ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾನ್ವಿ ನರಸಿಂಗರಾಯರು


 ಮಾನ್ವಿ ನರಸಿಂಗರಾಯರು


ಮಾನ್ವಿ ನರಸಿಂಗರಾಯರು ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವನಿರ್ಮಾಣದಲ್ಲಿ ಪ್ರಮುಖರಾದವರು.

ಮಾನ್ವಿ ನರಸಿಂಗರಾಯರು 1911ರ ಏಪ್ರಿಲ್ 2ರಂದು ರಾಯಚೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರರಾವ್. ತಾಯಿ ಚಂದ್ರಮ್ಮ. ತಂದೆ ರಾಘವೇಂದ್ರರಾವ್ ಪ್ರಾಥಮಿಕದಿಂದ ಹೈಸ್ಕೂಲುವರೆಗೆ ರಾಯಚೂರಿನ ಹಮ್‌ದರ್ದ್ ಹೈಸ್ಕೂಲಿನಲ್ಲಿ ಓದಿದ ನರಸಿಂಗರಾಯರು ಪ್ರತಿಭಾವಂತ ವಿದ್ಯಾರ್ಥಿ ಎಂಬ ಖ್ಯಾತಿ ಪಡೆದಿದ್ದರು. ಮೆಟ್ರಿಕ್ ನಂತರದಲ್ಲಿ  ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದು, 1936ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಸ್ವರ್ಣಪದಕದೊಂದಿಗೆ ಪಡೆದರು.  ಅವರು ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠರಾದ ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ತೀನಂಶ್ರೀ ಮೊದಲಾದವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು.

ನರಸಿಂಗರಾಯರು  ಬರೆದ ಹಲವಾರು ಕವನಗಳು ಹೈದರಾಬಾದಿನ ಸಾಹಿತ್ಯ ಮಂದಿರದಿಂದ ಪ್ರಕಟಿಸಿದ ‘ಶ್ರೀಕಾರ’ ಎಂಬ ಗ್ರಂಥದಲ್ಲಿ ‘ಮಾನ್ವಿ’ ಎಂಬ ಹೆಸರಿನಿಂದ ಪ್ರಕಟಗೊಂಡಿವೆ. ಇವರು ಪ್ರಕಟಿಸಿದ ಪ್ರಮುಖ ಕೃತಿಗಳೆಂದರೆ ವಿ.ಸೀ.ಯವರ ಪಂಪಯಾತ್ರೆಯಂತೆಯೇ ‘ಕನ್ನಡಯಾತ್ರೆ’. ‘ಕನ್ನಡದ ಪರಿಚಯ’ ಎಂಬ ಹಿಂದಿ ಭಾಷೆಯಲ್ಲಿ ಬರೆದ ಕೃತಿ. ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ ‘ನಡುಗನ್ನಡ.’ ಈ ನಡುಗನ್ನಡ ಚರಿತ್ರೆಯನ್ನು ಭಾಷಾಶಾಸ್ತ್ರದ ಬೆಳಕಿನಲ್ಲಿ ವಿವರವಾಗಿ ಬರೆದು “ಕನ್ನಡ ಸಾಹಿತ್ಯಕ್ಕಾಗಿ ಪರಿಪುಷ್ಟವಾಗಿಯೂ, ಶ್ಲಾಘನೀಯವಾಗಿಯೂ ಮಾನ್ವಿಯವರು ಮಾಡಿರುವರು” ಎಂದು  ಎ.ಆರ್.ಕೃಷ್ಣಶಾಸ್ತ್ರಿಗಳಿಂದ  ಹೊಗಳಿಸಿಕೊಂಡ ಗ್ರಂಥವಿದು. ‘ಸರಸ್ವತಿ ತತ್ತ್ವ’ ಎಂಬದು 9 ಲೇಖನಗಳ ಸಂಗ್ರಹ. ಸಾಹಿತ್ಯದ ಉಗಮ, ರಸಸಿದ್ಧಾಂತ, ಕಲೆ ಮತ್ತು ನೀತಿ, ಕನ್ನಡ ಸಾಹಿತ್ಯ ಸಂಶೋಧನೆ, ಹೊಸಗನ್ನಡ ವಿಮರ್ಶೆ, ನಾಟಕ ಮೊದಲಾದುವುಗಳನ್ನೊಳಗೊಂಡಿದೆ. ಅವರು ಗುರುರಾಜ ಎಂಬ ಅಂಕಿತದಿಂದ ಹಲವಾರು ವಚನಗಳನ್ನೂ ರಚಿಸಿದ್ದರು.

ಮಾನ್ವಿ ನರಸಿಂಗರಾಯರಿಗೆ ಹೈದರಾಬಾದು ಕರ್ನಾಟಕ ವಿಭಾಗದ 1956ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1959ರಲ್ಲಿ ಬಿದರೆಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಸಂಶೋಧನೆ ಮತ್ತು ವಿಮರ್ಶಾಗೋಷ್ಠಿ ಅಧ್ಯಕ್ಷತೆ, ಆಂಧ್ರ ಪ್ರದೇಶದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಚಾಲಕತ್ವ, ಭಾರತ ಸರ್ಕಾರದ ಸಾಹಿತ್ಯ ಅಕಾಡಮಿಯ ಕಾರ್ಯಕಾರಿ ಸಮಿತಿಯ ಸದಸ್ಯತ್ವ ಮುಂತಾದ  ಗೌರವಗಳು ಸಂದವು.

ಮಾನ್ವಿ ನರಸಿಂಗರಾಯಾರು  1969ರ ಸೆಪ್ಟೆಂಬರ್ 9ರಂದು ನಿಧನರಾದರು.

On the birth anniversary of great scholar Manvi Narasinga Rao 


ಕಾಮೆಂಟ್‌ಗಳು

  1. ಮಾನ್ವಿ ನರಸಿಂಗರಾಯರ ಬಗೆಗಿನ ಬರಹ ಸ್ತುತ್ಯಾರ್ಹ.ಮಾನ್ವಿ ಪರಿವಾರ ಪ್ರಕಾಟಿಸಿದ ಮಾನ್ವಿ ಸಮಗ್ರ ಬಹು‌ಮವಬಲಿಕ ಆಕರ ಗ್ರಂಥ.ಹೈದರಾಬಾದ್ ಕನ್ನಡಿಗರರಿಗೆ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರ.ಸಲ್ಲಾಪದ ಬರಹ ಸಾಮಯಿಕ ಮತ್ತು ಅಭಿನಂದನಾರ್ಹ.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ