ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಧಾ ರಘುನಾಥನ್


 ಸುಧಾ ರಘುನಾಥನ್


ಕರ್ನಾಟಕ ಸಂಗೀತದ ಬಹು ದೊಡ್ಡ ಹೆಸರು ಡಾ. ಎಂ. ಎಲ್. ವಸಂತಕುಮಾರಿ.  ಕರ್ನಾಟಕ ಸಂಗೀತದಲ್ಲಿ ಅವರ ಸಾಧನೆ ಮಹತ್ತರವಾದುದು.  ದಾಸ ಸಾಹಿತ್ಯವನ್ನು ಕರ್ನಾಟಕ ಸಂಗೀತದ ಮೂಲಕ ಜನಪ್ರಿಯಗೊಳಿಸಿದ ಅವರ ಸಾಧನೆ ಅವಿಸ್ಮರಣಿಯ.  ಆ ಮಹಾನ್ ಸಂಗೀತಗಾರ್ತಿಗೆ ತಕ್ಕ ಶಿಷ್ಯೆಯಾಗಿ ವಿಶ್ವದೆಲ್ಲೆಡೆ ತಮ್ಮ ಸಂಗೀತದಿಂದ ವಿಖ್ಯಾತರಾಗಿರುವವರು ಸುಧಾ ರಘುನಾಥನ್.  

ಸುಧಾ ರಘುನಾಥನ್ 1956ರ ಏಪ್ರಿಲ್ 30ರಂದು ಜನಿಸಿದರು. ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.  ಬಾಲ್ಯದಲ್ಲಿ ತಾಯಿಯವರಿಂದ ಸಂಗೀತಾಭಿರುಚಿ ಮತ್ತು ಪ್ರಾರಂಭಿಕ ಶಿಕ್ಷಣವನ್ನು ಪಡೆದ ಸುಧಾ ಮುಂದೆ ವಿದ್ವಾನ್ ಬಿ. ವಿ. ಲಕ್ಷ್ಮಣರ ಶಿಷ್ಯೆಯಾದರು.  1977ರ ವರ್ಷದಲ್ಲಿ ಕೇಂದ್ರಸರ್ಕಾರ ನೀಡಿದ ವಿದ್ಯಾರ್ಥಿ ವೇತನದ ದೆಸೆಯಿಂದ ಪದ್ಮವಿಭೂಷಣ ಸಂಗೀತ ಕಲಾನಿಧಿ ಡಾ. ಎಂ. ಎಲ್. ವಸಂತಕುಮಾರಿ ಅವರ ಶಿಷ್ಯೆಯಾಗುವ ಸೌಭಾಗ್ಯ ಸುಧಾ ಅವರಿಗೆ ಲಭಿಸಿತು.  ಎಂ. ಎಲ್. ವಿ ಅವರಿಗೆ ಸುಮಾರು ಒಂದು ದಶಕದ ಕಾಲ ಸಹ ಗಾಯಕಿಯಾಗಿ ಹಾಡುವ ಸೌಭಾಗ್ಯ ಕೂಡಾ ಅವರದಾಗಿತ್ತು.  

ಎಂ. ಎಲ್. ವಿ ಅವರ ಬಗ್ಗೆ ಪೂಜ್ಯ ಭಾವ ಹೊಂದಿರುವ ಸುಧಾ ಹೇಳುತ್ತಾರೆ, “ಸಂಗೀತವೆಂಬುದು ನನಗೆ ಅವರು ಕಲಿಸಿರುವ ಹಲವಾರು  ವಿಷಯಗಳಲ್ಲಿ ಒಂದಾಗಿದೆ.  ಬದುಕನ್ನು ಅದರ ಪೂರ್ಣತೆಯೊಂದಿಗೆ ಹೇಗೆ ಬದುಕಬೇಕೆಂಬುದನ್ನು ಅವರು ನನಗೆ ಕಲಿಸಿಕೊಟ್ಟರು”.  ಎಂ. ಎಲ್. ವಿ ಅವರು ತಮ್ಮ ಕಚೇರಿಗಳಲ್ಲಿ ಸುಧಾ ಅವರ ಪ್ರತಿಭೆ ಬೆಳಗಲು ಅಪಾರವಾದ ಅವಕಾಶಗಳನ್ನು ಸೃಷ್ಟಿಸಿಕೊಡುತ್ತಿದ್ದರು.  “ಕಚೇರಿಗಳಲ್ಲಿ ಅತ್ಯಂತ ವಿಶಾಲ ಮನೋಭಾವ ಮೆರೆಯುತ್ತಿದ್ದ ಅವರ ಗುಣ ಅವರ ಇಡೀ ಬದುಕಿನ ಒಂದು ವಿಸ್ತೃತ ಅಧ್ಯಾಯವಿದ್ದ ಹಾಗೆ” ಎಂದು ಭಾವುಕತೆಯ ಗೌರವಗಳೊಂದಿಗೆ ತಮ್ಮ ಗುರುವನ್ನು ನೆನೆದು ಕೃತಜ್ಞರಾಗುತ್ತಾರೆ ಸುಧಾ. ಇಂತಹ ಶಿಷ್ಯೆಯಲ್ಲದೆ ಮತ್ತಾರು ತಾನೇ ಎಂ.ಎಲ್.ವಿ ಅವರ ಶ್ರೇಷ್ಠ ಪರಂಪರೆಯ ವಾರಸುದಾರರಾಗಲು ಸಾಧ್ಯ.  ಸುಧಾ ಅವರು ತಮ್ಮ ಗುರುವಿನಂತೆಯೇ ದಾಸಸಾಹಿತ್ಯದ ಕೈಂಕರ್ಯವನ್ನೂ ಸಹಾ ತಮ್ಮ ಕಚೇರಿಗಳಲ್ಲಿ ಇನ್ನಿಲ್ಲದಂತೆ ನಡೆಸುತ್ತಾರೆ.  1990ರ ವರ್ಷದಿಂದ ಪ್ರಾರಂಭಗೊಂಡಂತೆ ಸುಧಾ ರಘುನಾಥನ್ ಅವರು ಸಂಗೀತ ಕ್ಷೇತ್ರದ ದಿಗ್ಗಜರ ಸಾಲಿಗೆ ದಾಪುಗಾಲು ಹಾಕುತ್ತ ನಡೆದಿದ್ದಾರೆ.

ಕೃತಿಗಳ ಅಭಿವ್ಯಕ್ತಿಯಲ್ಲಿ ಸ್ಪಷ್ಟತೆ, ರಾಗಗಳ ವಿಸ್ತಾರದಲ್ಲಿನ ಸುಶ್ರಾವ್ಯತೆ, ಕಲ್ಪನಾ ಸ್ವರಗಳಲ್ಲಿನ ಸುಲಲಿತ ಸಂಚಾರ, ನಗೆಮೊಗದ  ಮುಖಾರವಿಂದ  ಇವುಗಳ ಜೊತೆಗೆ ಗಾಂಭೀರ್ಯಯುಕ್ತವಾದ ಅವರ ಅವಿಚ್ಛಿನ್ನ ಆತ್ಮವಿಶ್ವಾಸ ಮತ್ತು ಇವೆಲ್ಲವನ್ನೂ ಸರಿದೂಗಿಸುವಂಥಹ ಸೌಜನ್ಯಯುತ ನಡವಳಿಕೆ ಇವುಗಳೆಲ್ಲಾ ಅವರ ಗುರುಗಳಾದ ಎಂ.ಎಲ್.ವಿ ಅವರ ಗುಣಗಳನ್ನೇ ನೆನಪಿಸುವಂತದ್ದಾಗಿದ್ದು, “ಈ ಎಲ್ಲವೂ ನನ್ನ ಗುರುಗಳು ದಯಪಾಲಿಸಿದ್ದು ಎಂದು ನಮ್ರರಾಗುತ್ತಾರೆ” ಸುಧಾ.

ಸುಧಾ ಅವರು ನಡೆಸುತ್ತ ಬಂದಿರುವ ವಿಶ್ವವ್ಯಾಪೀ  ಕಚೇರಿಗಳು ಅಸಂಖ್ಯಾತವಾದದ್ದು. ರಾಷ್ಟ್ರೀಯ ಕಾರ್ಯಕ್ರಮಗಳ ಅಡಿಯಲ್ಲಿ ಪ್ರಪ್ರಥಮವಾಗಿ ನೇರಪ್ರಸಾರಗೊಂಡ ಕಾರ್ಯಕ್ರಮಗಳ ಸುಮಧುರ ಧ್ವನಿ ಸುಧಾ ಅವರದ್ದು.  ದಿನಾಂಕ 27 ಜನವರಿ 2000ದಂದು ಭಾರತದ ಗಣರಾಜ್ಯೋತ್ಸವದ  ಸ್ವರ್ಣಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಪಾರ್ಲಿಮೆಂಟ್ ಹಜಾರದಲ್ಲಿ “ವಂದೇ ಮಾತರಂ” ಗೀತೆಯನ್ನು ಬೆಳಗಿದ ಕೀರ್ತಿ  ಸುಧಾ ರಘುನಾಥನ್ ಅವರದ್ದು.   

ಇಂದು ವಿಶ್ವದೆಲ್ಲೆದೆಲ್ಲೆಡೆ ವರ್ಷಪೂರ್ತಿ ಬಿಡುವಿಲ್ಲದಂತೆ ಸುಧಾ ರಘುನಾಥನ್ ಅವರ  ಕಾರ್ಯಕ್ರಮಗಳು ಜರುಗುತ್ತಿವೆ.  ವಿಶ್ವ ಸಂಗೀತ ಮೇಳಗಳಲ್ಲಿ ಅನೇಕ ವಿಶ್ವಪ್ರಸಿದ್ಧ ಸಂಗೀತಗಾರರ ಸ್ವರಸಮ್ಮೇಳದೊಂದಿಗೆ ತಮ್ಮ ಗಾನಮಾಧುರ್ಯವನ್ನು ಸಹಾ ಸಮ್ಮಿಳಿತಗೊಳಿಸಿದಂತಹ ಅಪೂರ್ವ ಕಲಾವಿದೆಯಾಗಿದ್ದಾರೆ ಆಕೆ. 

ರಾಷ್ಟ್ರೀಯ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೇ ಅಲ್ಲದೆ ಅನೇಕ ರಾಜ್ಯಗಳ, ವಿಶ್ವವಿದ್ಯಾಲಯಗಳ  ಮತ್ತು ಸಂಘ ಸಂಸ್ಥೆಗಳ ಗೌರವಗಳು ಸುಧಾ ರಘುನಾಥನ್ ಅವರಿಗೆ ಸಂದಿವೆ. 

ತಾನು ಬೆಳೆದುಬಂದ, ತನ್ನನ್ನು ಪ್ರೀತಿ ವಿಶ್ವಾಸ ಬೆಂಬಲ ಗೌರವಗಳಿಂದ ಬೆಳೆಸಿದ ಸಮಾಜಕ್ಕೆ ಕೃತಜ್ಞತಾ ಪೂರ್ವಕವಾಗಿ ಸೇವೆ  ಸಲ್ಲಿಸಬೇಕೆಂಬ   ಉದ್ದೇಶದಿಂದ  ಸುಧಾ ಅವರು 1999 ವರ್ಷದಿಂದ “ಸಮುದಾಯ ಫೌಂಡೆಶನ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಅದು ಸಮಾಜಕ್ಕೆ ಹಲವಾರು ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ.  

ಸುಧಾ ಅವರ ಈ ಎಲ್ಲಾ ಮಹತ್ವದ ಸಾಧನೆಗಳೂ ಸುಲಭವಾಗಿ ಬಂದಂತದ್ದಲ್ಲ.  ಅದರ ಹಿಂದೆ ಸಾಕಷ್ಟು ಶಿಸ್ತು, ಶ್ರದ್ಧೆ, ಪರಿಶ್ರಮಗಳಿವೆ.  ಎಚ್. ಡಬ್ಲ್ಯೂ ಲಾಂಗ್ ಫೆಲ್ಲೋ ಹೇಳುತ್ತಾನೆ, “ಬೃಹತ್ ಸಾಧಕರ ಸಾಧನೆಗಳೆಲ್ಲಾ ತಾನೇ ತಾನಾಗಿ ಬಂದವಲ್ಲ.  ಅವರಂತೆ ಬದುಕಿರುವ ಇತರರೆಲ್ಲಾ ನಿದ್ರಿಸುತ್ತಿದ್ದಾಗ, ಈ ಕಾರ್ಯಶೀಲರು ಎಚ್ಚೆತ್ತು ಶ್ರಮವಹಿಸಿ ತಮ್ಮ ಇರುಳುಗಳಲ್ಲಿ ಮೇಲೇರಿದರು” ಎಂದು.  ಸುಧಾ ಅವರ ಬದುಕು ಕೂಡಾ ಅದೇ ತೆರನಾದದ್ದು.  ಒಂದು ಶಿಖರವನ್ನು ಕ್ರಮಿಸಿದೊಡನೆಯೇ ಅವರು ತಮ್ಮ ಮತ್ತೊಂದು ಗುರಿಯತ್ತ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿರುತ್ತಾರೆ.

ತಮ್ಮ ಗುರು ಡಾ. ಎಂ. ಎಲ್. ವಿ ಅವರಂತೆಯೇ ಸುಧಾ ರಘುನಾಥನ್ ಅವರು ಕೂಡಾ ಕನ್ನಡದ ದಾಸ ಕೃತಿಗಳನ್ನು ಹಾಡುವುದರಲ್ಲಿ ಸಂತೋಷ ಕಂಡಿದ್ದಾರೆ.  ಹಲವು ಸಂದರ್ಭಗಳಲ್ಲಿ ಕನ್ನಡದಲ್ಲಿ ಸುಂದರವಾಗಿ ಸಂಭಾಷಿಸಬಲ್ಲ ಚತುರತೆಯನ್ನು ಕೂಡಾ ಮೆರೆದಿದ್ದಾರೆ.  ಸಂಗೀತ ಪರಂಪರೆಯ ಶ್ರೇಷ್ಠರ ಗಾಯನವನ್ನು ಕೇಳುತ್ತ ಬೆಳೆದ ನಮಗೆ ಸುಧಾ ಅಂತಹ ಪ್ರತಿಭಾವಂತರು ಸಂಗೀತದ ಅಭಿರುಚಿಯನ್ನು ನಿರಂತರವಾಗಿ ಏರುಮುಖವಾಗಿ ಕಾಪಾಡಿಕೊಂಡು ಬಂದಿರುವ ರೀತಿ, ಅದು ಎಂದೆಂದೂ ನಿರಂತರ ಗಂಗೆಯಂತೆ ಪ್ರವಹಿಸುತ್ತಲೇ ಇರುತ್ತದೆಂಬ ನಂಬಿಕೆಯನ್ನು ದೃಢೀಕರಿಸುತ್ತಿರುವ ಮನೋಜ್ಞ ಶಕ್ತಿಗಳು.  

On the birth day of great Carnatic classical vocalist Sudha Raghunathan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ