ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಾಯಿ ಪರಾಂಜಪೆ

 


ಸಾಯಿ ಪರಾಂಜಪೆ


ಸಾಯಿ ಪರಾಂಜಪೆ ಚಿತ್ರರಂಗ ಕಂಡ ಉತ್ತಮ ನಿರ್ದೇಶಕಿ ಮತ್ತು ಚಿತ್ರಕತೆಗಾರ್ತಿ. ಅವರು ರಂಗಕರ್ಮಿಯಾಗಿ ಮತ್ತು ಬರಹಗಾರ್ತಿಯಾಗಿಯೂ ಪ್ರಸಿದ್ಧರು.

ಸಾಯಿ ಪರಾಂಜಪೆ 1938ರ ಮಾರ್ಚ್ 19ರಂದು ಮುಂಬೈನಲ್ಲಿ ಜನಿಸಿದರು. ತಂದೆ ಸ್ಲೆಪ್ಟ್ಸಾಫ್ ಅವರು ರಷ್ಯನ್ ಕಲಾವಿದ. ತಾಯಿ ಶಕುಂತಲಾ ಪರಾಂಜಪೆ 1930 ಮತ್ತು 40ರ ದಶಕದಲ್ಲಿ ಹಿಂದೀ ಚಿತ್ರರಂಗದಲ್ಲಿ ಕಲಾವಿದೆಯಾಗಿದ್ದು,  ಮುಂದೆ ಬರಹಗಾರ್ತಿಯಾಗಿ, ಸಮಾಜ ಸೇವಕಿಯಾಗಿ, ರಾಜ್ಯಸಭಾ ಸದಸ್ಯರಾಗಿ ಪದ್ಮಭೂಷಣ ಪ್ರಶಸ್ತಿ ಸಂಮಾನಿತರಾಗಿದ್ದರು. ಸಾಯಿ ಪರಾಂಜಪೆ ತಾಯಿಯೊಂದಿಗೆ ಚಿಕ್ಕಂದಿನಿಂದ ತಾತ ಸರ್ ಆರ್. ಪಿ. ಪರಾಂಜಪೆ ಅವರ ಆಶ್ರಯದಲ್ಲಿ ಬೆಳೆದರು. ಅವರು ಗಣಿತಜ್ಞರಾಗಿ, ಶಿಕ್ಷಣ ತಜ್ಞರಾಗಿದ್ದರಲ್ಲದೆ 1944~47 ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತದ ಹೈಕಮಿಷನರ್ ಆಗಿದ್ದರು.  ಹೀಗಾಗಿ ಸಾಯಿ ಪರಾಂಜಪೆ ಅವರು ಭಾರತದ ಹಲವಾರು ನಗರಗಳಲ್ಲಿ ಮತ್ತು ಕೆಲವು ಕಾಲ ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ಓದಿದರು.  ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದ ಅವರ ಚಿಕ್ಕಪ್ಪ ಅಚ್ಯುತ ರಾನಡೆ ಅವರು ಮನಸೆಳೆಯುವಂತೆ ಹೇಳುತ್ತಿದ್ದ ಕತೆಗಳು ಬಾಲಕಿ ಸಾಯಿ ಅವರನ್ನು ಅಪಾರವಾಗಿ ಪ್ರಭಾವಿಸಿದ್ದವು.‍ ಹೀಗಾಗಿ ಎಂಟನೇ ವಯಸ್ಸಿನಲ್ಲೇ ಅವರು ಮರಾಠಿಯಲ್ಲಿ 'ಮುಲಾಂಚಾ ಮೇವಾ’ ಎಂಬ ಕಾಲ್ಪನಿಕ ಕಥಾ ಸಂಕಲನ ಪ್ರಕಟಿಸಿದ್ದರು. ಸಾಯಿ ಪರಾಂಜಪೆ ಅವರು 1963ರಲ್ಲಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಪದವಿ ಪಡೆದರು.

ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಉದ್ಯೋಗ ಆರಂಭಿಸಿದ ಸಾಯಿ ಪರಾಂಜಪೆ ಅವರು ಆಕಾಶವಾಣಿಯ
ಮಕ್ಕಳ ಕಾರ್ಯಕ್ರಮ ಸಂಯೋಜನೆಯಲ್ಲಿ ಪಾಲ್ಗೊಳ್ಳತೊಡಗಿದರು.  ಮುಂದೆ ಅವರು ಮರಾಠಿ, ಹಿಂದೀ ಮತ್ತು ಇಂಗ್ಲಿಷಿನಲ್ಲಿ ಹಿರಿಯರು ಮತ್ತು ಮಕ್ಕಳಿಗಾಗಿ ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದರು.  ಅವರು ಆರು ಚಲನಚಿತ್ರಗಳು, ಎರಡು ಮಕ್ಕಳ ಚಿತ್ರಗಳು ಮತ್ತು 5 ಡಾಕ್ಯುಮೆಂಟರಿ ಚಿತ್ರಗಳನ್ನು ನಿರ್ದೇಶಿಸಿದರು.  ಅವುಗಳಲ್ಲಿ ಆರು ಚಿತ್ರಗಳು ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದವು. 

ಸಾಯಿ ಪರಾಂಜಪೆ ಅವರು ಅನೇಕ ವರ್ಷಗಳ ಕಾಲ ದೆಹಲಿಯ ದೂರದರ್ಶನ ಕೇಂದ್ರದ ಕಾರ್ಯಕ್ರಮಗಳ ನಿರ್ದೇಶಕರಾಗಿ ಅಥವಾ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.  'ದಿ ಲಿಟಲ್ ಟೀ ಶಾಪ್' ಎಂಬ ಅವರ ಮೊದಲ ಕಿರುತೆರೆಯ ಚಲನಚಿತ್ರವೇ ಟೆಹರಾನಿನಲ್ಲಿ ಏಷ್ಯನ್ ಬ್ರಾಡ್ಕಾಸ್ಟಿಂಗ್ ಯೂನಿಯನ್ ಅವಾರ್ಡ್ ಗಳಿಸಿತು.  ಮುಂದೆ ಅವರು ಮುಂಬೈ ದೂರದರ್ಶನ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮ ನಿರ್ಮಾಣಕ್ಕೆ ಆಯ್ಕೆಯಾದರು.1970ರ ದಶಕದಲ್ಲಿ ಎರಡು ಬಾರಿ ಚಿಲ್ರನ್ ಫಿಲಂ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅವರು ಮಕ್ಕಳಿಗಾಗಿ ಪ್ರಶಸ್ತಿ ವಿಜೇತ ಜಾದೂ ಕಾ ಶಂಖ್, ಸಿಕಂದರ್ ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದರು. 

ಸಾಯಿ ಪರಾಂಜಪೆ ಅವರು ನಿರ್ದೇಶಿಸಿದ ಪ್ರಥಮ ಚಲನಚಿತ್ರ 'ಸ್ಪರ್ಶ್' 1980ರಲ್ಲಿ ತೆರೆಕಂಡು ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ 5 ಪ್ರಶಸ್ತಿಗಳನ್ನು ಗಳಿಸಿತು.
ಸ್ಪರ್ಶ್ ಕುರುಡರ ಬದುಕಿನ ಗಾಂಭೀರ್ಯವನ್ನು ಹೃದಯಸ್ಪರ್ಶಿಯಾಗಿ ಮೂಡಿಸಿದರೆ ಮುಂದೆ ಬಂದ ಅವರ 'ಚಸ್ಮೆ ಬದ್ದೂರ್', 'ಕಥಾ' ಚಿತ್ರಗಳು ಸುಂದರ ಹಾಸ್ಯ ಚಿತ್ರಗಳಾಗಿ ಗಮನ ಸೆಳೆದವು. ಅವರು ದೂರದರ್ಶನಕ್ಕಾಗಿ ಮೂಡಿಸಿದ ಅಡೋಸ್ ಪಡೋಸ್ ಮತ್ತು ಚೋಟೆ ಬಡೆ ಸಹಾ ಸುಂದರೆನಿಸಿದವು.

ಸಾಯಿ ಪರಾಂಜಪೆ ಅವರು ಮರಾಠಿ ರಂಗಭೂಮಿಯಲ್ಲೂ ನಿರ್ದೇಶಕರಾಗಿ, ನಾಟಕ ಕರ್ತರಾಗಿ ಮತ್ತು ನಿರೂಪಕರಾಗಿ ಮಹತ್ವದ ಕೆಲಸ ಮಾಡಿದರು.
 
ಸಾಯಿ ಪರಾಂಜಪೆ ಅವರು ಅನೇಕ ವಿಶಿಷ್ಟ ಸಾಮಾಜಿಕ ಕಾಳಜಿಗಳಳ್ಳ ಅಂಗೂಥಾ ಛಾಪ್, ದಿಷಾ, ಪಪೀಹಾ,‍ ಸಾಜ್, ಚಕಾ ಚಕ್, ಭಾಗೋ ಭೂತ್  ಮುಂತಾದ ಚಿತ್ರಗಳನ್ಮು ನಿರ್ಮಿಸಿ ನಿರ್ದೇಶಿಸಿದರು.  ಹಮ್ ಪಾಂಚೀ ಏಕ್ ಚಾವ್ಲ್  ಕೆ, ಪರ್ಟ್ಯಾನ ಮುಂತಾದವು ಅವರ ಇತರ ಕಿರುತೆರೆಯ ಧಾರಾವಾಹಿಗಳು. ಅವರು ಅನೇಕ ಡಾಕ್ಯುಮೆಂಟರಿಗಳನ್ನೂ ನಿರ್ವಹಿಸಿದರು.

ಸಾಯಿ ಪರಾಂಜಪೆ ಅವರಿಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಗೌರವಗಳೇ ಅಲ್ಲದೆ, ಪದ್ಮಭೂಷಣ ಗೌರವವೂ ಸಂದಿದೆ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆದಾರರಾಗಿಯೂ ಜವಾಬ್ಧಾರಿ ನಿರ್ವಹಿಸಿದ್ದಾರೆ.

On the birthday of great film director Sai Paranjape


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ