ಕನ್ನೆಪ್ಪಾಡಿ ರಾಮಕೃಷ್ಣ
ಕನ್ನೆಪ್ಪಾಡಿ ರಾಮಕೃಷ್ಣ
ಕನ್ನೆಪ್ಪಾಡಿ ರಾಮಕೃಷ್ಣರು ಭಾರತೀಯ ವ್ಯಂಗ್ಯ ಲೋಕದಲ್ಲಿ ಪ್ರಖ್ಯಾತರಾದವರು. ಕನ್ನಡದಲ್ಲಿ ‘ಶಿಂಗಣ್ಣ’ ಎಂಬ ಹೆಸರಿನಿಂದ ವ್ಯಂಗ್ಯಚಿತ್ರಗಳನ್ನು ಮೂಡಿಸುತ್ತಿದ್ದ ರಾಮಕೃಷ್ಣರು ಅದಕ್ಕೆ ಮುಂಚಿತಾವಾಗಿಯೇ ತಮಿಳು, ಇಂಗ್ಲಿಷ್, ಹಿಂದಿ, ಬೆಂಗಾಲಿ ಭಾಷೆಗಳ ಪ್ರಖ್ಯಾತ ಪತ್ರಿಕೆಗಳಲ್ಲಿಯೂ ಅದ್ಭುತ ವ್ಯಂಗ್ಯಲೋಕವನ್ನು ತೆರೆದಿಟ್ಟವರು. ಇವರ ವ್ಯಂಗ್ಯಚಿತ್ರಗಳು ಮಲಯಾಳದ ಪ್ರಖ್ಯಾತ ಪತ್ರಿಕೆಗಳಲ್ಲೂ ಜನಪ್ರಿಯಗೊಂಡಿದ್ದವು.
ಕನ್ನೆಪ್ಪಾಡಿ ರಾಮಕೃಷ್ಣರು ಪುತ್ತೂರು ಬಳಿಯ ಹಾರಾಡಿಯಲ್ಲಿ 1925ರ ಏಪ್ರಿಲ್ 29ರಂದು
ಜನಿಸಿದರು. ತಂದೆ ಪರಮೇಶ್ವರ ಶಾಸ್ತ್ರಿ. ತಾಯಿ ಸತ್ಯಭಾಮಾ ದೇವಿ.
ಕೈಗಾರಿಕಾ ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದ ಕನ್ನೆಪ್ಪಾಡಿ ರಾಮಕೃಷ್ಣರು ಮುಂದೆ ಸಾಬೂನು ತಯಾರಿಕಾ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದುಕೊಂಡರು. ಆದರೆ ಈ ಓದೆಲ್ಲವನ್ನೂ ಗಂಟೂಮೂಟೆಕಟ್ಟಿ ಅಟ್ಟದ ಮೇಲಿಟ್ಟು, ಅವರು ಆಯ್ಕೆಮಾಡಿಕೊಂಡ ಕ್ಷೇತ್ರ ‘ವ್ಯಂಗ್ಯಚಿತ್ರ’ ಲೋಕ. ಹಲವಾರು ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಮೂಡಿಸಿ ಪ್ರಖ್ಯಾತರಾಗಿದ್ದ ಇವರು ಕೆಲಕಾಲ ವಕೀಲಿ ವೃತ್ತಿಯನ್ನೂ ನಡೆಸಿದ್ದರು.
ಕನ್ನೆಪ್ಪಾಡಿ ರಾಮಕೃಷ್ಣರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ 1943ರಲ್ಲಿ ಅವರ ಮೊದಲ ವ್ಯಂಗ್ಯ ಚಿತ್ರ ಕಲ್ಕತ್ತೆಯಿಂದ ಪ್ರಕಟಗೊಳ್ಳುತ್ತಿದ್ದ ಓರಿಯಂಟ್ ಇಲ್ಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಯಲ್ಲಿ ಮೂಡಿಬಂತು. ಮುಂದೆ ಅವರು ನಿರಂತರವಾಗಿ ಬನಾರಸ್ ‘ಆಜ್’, ಅಲಹಾಬಾದಿನ ‘ಅಮೃತ ಬಜಾರ್’ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬಿಡಿಸಿದರು. ಅಂದಿನ ದಿನಗಳಲ್ಲಿ ಅವರಿಗೆ ವ್ಯಂಗ್ಯ ಚಿತ್ರಕ್ಕೆ ದೊರಕುತ್ತಿದ್ದ ಸಂಭಾವನೆ ಹತ್ತು ರೂಪಾಯಿ! ಅಂದಿನ ದಿನಗಳಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಸ್. ರಾಧಾಕೃಷ್ಣನ್, ಮದನ್ ಮೋಹನ್ ಮಾಳವೀಯ ಮುಂತಾದ ಗಣ್ಯರು ಕನ್ನೆಪ್ಪಾಡಿ ರಾಮಕೃಷ್ಣರ ಸೃಜನಶೀಲತೆಗೆ ಮೆಚ್ಚುಗೆ ಹೊಂದಿದ್ದರು.
1945ರ ವರ್ಷದಲ್ಲಿ ಕನ್ನೆಪ್ಪಾಡಿ ರಾಮಕೃಷ್ಣರು ಪೂರ್ಣಕಾಲಿಕ ವ್ಯಂಗ್ಯ ಚಿತ್ರಕಾರರಾಗಿ ’ಕಲ್ಕಿ’ ಪತ್ರಿಕಾ ಬಳಗಕ್ಕೆ ಸೇರ್ಪಡೆಗೊಂಡರು. ತಮಿಳು ಭಾಷೆಯನ್ನು ಕಲಿತು ಅವರು ರಚಿಸಿದ ವ್ಯಂಗ್ಯ ಚಿತ್ರಗಳು ಅಪಾರ ಜನಪ್ರಿಯತೆಗಳಿಸಿದವು. ಇವರ ವ್ಯಂಗ್ಯ ಚಿತ್ರಗಳ ಪ್ರಭಾವದಿಂದ ಕಲ್ಕಿ ಪ್ರಸಾರ 35 ಸಾವಿರದಿಂದ ಲಕ್ಷಕ್ಕೇರಿತು. ಬೇರೆ ಬೇರೆ ಲೇಖನಿ ನಾಮದಿಂದ ಅವರು ’ಕುಮುದಂ’. ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಮುಂತಾದ ಪತ್ರಿಕೆಗಳಿಗೆ ವ್ಯಂಗ್ಯ ಚಿತ್ರ ರಚನೆ ಮಾಡುತ್ತಿದ್ದರು. ಆಗಿನ ಕಾಲದಲ್ಲೆ ಅಮೆರಿಕಾದ ಪತ್ರಿಕೆಯೊಂದು ಇವರ ವ್ಯಂಗ್ಯ ಚಿತ್ರವನ್ನು 100 ಡಾಲರಿಗೆ ಖರೀದಿಸಿ ಗೌರವ ಸಲ್ಲಿಸಿತ್ತು.
1960ರ ದಶಕದಲ್ಲಿ ನವಭಾರತ ಸಂಪಾದಕರಾದ ವಿ.ಎಸ್. ಕುಡ್ವ ಮತ್ತು ರಾಮಕೃಷ್ಣರಿಬ್ಬರು ಯೋಚಿಸಿ, ವ್ಯಂಗ್ಯಚಿತ್ರದ ಶೀರ್ಷಿಕೆ ’ಶಿಂಗಣ್ಣ’ನ ಉದಯಕ್ಕೆ ನಾಂದಿ ಹಾಡಿದರು. ಇದು 14 ವರ್ಷ ಕಾಲ ನಿರಂತರವಾಗಿ ಮೂಡಿಬಂತು. ಕರಾವಳಿಯ ಜನರಿಗೆ ಶಿಂಗಣ್ಣ ಒದಗಿಸಿದ ಪಕ್ಷಾತೀತ, ಮದ್ಯ, ಬೀಡಿ, ಸಿಗರೇಟು ವರ್ಜಿತ ಕಾರುಬಾರು ಮನೋಜ್ಞವಾದದ್ದು. 1969ರಲ್ಲಿ ಪ್ರಾರಂಭವಾದ ‘ಉದಯವಾಣಿ’ಯಲ್ಲೂ ಹಾಗೂ ಟಿ.ಎಸ್.ಆರ್ ಅವರ ಆತ್ಮೀಯ ಒತ್ತಾಯದ ಮೇರೆಗೆ ಪ್ರಜಾವಾಣಿ, ಸುಧಾ, ಮಯೂರಗಳಲ್ಲೂ ಶಿಂಗಣ್ಣನ ಪ್ರವೇಶವಾಯಿತು. ಭಾಷೆಯ ನಿರ್ಬಂಧವಿಲ್ಲದೆ ರಾಮಕೃಷ್ಣರ ಹಲವಾರು ವ್ಯಂಗ್ಯ ಚಿತ್ರಗಳು ಕೇರಳದ ಮಾತೃಭೂಮಿ, ಮಲಯಾಳಂನ ಮನೋರಮಾ ಪತ್ರಿಕೆಗಳಲ್ಲೂ ಪ್ರಕಟಗೊಂಡವು.
ಕನ್ನೆಪ್ಪಾಡಿ ರಾಮಕೃಷ್ಣರಿಗೆ 1992ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕ ಸನ್ಮಾನ ಸಂದಿತು. ಇದಲ್ಲದೆ 1969ರಲ್ಲಿ ಪತ್ರಿಕಾ ಅಕಾಡಮಿ ಪ್ರಶಸ್ತಿಯೂ ಸಂದಿತು.
ಶಿಂಗಣ್ಣನ ವ್ಯಂಗ್ಯ ಚಿತ್ರ ಸಂಕಲನ, ವ್ಯಂಗ್ಯ ಬದುಕು (ಕನ್ನೆಪ್ಪಾಡಿ ಜೀವನಗಾಥೆ) ಮುಂತಾದವು ಕನ್ನೆಪ್ಪಾಡಿ ರಾಮಕೃಷ್ಣರ ಪ್ರಕಟಿತ ಕೃತಿಗಳು.
ಈ ಮಹಾನ್ ಕಲಾವಿದರು 2000ದ ಜುಲೈ 23ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
On the birth anniversary of great cartoonist Kanneppadi Ramakrishna
ಕಾಮೆಂಟ್‌ಗಳು