ಸುಚಿತ್ರಾ ಸೇನ್
ಸುಚಿತ್ರಾ ಸೇನ್
ಸುಚಿತ್ರಾ ಸೇನ್ ಬಂಗಾಳಿ ಮತ್ತು ಹಿಂದೀ ಚಲನಚತ್ರರಂಗ ಕಂಡ ಅತ್ಯುತ್ತಮ ಕಲಾವಿದೆ. ಉತ್ತಮ್‍ಕುಮಾರ್, ಸಂಜೀವ್ ಕುಮಾರ್ ಅವರುಗಳೊಡನೆ ನಟಿಸಿದ ಅವರ ಚಿತ್ರಗಳು ಸ್ಮರಣೀಯವೆನಿಸಿವೆ.
ಸುಚಿತ್ರಾ ಸೇನ್ ಅವರ ಮೂಲ ಹೆಸರು ರಮಾ ದಾಸ್‍ಗುಪ್ತಾ. ಅವರು ಈಗಿನ ಬಾಂಗ್ಲಾ ದೇಶದ ಭಾಗವಾಗಿರುವ ಬಂಗಾ ಬರಿ ಗ್ರಾಮದಲ್ಲಿ 1931ರ ಏಪ್ರಿಲ್ 6ರಂದು ಜನಿಸಿದರು. ತಂದೆ ಕರುಣೊಮೊಯ್ ದಾಸ್‍ಗುಪ್ತಾ ಪಾಬ್ನಾ ಎಂಬಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಇಂದಿರಾ ದೇವಿ. ತಾತ ರಜೊನಿಕಾಂತ್ ಸೇನ್ ಕವಿಗಳಾಗಿ ಖ್ಯಾತರು. ಸುಚಿತ್ರಾ ಅವರ ಹೈಸ್ಕೂಲು ವರೆಗಿನ ವಿದ್ಯಾಭ್ಯಾಸ ಪಾಬ್ನಾದಲ್ಲಿ ನಡೆಯಿತು. ದೇಶ ವಿಭಜನೆಯ ಗಲಭೆಯ ಸಂದರ್ಭದಲ್ಲಿ ಇವರ ಕುಟುಂಬ ರಕ್ಷಣೆಗಾಗಿ ಪಶ್ಚಿಮ ಬಂಗಾಳಕ್ಕೆ ವಲಸೆ ಬಂತು. ಸುಚಿತ್ರಾ ಸೇನ್ ಅವರ ವಿವಾಹ ಹದಿನೈದನೆಯ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಆದಿನಾಥ್ ಸೇನ್ ಅವರ ಪುತ್ರ ದಿಬನಾಥ್ ಸೇನ್ ಅವರೊಂದಿಗೆ ನೆರವೇರಿತು. ಪತಿ ಮತ್ತು ಮಾವ ಸುಚಿತ್ರಾ ಅವರು ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಒತ್ತಾಸೆ ನೀಡಿದರು.
ಸುಚಿತ್ರಾ ಸೇನ್ ಅವರು 1952ರಲ್ಲಿ 'ಶೇಷ್ ಕೊಥಾಯ್' ಎಂಬ ಚಿತ್ರದ ಮೂಲಕ ನಟಿಸಲಾರಂಭಿಸಿದರು. ಅದು ಬಿಡುಗಡೆಯನ್ನೇ ಕಾಣಲಿಲ್ಲ. ಮುಂದಿನ ವರ್ಷ ಅವರು ಉತ್ತಮ್ ಕುಮಾರ್ ಅವರೊಂದಿಗೆ ನಿರ್ಮಲ್ ದೇ ಅವರ 'ಷರೇಯ್ ಚುವತೋರ್' ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಅಪಾರ ಯಶಸ್ಸು ಗಳಿಸಿತು. ಇಲ್ಲಿಂದ ಮುಂದೆ ಇಪ್ಪತ್ತು ವರ್ಷಗಳ ಕಾಲ ಉತ್ತಮ್ ಕುಮಾರ್ - ಸುಚಿತ್ರಾ ಸೇನ್ ಜನಪ್ರಿಯ ಕಲಾಜೋಡಿಯಾಗಿ ಕಾರ್ಯನಿರ್ವಹಿಸಿದರು. ಸುಚಿತ್ರಾ ಸೇನ್ ನಾಯಕಿಯಾಗಿ ನಟಿಸಿದ ಒಟ್ಟು 60 ಚಿತ್ರಗಳಲ್ಲಿ ಉತ್ತಮ್ ಕುಮಾರ್ 30 ಚಿತ್ರಗಳಲ್ಲಿ ನಾಯಕರಾಗಿದ್ದರು.
ಸುಚಿತ್ರಾ ಸೇನ್ 1955ರಲ್ಲಿ ತಾವು ನಟಿಸಿದ ಪ್ರಥಮ ಹಿಂದೀ ಚಿತ್ರ 'ದೇವ್‍ದಾಸ್'ನಲ್ಲೇ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಾಂಕಿತರಾಗಿದ್ದರು. ಬಂಗಾಳಿ ಚಿತ್ರರಂಗದಲ್ಲಂತೂ ಆಕೆ ಸಾರ್ವಕಾಲಿಕವಾಗಿ ಅತ್ಯಂತ ಜನಪ್ರಿಯ ಕಲಾವಿದೆ ಎನಿಸಿದವರು.
ಸುಚಿತ್ರಾ ಸೇನ್ ಅವರ ಪತಿ 1970ರಲ್ಲಿ ಅಮೆರಿಕದಲ್ಲಿ ನಿಧನರಾದರು. 1974ರಲ್ಲಿ ಸುಚಿತ್ರಾ ಸೇನ್ ಪ್ರಸಿದ್ಧ ಹಿಂದೀ ಚಲನಚಿತ್ರವಾದ 'ಆಂಧೀ'ಯಲ್ಲಿ ಮಹಾನ್ ನಟ ಸಂಜೀವ್ ಕುಮಾರ್ ಅವರಿಗೆ ಸರಿಸಮಾನವಾದ ಅವಿಸ್ಮರಣೀಯ ಅಭಿನಯ ನೀಡಿ ಪ್ರಖ್ಯಾತರಾದರು.
ಸುಚಿತ್ರಾ ಸೇನ್ 1959ರಲ್ಲಿ 'ದೀಪ್ ಜ್ವಲೆ ಜಾಯ್' ಚಿತ್ರದಲ್ಲಿ ಅತ್ಯುತ್ಕೃಷ್ಟ ಅಭಿನಯ ನೀಡಿದರು. 1969ರಲ್ಲಿ ಇದು 'ಖಾಮೋಷಿ' ಎಂಬ ಹೆಸರಿನಲ್ಲಿ ವಹೀದಾ ರಹಮಾನ್ ಅಭಿನಯದಲ್ಲಿ ಪ್ರಸಿದ್ಧ ಹಿಂದೀ ಚಿತ್ರವಾಯಿತು. 'ಉತ್ತರ್ ಫಲ್ಗುಣಿ' ಸುಚಿತ್ರಾ ಸೇನ್ ಅವರ ಚಿತ್ರಜೀವನದ ಮತ್ತೊಂದು ಮೈಲುಗಲ್ಲು.
1963ರಲ್ಲಿ ಸುಚಿತ್ರಾ ಸೇನ್ 'ಸಾತ್ ಪಾಕೆ ಬಂಧಾ' ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ ಮಾಸ್ಕೋ ಅಂತರರಾಷ್ಟ್ರೀಯ ಚಿತ್ರೋತ್ಸವದ ಪ್ರಶಸ್ತಿ ಗಳಿಸಿ, ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಪ್ರಥಮ ಭಾರತೀಯ ನಟಿ ಎನಿಸಿದರು.
ಸುಚಿತ್ರಾ ಸೇನ್ ಸಮಯ ಹೊಂದಾಣಿಕೆ ಆಗದ ಕಾರಣ ಸತ್ಯಜಿತ್ ರೇ ಅವರ ಚಿತ್ರದಲ್ಲಿ ನಟಿಸುವ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ರಾಜ್ ಕಫೂರ್ ಮತ್ತು ರಾಜೇಶ್ ಖನ್ನಾ ಚಿತ್ರಗಳ ಅವಕಾಶವನ್ನೂ ನಿರಾಕರಿಸಿದರು.
1972ರಲ್ಲಿ ಸುಚಿತ್ರಾ ಸೇನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿತು. ಸುಮಾರು 25 ವರ್ಷಗಳು ಚಿತ್ರರಂಗದಲ್ಲಿದ್ದು 1976ರಿಂದ ಚಿತ್ರರಂಗದಿಂದ ಹೊರಬಂದರು. 1979ರಿಂದ ಸಾರ್ವಜನಿಕ ಪ್ರಚಾರ ಜೀವನದಿಂದ ಹೊರಬರಲು ಆಶಿಸಿ ವೈರಾಗ್ಯದ ಜೀವನದತ್ತ ಮುಖಮಾಡಿ ಶ್ರೀರಾಮಕೃಷ್ಣ ಮಿಷನ್ನಿನ ಪ್ರಭಾವದಲ್ಲಿ ಜೀವನ ಸಾಗಿಸಿದರು. 2006ರಲ್ಲಿ ಘೋಷಿಸಿದ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನೂ ಸ್ವೀಕರಿಸಲಿಲ್ಲ.
ಸುಚಿತ್ರಾ ಸೇನ್ 2014ರ ಜನವರಿ 17ರಂದು ಈ ಲೋಕವನ್ನಗಲಿದರು.
On the birth anniversary of great actress Suchitra Sen
ಕಾಮೆಂಟ್‌ಗಳು