹೂಡುವ ಸನ್ನಿವೇಶ ಪ್ರಾಪ್ತವಾಗಿದ್ದಾಗ, ತೀರ್ಥಂಗಳು ರಾಮರಾಯ ದಂಪತಿಗಳಿಗೆ ಆಶೀರ್ವದಿಸುತ್ತಾ, 'ನಿಮಗೆ ಮುಂದೆ ಒಬ್ಬ ಪುತ್ರ ಜನಿಸುತ್ತಾನೆ, ಅವನಿಗೆ ರಾಘವೇಂದ್ರ ಎಂದು ನಾಮಕರಣ ಮಾಡಿ, ಮತ್ತು ಈ ತಾಯಿತವನ್ನು ಅವನ ಕೊರಳಿಗೆ ಕಟ್ಟಿ, ಅವನಿಂದ ಲೋಕ ಕಲ್ಯಾಣ ವಾಗುತ್ತದೆ' ಎಂದು ನೀಡಿದ್ದ ಆದೇಶವೇ ಆಗಿತ್ತು.
ನಂತರ. ರಾಮರಾಯರು ಬಸವಾ ಪಟ್ಟಣಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಶ್ಯಾನುಭೋಗ ವೃತ್ತಿ ಮುಂದುವರಿಸಿದರು. ರಾಘವೇಂದ್ರ ಹೊನ್ನಾಳಿ, ತೀರ್ಥಹಳ್ಳಿಗಳಲ್ಲಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದರು. ಪ್ರೌಢಶಾಲಾ ವಿದ್ಯಾರ್ಥಿ ಆಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಸೆರೆವಾಸವನ್ನೂ ಅನುಭವಿಸಿದರು. ಸೆರೆಮನೆಯಿಂದ ವಾಪಸು ಬಂದ ಮೇಲೆ ಪ್ರೌಢಶಾಲಾ ವಿದ್ಯಾಭ್ಯಾಸ ಮುಂದುವರಿಸಿ , ಎಸ್.ಎಸ್.ಎಲ್.ಸಿ. ತರಗತಿಯಲ್ಲಿ ಶಿವಮೊಗ್ಗ ಜಿಲ್ಲೆಗೇ ಪ್ರಥಮ ಸ್ಥಾನಗಳಿಸಿ ತೇರ್ಗಡೆಯಾದರು. ಆದರೆ ಮನೆಯಲ್ಲಿ ತಂದೆಗೆ ಅನಾರೋಗ್ಯ, ಹಾಗೂ ಬಡತನವಿದ್ದ ಕಾರಣಗಳಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ಮನೆಗೆ ವಾಪಸು ಬಂದು ತಂದೆಯ ಕೆಲಸಗಳಿಗೆ ನೆರವಾದರು.
ಬಡತನದ ಕಾರಣಕ್ಕೆ ರಾಘವೇಂದ್ರರು ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡಿ ನಷ್ಟ ಅನುಭವಿಸಿ ವ್ಯಾಪಾರ ಕೈಬಿಟ್ಟರು.
ಅದೇ ಸಮಯದಲ್ಲಿ ಪ್ರಜಾವಾಣಿ ದಿನ ಪತ್ರಿಕೆ ಪ್ರಾರಂಭವಾಗಿದ್ದು , ಚನ್ನಗಿರಿ ತಾಲೂಕಿಗೆ ಒಬ್ಬ ಪ್ರತಿನಿಧಿ ಆಯ್ಕೆ ನಡೆದಿತ್ತು. ಇವರು ಆಯ್ಕೆಗೊಂಡರು.
ಒಮ್ಮೆ ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದಾಗ, ಪಂಡಿತನಂತಿದ್ದ ಅಪರಿಚಿತನೊಬ್ಬ ಇವರನ್ನು ತಡವಿ, ಇವರಿಗೆ ಮುಂದೆ ಒದಗಲಿರುವ ವಿವಾಹ, ಕಂಟಕಗಳು, ಹಾಗೂ ಮಾರಣಾಂತಿಕ ಕಾಯಿಲೆಗಳ ಬಗ್ಗೆ ತಿಳಿಸಿ ಹೋಗಿ ಬಿಟ್ಟನಂತೆ. !
ತಂದೆಯವರಿಗೆ ವಯಸ್ಸೂ, ಅನಾರೋಗ್ಯವೂ ಹೆಚ್ಚುತ್ತಿದ್ದರಿಂದ , ಇವರಿಗೆ
21 ನೆ ವಯಸ್ಸಿಗೇ , ಬಸವಾ ಪಟ್ಟಣದ ಶ್ರೀ ವೆಂಕಟಗಿರಿ ದೀಕ್ಷಿತರ ಮಗಳು ಲಲಿತಮ್ಮನವರೊಡನೆ ವಿವಾಹ ವಾಯಿತು. ನಂತರ, ತಂದೆ ತೀರಿ ಹೋಗಿದ್ದರಿಂದ ಶ್ಯಾನುಭೋಗ ವೃತ್ತಿಯೂ, ದೊಡ್ಡ ಕುಟುಂಬದ ಜವಾಬ್ದಾರಿಯೂ ಹೆಗಲಿಗೆ ಬಂದವು. ನಂತರ ಸರ್ಪ, ಅಗ್ನಿ ಕಂಟಕಗಳೂ ನಡೆದು ಬಚಾವಾದರು. ಮುಂದೆ ಆ ಅಪರಿಚಿತನ ಭವಿಷ್ಯವಾಣಿಯಂತೆ, 1964ರಲ್ಲಿ , ಇವರ ಮೂವತ್ತೈದನೆ ವಯಸ್ಸಿನಲ್ಲಿ , ಇವರಿಗೆ ಪಾರ್ಶ್ವ ವಾಯು ಬಡಿದು, ನಡೆದಾಡದಂತಾದರು. ಅಷ್ಟರಲ್ಲಿ ಆಗಲೇ ಇವರಿಗೆ ಎರಡು ಗಂಡು ಮಕ್ಕಳೂ , ಎರಡು ಹೆಣ್ಣು ಮಕ್ಕಳೂ ಆಗಿದ್ದರು.
ಇವರಿಗೆ ಆಪ್ತರಾಗಿದ್ದ ವೈದ್ಯರು, ದೊಡ್ಡ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಸಲಹೆ ಮಾಡಿದರೂ, ಆರ್ಥಿಕ ಪರಿಸ್ಥಿತಿ, ಹಾಗೂ ಭವಿಷ್ಯ ವಾಣಿಯಂತೆ ಮರಣ ನಿಶ್ಚಿತ ಎಂಬ ಭಾವನೆಯಿಂದ ನಿರಾಕರಿಸಿ ಮನೆಯಲ್ಲೇ ಉಳಿದರು. ಕುಟುಂಬದ ಪರಿಸ್ಥಿತಿ, ತಮ್ಮ ಪರಿಸ್ಥಿತಿ ಎಲ್ಲಾ ನೆನೆದು ಕಂಗಾಲಾಗಿ ಊಟ ಸೇವಿಸುವುದನ್ನೂ ಬಿಟ್ಟರು. ಮನೆ ಮಂದಿಯೆಲ್ಲಾ ಗೋಗರೆದರೂ ಕೇಳದೆ ಇದ್ದಾಗ ಮನೆಯವರೂ ಊಟ ಬಿಟ್ಟರು.
ಕೊನೆಗೆ ಹಿರಿಯರ ಬುದ್ಧಿವಾದದ ಮಾತಿಗೆ ಸೋತು , ಹಣ್ಣಿನ ರಸ ಸೇವಿಸಲು ಪ್ರಾರಂಭಿಸಿದರು. ಹೀಗೇ ನಲವತ್ತೈದು ದಿನಗಳ ಕಾಲ ದೂಡಿ, ಮರಣವನ್ಬು ಎದುರು ನೋಡುತ್ತಿದ್ದರು.
ಆಗ, 1964 ರಲ್ಲಿ ಯುಗಾದಿ ಹಬ್ಬ ಬಂತು. ಊರೆಲ್ಲೆಲ್ಲಾ ಸಂಭ್ರಮ ಸಡಗರ.
ಮನೆಯಲ್ಲಿ ಸುಣ್ಣ ಬಣ್ಣ ಕಾರ್ಯಗಳು. ಯುಗಾದಿ ಹಿಂದಿನ ದಿನ ಸಂಜೆ, ದೇವರ ಮನೆಯಲ್ಲಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಫೋಟೋ ಸ್ವಲ್ಪ ಕಳಚಿಕೊಂಡಿತ್ತು. ಇವರ ತಾಯಿ ಅದನ್ನು ಈಚೆ ತಂದು ಇವರು ಮಲಗಿರುವ ಎದುರಿನ ಗೋಡೆಯ ಬಳಿ ಇರಿಸುವಾಗ, ಇವರು ಅದನ್ನು ತಮ್ಮ ಬಳಿ ತರಲು ಸಂಜ್ಞೆ ಮಾಡಿ ತಿಳಿಸಿದರು. ಅದನ್ನು ನೋಡುತ್ತಾ, ನಾಳಿನ ಯುಗಾದಿಯಂದು ನಾನು ಪೂಜಿಸಲು ಸಾಧ್ತವಿಲ್ಲ, ನನ್ನ ರೋಗದಿಂದ ಆ ಸೌಭಾಗ್ಯ ಕಳೆದುಕೊಂಡಿದ್ದೇನೆ ಎಂಬ ಭಾವನೆ ಉಕ್ಕಿ ದುಃಖ ಉಮ್ಮಳಿಸಿತು. ಅವರ ತಾಯಿ ಅವರನ್ನು ಸಮಾಧಾನೊಡಿಸುತ್ತಾ ,
'ಶ್ರೀ ರಾಯರ ಆಶೀರ್ವಾದಿಂದ ಜನ್ಮ ತಾಳಿರುವ ನಿನಗೆ ಶ್ರೀ ರಾಯರ ಸೇವೆ ಮಾಡುವ ಭಾಗ್ಯ' ಬರುವುದಾಗಿ ಹೇಳಿ ಧೈರ್ಯ ತುಂಬಿದರು. ನಂತರ ಶ್ರೀ ರಾಯರ ಧ್ಯಾನದಲ್ಲಿ ತಲ್ಲೀನರಾಗಿ ನಿದ್ದೆ ಹೋದರು.
ಮಧ್ಯ ರಾತ್ರಿ ಮುಗಿದು ಮಂಜಾವು ಮೂಡುವ ಪೂರ್ವದ ಸಮಯ, ಬ್ರಾಹ್ಮೀ ಮುಹೂರ್ತ. ಆಗ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು
"ಸಶರೀರ " ದರ್ಶನವನ್ನು, ರೋಗ ಪೀಡಿತರಾಗಿ ಮಲಗಿದ್ದ ರಾಘಣ್ಣನವರಿಗೆ ನೀಡಿದರು. ರಾಘಣ್ಣನವರ ಮೈ ಸವರಿ ,
"ಏಳು ಮೇಲೇಳು, ನಿನ್ನಿಂದ ಲೋಕ ಕಲ್ತಾಣವಾಗಬೇಕಿದೆ" ಎಂದು ಹೇಳಿ ಆಶೀರ್ವದಿಸಿ, ಕೈಗೆ ಮಂತ್ರಾಕ್ಷತೆಯನಿತ್ತು ದೇವರ ಮನೆ ಕಡೆ ನಡೆದರು.ನಈ ಅನಿರೀಕ್ಷಿತ ಅಪೂರ್ವ ಪುಣ್ಯ ಪ್ರದ ಘಟನೆಯಿಂದ ರಾಘಣ್ಣನವರು ರೋಮಾಂಚನಗೊಂಡರು. ಕಣ್ಣುಗಳಲ್ಲಿ ಅಶ್ರುಧಾರೆ ಸುರಿಯುತ್ತಿತ್ತು. ದೇಹ ವಕ್ರತೆ ಕಳೆದುಕೊಂಡು ಚೈತನ್ಯ ಪಡೆದಿತ್ತು . ಎದ್ದು ಓಡಾಡಲು ಸಾಧ್ಯವಿಲ್ಲದಿದ್ದ ರಾಘಣ್ಣನವರು ತಮಗೆ ಅರಿವಿಲ್ಲದೆಯೇ ಸಹಜ ಸ್ಥಿತಿಯಲ್ಲಿ ನಡೆದುಕೊಂಡೇ ದೇವರ ಮನೆ ಕಡೆ ನಡೆದರು.! ಮತ್ತು ಒಮ್ಮೆಲೇ ' ರಾಯರು ಬಂದಾರೆ ಬರ್ರೋ' ಎಂದು ಕೂಗಿದರು.
ಅವರ ಕೂಗು ಮನೆಯವರನ್ನೆಲ್ಲಾ ಎಬ್ಬಿಸಿತು. ಬಂದು ನೋಡಿದ ಎಲ್ಲರಿಗೂ ಅಚ್ಚರಿ ತುಂಬಿತ್ತು. ಇವರ ಕೈಯಲ್ಲಿದ್ದ ಮಂತ್ರಾಕ್ಷತೆ ಶ್ರೀ ಗುರು ರಾಯರು ದರ್ಶನವಿತ್ತದ್ದಕ್ಕೆ ಸಾಕ್ಷಿಯಾಗಿತ್ತು. ಎಲ್ಲರೂ ಇವರಿಗೆ ನಮಸ್ಕರಿಸಿದರು. ದೇವರ ಮಂಟಪಕ್ಕೆ ಮಂಗಳಾರತಿ ಬೆಳಗಿದರು.
ಮಾರನೆ ದಿನ ಬೆಳಿಗ್ಗೆ, ಯುಗಾದಿ ಹಬ್ಬದಂದು, ರಾಘವೇಂದ್ರರು ಯಾರ ಸಹಾಯವೂ ಇಲ್ಲದೆ, ಊರಿನ ಗ್ರಾಮ ದೇವತೆ ದುರ್ಗಾ ದೇವಿಯ ಬೆಟ್ಟವನ್ನು ಹತ್ತಿ ದೇವಿಗೆ ಪೂಜೆ ಸಲ್ಲಿಸಿದರು. !! ಈ ಪವಾಡ ಸದೃಶ ಘಟನೆ ನಡೆದುದನ್ನು ಕೇಳಿದ ವೈದ್ಯರು ಕೂಡಲೇ ಬಂದು ರಾಘವೇಂದ್ರ ಅವರನ್ನು ಪರೀಕ್ಷಿಸಿದರು. ಮತ್ತು ಜಿಲ್ಲೆಯಲ್ಲಿ ಲಭ್ಯವಿಸ್ದ ವೈದ್ಯರನ್ನು ಸಂಪರ್ಕಿಸಿ ಆಮಂತ್ರಿಸಿ, ಈ ಅದ್ಭುತ ಘಟನೆಯನ್ನು ತೋರಿಸಿದರು. ಇದು 'ಕಾರಣ ಕೊಡಲಾಗದ ಮಹಾ ಪವಾಡ' ಎಂದು ಅವರೆಲ್ಲ ಅಭಿಪ್ರಾಯಪಟ್ಟು ಆಶ್ಚರ್ಯ ವ್ಯಕ್ತಗೊಳಿಸುದರು.
ಈ ಅಸಾಧಾರಾಣ ಪವಾಡ ಸದೃಶ ಘಟನೆ ಯಿಂದ ಸಂಪೂರ್ಣ ಬದಲಾಗಿ ಬಿಟ್ಟ ರಾಘವೇಂದ್ರ ರು ಸಾಂಸಾರಕ ಜೀವನ ಬಿಟ್ಟು ಸಂನ್ಯಾಸ ತೆಗಧುಕೊಳ್ಳುವ ಇಚ್ಛೆ ಹೊಂದಿದರು.
ಆದರೆ ಈ ಘಟನೆ ನಂತರ ಮಂತ್ರಾಲಯ ಕ್ಕೆ ತೆರಳಿ, ಆಗಿನ ಪೀಠಾಧಿಪತಿಗಳಾಗಿದ್ದ , ಶ್ರೀ ಶ್ರೀ ಸುಯಮೀಂದ್ರ ತೀರ್ಥಂಗಳೊಡನೆ, ದೀರ್ಘ ಸಮಾಲೋಚನೆ ಮಾಡಿದಾಗ , ಮಹಾಸ್ವಾಮಿಗಳು "ನನಗೆ ಆಜ್ಞೆ ಆಗಿರುವುದು ನಿಮ್ಮನ್ನು ಲೋಕ ಕಲ್ಯಾಣ ಹಾಗೂ ಶ್ರೀ ರಾಘವೇಂದ್ರ ನಾಮ ಪ್ರಚಾರಗಳಿಗೆ ಹಚ್ಚಿರಿ ಎಂದು. ಇದಕ್ಕೆ ಸಂನ್ಯಾಸದ ಅವಶ್ಯಕತೆ ಇಲ್ಲ. ಸಂನ್ಯಾಸ ದೀಕ್ಷೆಯ ವಿಧಿ ವಿಧಾನಗಳಿಂದ ಜನ ಸಂಪರ್ಕಕ್ಕೆ ಅವಕಾಶ ಆಗಲಾರದು. ನಿಮ್ಮ ಸ್ವಗ್ರಾಮಕ್ಕೆ ತೆರಳಿ ಗುರು ರಾಯರ ಸಂದೇಶ ಬಿತ್ತುವ ಕಾರ್ಯ ಮಾಡಿರಿ" ಎಂದು ಸೂಚಿಸಿದರು. ಶ್ರೀಗಳ ಆಜ್ಞೆಯನ್ನು ಶಿರಸಾವಹಿಸಿ ರಾಘವೇಂದ್ರ ಅವರು ಬಸವಾ ಪಟ್ಟಣಕ್ಕೆ ವಾಪಸಾದರು.
ಬಂದ ಮೇಲೆ, ಶ್ರೀ ಗುರು ರಾಯರ ಸಶರೀರ ದರ್ಶನ ಕಾಲಕ್ಕೆ ಅನುಗ್ರಹೀತವಾಗಿದ್ದ ಮಂತ್ರಾಕ್ಷತೆಗಳಲ್ಲಿ ಅರ್ಧದಷ್ಟನ್ನು ಸಂಪುಷ್ಟದಲ್ಲಿಟ್ಟು ಉಳಿದ ಅರ್ಧದಷ್ಟನ್ನು ಪ್ರತಿವರ್ಷ ದರ್ಶನದ ದಿನಾಚರಣೆಯ ಸಂದರ್ಭದಲ್ಲಿ, ಭಕ್ತರಿಂದ
'ಶ್ರೀ ರಾಘವೇಂದ್ರಾಯ ನಮಃ' ಎಂಬ ಮಂತ್ರೋಚ್ಚಾರಣೆಯನ್ನು ಮಾಡಿಸಿ , ಮಂತ್ರಾಕ್ಷತೆಗಳನ್ನು ತಯಾರಿಸಿ ವೃದ್ಧಿಸುವರು. ಮತ್ತು ಇದೇ ಅಕ್ಷತೆಗಳನ್ನು ನಾನಾ ಪ್ರದೇಶಗಳಲ್ಲಿಯ ಅಪೇಕ್ಷಿತ ಭಕ್ತರ ಕಷ್ಟ ಕಾರ್ಪಣ್ಯ, ರೋಗ ರುಜಿನಗಳ, ಇನ್ನಿತರ ಸಮಸ್ಯೆ ಗಳ ಪರಿಹಾರಕ್ಕಾಗಿ ವಿನಿಯೋಗಿಸುತ್ತಾ ಬಂದರು. ( ಹೀಗೆ ಈ ಕಾರ್ಯವನ್ನು ತಮ್ಮ ಜೀವನ ಪರ್ಯಂತ ಮುಂದುವರಿಸಿ, ವಿತರಿಸಿದ ಮಂತ್ರಾಕ್ಷತೆಗಳ ಪ್ರಮಾಣ ಅರವತ್ತೆಂಟು ಕ್ವಿಂಟಲ್ ಗಳಿಗೂ ಹೆಚ್ಚು.)
ಮುಂದೆ, 1968 ರ ಮೇ ತಿಂಗಳಲ್ಲಿ , ಪ್ರಸಿದ್ಧ ತಪಸ್ವಿಗಳಾಗಿದ್ದ ಹರಿದ್ವಾರದ ಶ್ರೀ ಯೋಗಿರಾಜ ಸ್ವಾಮಿರಾಮ ಅವರು ಬೆಳಗಾವಿಯಲ್ಲಿ ಮೊಕ್ಕಾಂ ಮಾಡಿದ್ದಾಗ, ಅವರ ಆಜ್ಞಾನುಸಾರ, ಶ್ರೀ ರಾಘವೇಂದ್ರರನ್ನು ಬೆಳಗಾವಿಗೆ ಕರೆಸಿಕೊಂಡು, ಶ್ರೀ ಸ್ವಾಮಿರಾಮ ಅವರ ಭೇಟಿಗೆ ಅವಕಾಶ ಕಲ್ಲಿಸಲಾಯಿತು.
ಅದೊಂದು ಶನಿವಾರ . ಸಾಯಂಕಾಲ ಸ್ವಾಮಿರಾಮರ ಸತ್ಸಂಗ ರಾತ್ರಿ ಎಂಟು ಗಂಟೆಗೆ ಮುಗಿದು, ಎಲ್ಲರೂ ತೆರಳಿದರು.
ಈಗ ಶ್ರೀ ಸ್ವಾಮಿರಾಮ ಮತ್ತು ಶ್ರೀ ರಾಘವೇಂದ್ರ ಇಬ್ಬರೇ ಉಳಿದರು. ಇಬ್ಬರ ನಡುವಿನ ಮಾತುಕತೆ ನಂತರ ಮೌನದಲ್ಲಿ ಲೀನವಾಯ್ತು. ಸ್ವಾಮಿರಾಮ ಅವರು ತಮ್ನ ತಪಸ್ಸಿನ ತೇಜೋರಾಶಿಯನ್ನು ರಾಘವೇಂದ್ರ ಅವರಿಗೆ ಧಾರೆ ಎರೆದು, "ಆಪ್ ಕೊ ಹಮ್ ರಾಘವೇಂದ್ರ ಗುರೂಜಿ, ಐಸಾ ನಾಮಕರಣ ಕರತೇ ಹೈ", ಎಂದು ಆಶೀರ್ವದಿಸಿದರು.
ಅಂದಿನಿಂದ ನಾಡಿಗೆ ರಾಘವೇಂದ್ರರು ಶ್ರೀ ರಾಘವೇಂದ್ರ ಗುರೂಜಿ ಆಗಿ ಲೋಕೋದ್ಧಾರದ ಕಾರ್ಯಗಳಿಗಾಗಿ ಸಜ್ಜಾದರು.
ಹೀಗೆ ಅನುಗ್ರಹೀತರಾಗಿ, ದೀಕ್ಷೆ ಪಡೆದ ಮೇಲೆ , ಶ್ರೀ ಗುರೂಜಿಯವರು, ಅಷ್ಟೇನೂ ವಿದ್ಯಾವಂತರಾಗಿಲ್ಲದಿದ್ದರೂ, ಸಂಸ್ಕೃತ, ಶಾಸ್ತ್ರ ಪಾರಂಗತರಾಗಿಲ್ಲದೆ ಇದ್ದರೂ, ದೇಶಾದ್ಯಂತ ಸಂಚರಿಸಿ, ವಿದ್ವಜ್ಜನರ, ಸ್ವಾಮಿಗಳ, ಗುರುಗಳ ಸಭೆಗಳಲ್ಲಿ ಗಂಟೆ ಗಟ್ಟಲೆ ಅಧಿಕೃತವಾಗಿ ಧಾರ್ಮಿಕ ಜಿಜ್ಞಾಸುಗಳನ್ನು ತರ್ಕಿಸುವುದು, ಸ್ಫುಟವಾಣಿಯಿಂದ ಪ್ರವಚನ ಮಾಡುವುದು, ಕಂಡು ಅವರನ್ನು ಬಲ್ಲ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅವರ ಪ್ರವಚನಗಳಲ್ಲಿ, ಪ್ರಪಂಚ - ಪರಮಾತ್ಮ, ವಿದ್ಯೆ - ಬುದ್ಧಿ - ಜ್ಞಾನ, ದೇಹ ತತ್ತ್ವ - ಮರಣ - ಮುಕ್ತಿ, ವಿಜ್ಞನ - ವೇದಾಂತ, ಭಾವ ಸಮಷ್ಟಿ : ಸಮನ್ವಯ ದೃಷ್ಟಿ, ಮುಂತಾಗಿ ಹಲವು ಅಧ್ಯಾತ್ಮಿಕ, ಧಾರ್ಮಿಕ, ತಾತ್ವಿಕ ವಿಷಯಗಳನ್ನು ಸ್ಪಷ್ಟವಾಗಿ ಅಸ್ಖಲಿತ ವಾಣಿಯಿಂದ ಜನರಿಗೆ ತಿಳಿಯಲು ಸರಳ ಉದಾಹರಣೆಗಳ ಮೂಲಕ ಹೇಳುತ್ತಿದ್ದರು.
ಜನ ಸಂಪರ್ಕಕ್ಕಾಗಿ ಅವಿರತ ಸಂಚಾರ ಮಾಡಲು ಪ್ರಾರಂಭಿಸಿದರು. ಸಂಚಾರ, ಪ್ರವಚನ ಗಳು ತುಂಬಾ ಯೋಜನಾ ಬದ್ಧವಾಗಿ ಶಿಸ್ತು ಬದ್ಧವಾಗಿ ಇರುತ್ತಿದ್ದವು.
ಸಂಚಾರ ಹೋದ ಕಡೆಯಲ್ಲೆಲ್ಲಾ ಪ್ರವಚನ, ಸಂದರ್ಶನ ಗಳ ಜೊತೆಗೇ, ಮಂತ್ರಾಕ್ಷತೆ ನೀಡುತ್ತಾ, ಶ್ರೀ ರಾಘವೇಂದ್ರಾಯ ನಮಃ ಜಪದ ಮಹಿಮೆ ತಿಳಿಸುತ್ತಿದ್ದರು. ಜಪವನ್ನು ಲಿಖಿತ ರೂಪದಲ್ಲಿ ಮಾಡಲು ಸ್ವ ಹಸ್ರಾಕ್ಷರ ಹಾಕಿ ನೋಟ್ ಬುಕ್‍ಗಳನ್ನು ನೀಡುತ್ತಿದ್ದರು.
ಅಲ್ಲದೆ, 1977 ರ ವೇಳೆಗೆ, ಬಸವಾ ಪಟ್ಟಣದಲ್ಲಿ ನಡೆಸಲಿರುವ ಶತಕೋಟಿ ಜಪ ಯಜ್ಞ, ಯಾಗ, ಭಾರತೀಯ ಧರ್ಮ ಸಮ್ಮೇಳನಗಳಿಗೆ ಜನರನ್ನು ಆಹ್ವಾನಿಸುತ್ತಿದ್ದರು.
ಹೀಗೆ ನಾಲ್ಕು ಐದು ವರ್ಷಗಳ ಕಾಲ ಲಕ್ಷಾಂತರ ಮೈಲುಗಳಷ್ಟು ಸಂಚಾರ ಮಾಡಿ , ಕೋಟ್ಯಂತರ ಜನರನ್ನು ಸಂಪರ್ಕಿಸಿದ್ದರು. ಎಲ್ಲ ಬಗೆಯ ಎಲ್ಲ ಮತಗಳ ಜನರನ್ನೂ ಸಂಪರ್ಕಿಸಿದ್ದರು. ಹೀಗಾಗಿ ಶ್ರೀ ಗುರೂಜಿಯವರು ಕೋಟ್ಯಂತರ ಭಕ್ತರನ್ನೂ , ಅಭಿಮಾನಿಗಳನ್ನೂ, ಹೊಂದಿದ್ದರು.
ಅಲ್ಲದೆ ಭಕ್ತರಿಂದ ನಿತ್ಯ ನೂರಾರು ಪತ್ರಗಳು ಬರುತ್ತಿದ್ದವು. ಅವುಗಳಿಗೆ ತಪ್ಪದೆ ತಕ್ಷಣ ಉತ್ತರಿಸುತ್ತಿದ್ದರು. ಅವೆಲ್ಲಾ ಹೆಚ್ಚಾಗಿ ಪರಿಹಾರ ಬಯಸಿದ ಭಕ್ತರ ಪತ್ರಗಳೇ ಆಗಿದ್ದು, ಅವಕ್ಕೆ ಸೂಕ್ತವಾಗಿ ಪರಿಹಾರ ಸೂಚಿಸಿ ಉತ್ತರಿಸುತ್ತಿದ್ದರು. (ಹೀಗೆ ಅವರ ಜೀವನ ಪರ್ಯಂತ ನಡೆಸಿದ ಪತ್ರ ವ್ಯವಹಾರದಲ್ಲಿ ಪತ್ರಗಳ ಸಂಖ್ಯೆ ನಲವತ್ತೇಳು ಲಕ್ಷದಷ್ಟಾಗಿತ್ತು. )
ಹಾಗಾಗಿಯೇ 1977 ರಲ್ಲಿ ಬಸವಾ ಪಟ್ಟಣದಲ್ಲಿ ನಡೆಸಿದ ಮಹಾಯಾಗ, ಶತಕೋಟಿ ಜಪ ಯಜ್ಞ, ಭಾರತೀಯ ಧರ್ಮ ಸಮ್ಮೇಳನಗಳಿಗೆ ಲಕ್ಷಾಂತರ ಜನ ಆಗಮಿಸಿದ್ದರು; ವಿವಿಧ ಧರ್ಮಗಳ ವಿದ್ವಾಂಸರೂ, ಗುರುಗಳೂ ಆಗಮಿಸಿ ಆಯಾ ಧರ್ಮಗಳ ಸಂದೇಶವನ್ನು ಜನರಿಗೆ ತಿಳಿಸಿದರು. ಸರ್ವ ಧರ್ಮ ಸಮನ್ವಯದ ವಿಚಾರವನ್ನು ಶ್ರೀ ಗುರೂಜಿಯವರು ಜನರಿಗೆ ತಿಳಿಸಿ, ಎಲ್ಲಾ ಧರ್ಮಗಳ ಸಾರ ಒಂದೇ, ಎಲ್ಲ ಧರ್ಮಗಳನ್ನೂ ಸ್ನೇಹ ಭಾವದಿಂದ ಕಾಣಿರಿ. ನಿಮ್ಮ ನಿಮ್ಮ ಧರ್ಮಗಳನ್ನು ನಿಷ್ಠೆಯಿಂದ ಆಚರಿಸಿಕೊಳ್ಳಿ ಎಂದು ಹೇಳುತ್ತಿದ್ದರು.
ಈ ಸಮ್ಮೇಳನ ಲಕ್ಷಾಂತರ ಜನ ಸೇರಿದ್ದರೂ ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆದು ಅಭೂತ ಪೂರ್ವ ಎನಿಸಿತು. ಈ ಸಮ್ಮೇಳನದ ವಿವಿಧ ಕಾರ್ಯಗಳಿಗೆ, ಜನರ ಸೌಕರ್ಯಕ್ಕಾಗಿ ನಿರ್ಮಿಸಿದ್ದ ಅಂಗಡಿ ಮುಂಗಟ್ಟು, ವಾಹನ ನಿಲ್ದಾಣ, ಮೂಲಭೂತ ಸೌಕರ್ಯಗಳಿಗಾಗಿ, ಸುಮಾರು ಆರು ನೂರು ಎಕರೆಗಳಷ್ಟು ವಿಸ್ತಾರ ಪ್ರದೇಶವನ್ನು, ಗುಡ್ದದ ತಪ್ಪಲಲ್ಲಿ ಅಚ್ಚುಕಟ್ಟು ಮಾಡಲಾಗಿತ್ತು.
ಮುಂದೆ ಇದೇ ಜಾಗದಲ್ಲಿ, ಶ್ರೀ ಗುರೂಜಿಯವರ ಕನಸಿನ ಯೋಜನೆಗಳಂತೆ, ವಿವಿಧ ದೇವ ಮಂದಿರಗಳೂ, ಮಂಟಪಗಳೂ, ಸ್ನಾರಕಗಳೂ, ವಸತಿ ಗೃಹಗಳೂ, ಮೂಲಭೂತ ಸೌಕರ್ಯಗಳೂ, ಗಿಡಮರಗಳೂ ತಲೆ ಎತ್ತಿದವು. ಅದಕ್ಕಾಗಿ ಗುರೂಜಿಯವರು ಈ ಪ್ರದೇಶದಲ್ಲಿ ಐವತ್ತು ಎಕರೆ ಜಮೀನು ಕೊಂಡಿದ್ದರು. ಇಷ್ಟೆಲ್ಲ ಶ್ರೀ ಗುರೂಜಿಯವರಿಗೆ ಆಯಾಚಿತವಾಗಿ ಭಕ್ತರೇ ಇಚ್ಛೆಪಟ್ಟು ಭಕ್ತಿಯಿಂದ ನೀಡಿದ್ದ ಸಹಾಯ ಸಹಕಾರಗಳಿಂದ ಸಾಧ್ಯವಾಯಿತು. ಇವು ಲಕ್ಷಾಂತರ ಜನ ಭಕ್ತರು ಗುರೂಜಿಯವರ ಬಗ್ಗೆ ಇಟ್ಟಿದ್ದ ಭಕ್ತಿ, ಪ್ರೀತಿ, ಅಭಿಮಾನಗಳ ದ್ಯೋತಕವಾಗಿವೆ .
1977 ರ ನಂತರ ಪ್ರತಿ ವರ್ಷ ವಿವಿಧ ಸ್ಥಳಗಳಲ್ಲಿ ಭಾರತೀಯ ಧರ್ಮ ಸಮ್ಮೇಳನ ನಡೆಸುತ್ತಾ ಸರ್ವ ಧರ್ಮ ಸಮನ್ವಯ ಸಂದೇಶ ಸಾರಲಾಗುತ್ತಿತ್ತು. ಅದಕ್ಕೆ ಶ್ರೀ ಗುರೂಜಿಯವರಿಗೆ 'ಸರ್ವ ಧರ್ಮ ಸಮನ್ವಯಾಚಾರ್ಯ' ಎಂಬ ಬಿರುದನ್ನಿತ್ತು ಜನ ಗೌರವಿಸಿದ್ದಾರೆ.
ಈ ಧರ್ಮ ಸಮ್ಮೇಳನಗಳ ವೈಶಿಷ್ಟ್ಯಗಳಲ್ಲಿ ಒಂದೆಂದರೆ 'ಧರ್ಮ ಜ್ಯೋತಿ ಪ್ರದಾನ ಸಮಾರಂಭ'. ಇದು ನಡೆಯುವುದು ಸಂಜೆಯಾದ ಮೇಲೆ. ಇದರಲ್ಲಿ ಮೂರು ಭಾಗಗಳಿವೆ. ಮೊದಲನೆಯದರಲ್ಲಿ, ಬಂದಿರುವ ಜನರೆಲ್ಲರಿಗೂ ಒಂದೊಂದು ಮೇಣದ ಬತ್ತಿ ಕೊಡುತ್ತಾರೆ. ನಂತರ ವೇದಿಕೆ ಮೇಲೆ ಸಮ್ಮೇಳನದ ಪ್ರಾರಂಭಕ್ಕೆ ಹಚ್ಚಿದ್ದ ಜ್ಯೋತಿಯಿಂದ ಕಾರ್ಯಕರ್ತರು ತಂದು ಜನರಿಗೆ ತಲುಪಿಸುತ್ತಾರೆ. ಜನ ತಮ್ಮ ಮೇಣದ ಬತ್ತಿ ಗಳನ್ನು ಬೆಳಗಿಸುತ್ತಾರೆ. ಆಗ ವಿದ್ಯುದ್ದೀಪ ಆರಿಸಲಾಗುತ್ತದೆ.
ಎರಡನೆ ಭಾಗವಾಗಿ, ಮೇಣದ ಬತ್ತಿ ಹಿಡಿದ ಜನ ಎಲ್ಲರೂ ಶಾಂತವಾಗಿ ಎದ್ದು ನಿಂತು ಧರ್ಮ ಜ್ಯೋತಿ ಗೀತೆಯಲ್ಲಿ ಪಾಲ್ಗೊಳ್ಳುತ್ತಾರೆ.
ಮೂರನೆ ಭಾಗವಾಗಿ, ಶ್ರೀ ರಾಘವೇಂದ್ರ ಗುರೂಜಿಯವರು , ಸರ್ವ ಧರ್ಮಗಳನ್ನೂ ಸ್ನೇಹ ಭಾವದಿಂದ ಕಾಣುವ, ಸಹಬಾಳ್ವೆ, ಸೌಹಾರ್ಧತೆಗಳನ್ನು ಅಳವಡಿಸಿಕೊಳ್ಳುವ, ಪ್ರತಿಜ್ಞೆ ಬೋಧಿಸುವರು. ಎಲ್ಲರೂ ಅದನ್ನು ಪುನರುಚ್ಚಿಸುವರು.
ಇದೇ ಧರ್ಮ ಜ್ಯೋತಿ ಪ್ರದಾನ ಸಮಾರಂಭ. ಇದರಿಂದ ಸಮಾಜದಲ್ಲಿ ದೇಶದಲ್ಲಿ ಶಾಂತಿ ಸೌಹಾರ್ಧತೆ ಹೆಚ್ಚಲು ಸಹಾಯಕವಾಗುತ್ತದೆ
ಎಂಬ ನಿರೀಕ್ಷೆ ಇದೆ.
ಶ್ರೀ ಗುರೂಜಿ ಅವರು ಬಸವಾ ಪಟ್ಟಣದಿಂದ ಪುಣ್ಯ ಸ್ಥಳಕ್ಕೆ ಸ್ಥಳಾಂತರಗೊಂಡರು. ಆಗ ಶ್ರೀ ರಾಘವೇಂದ್ರ ಕೃಪಾಶ್ರಮವೂ ಜೊತೆಗೇ ಬಂತು. ಅಲ್ಲೆ ಶ್ರೀ ಗುರು ರಾಯರ ಚತುರ್ಮುಖ ವೃಂದಾವನವನ್ನು ಸ್ಥಾಪಿಸಲಾಗಿದೆ. ಹಾಗಾಗಿ ಪುಣ್ಯ ಸ್ಥಳವು 'ಚತುರ್ಥ ಮಂತ್ರಾಲಯ' ಎನಿಸಿಕೊಂಡಿದೆ.
ಆಶ್ರಮದ ಚಟುವಟಿಕೆಗಳು, ಗುರೂಜಿಯವರ ಚಟುವಟಿಕೆಗಳು, ಮೌಲ್ವಿಕ ವಿಚಾರಗಳು ಜನರನ್ನು ತಲುಪಲು ಆಶ್ರಮದ ಮುಖವಾಣಿಯಾಗಿ 'ಅನುಗ್ರಹ' ಮಾಸ ಪತ್ರಿಕೆಯ ಪ್ರಕಟಣೆ ಪ್ರಾರಂಭವಾಯಿತು. ಇದರ ಮುದ್ರಣಕ್ಕಾಗಿ ಒಂದು ಮುದ್ರಣಾಲಯವೂ ಇಲ್ಲೆ ಸ್ಥಾಪಿತವಾಯಿತು.
8-8 -1971 ರಂದು ಶ್ರೀ ರಾಯರ ವೃಂದಾವನ ಪ್ರವೇಶ ದಿನಾಚರಣೆ ಅಂಗವಾಗಿ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಪ್ರಾರಂಭಿಸಲಾಯಿತು. ಇದರಲ್ಲಿ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಿದ್ದು ಗ್ರಾಮೀಣ ಬಾಲರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ.
1989 ರಲ್ಲಿ ಶ್ರೀ ಗುರೂಜಿಯವರ ಷಷ್ಯ್ಟಬ್ದಿ ಶಾಂತಿ ಮಹೋತ್ಸವ ಜರುಗಿತು.
ಆಗ ಅವರಿಗೆ 'ಉತ್ಥಾನ ದರ್ಶನ' ಎಂಬ ಗೌರವ ಗ್ರಂಥವನ್ನು ಅರ್ಪಿಸಲಾಯಿತು.
ಇದರಲ್ಲಿ ಗುರೂಜಿಯವರ ಒಡನಾಡಿದ್ದವರು, ಅವರ ಬದುಕು ಸಾಧನೆಗಳ ಚೆನ್ನಾಗಿ ಬಲ್ಲವರು, ಲೇಖನ ಬರೆದಿದ್ದು, ಗುರೂಜಿಯವರ ಬಗ್ಗೆ ತಿಳಿದು ಕೊಳ್ಳಲು ತುಂಬಾ ಸಹಾಯಕವಾಗಿದೆ.
1996 ರಲ್ಲಿ ಅವರ ಸಹಧರ್ಮಿಣಿಯಾಗಿ ಅವರ ಬಾಳಿನ ಏಳು ಬೀಳುಗಳಲ್ಲಿ ಸಹಕರಿಸಿ, ಸ್ಪೂರ್ತಿ, ಧೈರ್ಯ ಸಹಕಾರ ನೀಡಿದ್ದ , ಆಶ್ರಮದ 'ಅಮ್ಮ' ಲಲಿತಮ್ಮನವರು ಸ್ವರ್ಗಸ್ಥರಾದರು .
ಇದು ಗುರೂಜಿಯವರಿಗೆ ದೊಡ್ಡ ಆಘಾತ ಉಂಟು ಮಾಡಿತು. ಮುಂದೆ ಗುರೂಜಿ ಅವರ ಆರೋಗ್ಯವೂ ಕೆಡಲಾರಂಭಿಸಿತು. ವಿಪರೀತ ಚಟುವಟಿಕೆ, ಕಾರ್ಯಭಾರಗಳು , ಮತ್ತು ಈ ಅಗಲಿಕೆಯ ನೋವು ಅವರನ್ನು ಹಣ್ಣು ಮಾಡಲು ಪ್ರಾರಂಭಿಸಿದವು .
1997ರಲ್ಲಿ ಶ್ರೀ ಗುರು ರಾಯರ ನಾಲ್ಕು ನೂರನೆ ಜಯಂತಿ ಉತ್ಸವ ಬಂತು ಇದನ್ನು ಒಂದು ವರ್ಷ ಪೂರಾ ನಡೆಸಲು ಗುರೂಜಿ ಯೋಜಿಸಿದರು. ಅದಕ್ಕಾಗಿ ದಿನಾಂಕ 15-3-1997 ರಿಂದ 4-3-1998 ರ ವರೆಗೆ ಎಂದು ನಿರ್ಧರಿಸಲಾಯಿತು. ಅಲ್ಲದೆ ಜನವರಿಯಲ್ಲಿ ಇಪ್ಪತ್ತೆರಡನೇ ಭಾರತೀಯ ಧರ್ಮ ಸಮ್ಮೇಳನವನ್ನೂ ಈ ಪುಣ್ಯ
ಸ್ಥಳದಲ್ಲೇ ನಡೆಸಲೂ ನಿರ್ಧರಿಸಲಾಯಿತು.
15-3-1997 ರಂದು ಶ್ರೀ ಪಯೋನಿಧಿ ತೀರ್ಥರಿಂದ ಉದ್ಘಾಟನೆಯೂ ಆಯಿತು.
ಆದರೆ ಅಕ್ಟೋಬರ್ ತಿಂಗಳಲ್ಲಿ, ನವರಾತ್ರಿ ಹಬ್ಬದ ರಜೆಗೆ ಆಶ್ರಮಕ್ಕೆ ಮಕ್ಕಳು ಸಂಸಾರದೊಂದಿಗೆ ಬಂದಿದ್ದರು.
( ಗಂಡು ಮಕ್ಕಳೆಲ್ಲಾ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿ ಇದ್ದರು , ಹೆಣ್ಣು ಮಕ್ಕಳೂ ಮದುವೆ ಆಗಿ ಒಳ್ಳೆ ಮನೆತನದಲ್ಲಿ ಇದ್ದರು. ಮೊಮ್ಮಕ್ಕಳೂ ಆಗಿ ಬಂದಿದ್ದರು.)
ಅಕ್ಟೋಬರ್ ಹದಿನೇ಼ಳನೆ ತಾರೀಖು ಶುಕ್ರವಾರ ಬೆಳಿಗ್ಗೆ ಎದ್ದು ತಮ್ಮ ದಿನಚರಿ ಮುಗಿಸಿ ಕಾಫಿ ಕುಡಿಯುತ್ತಾ ಮಕ್ಕಳು ಮೊಮ್ಮಕ್ಕಳ ಜೊತೆ ಸರಸವಾಗಿ ಮಾತಾಡುತ್ತಿರುವಾಗಲೇ ಯಾರಿಗೂ ಅರಿವಾಗದ ಹಾಗೆ ಇಹಲೋಕ ತ್ಯಜಿಸಿದ್ದರು.!!
ಗುರೂಜಿಯವರ ಅಂತ್ಯ ಸಂಸ್ಕಾರ ಸತ್ಯಗಿರಿ ಎಂದು ಕರೆಯುತ್ತಿದ್ದ ಭಾಗದ ಅವರ ನಿವಾಸದ ಹಿಂದುಗಡೆ ನಡೆಯಿತು.
ಬಂದಿದ್ದ ಬಂಧುಗಳೂ ಭಕ್ತರೂ ಆ ಜಾಗದಲ್ಲೆ, 'ಗುರೂಜಿ ಸಂಸ್ಕಾರ ಸ್ಮರಣ ಮಂಟ' ನಿರ್ಮಾಣ ಮಾಡಲು ಇಚ್ಛಿಸಿ , ಅದನ್ನು ನಿರ್ಮಾಣ ಮಾಡಿಸಿದ್ದಾರೆ.
ಆ ಮಂಟಪದಲ್ಲಿ ಗುರೂಜಿ ಉಪದೇಶಿಸುತ್ತಿದ್ದ ಆರು ಮೂಲ ತತ್ತ್ವ ಗಳನ್ನು ಸಾರುವ ಆರು ಸ್ತಂಭಗಳಿವೆ.
ಈಗ ಗುರೂಜಿಯವರಿಲ್ಲ. ಆದರೆ ಆ ಪುಣ್ಯ ಸ್ಥಳದ ಕಣಕಣದಲ್ಲೂ ಅವರ ದಿವ್ಯಾತ್ಮ ಅವ್ಯಕ್ತವಾಗಿ ಕೃಪೆದೋರುತ್ತಿದೆ.
ಶ್ರೀ ಗುರೂಜಿಯವರ ಆಶಯದಂತೆ ಪುಣ್ಯ ಸ್ಥಳವು ಪ್ರವಾಸಿಗರಿಗೆ ಯಾತ್ರಾ ಸ್ಥಳವಾಗಿದೆ. ತಪೋವನವಾಗಿದೆ. ಯೋಗ ಭೂಮಿಯಾಗಿದೆ. ಆತ್ಮೋನ್ನತಿಗೆ ಸಾಧನೆಯ ಆಶ್ರಮವಾಗಿದೆ. ಸಂಸಾರಿಗಳಿಗೂ ಶುಭ ಸಮಾರಂಭಗಳಿಗೆ ನೆರವು ನೀಡುವ ಕ್ಷೇತ್ರವಾಗಿದೆ. ಶ್ರೀ ಗುರೂಜಿಯವರ ಸಿದ್ಧಿ ಸಾಧನೆಗಳು ನಿರಂತರ ಮಾರ್ಗದರ್ಶನ ಮಾಡುತ್ತಿವೆ.
ಚಿರಶಾಂತಿಯಲ್ಲಿ ಇರುವ ಅವರ ದಿವ್ಯಾತ್ಮ ನಮ್ಮನ್ನೆಲ್ಲಾ ಲೋಕದ ಜನರನೆಲ್ಲಾ ಆಶೀವರ್ದಿಸಲಿ. ಓಂ ಶಾಂತಿಃ ಶಾಂತಿಃ ಶಾಂತಿಃ .
ಲೇಖನ ಕೃಪೆ: ಪ್ರೊ. ಸಂಪಿಗೆ ತೋಂಟದಾರ್ಯ
(ಆಧಾರ:
೧. ಉತ್ಥಾನ ದರ್ಶನ , ಶ್ರೀ ರಾಘವೇಂದ್ರ ಗುರೂಜಿಯವರ ಷಷ್ಠ್ಯಬ್ದಿ ಪೂರ್ತಿ ಶಾಂತಿ ಮಹೋತ್ಸವ ಗೌರವ ಗ್ರಂಥ 1990.
೨. ಮಹಾ ಚೇತನ ದ.ವೆಂ.ಕುಲಕರ್ಣಿ,
ಪ್ರಕಾಶನ : ಶ್ರೀ ರಾಘವೇಂದ್ರ ಕೃಪಾಶ್ರಮ, ಪುಣ್ಯ ಸ್ಥಳ - 577 551 )
ಕಾಮೆಂಟ್‌ಗಳು