ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಜನಾ


 ಸುಜನಾ

ಸುಜನಾ ಎಂಬ ಸುಂದರ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಸಾಹಿತಿ ಮತ್ತು ಪ್ರಾಧ್ಯಾಪಕರು ಎಸ್. ನಾರಾಯಣ ಶೆಟ್ಟಿ ಅವರು. ಕನ್ನಡ ವಿದ್ಯಾರ್ಥಿಗಳ, ಓದುಗರ ಮತ್ತು ಆತ್ಮೀಯರ ಪಾಲಿಗೆ ಅವರು ಎಲ್ಲ ಅರ್ಥದಲ್ಲೂ ಸುಜನಾ ಎನಿಸಿದ್ದರು.

ಸುಜನಾ ಅವರು 1930ರ ಏಪ್ರಿಲ್ 13ರಂದು ಕೃಷ್ಣರಾಜ ಪೇಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಜನಿಸಿದರು. ತಂದೆ ಸುಬ್ಬಯ್ಯಶೆಟ್ಟಿ. ತಾಯಿ ಗೌರಮ್ಮ. ಹೊಳೆ ನರಸೀಪುರ, ಬೆಂಗಳೂರು, ಮೈಸೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು. ಗುರುವರೇಣ್ಯರಾಗಿದ್ದ ಕುವೆಂಪು, ಡಿ.ಎಲ್.ಎನ್. ಮುಂತಾದವರಿಂದ ಪ್ರಭಾವಿತರಾಗಿ ತಾವೂ ಅಧ್ಯಾಪಕರಾಗಬೇಕೆಂದು ಎಂ.ಎ. ಪದವಿ ಗಳಿಸಿದರು.  

ಸುಜನಾ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು.
ಅಧ್ಯಾಪನದ ಜೊತೆಗೆ ಕಾವ್ಯರಚನೆ ಮತ್ತು ವಿಮರ್ಶೆಯ ಕೃಷಿ ಕೈಗೊಂಡರು. ಅವರಿಗೆ ಗ್ರೀಕ್ ನಾಟಕಗಳ ಬಗ್ಗೆ ವಿಶೇಷ ಒಲವಿತ್ತು. ಇವರ ತರಗತಿಗಳೆಂದರೆ ವಿದ್ಯಾರ್ಥಿಗಳಿಗೆ ರಸದೌತಣವಾಗಿತ್ತು. ಭಾಷಣಕ್ಕೆ ನಿಂತರೂ ಅಷ್ಟೇ.  ಸಾಹಿತ್ಯದ ಒಳನೋಟಗಳನ್ನು ಕಣ್ಣ ಮುಂದೆ ಯಥಾವತ್ ಬಿಡಿಸಿಡುವ ಕಲೆ ಅವರಿಗೆ ಸಿದ್ಧಿಸಿತ್ತು.

ಕುವೆಂಪುರವರು ವಿವರಿಸಿದ ದರ್ಶನ ವಿಮರ್ಶೆಯ ವಿಧಾನವನ್ನನುಸರಿಸಿ ಸಾಹಿತ್ಯ ವಿಮರ್ಶೆಯ ಹೊಸವಿಧಾನವನ್ನೇ ರೂಪಿಸಿ ಬೆಳಸಿದ ಕೀರ್ತಿ ಸುಜನಾ ಅವರದು. "ಕುವೆಂಪು ಅಭಿಮಾನಿ ಮತ್ತು ಕುವೆಂಪು ಸಾಹಿತ್ಯದ ಒಳನೋಟದ ವಿಮರ್ಶಕ ಆಗಿಯೂ , ಕುವೆಂಪು ಹೆಸರನ್ನು ಸ್ವಂತ ಪ್ರಯೋಜನಕ್ಕೆ ಬಳಸಿಕೊಳ್ಳದ ಅನುಭಾವಿ ‘ಸುಜನಾ’ " ಎಂಬ ಬಿ. ಎ. ವಿವೇಕ ರೈ ಅವರ ಅಭಿಪ್ರಾಯ ತುಂಬಾ ಅರ್ಥಗಳನ್ನು ಧ್ವನಿಸುವಂತದ್ದಾಗಿದೆ.

ಸುಜನಾ ಅವರ ವಿಮರ್ಶಾ ಕೃತಿಗಳಲ್ಲಿ ‘ಹೃದಯ ಸಂವಾದ’, ‘ಪರಂಪರೆ’, ‘ಪರಂಪರೆ ಮತ್ತು ಕುವೆಂಪು’, ‘ಪು.ತಿ.ನ. ಕಾವ್ಯದ ಹೊಳಹುಗಳು’ ಮುಂತಾದವು ವಿಶೇಷವೆನಿಸಿವೆ. ಗ್ರೀಕ್ ನಾಟಕ ಏಜಾಕ್ಸ್‌ನ್ನು ಸಮರ್ಥವಾಗಿ ಅನುವಾದಿಸಿ ಕನ್ನಡಕ್ಕೆ ಕೊಟ್ಟಿರುವುದರ ಜೊತೆಗೆ ‘ಭಾರತ ಕಥಾಮಂಜರಿ’, ‘ಬಾಲಕಾಂಡ ವಾಲ್ಮೀಕಿ ರಾಮಾಯಣ’ವನ್ನು ಸಿ.ಪಿ.ಕೆ. ಅವರೊಡನೆ ಸಮರ್ಥವಾಗಿ ಅನುವಾದಿಸಿದರು. ಅವರ ಮತ್ತೊಂದು  ಮಹತ್ಕೃತಿ ಮಹಾಭಾರತದ ಯುದ್ಧ ಮುಗಿದ ನಂತರದ ಘಟನೆಗಳ ಮುಕ್ತ ಛಂದಸ್ಸಿನ ‘ಯುಗ ಸಂಧ್ಯಾ’ ಮಹಾಕಾವ್ಯ.

ಸುಜನಾ ನಾಣ್ಯಯಾತ್ರೆ, ಮಂಗಳಾರತಿ , ಸೊನ್ನೆ ಎರಡರ ನಡುವೆ ಮುಂತಾದ ಕವನಸಂಕಲನಗಳ ಜೊತೆಗೆ , ‘ಚಿಲಿಪಿಲಿ’ಎಂಬ ಮಕ್ಕಳ ಸಂಕಲನವನ್ನೂ ಕನ್ನಡಕ್ಕೆ ಕೊಟ್ಟಿದ್ದಾರೆ.

ಸುಜನಾ ಅವರು ಮೈಸೂರು ಮಹಾರಾಜಾ ಕಾಲೇಜು, ಯುವರಾಜಾ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ವಿಶ್ವವಿದ್ಯಾಲಯದ ರಿಜಿಸ್ಟ್ರಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಸುಜನಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ‘ಯುಗ ಸಂಧ್ಯಾ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಒಂದೇ ಸೂರಿನಡಿಯಲ್ಲಿ ಕವನ ಸಂಕಲನಕ್ಕೆ ವರ್ಧಮಾನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಮುಂತಾದ ಅನೇಕಗೌರವಗಳು ಸಂದಿದ್ದವು. 

ಮಹಾನ್ ವಿದ್ವಾಂಸರಾದ ಸುಜನಾ ಅವರು 2011ರ ಮೇ 15ರಂದು ಈ ಲೋಕವನ್ನಗಲಿದರು.

“ಜಾತಿ .ಗುಂಪು,ಅಧಿಕಾರ ,ಹಣ -ಯಾವುದೂ ಇಲ್ಲದ ‘ಸುಜನಾ’, ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮತ್ತು ಕರ್ನಾಟಕದ ಸಂಸ್ಕೃತಿಯ ಲೋಕದಲ್ಲಿ ಪರಂಪರೆಯ ಹೃದಯಸಂವಾದದಲ್ಲಿ ಸೊನ್ನೆ ಎರಡರ ನಡುವೆ ಸದಾ ಉಳಿಯುವ ಅಪೂರ್ವ ಚೇತನ” ಎಂಬ ಬಿ. ಎ. ವಿವೇಕ ರೈ ಅವರ ಮತ್ತೊಂದು ನುಡಿಯೂ ಮನದ ಕದವ ತಟ್ಟುವಂತದ್ದು.

Sujana, N. Narayana Shetty

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ