ಚಡಗ
ಸೂರ್ಯನಾರಾಯಣ ಚಡಗ
ಸೂರ್ಯನಾರಾಯಣ ಚಡಗರು ವಿದ್ವಾಂಸರಾಗಿ ಮತ್ತು ಅನೇಕ ಪ್ರತಿಭೆಗಳಿಗೆ ನೀರೆರೆದವರಾಗಿ ಹೆಸರಾಗಿದ್ದಾರೆ.
ಸೂರ್ಯನಾರಾಯಣ ಚಡಗರು 1932ರ ಏಪ್ರಿಲ್ 13ರಂದು ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಜನಿಸಿದರು. ತಂದೆ ನಾರಾಯಣ ಚಡಗ. ತಾಯಿ ಶೇಷಮ್ಮ. ಹುಟ್ಟಿದೂರಿನಲ್ಲಿಯೇ ಸೂರ್ಯನಾರಾಯಣ ಚಡಗರ ಪ್ರಾರಂಭಿಕ ಶಿಕ್ಷಣ ನಡೆಯಿತು. ಮನೆಯಲ್ಲಿ ಇದ್ದ ಭಾವನವರು ಕವಿ ಮುದ್ದಣನ ರಾಮೇಶ್ವಮೇಧವನ್ನು ಓದಿ ಹೇಳುತ್ತಿದ್ದಾಗ, ಬಾಲಕರಾಗಿದ್ದ ಚಡಗರ ಮನಸ್ಸಿನ ಮೇಲೆ ಪರಿಣಾಮಬೀರಿ, ತಾನೂ ಹೀಗೇ ಬರೆಯಬೇಕು ಎಂಬ ಆಶಯ ಆವರಿಸಿತು. ಒಂಬತ್ತನೇ ತರಗತಿಯಲ್ಲಿರುವಾಗಲೇ ಶಾಲೆಯ ಸ್ನೇಹಿತರನ್ನು ಸೇರಿಸಿಕೊಂಡು ಕೈಬರಹದ ಪತ್ರಿಕೆಯೊಂದನ್ನು ಪ್ರಾರಂಭಿಸಿದರು.
ಹತ್ತನೆಯ ತರಗತಿಗೆ ಬರುತ್ತಿದ್ದಂತೆ ಕನ್ನಡ ಪಂಡಿತರಾಗಿದ್ದ ಸುಬ್ರಾಯಭಟ್ಟರು ಶಾಲಾಗ್ರಂಥ ಭಂಡಾರದಿಂದ ವಾರಕ್ಕೆರಡು ಪುಸ್ತಕಗಳನ್ನು ಓದಲೇಬೇಕೆಂದು ಕಡ್ಡಾಯಗೊಳಿಸಿದಾಗ ಇವರ ಪಾಲಿಗೆ ಮೊದಲ ಸಲವೇ ಸಿಕ್ಕಿದ್ದು ಶಿವರಾಮ ಕಾರಂತರ ‘ಮುಗಿಯದ ಯುದ್ಧ’ ಹಾಗೂ ‘ಮರಳಿಮಣ್ಣಿಗೆ’ ಕಾದಂಬರಿಗಳು.
ಈ ಎರಡು ಕಾದಂಬರಿಗಳನ್ನು ಓದಿ ಪ್ರಭಾವಿತರಾದ ಚಡಗರು ತಮ್ಮ ನೆರೆಯಲ್ಲಿದ್ದ ಸಂಸಾರದ ನೈಜ ಘಟನೆಯನ್ನೇ ಆಧಾರವಾಗಿಸಿಕೊಂಡು ‘ಸಂಸಾರ’ ಎಂಬ ನಾಟಕ ರಚಿಸಿದರು. ನಂತರ ಇದೇ ವಸ್ತುವನ್ನಾಧರಿಸಿ ‘ರತ್ನ ಪಡೆದ ಭಾಗ್ಯ,’ ಎಂಬ ಮೊದಲ ಕಾದಂಬರಿ ಬರೆದರು.
ಮುಂದೆ ಸೂರ್ಯನಾರಾಯಣ ಚಡಗರು ಬದುಕನ್ನರಸಿ ಬೆಂಗಳೂರಿಗೆ ಬಂದು ಅಣ್ಣ ವಿಠಲದಾಸ ಚಡಗರ ಪ್ರೋತ್ಸಾಹದಿಂದ ಮಲ್ಲೇಶ್ವರಂನಲ್ಲೊಂದು ಹೊಟೇಲು ತೆರೆದು ಜೀವನವನ್ನಾರಂಭಿಸಿದ್ದರು. 1952ರಿಂದ ತಮ್ಮ ಬರವಣಿಗೆಯನ್ನೂ ಪ್ರಾರಂಭಿಸಿ ಹಲವಾರು ಸಾಹಿತಿಗಳ ಗಮನ ಸೆಳೆದ ಚಡಗರನ್ನು ಹುಡುಕಿಕೊಂಡು ಮಲ್ಲೇಶ್ವರಂನಲ್ಲಿದ್ದ ಇವರ ‘ದೇವಿಭವನ’ ಹೊಟೇಲಿಗೆ ಬಂದ ಸಾಹಿತಿಗಳಿಗೆ ಬೆಣ್ಣೆಮಸಾಲೆದೋಸೆ ಸೇವೆ ಸಲ್ಲುತ್ತಿತ್ತು.
ಚಡಗರ ಹೊಟೇಲಿನ ಡ್ರಾಯಿಂಗ್ ರೂಮಿನಲ್ಲಿ ಅ.ನ.ಕೃ, ತ.ರಾ.ಸು, ರಾಜರತ್ನಂ ಮುಂತಾದವರು ಸೇರುತ್ತಿದ್ದರು. ಡ್ರಾಯಿಂಗ್ ರೂಂ ಎಂದರೆ ಅದೆಂತಾದ್ದು! ಈರುಳ್ಳಿ, ಆಲೂಗಡ್ಡೆ ಮೂಟೆಗಳೇ ಕುರ್ಚಿಗಳು. ಇದು ಕೆಲ ಕಿರಿಯಸಾಹಿತಿಗಳ ನೆಚ್ಚಿನ ತಾಣವಾಗಿ ‘ಚಡಗರ ಕಟ್ಟೆ’ ಎಂದೇ ಪ್ರಸಿದ್ಧವಾಗಿತ್ತು. ಅಲ್ಲಿ ನಡೆಯುತ್ತಿದ್ದ ಚರ್ಚೆಯ ಫಲಶ್ರುತಿಯೇ ಕಥೆ ಕಾದಂಬರಿಗಳಿಗೆ ಪ್ರೇರಣೆಯಾಗುತ್ತಿತ್ತು.
ಸೂರ್ಯನಾರಾಯಣ ಚಡಗರು ತಮ್ಮ ಪುಸ್ತಕಗಳಿಗೆ ಮಾತ್ರವಲ್ಲದೆ ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸಲು ‘ನಂದನ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದರು.
ಚಡಗರು ಬರೆದ ಸಣ್ಣಕಥೆಗಳು ‘ನಮ್ಮೂರಕಥೆಗಳು’, ‘ಜರತಾರಿ ಕುಪ್ಪಸ’ ಮತ್ತು ‘ಆರನೆಯ ಮೈಲಿಕಲ್ಲು’ ಎಂಬ ಮೂರು ಸಂಕಲನಗಳಲ್ಲಿ ಸಂಗ್ರಹವಾಗಿವೆ.
ಅವರು ಸುಮಾರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದು ‘ಮನೆತನ’ ಕಾದಂಬರಿಗೆ ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತು. ‘ಹೆಣ್ಣು ಹೊನ್ನು ಮಣ್ಣು’ ಅನೇಕ ಮುದ್ರಣ ಕಂಡ ಕಾದಂಬರಿಯಾಗಿ ತುಳುಭಾಷೆಯಲ್ಲಿ ಚಲನಚಿತ್ರವಾಗಿ ಮೂಡಿತು. ಇದಲ್ಲದೆ ಅವರ ನಂದಾದೀಪ, ಮನೆಗೆ ಬಂದ ಸೊಸೆ, ಮನೆತುಂಬಿದ ಮಡದಿ, ಭೂರಿಬ್ರಾಹ್ಮಣ, ದೇವರ ಹೆಂಡತಿ ಮುಂತಾದ ಕಾದಂಬರಿಗಳೂ ಹಲವಾರು ಮುದ್ರಣಗಳನ್ನು ಕಂಡವು. ಕಾವೇರಿ, ಕ್ಷಮೆ ಇರಲಿ ಪ್ರಭುವೆ, ಸೀಮಂತಿ, ಅಮರಸರಸ್ವತಿ, ಬಂಗಾಲಕ್ಷ್ಮೀ ಧರ್ಮ, ಕರ್ಮ, ಹೃದಯರಾಣಿ ಸೇರಿದಂತೆ ಅವರು 30ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದರು..
ಚಡಗರು ಉದಯೋನ್ಮುಖ ಬರಹಗಾರರ ಬೆನ್ನೆಲುಬಾಗಿ ಪ್ರಕಾಶಕರಾಗಿದಷ್ಟೇ ಅಲ್ಲದೆ ತಾವು ಅನೇಕರ ಬರಹಗಳನ್ನು ಸಂಪಾದಕರಾಗಿ ತಮ್ಮ ಪ್ರಕಾಶನದಿಂದ ಪ್ರಕಟಿಸಿದರು. 1968ರಲ್ಲಿ 105 ಲೇಖಕಿಯರ 896 ಪುಟಗಳ ಕಥಾಸಂಕಲನ ‘ಕಾಮಧೇನು’, 1969ರಲ್ಲಿ 150 ನಗೆಬರಹಗಳ 1000 ಪುಟಗಳ ಸಂಕಲನ ‘ನಗೆನಂದನ’, 1974ರಲ್ಲಿ ಹಳಗನ್ನಡದಿಂದ ಆಧುನಿಕ ಕನ್ನಡದವರೆಗೆ ಹಾಸ್ಯ, ವಿಡಂಬನೆ, ಅಣಕ, ಕುಚೋದ್ಯ, ಪರಿಹಾಸ್ಯ , ವ್ಯಂಗ್ಯ ಬರಹಗಳ ಪದ್ಯ-ಗದ್ಯ ಮಿಶ್ರಿತ 217 ಲೇಖಕರ 1120 ಪುಟಗಳ ಬೃಹತ್ ಸಂಕಲನ ‘ಸುಹಾಸ’; ಪ್ರಾತಿನಿಧಿಕ ಕಥಾ ಸಂಕಲನ 'ದಿಗಂತ’; ಹಾಗೂ 'ಮೆಚ್ಚಿನ ಕನ್ನಡ ಬರಹಗಾರರು’ ಮುಂತಾದ ಕೃತಿಗಳನ್ನು ಪ್ರಕಟಿಸಿದರು. ಜೊತೆಗೆ ‘ಜಯದೇವಿತಾಯಿ’ (ಜಯದೇವಿತಾಯಿ ಲಿಗಾಡೆ), ‘ಕಾರಂತ ಕೊಂಗಾಟೆ (ಶಿವರಾಮ ಕಾರಂತರು), ‘ಸೃಜನ’ (ಡಿ. ವೀರೇಂದ್ರ ಹೆಗಡೆ) ಮುಂಥಾದವರ ಸಂಭಾವನಾ ಗ್ರಂಥಗಳನ್ನೂ ಸಂಪಾದಿಸಿದರು.
ಒಮ್ಮೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿನ ಸಾಹಿತ್ಯ ಕಾರ್ಯಕ್ರಮವೊಂದಕ್ಕೆ ರಾಧಾಕೃಷ್ಣ ಕಲ್ಯಾಣಪುರ್ ರೊಡನೆ ಹೋಗಿದ್ದು, ಅಲ್ಲಿನ ಪ್ರಾಚೀನ ಅರುಣಾಚಲದೇಗುಲದ ಪ್ರದಕ್ಷಿಣೆ ಬರುತ್ತಿದ್ದಾಗ ಕಾಲಿಗೆ ಎಡವಿದನ್ನು ಮಣ್ಣು ಸರಿಸಿ ನೋಡಿದರೆ ಅದೊಂದು ಸುಂದರ ವಿಗ್ರಹಮವಾಗಿತ್ತು. ಇದರಿಂದ ಪ್ರಚೋದಿತರಾಗಿ ಹಲವಾರು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿದರು. ಹೀಗೆ ಹತ್ತಾರು ವರ್ಷ ಊರೂರು ಸುತ್ತಿ ಅವರು ಸಂಗ್ರಹಿಸಿದ ವಸ್ತುಗಳು ಮನೆಯಲ್ಲೆಲ್ಲಾ ತುಂಬಿಹೋಗಿ, ಸ್ಥಳಾವಕಾಶ ಸಾಲದಾದಾಗ ಕನ್ನಡಸಾಹಿತ್ಯ ಪರಿಷತ್ತಿಗೆ ಕೊಟ್ಟರು.
ಚಡಗರಿಗೆ ಸಂಘಟನೆ, ಸಮಾರಂಭಗಳೆಂದರೆ ಸಂಭ್ರಮ ಎನಿಸುತ್ತಿತ್ತು. ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳಾದ ಅ.ನ.ಕೃ ಕಾರಂತರು, ಮಾಸ್ತಿ, ರಾಜರತ್ನಂ, ಗೋಕಾಕರು, ವಿ.ಸೀ, ಬೀ.ಚಿ ಮುಂತಾದವರುಗಳನ್ನು ಸನ್ಮಾನಿಸಿ ಸಂತಸ ಪಡುತ್ತಿದ್ದರು.
70ನೆಯ ಹುಟ್ಟು ಹಬ್ಬದ ಸಂದರ್ಭಕ್ಕೆ ಅಭಿಮಾನಿಗಳು ಚಡಗರಿಗೆ ಅರ್ಪಿಸಿದ ಗೌರವ ಗ್ರಂಥ ‘ಸಡಗರ’.
ಅನಾರೋಗ್ಯವನ್ನೂ ಲೆಕ್ಕಿಸದೆ ಸಾಹಿತ್ಯದ ಕಾರ್ಯಕ್ರಮವೆಂದರೆ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದ ಚಡಗರು 2006ರ ನವಂಬರ್ 14ರಂದು ಈ ಲೋಕವನ್ನಗಲಿದರು.
ಈಗಲೂ ಸೂರ್ಯನಾರಾಯಣ ಚಡಗರ ಹೆಸರಿನಲ್ಲಿ ಶ್ರೇಷ್ಠ ಸಾಹಿತ್ಯ ಸಾಧಕರಿಗೆ ಪ್ರಶಸ್ತಿ ಸಲ್ಲುತ್ತಿದೆ.
On the birth anniversary of scholar, writer and patron Suryanarayana Chadaga
ಕಾಮೆಂಟ್‌ಗಳು