ಕೆನ್ನೆತ್ ಆಂಡರ್ಸನ್
ಕೆನ್ನೆತ್ ಆಂಡರ್ಸನ್
ಕೆನ್ನೆತ್ ಆಂಡರ್ಸನ್ ಬೇಟೆಯ ಅನುಭವಗಳನ್ನು ರೋಮಾಂಚಕ ಸಾಹಿತ್ಯವನ್ನಾಗಿಸಿದವರು. ಜಿಮ್ಕಾರ್ಬೆಟ್, ಕೆನ್ನೆತ್ ಆಂಡರ್ಸನ್ ಮೊದಲಾದವರು ಮಾನವೀಯ ದೃಷ್ಟಿ ಮತ್ತು ಪರಿಸರ ಕಾಳಜಿಗಳಿಂದ ನರಭಕ್ಷಕ ಮೃಗಗಳನ್ನು ಮಾತ್ರ ಕೊಲ್ಲುವ ತತ್ತ್ವಕ್ಕೆ ಬದ್ಧರಾದ ನಿಪುಣ ಬೇಟೆಗಾರರಾಗಿದ್ದು ಅವರು ತಮ್ಮ ನೂರಾರು ಬೇಟೆ ಅನುಭವಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಿದ್ದಾರೆ.
ಕೆನ್ನೆತ್ ಆಂಡರ್ಸನ್ 1910ರ ಮಾರ್ಚ್ 10ರಂದು ಈಗಿನ ತೆಲಂಗಾಣ ರಾಜ್ಯದ ಭಸಗವಾಗಿರುವ ಬೋಲಾರಮ್ ಎಂಬಲ್ಲಿ ಜನಿಸಿದರು. ತಂದೆ ಡಗ್ಲಾಸ್ ಸ್ಟುವರ್ಟ್ ಆಂಡರ್ಸನ್. ತಾಯಿ ಲೂಸಿ ಆಂಡರ್ಸನ್ ಅವರು ಜಾನ್ ಟೇಲರ್ ಅವರ ಮೊಮ್ಮಗಳು. ಜಾನ್ ಟೇಲರ್ ಅವರು ತಮ್ಮ ಸೇವೆಗಾಗಿ ಸರ್ ಮಾರ್ಕ್ ಕಬ್ಬನ್ ಇಂದ ಭೂಮಿಯನ್ನು ಬಳುವಳಿಯಾಗಿ ಗಳಿಸಿದ್ದರು. ಮೂಲ ಸ್ಕಾಟಿಷ್ ಆದರೂ, ಆರು ತಲೆಮಾರಿನಿಂದ ಭಾರತದಲ್ಲೇ ನೆಲೆನಿಂತ ಕುಟುಂಬವದು.
ಕೆನ್ನೆತ್ ಆಂಡರ್ಸನ್ ಬೆಂಗಳೂರಿನ ಬಿಶಪ್ ಕಾಟನ್ಸ್ ಶಾಲೆ ಹಾಗೂ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಓದಿದರು. ಕಾನೂನು ಓದಲು ಎಡಿನ್ಬರ್ಗ್ ಪ್ರದೇಶಕ್ಕೆ ಕಳಿಸಿದರೆ ಇಷ್ಡವಾಗದೆ ಭಾರತಕ್ಕೇ ಓಡಿಬಂದರು. ಮುಂದೆ ಬ್ರಿಟಿಷ್ ಏರ್ ಕ್ರಾಫ್ಟ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಉದ್ಯೋಗಿಯಾದರು. ಮುಂದೆ ಇದೇ ಸಂಸ್ಥೆಯೇ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಎಂದಾಯಿತು. ಸೇನೆಯಲ್ಲಿ ಉದ್ಯೋಗದಲ್ಲಿದ್ದ ತಂದೆಯವರ ರೈಫಲ್ನಿಂದ ಸ್ಪೂರ್ತಿ ಪಡೆದು ಓರ್ವ ಬೇಟೆಗಾರನಾಗಿಯೂ ಕೆನೆತ್ ಆಂಡರ್ಸನ್ ಹೆಸರು ಮಾಡಿದರು. ದಕ್ಷಿಣ ಭಾರತದ ದಟ್ಟ ಕಾಡುಗಳಂಚಿನ ಹಳ್ಳಿಗಳಲ್ಲಿ ನರಹಂತಕ ಹುಲಿ, ಚಿರತೆಗಳು ಕಾಡಿದಾಗ, ಹಳ್ಳಿಗರ ಕರೆಗೆ ತಕ್ಷಣ ಓಗೊಟ್ಟು ಆ ಸ್ಥಳಕ್ಕೆ ಹೋಗಿ ನರಹಂತಕ ಪ್ರಾಣಿಗಳಿಂದ ಜನರನ್ನು ಕಾಪಾಡುತ್ತಿದ್ದರು. ಇವರಿಗೆ ಬಹುತೇಕ ದಕ್ಷಿಣಭಾರತದ ಕಾಡುಗಳು ಪರಿಚಯವಾದವು.
ಪ್ರಕೃತಿಯ ಆರಾಧಕರಾಗಿದ್ದ ಕೆನ್ನೆತ್ ಆಂಡರ್ಸನ್ ಒಬ್ಬಂಟಿಯಾಗಿಯೂ ಬರಿಗೈಲಿ ಕಾಡುಗಳಲ್ಲಿ ಅಲೆದಾಡುತ್ತಿದ್ದರು. ಕಾಡಿನಲ್ಲಿಯೇ ಬಹಳ ಸಲ ನೆಮ್ಮದಿಯನ್ನು ಕಂಡರು. ತಮ್ಮ ಈ ಸಾಕಷ್ಟು ಕಾಡಿನ ಅನುಭವಗಳನ್ನೇ ರೋಮಾಂಚಕ ಶಿಕಾರಿ ಸಾಹಿತ್ಯವನ್ನಾಗಿಸಿ ಜಗದ್ವಿಖ್ಯಾತಿಯನ್ನು ಗಳಿಸಿದರು. ಮುಂದೆ ತಮ್ಮ ಮಗ ಡೊನಾಲ್ಡ್ ಆಂಡರ್ಸನ್ನರಿಗೂ ಅದೇ ಅಭಿರುಚಿ ಬೆಳೆಸಿದರು.
ಕೆನ್ನೆತ್ ಆಂಡರ್ಸನ್ರ ಕೃತಿಗಳು ದಟ್ಟಕಾಡಿನ ಕ್ರೌರ್ಯ, ರೋಮಾಂಚಕತೆ, ಬೇಟೆಗಾರನ ಶಿಕಾರಿ ತಂತ್ರಗಳನ್ನಷ್ಟೇ ಚಿತ್ರಿಸದೆ, ಅಂದಿನ ಪ್ರಕೃತಿಯ ಸೊಬಗಿನ, ವನ್ಯಜೀವಿಗಳ ಚಿತ್ರಣವನ್ನೂ, ಜನಜೀವನದ, ವ್ಯವಸ್ಥೆಯ ಹಲವು ಮಗ್ಗಲುಗಳನ್ನೂ ಕಣ್ಮುಂದೆ ಕಟ್ಟಿಕೊಡುವಂತದ್ದಾಗಿವೆ.
ಕೆನ್ನೆತ್ ಆಂಡರ್ಸನ್ ಅವರ ಕೃತಿಗಳಲ್ಲಿ Nine Maneaters and Ond Rogue, Man eaters and Jungle Killers, The Black Panther of Sivanpillai and Other Adventures of Indian Jungle, The call of the Man Eater, This is the Jungle, The Tiger Roars, Tales from Indian Jungle, Jungles Long Ago, The Bond of Love, The Fires of Passion, Jungles Tales for Children, Tales of Man Singh: King of Dacoits ಮುಂತಾದವು ಸೇರಿವೆ.
ಕೆನ್ನೆತ್ ಆಂಡರ್ಸನ್ ಅವರ ಕೃತಿಗಳಲ್ಲಿ ಬಹಳಷ್ಟು ಕನ್ನಡಕ್ಕೂ ಅನುವಾದಗೊಂಡಿವೆ. ಬಿ. ಈಶ್ವರ ಭಟ್ ಅವರು 1962ರಷ್ಟು ಹಿಂದೆಯೇ ಅಂಡರ್ಸನ್ ಅವರ ಶಿವನಿಪಳ್ಳಿಯ ಕಪ್ಪು ಚಿರತೆ - ಕೃತಿಯ ಮೊದಲ ಐದು ಅಧ್ಯಾಯಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಾಗಡಿ ಬಳಿ ಚಿರತೆಯೊಂದನ್ನು ಕೊಂದ ಪ್ರಸಂಗವೂ ಇಲ್ಲಿ ನಿರೂಪಿತವಾಗಿದೆ.
ಕೆನ್ನೆತ್ ಆಂಡರ್ಸನ್ ಬೆಂಗಳೂರು ನಿವಾಸಿಯಾಗಿದ್ದರು ಎಂಬುದೂ ಉಲ್ಲೇಖನೀಯ. ಅವರ ಈ ಕೃತಿ ಕೇವಲ ಬೇಟೆಗಾರನ ರೋಚಕ ಅನುಭವಗಳ ನಿರೂಪಣೆಯಾಗದೆ ಚಿರತೆ ಮತ್ತು ಹುಲಿಗಳ ಗುಣ ಸ್ವಭಾವ ಕುರಿತು ಅವರು ನೀಡುವ ಸೂಕ್ಷ್ಮ ವಿವರಗಳು ಅವರನ್ನು ಒಬ್ಬ ಪ್ರಾಣಿವಿಜ್ಞಾನಿಯ ಮಟ್ಟಕ್ಕೂ ಕೊಂಡೊಯ್ಯುತ್ತವೆ. ಸುಂದರ ವನ್ಯಜೀವಿಗಳನ್ನು ಕೊಂದು, ಒಣಹುಲ್ಲು ತುಂಬಿ, ಗೊಂಬೆಗಳನ್ನು ಷೋಕೇಸಿನಲ್ಲಿ ಇಡುವುದಕ್ಕಿಂತಲೂ ಕ್ಯಾಮರಾದಲ್ಲಿ ಅವುಗಳ ಸುಂದರ ಚಿತ್ರಗಳನ್ನು ಷೂಟ್ ಮಾಡುವುದು ಅತ್ಯುತ್ತಮ ಕೆಲಸ ಎಂದು ಅವರು ಅಭಿಪ್ರಾಯಪಟ್ಟಿರುವುದು ಮಾರ್ಮಿಕವಾದ, ಬೋಧಪ್ರದವಾದ ಕಿವಿಮಾತಾಗಿದೆ. ಇಂಗ್ಲಿಷಿನ ಬೆಂಗಾಳ ಊರು (ಅವರೆ ಕಾಯಿಗಳ ನಗರ) ಎಂಬುದೇ ಕನ್ನಡದಲ್ಲಿ ಬೆಂಗಳೂರು ಆಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ಪ್ರದೇಶದ ಅವರೆಕಾಯಿಗಳ ರುಚಿ ಬಲ್ಲವರೇ ಬಲ್ಲರು ಎಂದೂ ಅವರು ಮೆಚ್ಚಿ ಬರೆದಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರು ಕೆನ್ನೆತ್ ಆಂಡರ್ಸನ್ ಅವರ ಜಾಲಹಳ್ಳಿಯ ಕುರ್ಕ, ಬೆಳ್ಳಂದೂರಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.
"ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನೆತ್ ಆಂಡರ್ಸನ್ ಕತೆಗಳು" ಎಂಬ ಹೆಸರಿನಲ್ಲಿ ಒಂದು ಅನುವಾದವನ್ನು ಸಾಕ್ಷಿ ಅವರು ಮೂಡಿಸಿದ್ದಾರೆ. "ಜೇಡರ ಕಣಿವೆ ಮತ್ತು ಇತರ ಕಥೆಗಳು" ಎಂಬ ಅನುವಾದವನ್ನು ನಡಹಳ್ಳಿ ವಸಂತ್ ಮಾಡಿದ್ದಾರೆ.
ಕಾಡುಗಳಲ್ಲಿ ದೊರೆಯುವ ಮೂಲಿಕೆಗಳಿಂದಲೇ ತಮ್ಮನ್ನು ಆರೈಕೆ ಮಾಡಿಕೊಳ್ಳುತ್ತಿದ್ದ ಆಂಡರ್ಸನ್, ಒಮ್ಮೆ ಮಾತ್ರ ನರಭಕ್ಷಕ ಹುಲಿಯನ್ನು ಎದುರಿಸಿದಾಗ ಒಂದು ಪೆನ್ಸಿಲಿನ್ ಇಂಜೆಕ್ಷನ್ ತೆಗೆದುಕೊಂಡಿದ್ದರು!! ಮುಂದೆ ತಮಗೆ ಪ್ರಾಸ್ಟೇಟ್ ಕ್ಯಾನ್ಸರ್ ಆದಾಗಲೂ ಅವರು ಪಾಶ್ಚಿಮಾತ್ಯ ಔಷದಗಳನ್ನು ತೆಗೆದುಕೊಳ್ಳಲ್ಲಿಲ್ಲ.
ಬೆಂಗಳೂರಿನಲ್ಲೇ ನೆಲೆಸಿದ್ದ ಕೆನ್ನೆತ್ ಅಂಡರ್ಸನ್ 1974ರ ಆಗಸ್ಟ್ 30ರಂದು ಈ ಲೋಕವನ್ನಗಲಿದರು.
On the birth anniversary of Indian born British writer and hunter Kenneth Anderson
ಒಂಬತ್ತು ನರಭಕ್ಷಕ ಹಾಗು ಒಂದು ಪುಂಡು ಆನೆ ಈ ಪುಸ್ತಕ ಎಲ್ಲಿ ದೊರೆಯುತ್ತದೆ ತಿಳಿಸಿ ಸರ್
ಪ್ರತ್ಯುತ್ತರಅಳಿಸಿ