ಗಂಗಾಧರರಾಯರು
ಎಂ. ಎನ್. ಗಂಗಾಧರರಾಯರು ವೃತ್ತಿರಂಗಭೂಮಿಯ ಮಹತ್ವದ ಕಲಾವಿದರಲ್ಲೊಬ್ಬರು.
ಗಂಗಾಧರರಾಯರು 1888ರ ಏಪ್ರಿಲ್ 3ರಂದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದರು. ತಂದೆ ನರಸಿಂಹಯ್ಯ. ತಾಯಿ ಸಾಕಮ್ಮ. ಗಂಗಾಧರರಾಯರ ಪ್ರಾರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ನಡೆಯಿತು. ಅಕ್ಷರ ತಿದ್ದಿ ಮಗ್ಗಿ ಕಲಿತು, ಸ್ತೋತ್ರ ಕಂಠಪಾಠ ಮಾಡಿಕೊಂಡರು. ಇವರಿಗೆ ಅಚ್ಚರಿ ಹುಟ್ಟಿಸುವ ದೇಹದಾರ್ಢ್ಯವಿದ್ದು ದೊಡ್ಡಗಂಟಲು ಇದ್ದದ್ದರಿಂದ ಪುಟ್ಟಭೀಮಸೇನ, ಭೋಜಯ್ಯ ಇತ್ಯಾದಿ ಹೆಸರುಗಳನ್ನು ಹಳ್ಳಿಯವರು ಇಟ್ಟಿದ್ದರು. ಕುಸ್ತಿಪಟ್ಟು, ವರಸೆಗಳನ್ನು ಕಲಿತು ದೇಹ ಜಟ್ಟಿಯಂತಾಗಿತ್ತು. ಜೊತೆಗೆ ಇವರಿಗೆ ಭಜನೆ, ಸಂಗೀತ, ಹರಿಕಥೆ ನಾಟಕಗಳತ್ತ ಒಲವು ಮೂಡಿತು. ನಾಟಕವೆಂದರಂತೂ ಪಂಚಪ್ರಾಣ. ತುಮಕೂರಿನಲ್ಲಿ ಎಸ್ಎಸ್ಎಲ್‌ಸಿ ಓದಿದ ನಂತರ ಮೂಕನಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಉಪಾಧ್ಯಾಯರ ಹುದ್ದೆ ದೊರೆಯಿತು. ಪಾಠ ಕಲಿಸುವುದರ ಬದಲಿಗೆ ವ್ಯಾಯಾಮ ಕಲಿಸಿದರು. ಆರು ತಿಂಗಳಲ್ಲಿ ಬೇಸರಬಂದು ವೃತ್ತಿ ತೊರೆದು ಪೊಲೀಸ್ ಹುದ್ದೆಗೆ ಸೇರಿದರು. ಅದೂ ತೃಪ್ತಿಕೊಡದೆ ರಾಜೀನಾಮೆ ನೀಡಿದರು.
ಗಂಗಾಧರರಾಯರು ಬೆಂಗಳೂರಿನಿಂದ ತಂದ ಗ್ರಾಮೊಫೋನ್ ರೆಕಾರ್ಡ್ ಹಾಕಿ ಹಳ್ಳಿಗರಿಗೆ ಮನರಂಜನೆ ಒದಗಿಸಿದರು. ಸಮಯವಿದ್ದಾಗ ಬೇಸಾಯದಲ್ಲಿ ಮೈಮುರಿದು ದುಡಿದರು. ಹಳ್ಳಿಯವರ ಅಪೇಕ್ಷೆಯ ಮೇರೆಗೆ ನಾಟಕ ಕಲಿತು ಪ್ರದರ್ಶಿಸಿದರು. ಸಿರಿಯಾಳ ಚರಿತ್ರೆಯಲ್ಲಿ ಧರ್ಮಪಾಲನ ಪಾತ್ರ ನಿರ್ವಹಿಸಿದರು. ಅದ್ಭುತ ಮೈಕಟ್ಟು, ಸಾಹಿತ್ಯ, ಸಂಗೀತ ಜ್ಞಾನದಿಂದ ನೈಜ ಅಭಿನಯ ತೋರಿದರು. ನಂತರ ಸೀತಪ್ಪನ ’ಸೀತಾಮನೋಹರ ನಾಟಕ ಸಭಾ’ದ ಸುಭದ್ರ ನಾಟಕದಲ್ಲಿ ಬಲರಾಮನ ಪಾತ್ರದಿಂದ ತುಮಕೂರು ಜಿಲ್ಲೆಯಲ್ಲೆಲ್ಲ ಮನೆಮಾತಾದರು. ಗುಬ್ಬಿ ಕಂಪನಿಯಿಂದಲೂ ಆಹ್ವಾನ ಬಂತು. ಗುಬ್ಬಿ ಕಂಪನಿಯ ಚನ್ನಬಸವೇಶ್ವರಸ್ವಾಮಿ ನಾಟಕ ಸಂಸ್ಥೆಯ ಪ್ರಹ್ಲಾದ ನಾಟಕದಲ್ಲಿ ’ಹಿರಣ್ಯಕಶಿಪು’ವಾಗಿ, ಕೃಷ್ಣಲೀಲೆಯಲ್ಲಿ ’ಕಂಸ’ನಾಗಿ, ಯಮನ ಗರ್ವಭಂಗ ನಾಟಕದಲ್ಲಿ ’ಯಮ’ನಾಗಿ, ರಾಮಾಯಣದಲ್ಲಿ ’ರಾವಣೇಶ್ವರ’ನಾಗಿ ಪ್ರೌಢ ಅಭಿನಯ ನೀಡಿದರು. ನಂತರ ’ಭಾರತ ಜನಮನೋಲ್ಲಾಸಿನಿ ನಾಟಕಸಭಾ’ ದಲ್ಲಿ ನಟರಾಗಿ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಲ್ಲಿ ಖ್ಯಾತರಾದರು.
ರಾಯರಿಗೆ ಪ್ರೇಕ್ಷಕರನ್ನು ನಟನೆಯಿಂದ ಮೋಡಿಮಾಡುವ ಕಲೆ ಕರಗತವಾಗಿತ್ತು. ಚಿತ್ರದುರ್ಗದ ಕಲಾಭಿಮಾನಿಗಳಿಂದ ’ಅಭಿನವಕಂಠೀರವ’ ಬಿರುದು, ರಾಯಚೂರಿನ ಥಿಯೇಟರಿನಲ್ಲಿ ಶರಭಲೀಲೆ ವೀಕ್ಷಿಸಿದ ವೀರಶೈವ ಮಠಾಧೀಶರಿಂದ ಬಂಗಾರದ ಪದಕದೊಡನೆ ’ನಟಭಯಂಕರ’ ಬಿರುದು, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರಿಂದ ’ಪ್ರಿನ್ಸ್‌ಆಫ್ ಆಕ್ಟರ್ಸ್’ ಬಿರುದು ಮುಂತಾದ ಗೌರವಗಳು ಗಂಗಾಧರರಾಯರಿಗೆ ಸಂದವು.
ಗಂಗಾಧರರಾಯರು 1961ರ ಮಾರ್ಚ್ 12ರಂದು ಈ ಲೋಕವನ್ನಗಲಿದರು.
On the birth anniversary of great theatre artist M. N. Gangadhara Rao

ಕಾಮೆಂಟ್‌ಗಳು