ಸಿ ಎನ್ ಮುಕ್ತಾ
ಸಿ ಎನ್ ಮುಕ್ತಾ
ಕನ್ನಡದ ಜನಪ್ರಿಯ ಬರಹಗಾರರಲ್ಲಿ ಸಿ. ಎನ್. ಮುಕ್ತಾ ಒಬ್ಬರು.
ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್. ಮುಕ್ತಾರವರು ಚಿತ್ರದುರ್ಗದಲ್ಲಿ 1951ರ ಏಪ್ರಿಲ್ 30ರಂದು ಜನಿಸಿದರು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿಗಳು, ಇವರ ಅಣ್ಣ ಪ್ರಖ್ಯಾತ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾಯರು. ಮುಕ್ತಾ ಅವರ ಸಾಹಿತ್ಯ ಕೃಷಿಗೆ ನಿರಂತರ ಪ್ರೋತ್ಸಾಹ ನೀಡಿದವರು ಅವರ ತಾಯಿ ಕಮಲಮ್ಮ.
ಪ್ರಾರಂಭಿಕ ಶಿಕ್ಷಣವನ್ನು ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸಂತೆ ಸರಗೂರು ಹಾಗೂ ಕೃಷ್ಣರಾಜಸಾಗರದಲ್ಲಿ ಪಡೆದ ಮುಕ್ತಾರವರು ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಸರಕಾರಿ ಕಾಲೇಜಿನಿಂದ ಬಿ.ಎಡ್. ಪದವಿಗಳನ್ನು ಪಡೆದು, ಪ್ರೌಢಶಾಲಾ ಉಪಾಧ್ಯಾಯಿನಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ಪ್ರೈಮರಿ ಶಾಲೆಯಲ್ಲಿದ್ದಾಗಲೇ ನೀತಿ ಪಾಠದ ತರಗತಿಯಲ್ಲಿ ಚನ್ನಬಸವಯ್ಯ ಎಂಬ ಮಾಸ್ತರರು ಕಾದಂಬರಿಗಳನ್ನು ತಂದು, ಕಣ್ಣಿಗೆ ಕಟ್ಟುವಂತೆ ರಸವತ್ತಾಗಿ ಮಾಡುತ್ತಿದ್ದ ವರ್ಣನೆಗಳಿಂದ ಪ್ರಭಾವಿತರಾದ ಮುಕ್ತಾ ಅವರಿಗೆ ಸಾಹಿತ್ಯದ ಕಡೆ ಒಲವು ಚಿಗುರತೊಡಗಿತು. ಮಾಸ್ತರರಿಂದ ಪಡೆದು ಮೊದಲು ಓದಿದ ಕಾದಂಬರಿ ತ.ರಾ.ಸು. ಅವರ ಚಂದವಳ್ಳಿಯ ತೋಟ . ಹೈಸ್ಕೂಲಿಗೆ ಬಂದಾಗ ಪ್ರೋತ್ಸಾಹ ನೀಡಿದವರು ಕನ್ನಡ ಪಂಡಿತೆ ನಾಗಲಕ್ಷ್ಮಮ್ಮನವರು. ಮುಂದೆ ರವೀಂದ್ರನಾಥ ಠಾಕೂರ್, ಶರಶ್ಚಂದ್ರರ ಕಾದಂಬರಿಗಳ ಅನುವಾದಗಳನ್ನೆಲ್ಲಾ ಓದಿದರು. ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದ ಬಿ.ಎಸ್. ರುಕ್ಕಮ್ಮನವರಿಂದ ಪ್ರೇರಿತರಾಗಿ ಚಿತ್ರದುರ್ಗದ ಇತಿಹಾಸದ ಕಾದಂಬರಿಗಳನ್ನು ಓದಿದರು.
ಹೀಗೆ ಓದುತ್ತಾ ಹೋದಂತೆಲ್ಲಾ ಬರೆಯಬೇಕೆಂಬ ತುಡಿತ ಪ್ರಾರಂಭವಾಗುತ್ತಿದ್ದ ದಿನಗಳಲ್ಲಿ, ಅಕ್ಕ ಪದ್ಮಜಾ ಸುಂದರೇಶ್ ಅವರ ‘ಅನಿರೀಕ್ಷಿತ’ ಕಾದಂಬರಿಯು ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ, ಮುಕ್ತಾ ಅವರಿಗೂ ಕಾದಂಬರಿ, ಕಥೆಗಳನ್ನು ಏಕೆ ಬರೆಯಬಾರದೆನ್ನಿಸಿ ಬರೆದ ಮೊದಲ ಕಾದಂಬರಿ ‘ಆಶ್ರಯ’. ಇದನ್ನು ‘ಪ್ರಜಾಮತ’ ಪತ್ರಿಕೆಗೆ ಕಳುಹಿಸಿದಾಗ, ಸಂಪಾದಕರಾಗಿದ್ದ ಮ.ನ. ಮೂರ್ತಿಯವರು ಓದಿ, ಪ್ರಶಂಸಿಸಿದರಾದರೂ ಪ್ರಕಟಿಸಲಾಗಲಿಲ್ಲ. ಇದೇ ಸಂದರ್ಭದಲ್ಲಿ ಬರೆದ ಹಲವಾರು ಕಥೆಗಳು ಮಲ್ಲಿಗೆ, ಸುಧಾ ಮುಂತಾದ ವಾರಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿತು.
ಅನಾವರಣ, ಅಪರಿಚಿತರು, ಅಸ್ವೀಕೃತರು, ಅನುರಾಗ ತಂದ ಅನುಬಂಧ, ಗೆಲುವಿನ ಹೆಜ್ಜೆ, ಕ್ಷಮಯಾಧರಿತ್ರಿ, ಸುಖದ ಸೋಪಾನಗಳು, ದಡ ಸೇರಿದ ನೌಕೆ, ಜೀವನ ಚಕ್ರ, ಅಮೃತಮಯಿ, ಕುಸುಮ ಕಸ್ತೂರಿ, ದಡ ಸೇರಿದ ನೌಕೆ, ದುಂಬಿ ಕೊರೆದ ಹೂವು, ಪ್ರೇಮಾಂಜಲಿ, ವಿಮುಕ್ತಿ, ಪರಿಭ್ರಮಣ, ದೋಣಿ ಸಾಗಲಿ ಮುಂತಾದ 75 ಕ್ಕೂ ಹೆಚ್ಚು ಕಾದಂಬರಿಗಳು, ಹತ್ತಾರು ಕಿರುಕಾದಂಬರಿಗಳು ಪ್ರಕಟಗೊಂಡಿದ್ದು ಇವುಗಳಲ್ಲಿ ಹಲವಾರು ಕಾದಂಬರಿಗಳು ಸುಧಾ, ಗೆಳತಿ, ಮಲ್ಲಿಗೆ, ಸಂಯುಕ್ತ ಕರ್ನಾಟಕ, ಮಂಜುವಾಣಿ, ವನಿತಾ, ಮಂಗಳ, ಕರ್ಮವೀರ ಮುಂತಾದ ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ.
ಸುಖದಸೋಪಾನ, ಕ್ಷಮಯಾಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಗೆಲುವಿನ ಹೆಜ್ಜೆ, ಅಮೃತಮಯಿ, ಮೌನರಾಗ, ಮುಂತಾದ ಕಾದಂಬರಿಗಳು ದೂರದರ್ಶನದಲ್ಲಿ ಧಾರಾವಾಹಿಗಳಾಗಿ ಪ್ರಸಾರವಾಗಿದ್ದರೆ ಕಿರುಚಿತ್ರಗಳಾಗಿ ಸೆಳೆತ, ಪಾಲು, ತಾಯಿಕರುಳು ಮುಂತಾದ ಕಥೆಗಳು ಪ್ರಸಿದ್ಧಿ ಪಡೆದಿವೆ. ‘ದೋಣಿ ಸಾಗಲಿ’ (ನಿರ್ದೇಶನ: ರಾಜೇಂದ್ರಸಿಂಗ್ ಬಾಬು) ಮತ್ತು ‘ಮಿಸ್ ಕ್ಯಾಲಿಫೋರ್ನಿಯ’ (ನಿರ್ದೇಶನ: ಕೋಡ್ಲು ರಾಮಕೃಷ್ಣ) ಚಲನಚಿತ್ರಗಳಾಗಿವೆ.
ಮುಕ್ತಾ ಅವರ ಸಣ್ಣ ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿದ್ದು, ವರ್ತುಲ, ಆವರಣ, ಸುಳಿ, ವೃತ್ತಗಳು, ಆವರ್ತನ, ನಮ್ಮನಮ್ಮೊಳಗೆ, ಮೂರು ಮುಷ್ಠಿಯ ಬದುಕು ಮುಂತಾದ ಕಥಾಸಂಕಲನಗಳಲ್ಲಿ ಸೇರಿವೆ. ಎರಡು ಪ್ರಬಂಧ ಸಂಕಲನಗಳಲ್ಲದೆ ಮಕ್ಕಳಿಗಾಗಿ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಹಲವಾರು ಶೈಕ್ಷಣಿಕ ಲೇಖನಗಳನ್ನು ಬರೆದಿದ್ದಾರೆ. ಲೇಖಕಿಯರ ಕಥಾ ಸಂಚಯವನ್ನು ಸಂಪಾದಿಸಿದ್ದಾರೆ.
ಸಾಹಿತ್ಯದ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿಯೂ ತೊಡಗಿಸಿ ಕೊಂಡಿದ್ದು ನೂರಾರು ಕೃತಿ ರಚಿಸಿರುವ ಸಿ.ಎನ್. ಮುಕ್ತಾರವರಿಗೆ ಆರ್ಯಭಟ ಪ್ರಶಸ್ತಿ, ಅತಿಮಬ್ಬೆ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಶಿಕ್ಷಕಿಯಾಗಿ ಸಾಹಿತ್ಯ ಕೃಷಿಮಾಡುವವರಿಗೆ ಸಲ್ಲುವ ಬನಶಂಕರಮ್ಮ ಪ್ರಶಸ್ತಿಯೂ ಸಂದಿದೆ.
On the birth day of novelist C. N. Mukta
ಕಾಮೆಂಟ್‌ಗಳು