ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿ. ನ. ಮಂಗಳಾ


 ಚಿ. ನ. ಮಂಗಳಾ


ಚಿ. ನ. ಮಂಗಳಾ ಖ್ಯಾತ ಶಿಕ್ಷಣ ತಜ್ಞರಾಗಿ, ಸಾಂಸ್ಕೃತಿಕ ಚಿಂತಕರಾಗಿ ಮತ್ತು ಬರಹಗಾರರಾಗಿ ಸ್ಮರಣೀಯರಾಗಿದ್ದಾರೆ.

ಚಿ.ನ. ಮಂಗಳಾ 1938ರ ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ಜನಿಸಿದರು.   ತಂದೆ ಸಿ. ನರಸಿಂಹಮೂರ್ತಿಯವರು ಸರ್ಕಾರಿ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿದ್ದರು.  ತಾಯಿ ರಾಜೇಶ್ವರಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರೈಸಿದ ಮಂಗಳಾ  ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಪೂರೈಸಿದರು. ಮುಂದೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಹಾಗೂ  ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. ಆನರ್ಸ್‌ (ಇಂಗ್ಲಿಷ್) ಪದವಿ ಮತ್ತು  ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. ಪದವಿಗಳನ್ನು ಗಳಿಸಿದರು.

ಚಿ. ನ. ಮಂಗಳಾ 1959ರಲ್ಲಿ ಅಧ್ಯಾಪಕಿಯಾಗಿ ಬೆಂಗಳೂರಿನ  ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಕೆಲ ಕಾಲ ನ್ಯಾಷನಲ್ ಕಾಲೇಜಿನಲ್ಲಿಯೂ ಅಧ್ಯಾಪನ ನಡೆಸಿದ ಅವರು  ಮುಂದೆ  ಎನ್ ಎಮ್ ಕೆ ಆರ್ ವಿ ಕಾಲೇಜು ಎಂದು ಪ್ರಖ್ಯಾತವಾಗಿರುವ  ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಪ್ರಾರಂಭಿಸಿದ ನಾಗರತ್ನಮ್ಮ ಮೇಡಾ ಕಸ್ತೂರಿ ರಂಗಶೆಟ್ಟಿ ರಾಷ್ಟ್ರೀಯ ವಿದ್ಯಾಲಯ ಮಹಿಳಾ ಕಾಲೇಜಿನ (N.M.K.R.V) ಪ್ರಾಂಶುಪಾಲರ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ವಿಶ್ವವಿದ್ಯಾಲಯ ಎಲ್ಲರೊಡನೆ ಉತ್ತಮ ಸಂಬಂಧದೊಂದಿಗೆ ಅವರು ಕಾರ್ಯನಿರ್ವಹಿಸಿದ ರೀತಿ ಶ್ಲಾಘನೀಯವೆನಿಸಿದೆ.

ದೆಹಲಿಯ ಅಮೆರಿಕ ಶಿಕ್ಷಣ ಪ್ರತಿಷ್ಠಾನ, ವಾಷಿಂಗ್‌ಟನ್ ವಿದ್ವಾಂಸರ ಅಂತಾರಾಷ್ಟ್ರೀಯ ವಿನಿಮಯ ಪರಿಷತ್ತು, ಬ್ರಿಟಿಷ್ ಕೌನ್ಸಿಲ್‌ಗಳ ಸಹಯೋಗದಿಂದ ವಿದೇಶದಲ್ಲಿನ ವಿದ್ಯಾಭ್ಯಾಸ ಪದ್ಧತಿ ಅಧ್ಯಯನ ಮಾಡಲು 1982ರಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಪ್ರವಾಸ ಕೈಗೊಂಡರು. 1984ರಲ್ಲಿ ಮತ್ತೆ ಅಮೆರಿಕ, ಇಂಗ್ಲೆಂಡ್ ಪ್ರವಾಸದ ಜೊತೆ ಯುರೋಪಿನ ಆಸ್ಟ್ರಿಯ, ಬೆಲ್ಜಿಯಂ, ಲಕ್ಸನ್‌ಬರ್ಗ, ಫ್ರಾನ್ಸ್, ಇಟಲಿ, ಸ್ವಿಟ್ಸರ್‌ಲೆಂಡ್ ದೇಶಗಳಿಗೆ ಭೇಟಿ ನೀಡಿ  ಅಲ್ಲಿನ ಶಿಕ್ಷಣ ಕ್ಷೇತ್ರದಿಂದ ಅಪಾರವಾದ ಅನುಭವಗಳನ್ನು ಹೊತ್ತು ತಂದರು.
 
ಚಿ. ನ. ಮಂಗಳಾ ಅವರ ಬರಹಗಳಲ್ಲಿ ಅವರ ಸುದೀರ್ಘ ಅವಧಿಯ ಅಧ್ಯಾಪನ ಮತ್ತು ಪ್ರಾಂಶುಪಾಲ ಜವಾಬ್ಧಾರಿ ನಿರ್ವಹಣೆಯಲ್ಲಿ ದೊರೆತ ಅನುಭವಗಳು ಸಂಚಲನಗೊಂಡಿವೆ.  ಹೀಗಾಗಿ ಅವರ ಕೃತಿಗಳು  ಸರ್ಕಾರಿ ಧೋರಣೆ, ವಿಶ್ವವಿದ್ಯಾಲಯದಲ್ಲಿ ಕುಗ್ಗುತ್ತಿರುವ ವಿದ್ಯಾಭ್ಯಾಸದ ಮಟ್ಟ, ವಿದ್ಯಾರ್ಥಿನಿಯರ ಅಪೇಕ್ಷೆ, ಆಶೋತ್ತರಗಳು, ಪೋಷಕರ ಅಸಹಾಯಕತೆ ಇವೆಲ್ಲದರ ವಿಶಿಷ್ಟ ಅವಲೋಕನಗಳನ್ನು ಕಟ್ಟಿಕೊಡುವಂತ ವಿಶಿಷ್ಟ ಕೃತಿಗಳಾಗಿ ಹೊರಹೊಮ್ಮಿವೆ.

ಚಿ.ನ.ಮಂಗಳಾ ಅವರು ‘ಭಾರತೀಯ ಸ್ತ್ರೀ’ ಲೇಖನ ಮಾಲಿಕೆಯಲ್ಲಿ ಹಲವಾರು ವಿದ್ವತ್ಪೂರ್ಣ ಲೇಖನಗಳನ್ನು ಪ್ರಸ್ತುತ ಪಡಿಸಿದ್ದಾರೆ. ಭಾರತೀಯ ಪರಿಕಲ್ಪನೆಯಲ್ಲಿ ಸರಸ್ವತಿ, ಕರ್ನಾಟಕದ ಮಹಿಳೆಯರು ಮಾಲಿಕೆಯಲ್ಲಿ ಆಧುನಿಕ ಕನ್ನಡ ಬರಹಗಾರ್ತಿಯರು ಮುಂತಾದ ಹಲವಾರು ಪುಸ್ತಕಗಳು, ನ್ಯೂ ವರ್ಲ್ಡ್ ಲಿಟರೇಚರ್ ಸರಣಿಯ ಹಲವಾರು ಪುಸ್ತಕಗಳು, ಅರ್. ಕೆ. ನಾರಾಯಣರ ಪುಸ್ತಕದ ಅನುವಾದವಾದ ‘ಮಹಾತ್ಮರ ಬರವಿಗಾಗಿ’, ಹೆಲೆನ್ ಕೆಲರ್, ಅಭಾಗಿನಿ, ಹುಲಿಯ ಬೆನ್ನೇರಿದಾಗ, ಕೆನಡಾ ಕವನಗಳು, ಎಲ್ಲರೂ ನನ್ನವರು ಮುಂತಾದವು ಚಿ.ನ.ಮಂಗಳಾ ಅವರ ವೈವಿಧ್ಯಪೂರ್ಣ ಬರಹಗಳಲ್ಲಿ ಸೇರಿವೆ.  

ಚಿ.ನ.ಮಂಗಳಾ ಅವರು ಕನ್ನಡದ ಮೊದಲ ಮಹಿಳಾ ಪತ್ರಕರ್ತೆ, ಸಾಹಿತಿ, ಪ್ರಕಾಶಕಿ, ತಿರುಮಲಾಂಬ ಅವರ ನೆನಪಿಗಾಗಿ ಶಾಶ್ವತಿ ಸಂಸ್ಥೆಯನ್ನು ಸ್ಥಾಪಿಸಿದರು.  ಈ ಮೂಲಕ ವಸ್ತು ಸಂಗ್ರಹಾಲಯ, ಮಹಿಳಾ ಅಧ್ಯಯನ ಕೇಂದ್ರಗಳ ಸ್ಥಾಪನೆಯೇ ಅಲ್ಲದೆ ಸಾಹಿತ್ಯ, ಸಂಶೋಧನೆ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ಮಹಿಳೆಯರಿಗೆ ಈ ಸಂಸ್ಥೆಯ ವತಿಯಿಂದ 'ಸದೋದಿತ' ಪ್ರಶಸ್ತಿಯನ್ನು ನೀಡಲಾಗುತ್ತಿದೆ. 

ಚಿ. ನ. ಮಂಗಳಾ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದವು.  ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯ ಸರಕಾರದ ಬಹುಮಾನ,  ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ , ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಇವುಗಳಲ್ಲಿ ಸೇರಿವೆ.

ಚಿ.ನ. ಮಂಗಳಾ ಅವರು 1997ರ  ಮೇ 30 ರಂದು ಈ ಲೋಕವನ್ನಗಲಿದರು.

ಚಿತ್ರಕೃಪೆ: www.kamat.com

On the birth anniversary of writer, educationalist and creative personality  Chi. Na. Mangala

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ