ಡಿ. ಕೆ. ಭೀಮಸೇನ ರಾವ್
ಡಿ. ಕೆ. ಭೀಮಸೇನ ರಾವ್
ಪ್ರೊ. ಡಿ. ಕೆ. ಭೀಮಸೇನ ರಾವ್ ಕಳೆದ ಶತಮಾನದ ಕನ್ನಡ ಸಾಹಿತ್ಯ ಲೋಕದ ಮೇರು ವಿದ್ವಾಂಸರಲ್ಲೊಬ್ಬರು.
ಭೀಮಸೇನ ರಾಯರು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ 1904ರ ಏಪ್ರಿಲ್ 8ರಂದು ಜನಿಸಿದರು. ತಂದೆ ಕೇಶವರಾವ್. ತಾಯಿ ಲಕ್ಷ್ಮೀಬಾಯಿ. ಇವರದ್ದು ಬಡತನದ ಬಾಲ್ಯವಾಗಿತ್ತು., ಬಾಲ್ಯದಲ್ಲಿಯೇ ಪಿತೃ ವಿಯೋಗವಾಯಿತು.
ಭೀಮಸೇನ ರಾಯರ ಪ್ರಾರಂಭಿಕ ಶಿಕ್ಷಣ ಅಯ್ಯನವರ ಮಠದಲ್ಲಿ ನೆರವೇರಿತು. ನಿಜಾಮರ ಆಡಳಿತಕ್ಕೊಳಪಟ್ಟಿದ್ದರಿಂದ ಉರ್ದುಭಾಷೆ ಕಲಿಕೆ ಅನಿವಾರ್ಯವಿತ್ತು. 1922ರಲ್ಲಿ ಉರ್ದು ಮಾಧ್ಯಮದಲ್ಲಿ ಮೆಟ್ರಿಕ್ಯುಲೇಷನ್ ಓದಿ ಮುಂದೆ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಗಳಿಸಿದರು. ಕನ್ನಡದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ಉತ್ತೇಜಿತರಾಗಿ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರು ವಿಶ್ವವಿದ್ಯಾಲಯಕ್ಕೆ ಬಂದರು. 1927ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ತರಗತಿಗಳು ಪ್ರಾರಂಭವಾಯ್ತು. ಆಚಾರ್ಯ ಬಿ.ಎಂ.ಶ್ರೀಕಂಠಯ್ಯ, ಪ್ರೊ.ಎ.ಆರ್.ಕೃಷ್ಣ ಶಾಸ್ತ್ರಿ ಮತ್ತು ಪ್ರೊ. ಟಿ.ಎಸ್.ವೆಂಕಣ್ಣಯ್ಯ ಅವರುಗಳು ಗುರುಗಳಾಗಿದ್ದರು. ಈ ಗುರುವರ್ಯರ ಮಾರ್ಗದರ್ಶನದಲ್ಲಿ 1929ರಲ್ಲಿ ಕುವೆಂಪು, ಡಿ.ಎಲ್.ನರಸಿಂಹಾಚಾರ್, ಕೆ. ವೆಂಕಟರಾಮಪ್ಪ, ಎನ್. ಅನಂತರಂಗಾಚಾರ್ ಮುಂತಾದವರ ಸಹಪಾಠಿಗಳಾಗಿ ಎಂ.ಎ.ಪದವಿ ಗಳಿಸಿದರು. ಈ ತರಗತಿಯಲ್ಲಿದ್ದ ಒಂಬತ್ತು ವಿದ್ಯಾರ್ಥಿಗಳು 'ನವರತ್ನರು' ಎಂದೆನಿಸಿದ್ದರಂತೆ.
ಭೀಮಸೇನರಾಯರು ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಬೋಧಕರಾಗಿ ಮತ್ತು ಸಂಶೋಧಕರಾಗಿ ವೃತ್ತಿ ಆರಂಭಿಸಿದರು. ಮುಂದೆ ಅಲ್ಲೇ ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ತಮ್ಮ ಅಧಿಕಾರಾವಧಿಯಲ್ಲಿ ಕನ್ನಡ ವಿಭಾಗವನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ ಹೈದರಾಬಾದಿನ ಆರೇಳು ಕಾಲೇಜುಗಳಲ್ಲಿ ಕನ್ನಡ ಅಧ್ಯಯನಕ್ಕಾಗಿ ವ್ಯವಸ್ಥೆ ಮೂಡಿಸಿದರು. ಗುಲಬರ್ಗಾ, ಯಾದಗಿರಿ, ರಾಯಚೂರು ಪ್ರದೇಶಗಳಲ್ಲಿ ಕನ್ನಡ ವ್ಯಾಸಂಗಕ್ಕಾಗಿ ಏರ್ಪಾಡು ಮಾಡಿ, ಹಳೆಯ ಹೈದ್ರಾಬಾದು ಕರ್ನಾಟಕದಲ್ಲಿ ಕನ್ನಡ ಕೀರ್ತಿಯನ್ನು ಬೆಳಗಿಸಲು ಭಾಷಾ ಸೇವಕರಾಗಿ ದುಡಿಮೆ ಮಾಡಿದರು. ಹೈದರಾಬಾದ್ ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇದಕ್ಕೊಂದು ಸ್ವಂತ ಕಟ್ಟಡ ಕಟ್ಟಿಸುವಲ್ಲಿ ಸಫಲ ಶ್ರಮ ನಿರ್ವಹಿಸಿದರು. ಸಂಘದ ಆಶ್ರಯದಲ್ಲಿ ಹಲವಾರು ಕೃತಿ ಪ್ರಕಟಣೆ ಮಾಡಿದರು. ಪ್ರತಿವರ್ಷ ನಾಡಹಬ್ಬದ ಆಚರಣೆ ಏರ್ಪಾಡಾಯಿತು. ನೃಪತುಂಗ ಶಾಲೆ, ಶಾರದಾ ಕನ್ಯಾಶಾಲೆಗಳನ್ನು ಒಂದೇ ಆಡಳಿತಕ್ಕೊಳಪಡಿಸಿ ಅಧ್ಯಕ್ಷರಾದರು. ನಿಘಂಟು ಸಂಪಾದಕ ಮಂಡಲಿಯಲ್ಲಿ ಕೊನೆವರೆಗೂ ದುಡಿದರು. ಕನ್ನಡ ವಿಶ್ವಕೋಶದ ಪ್ರಥಮ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು. ಆಚಾರ್ಯರು ಬಹು ಭಾಷಾ ಪಂಡಿತರಾಗಿದ್ದರಿಂದ 1965-67 ಅವಧಿಯಲ್ಲಿ 'ಜ್ಞಾನ ಪೀಠ ಪುರಸ್ಕಾರಕ್ಕೆ' ನಾಮಾಂಕಿತ ಆದ ಕೃತಿಗಳ ಮೌಲ್ಯಮಾಪನ ಸಮಿತಿಯ ಸದಸ್ಯರಾಗಿದ್ದರು. ಹೈದರಾಬಾದಿನ ಕರ್ನಾಟಕ ಶಿಕ್ಷಣ ಸಮಿತಿ ಹಾಗೂ ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಭೀಮಸೇನರಾಯರ ಮತ್ತೊಂದು ಆಸಕ್ತಿಯ ಕಾರ‍್ಯಕ್ಷೇತ್ರವೆಂದರೆ ಹಸ್ತಪ್ರತಿ ಸಂಗ್ರಹಣೆ ಮತ್ತು ಶಾಸನ ಸಂಗ್ರಹಣೆ. ಇವರು ಸಂಗ್ರಹಿಸಿದ ಹಸ್ತಪ್ರತಿಗಳನ್ನು ಉಸ್ಮಾನಿಯ ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿ ಇಂದಿಗೂ ನೋಡಬಹುದು.
ಭೀಮಸೇನರಾಯರ ಸೇವೆಗೆ ಮೈಸೂರು ಸರ್ಕಾರದಿಂದ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತು. ರಾಯರು ರಾಯಚೂರಿನಲ್ಲಿ 1945ರಲ್ಲಿ ನಡೆದ ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೆಯ ಅಧ್ಯಕ್ಷರಾಗಿದ್ದರು.
ಪ್ರೊ. ಭೀಮಸೇನರಾಯರ ಬರಹಗಳಲ್ಲಿ ಶಬ್ದಮಣಿ ದರ್ಪಣ; ಶಬ್ದಮಣಿದರ್ಪಣದ ಪಾಠಾಂತರಗಳು ಮತ್ತು ಅನುಭವಾಮೃತವು, ಹರಿ ಕಥಾಮೃತ ಸಾರವು; ಹದಿಮೂರನೆಯ ಶತಮಾನದ ಕರ್ನಾಟಕಾಂಧ್ರ ಮಹಾರಾಷ್ಟ್ರ ಸಾಹಿತ್ಯಾವಲೋಕನ; ಕುಮಾರರಾಮ ಕಾಳಗ; ಮಹಾಭಾರತ ಯುದ್ಧ ಪಂಚಕ; ಶಿವರಾತ್ರಿ ಕಥೆ, ರಜತೋತ್ಸವ ಪ್ರಗಾಥ, ಶಾಸನಗಳು, ಮುಂತಾದವು ಸೇರಿವೆ. ಇದಲ್ಲದೆ ರಾಯರು ಮಕ್ಕಳಿಗಾಗಿ ಹೂಮಾಲೆ, ಪಂಚತಂತ್ರ, ಶತಮೂರ್ಖರು ಎಂಬ ಕೃತಿಗಳನ್ನು ರಚಿಸಿದ್ದರು.
ಭೀಮಸೇನರಾಯರು 1969ರ ನವೆಂಬರ್ 29ರಂದು ಈ ಲೋಕವನ್ನಗಲಿದರು.
On the birth anniversary of great scholar and writer Prof. D. K. Bhimasen Rao
ಕಾಮೆಂಟ್‌ಗಳು