ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹನುಮಜ್ಜಯಂತಿ


 ಹನುಮಜ್ಜಯಂತಿ


ನಮ್ಮ ಕಾಲದಲ್ಲಿ ನಮಗೆ ಹನುಮಂತನೇ ಅತ್ಯಂತ ಶ್ರೇಷ್ಠ ಸೂಪರ್ ಮ್ಯಾನ್. 

ಅಂದಿನ ದಿನಗಳಲ್ಲಿ ನಾವು ಚಿಕ್ಕವರಿದ್ದಾಗ  ನಮ್ಮ ಮನೆಗಳಲ್ಲಿ ಹಿರಿಯರು  ರಾಮಾಯಣ ಓದುತ್ತಿದ್ದಾಗ ಹನುಮಂತ ಅಂದ್ರೆ ಕಿವಿ ಚುರುಕಾಗುತ್ತಿತ್ತು.  ಹನುಮಂತ  ಹಾರುತ್ತಾ ಹೋದ ಎಂಬುದನ್ನು ಹಿರಿಯರು ವರ್ಣಿಸುತ್ತಿದ್ದರೆ  ಆಕಾಶ ನೋಡುತ್ತಾ ಅಲ್ಲೊಂದು ದೊಡ್ಡ ಮೋಡ ಹನುಮಂತನ ತರಹಾನೇ ಇದೆಯಲ್ಲಾ, ಬೆಟ್ಟಾನೂ ಹೊತ್ಕೊಂಡಿರೋ ತರಹ ಇದ್ಯಲ್ಲಾ ಇತ್ಯಾದಿ  ಭಾವ ಉಂಟಾಗ್ತಾ ಇತ್ತು.    

ಹನುಮಂತ ಹುಟ್ಟಿದಾಗಲೇ ಸೂರ್ಯನನ್ನು ಹಣ್ಣು ಅಂತ ಹಿಡಿಯೋಕೆ ಹೋಗಿ ರಪ್ ಅಂತ ಹೊಡಿಸ್ಕೊಂಡು ಕೆನ್ನೆ ಊದಿಸಿಕೊಂಡನಂತೆ.    ಆತ ಬೇಕು ಅಂದಾಗ ಗಾತ್ರ ಹೆಚ್ಚಿಸ್ಕೊಂಡು, ಇಲ್ಲ ಕುಗ್ಗಿಸ್ಕೊಂಡು ಬದಲಾಗ್ತಿದ್ದಿದ್ದು, ಏನು ಬೇಕಾದ್ರೂ ಎತ್ತಿ ಒಗೆಯೋ ಶಕ್ತಿ ಹೊಂದಿದ್ದು, ಎಲ್ಲಿ ಅಂದ್ರೆ ಅಲ್ಲಿ ಹಾರೋ ಶಕ್ತಿ ಹೊಂದಿದ್ದು, ಗಿಡಮೂಲಿಕೆ ತೊಗೊಂಬರಕ್ಕೆ  ಅಂತ ಹೋಗಿ ಬೆಟ್ಟಾನೇ ಹೊತ್ತು ತಂದಿದ್ದು, ರಾಕ್ಷಸಿ ಹೊಟ್ಟೆ ಒಳಗೆ ಟೂರ್ ಹೋದ ಹಾಗೆ ರೌಂಡ್ ಹೊಡೆದುಕೊಂಡು ಬಂದದ್ದು, ರಾವಣನ ಬಹುದೊಡ್ಡ ಶಕ್ತಿಯ ಪ್ರಮುಖ ಭಾಗವನ್ನ ಒಬ್ಬಂಟಿಯಾಗಿ ಪುಡಿ ಪುಡಿ ಮಾಡಿದ್ದು, ತನ್ನ ಬಾಲ ಹತ್ತಿಕೊಳ್ಳದೇ ಇರೋ ಹಾಗೆ ಲಂಕೆಗೆ ಬೆಂಕಿ ಇಟ್ಟಿದ್ದು, ಸೀತೆ, ಭರತ, ಇವರೆಲ್ಲಾ  ರಾಮನ ಬಗ್ಗೆ ಆಸೆ ಬಿಟ್ಟು ಇನ್ನೇನು ಜೀವ ಕಳೆದುಕೊಳ್ಳೋ ಹೊತ್ತಿಗೆ ಜೈ ಶ್ರೀರಾಮ್ ಅಂತ ಅವರ ಮೇಲೆ ಆತ್ಮಹತ್ಯೆ ಕೇಸ್ ಇಲ್ಲದ ಹಾಗೆ ಮಾಡಿದ್ದು ಇವೆಲ್ಲಾ  ಸಾಮಾನ್ಯಾನೇ!  ಅದ್ಯಾಕೋ ಇಷ್ಟೆಲ್ಲಾ ಫ್ಯಾಂಟಸಿ ಅಂಶಗಳಿದ್ರೂ  ಹನುಮಂತನ ಚರಿತ್ರೆ ನಮಗ್ಯಾರಿಗೂ ಅಸ್ವಾಭಾವಿಕ  ಎಂಬ ಭಾವವನ್ನೇ ಹುಟ್ಟಿಸೋಲ್ಲ.  ಬಹುಶಃ ಅದಕ್ಕೆ  ಆ ಪಾತ್ರದಲ್ಲಿ ತುಂಬಿಕೊಂಡಿರುವ ಸಚ್ಚಾರಿತ್ಯ್ರ ಕೂಡಾ ಕಾರಣ ಅನ್ನಿಸುತ್ತೆ.  

ಹನುಮಂತ ತುಂಬಾ ಡೀಸೆಂಟು.  ಜೊತೆಗೆ ಇಂಟೆಲಿಜೆಂಟು ಕೂಡಾ.  ಅವನಿಗೆ ಸ್ವತಃ ಹೆಂಡತಿ ಹುಡುಕಿಕೊಳ್ಳೋದಕ್ಕಿಂತಾ ರಾಮನಿಗೆ ಕಳೆದುಹೊಗಿರೋ ಹೆಂಡತಿ ಹುಡುಕಿಕೊಡೋದೇ ಬೆಟರ್ ಜಾಬ್ ಅನ್ನಿಸ್ತು.  ಅಷ್ಟೊಂದು ಕಪಿಗಳಿಗೆ ರಾಜಾನಾಗೋದಕ್ಕಿಂತ  ರಾಮನ ಪಾದಾನೇ ಬೆಟರ್ ಅನ್ನಿಸ್ತು.  ಸಿಂಹಾಸನದಲ್ಲಿ ಕೂತು ದರ್ಬಾರು ಮಾಡೋದಕ್ಕಿಂತ  ಸಮುದ್ರ ಹಾರೋದು, ರಾಕ್ಷಸರಿಗೆ ಮೊಟಕೋದು, ಮರ, ಬೆಟ್ಟ ಬಂಡೆ ಇವುಗಳನ್ನೆಲ್ಲಾ ಏಕಾ ಏಕಿ  ಯುದ್ಧದಲ್ಲಿ ಪುಂಡರ ಮೇಲೆ ಚೆಂಡಾಟ ಆಡೋದೇ ಖುಷಿ ಅನ್ನಿಸ್ತು.  ಆತ ಎಂದೂ ಆಸನವನ್ನೇ ಬಯಸಲಿಲ್ಲ.  ಸಕಲ ಸದ್ಗುಣಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾದ ಸಾಕು ಎಂಬ  ಶ್ರೇಷ್ಠ ಬದುಕನ್ನು ಬಾಳಿ ತೋರಿದ.  

ಹನುಮಂತನಂತ ಧೀರನಿಲ್ಲ, ಹನುಮಂತನಂತ ಬುದ್ಧಿವಂತನಿಲ್ಲ, ಹನುಮಂತನಂತ ಮನೋಬಲವುಳ್ಳವನಿಲ್ಲ, ಹನುಮಂತನಂತ  ಲೀಲಾಜಾಲವಾಗಿ ಯಾವುದೇ ಸಂದರ್ಭಕ್ಕೋ ಹೊಂದಿಕೊಳ್ಳಬಲ್ಲ ಸುಲಲಿತ ಸರಾಗ ವ್ಯಕ್ತಿತ್ವದವ ಮತ್ತೊಬ್ಬನಿಲ್ಲ, ಅಂತಹ ನಿಷ್ಠಾವಂತ ಮತ್ತೊಬ್ಬನಿಲ್ಲ, ಅಂತಹ ಶ್ರೇಷ್ಠ ಸೇವಕ ಇಲ್ಲವೇ ಇಲ್ಲ, ಅಂತಹ ಭಕ್ತ ಮತ್ತೊಬ್ಬನಿಲ್ಲ,  ಅಂತಹ ಸೌಜನ್ಯ, ಸಜ್ಜನಿಕೆ, ನಿರ್ಮಮ, ನಿರಹಂಕಾರ ವ್ಯಕ್ತಿ ಲೋಕದಲ್ಲೇ ಇಲ್ಲ.  ಅಪಾರ  ಶಕ್ತಿಯಿದ್ದರೂ ಅಪವ್ಯಯಿಸದೆ, ಇಲ್ಲವೇ ದುರ್ವ್ಯಯಿಸದೆ  ತನ್ನ ಸಾಮರ್ಥ್ಯವೆಲ್ಲವನ್ನೂ ಧರ್ಮಪ್ರಭು ಶ್ರೀರಾಮನ ಸೇವೆಗೆ, ಧರ್ಮಸಂಸ್ಥಾಪನೆಗೇ ವ್ಯಯಿಸಿದ ಮತ್ತೊಂದು ವ್ಯಕ್ತಿತ್ವ ವಿಶ್ವದಲ್ಲಿಯೇ ಇಲ್ಲ.

ವಿಶ್ವದಲ್ಲಿ  ಬಾಲ ಇರುವ, ಬಾಲ ಇಲ್ಲದ ಎಷ್ಟೇ ಕಪಿಗಳು ಎಷ್ಷೆಷ್ಟೋ ಉದಿಸಿರಬಹುದು, ಮಹಾಪುರುಷರೂ, ಮಹಾನುಭಾವರೂ ಬಂದು ಹೋಗಿರಬಹುದು. ಇವರೆಲ್ಲರನ್ನೂ ಮೀರಿದಂತೆ ನಮ್ಮ ಹೃದಯಗಳಲ್ಲಿ ನೆಲೆಸಿರುವ ಹನುಮಂತನ ಪ್ರಭಾವ ಮಾತ್ರ ಅಚ್ಚಳಿಯದಂತದ್ದು.  ಹಾಗಾಗಿಯೇ ಆತ ನಿಜವಾಗಿಯೂ ಚಿರಂಜೀವಿ.  ಈ ಸರ್ವಶ್ರೇಷ್ಠ ಹನುಮಂತನಿಗೆ ಹನುಮಜ್ಜಯಂತಿಯಂದು  ಸಾಷ್ಟಾಂಗ ಪ್ರಣಾಮಗಳು.  

ಹನುಮಣ್ಣ ಪ್ಲೀಸ್ ನೀ ಬರ್ತಾ ಈ ಕೊರೊನಾ ವಾಸಿ ಆಗೋಕೆ ಮೂಲಿಕೆ ತೊಗೊಂಬಾ.  ಬೆಟ್ಟಾನೇ ತಂದ್ರೂ ಪರವಾಗಿಲ್ಲ. ಈಗ ಎಲ್ಲೂ ಟ್ರಾಫಿಕ್ ಇಲ್ಲ.  ಇಲ್ಲಿರೋ ನಾವು ದಡ್ ಮುಂಡೇವು.  ಯೋಗ್ಯರಲ್ಲ ಅಂತೀಯಾ. ಹಾಗಿದ್ರೆ ಬೆಟ್ಟಾನೇ ಹಾಕ್ಬಿಡು ತಲೆ ಮೇಲೆ, ಇಲ್ಲಾಂದ್ರೆ ಒಳ್ಳೇ ಬುದ್ಧಿಕೊಡು.  ಅಡ್ಬಿದ್ದೆ ಹನುಮಣ್ಣ.  ನಾ ಬಾಲ ಇಲ್ಲದ ಕಪಿ.

On Hanuman Jayanthi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ