ಜಾಮಿನಿ ರಾಯ್
ಜಾಮಿನಿ ರಾಯ್
ಜಾಮಿನಿ ರಾಯ್ ವಿಶಿಷ್ಟ ಕಲಾವಿದರು. ರಬೀಂದ್ರನಾಥ ಠಾಗೂರರ ಪ್ರಸಿದ್ಧ ಶಿಷ್ಯರಲ್ಲೊಬ್ಬರಾದ ಜಾಮಿನಿ ರಾಯ್ ಭಾರತೀಯ ಆಧುನಿಕ ಕಲೆಗೆ ನೀಡಿರುವ ಸೃಜನಶೀಲ ಕೊಡುಗೆಗಳು ಮಹತ್ವದ್ದೆನಿಸಿವೆ.
ಜಾಮಿನಿ ರಾಯ್ 1887ರ ಏಪ್ರಿಲ್ 11ರಂದು ಪಶ್ಚಿಮ ಬಂಗಾಳದ, ಬಂಕುರ ಜಿಲ್ಲೆಯ ಬೆಲಿಯಾತೋರ್ ಎಂಬಲ್ಲಿ ಜನಿಸಿದರು. ಮಧ್ಯಮ ವರ್ಗದ ಕಲಾಭಿರುಚಿ ಉಳ್ಳ ಸಂಸ್ಕಾರದಲ್ಲಿ ಅವರು ಬೆಳೆದರು. ಜಾಮಿನಿ ರಾಯ್ ತಮ್ಮ 16 ನೆಯ ವಯಸ್ಸಿನಲ್ಲಿ ಕೊಲ್ಕತ್ತಾದ ಸರಕಾರಿ ಕಲಾ ಕಾಲೇಜಿಗೆ ಸೇರಿದರು. ಬೆಂಗಾಲ್ ಸ್ಕೂಲ್ ಸ್ಥಾಪಕರಾದ ಅಬನೀಂದ್ರನಾಥ ಠಾಗೂರರು ಅಲ್ಲಿಯ ಉಪಪ್ರಾಚಾರ್ಯರಾಗಿದ್ದರು. ಈ ಅವಧಿಯಲ್ಲಿ ಜಾಮಿನಿ ರಾಯ್ ಅವರು ಅಂದಿನ ಕಲಾಶಿಕ್ಷಣ ಪದ್ದತಿಯಲ್ಲಿ ಸಾಂಪ್ರಾದಾಯಿಕವಾಗಿದ್ದ ಹಳೆಯ ಶೈಲಿಯ ತೈಲವರ್ಣದ ನಗ್ನ ಚಿತ್ರಗಳನ್ನು ಇತರ ವಿದ್ಯಾರ್ಥಿಗಳಂತೆ ಮಾಡುತ್ತಿದ್ದರು. 1908 ವರ್ಷದಲ್ಲಿ ಲಲಿತ ಕಲೆಯ ಡಿಪ್ಲೋಮಾ ಪದವಿ ಗಳಿಸಿದರು. ಇದು ಅವರಿಗೆ ತೃಪ್ತಿ ತರದೇ ಹೋಯಿತು. ಬಹುಬೇಗದಲ್ಲಿ ಅವರಿಗೆ ಪಾಶ್ಚಿಮಾತ್ಯ ಚಿಂತನೆಗಳ ಪ್ರಭಾವದಿಂದ ಹೊರಬಂದು, ಭಾರತೀಯ ಸಂಸ್ಕೃತಿಗಳತ್ತ ದೃಷ್ಟಿಹಾಯಿಸುವುದರಿಂದಷ್ಟೇ ತಾವು ಸೃಜನಶೀಲವಾಗುವುದು ಸಾಧ್ಯ ಎಂಬ ಅರಿವು ಮೂಡಿತು. ಹಾಗಾಗಿ ಜನಪದ ಮತ್ತು ಆದಿವಾಸಿಗಳ ಬದುಕನ್ನು ಅವಲೋಕಿಸಲು ಆರಂಭಿಸಿದರು. ಈ ನಿಟ್ಟಿನಲ್ಲಿ ಕಾಲಿಘಟ್ ವರ್ಣಕಲೆ ಅವರ ಮನಸೆಳೆಯಿತು. ಈ ಕಲೆಯಲ್ಲಿ ಕುಂಚಗಳ ಬೀಳಲುಗಳಿಂದ ಚಿತ್ರಗಳು ರೂಪುಗೊಳ್ಳುತ್ತವೆ. ಜಾಮಿನಿ ರಾಯ್ ಅವರು ಹಳ್ಳಿಯ 'ಪಟುವ' ಕಲಾವಿದರೊಂದಿಗೆ ಒಂದಾಗಿ ಕಲೆತು ಅದಕ್ಕೆ ವಿಶಾಲ ಅಭಿವ್ಯಕ್ತಿ ತಂದರು. ಅವರು ತಮ್ಮನ್ನೊಬ್ಬ 'ಪಟುವ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದರಲ್ಲಿ ಸಂತೋಷಿಸುತ್ತಿದ್ದರು. ಮುಂದಿನ ವರ್ಷಗಳಲ್ಲಿ ಅವರು ಬಂಗಾಳದ ಪ್ರಾದೇಶಿಕ ಕಲೆಗಳಿಂದಲೂ ಪ್ರೇರಣೆ ಪಡೆದರು.
ಸಾಂಪ್ರದಾಯಿಕವಾಗಿ ರಚಿಸುವ ದೃಶ್ಯಾವಳಿಗಳು ಮತ್ತು ವ್ಯಕ್ತಿಚಿತ್ರಗಳ ರಚನೆಯ ಮಾರ್ಗವನ್ನು ಪೂರ್ಣವಾಗಿ ಕೈಬಿಟ್ಟ ಜಾಮಿನಿ ರಾಯ್ 1921 ರಿಂದ 1924 ಅವಧಿಯಲ್ಲಿ ತಮ್ಮ ಪ್ರಯೋಗಶೀಲ ಚಿತ್ರಕಲೆಯ ಪ್ರಥಮ ಹಂತವಾಗಿ ಸಂಥಲ್ ನೃತ್ಯವನ್ನು ಆಯ್ಕೆ ಮಾಡಿಕೊಂಡರು.
ಹೀಗೆ ತಮ್ಮದೇ ಅದ ಹೊಸಮಾರ್ಗದಲ್ಲಿ ತಮ್ಮ ಕಲಾಭಿರುಚಿಗೆ ಅಭಿವ್ಯಕ್ತಿಯನ್ನು ಕಂಡುಕೊಂಡ ಜಾಮಿನಿ ರಾಯ್ ಭಾರತೀಯ ಚಿತ್ರಕಲೆಗೆ ಹಾಕಿಕೊಟ್ಟ ಮಾರ್ಗವಿಶಿಷ್ಟವಾದದ್ದು ಎಂದು ಪರಿಗಣಿತಗೊಂಡಿದೆ.
ಜಾಮಿನಿ ರಾಯ್ ಚಿತ್ರಕಲೆಯ ಯಂತ್ರಮಾನವರೆಂದೂ ಪ್ರಖ್ಯಾತರು. ಅವರು ತಮ್ಮ ಕಲಾ ಜೀವಿತಾವಧಿಯಲ್ಲಿ ರಚಿಸಿದ ಚಿತ್ರಗಳ ಸಂಖ್ಯೆ 20,000 ದಷ್ಟು. ಅಂದರೆ ಅವರು ಸರಾಸರಿ ದಿನಕ್ಕೆ ಹತ್ತು ಚಿತ್ರಗಳನ್ನು ರಚಿಸಿದ್ದಿರಬೇಕು. ಈ ಭಾರೀ ಸಂಖ್ಯೆ ಅವರ ಚಿತ್ರಗಳ ಗುಣಮಟ್ಟವನ್ನೆಂದಿಗೂ ಕಡಿಮೆಗೊಳಿಸಲಿಲ್ಲ.
ಜಾಮಿನಿ ರಾಯ್ ಅವರು ಕಲೆಯನ್ನು ಉಳಿಸಿ ಬೆಳೆಸುವ ಜನ ಮಧ್ಯಮ ವರ್ಗದವರು ಎಂದು ನಂಬಿದವರು. ಅವರ ಚಿತ್ರಗಳಿಗಾಗಿ ಶ್ರೀಮಂತ ಜನ ಮುಗಿಬೀಳುತ್ತಿದ್ದರು ನಿಜ. ಹೀಗಿದ್ದರೂ ಸಾಮಾನ್ಯ ಜನರೇ ತಮ್ಮ ಕಲೆಗೆ ಧ್ವನಿಯಾದವರು ಎಂದು ಅವರು ನಂಬಿದ್ದರು.
ಜಾಮಿನಿ ರಾಯ್ ಅವರ ಕಲಾಭಿವ್ತಕ್ತಿಗಳು ಮೊದಲಬಾರಿಗೆ 1938 ವರ್ಷದಲ್ಲಿ ಕೊಲ್ಕತ್ತಾದ ಬ್ರಿಟಿಷ್ ಇಂಡಿಯಾ ಮಾರ್ಗದಲ್ಲಿ ಪ್ರದರ್ಶನಗೊಂಡವು. 1940 ದಶಕದಲ್ಲಿ ಯೂರೋಪಿಯನ್ ಸಮುದಾಯ ಮತ್ತು ಬಂಗಾಳಿ ಮಧ್ಯಮವರ್ಗದ ಜನ ಇವರ ಕಲೆಗಳ ಪ್ರಧಾನ ಗ್ರಾಹಕರಾಗಿದ್ದರು. 1946 ರಲ್ಲಿ ಲಂಡನ್ ಮತ್ತು 1953 ರಲ್ಲಿ ನ್ಯೂ ಯಾರ್ಕ್ ನಗರಗಳಲ್ಲಿ ಜಾಮಿನಿ ರಾಯ್ ಅವರ ಕಲಾ ಪ್ರದರ್ಶನ ಏರ್ಪಟ್ಟವು. ಮುಂದೆ ಇತರ ವಿಶ್ವದೆಲ್ಲೆಡೆಯ ಕಲಾಪ್ರೇಮಿಗಳನ್ನೂ ಇವರ ಕಲೆ ಮನಸೂರೆಗೊಂಡಿತು. ಅವರ ಕಲಾಭಿವ್ಯಕ್ತಿಗಳು ಎಲ್ಲ ಪ್ರಸಿದ್ಧ ಸಂಗ್ರಹಾಲಯಗಳಲ್ಲೂ ಇವೆ.
1934ರಲ್ಲಿ ಜಾಮಿನಿ ರಾಯ್ ಅವರಿಗೆ ವೈಸರಾಯ್ ಸ್ವರ್ಣಪದಕ ಸಂದಿತು. 1955ರಲ್ಲಿ ಭಾರತ ಸರ್ಕಾರ ಜಾಮಿನಿ ರಾಯ್ ಅವರಿಗೆ ಪದ್ಮಭೂಷಣ ಗೌರವವನ್ನರ್ಪಿಸಿತು. 1955ರಲ್ಲಿ ಲಲಿತ ಕಲಾ ಅಕಾಡೆಮಿಯ ಫೆಲೊ ಗೌರವ ಸಂದಿತು. 1976 ರಲ್ಲಿ ಭಾರತ ಸರ್ಕಾರವು ಜಾಮಿನಿ ರಾಯ್ ಅವರನ್ನು ಸೇರಿದಂತೆ ನವಮಹಾನ್ ಕಲಾವಿದರ ಕಲಾಭಿವ್ಯಕ್ತಿಗಳನ್ನು ದೇಶದ ಕಲಾ ಸಂಪತ್ತು ಎಂದು ಘೋಷಿಸಿತು.
ಜಾಮಿನಿ ರಾಯ್ 1972ರ ಏಪ್ರಿಲ್ 24 ರಂದು ಈ ಲೋಕವನ್ನಗಲಿದರು.
Great artiste Jamini Roy
ಕಾಮೆಂಟ್‌ಗಳು