ಪುನರುತ್ಥಾನ
ಪುನರುತ್ಥಾನ
ಶಿಲುಬೆ ಏರಿದ ಯೇಸು ಮೃತನಾದರೂ ಅಲ್ಲಿಂದ ಮೂರನೆಯ ದಿನ ಮತ್ತೆ ಜೀವ ಪಡೆದು ಎದ್ದು ಬಂದವ ಎಂಬ ನಂಬಿಕೆ. ಕ್ರೈಸ್ತ ಧರ್ಮದ ಅಳಿವು ಉಳಿವುಗಳು ಈ ನಂಬಿಕೆಯನ್ನು ಅವಲಂಬಿಸಿವೆ. ಕ್ರಿಸ್ತನನ್ನು ಪುನಃ ಜೀವಂತಗೊಳಿಸದಿದ್ದರೆ, ನಮ್ಮ ಬೋಧನೆ ಪೊಳ್ಳಾಗುತ್ತಿತ್ತು ಮತ್ತು ನಿಮ್ಮ ನಂಬಿಕೆಗೆ ತಳಹದಿಯೇ ಇರುತ್ತಿರಲಿಲ್ಲ. ನಿಮ್ಮ ನಂಬಿಕೆ ವ್ಯರ್ಥ. ನೀವಿನ್ನೂ ಪಾಪದಲ್ಲೇ ಇರುವಿರಿ ಎಂದು ಸಂತ ಪಾಲ್ ಹೇಳುತ್ತಾನೆ. ಅಫೊಸಲರ ಬೊಧನೆಯ ವಸ್ತುವೂ ಕ್ರೈಸ್ತ ನಂಬಿಕೆಯ ವಸ್ತುವೂ ಇದೇ ಆಗಿದೆ. ಪುನರುತ್ಥಾನವನ್ನು ನಿರಾಕರಿಸಿದುದರಿಂದಲೇ ಯಹೋದ್ಯೇತರರು ಕ್ರೈಸ್ತ ಧರ್ಮವನ್ನು ನಿರಾಕರಿಸಿದುದು. ಈ ನಂಬಿಕೆ ವಾಸ್ತವ ಸತ್ಯಗಳ ತಳಹದಿಯ ಮೇಲೆ ನಿಂತಿದೆ.
ಸುವಾರ್ತೆಗಳಲ್ಲಿ ಕಥಿತವಾದ ಘಟನಾವಳಿಗಳ ಕ್ರಮ ಹೀಗಿದೆ: ಶುಕ್ರವಾರ ಯೇಸು ಶಿಲುಬೆಯ ಮೇಲೆ ಸತ್ತ ಬಳಿಕ ಅರಿಮತೇಯದ ಜೋಸಫ್ ಎಂಬುವನ ಸಮಾಧಿಯಲ್ಲಿ ಯೇಸುವಿನ ಕಳೇಬರಹವನ್ನು ಇಟ್ಟರು. ಆ ಸಂಜೆ ಶವಸಂಸ್ಕಾರದ ವೇಳೆಯಲ್ಲಿ ಸುಗಂಧ ದ್ರವ್ಯವನ್ನು ಲೇಪನ ಮಾಡಲು ಅವಕಾಶವಿರಲಿಲ್ಲ. ಸಬ್ಬತ್ (ಶನಿವಾರ) ಕಳೆದು ಭಾನುವಾರ ಸೂರ್ಯೋದಯವಾಗುತ್ತಿರುವಂತೆಯೇ ಈ ಸೇವೆಯನ್ನು ಸಲ್ಲಿಸುವುದಕ್ಕೋಸ್ಕರ ಯೇಸುವಿನ ಜೀವಿತ ಕಾಲದಲ್ಲಿ ಅವನನ್ನು ಹಿಂಬಾಲಿಸಿದ ಕೆಲವು ಸ್ತ್ರೀಯರು ಸಮಾಧಿಯ ಬಳಿ ಬಂದರು. ಆದರೆ ಯೇಸುವಿನ ಕಳೇಬರ ಅಲ್ಲಿ ಅವರಿಗೆ ಕಾಣಸಿಗಲಿಲ್ಲ. ಬದಲಾಗಿ ಹೊಳೆಯುವ ಉಡುಪನ್ನುಟ್ಟ ಇಬ್ಬರು ಯುವಕರು, "ಯೇಸು ಜೀವಂತನಾಗಿದ್ದಾನೆ" ಎಂದು ಅವರಿಗೆ ತಿಳಿಸಿದರು. ಹೆಂಗಸರು ಈ ವಿಷಯವನ್ನು ಅಪೋಸಲರಿಗೆ ತಿಳಿಸಿದರು. ಅಪೋಸಲರಾದರೋ ಅದನ್ನು ನಂಬಲಿಲ್ಲ.
ಸಮಾಧಿ ಬರಿದಾಗಿದೆಯೆ ಇಲ್ಲವೆ ಎಂಬುದನ್ನು ಕಣ್ಣಾರೆ ಕಂಡು ಖಚಿತಪಡಿಸಿಕೊಳ್ಳಲು ಪೀಟರ್ ಒಬ್ಬನೆ ಹೋದ. ಅಂದು ಮತ್ತು ಅನಂತರ ಹಲವು ಬಾರಿ ಯೇಸು ತನ್ನ ಅಪೋಸಲರಿಗೆ ಪ್ರತ್ಯಕ್ಷನಾದ. ಅವರ ಜೊತೆಯಲ್ಲಿ ಸಂಭಾಷಿಸಿ, ಊಟ ಮಾಡಿ ತನ್ನ ಗಾಯಗಳನ್ನು ಅವರಿಗೆ ತೋರಿಸಿ ತಾನು ನಿಜವಾಗಿಯೂ ಜೀವಂತವಾಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟ.
ಪುನರುತ್ಥಾನವನ್ನು ಕಣ್ಣಾರೆ ಕಂಡ ಮನುಷ್ಯನಿಲ್ಲ. ಆದರೆ ಯೇಸುವಿನ ಮಿತ್ರರೂ ಶಿಷ್ಯರೂ ಅವನ ಮರಣಾನಂತರ ಅವನು ಜೀವಂತನಾಗಿರುವುದನ್ನು ಕಂಡರು. ಭಾನುವಾರ ಬೆಳಿಗ್ಗೆ ಸಮಾಧಿ ಬರಿದಾಗಿತ್ತು ಮತ್ತು ಇವರೆಲ್ಲ ತಮ್ಮ ಮಧ್ಯ ಜೀವಂತವಾಗಿರುವ ಯೇಸುವನ್ನು ಕಂಡರು ಎಂಬ ವಾಸ್ತವ ಸತ್ಯದ ಬಗೆಗೆ ಇರುವ ಸಾಕ್ಷ್ಯ ಹೊಸ ಒಡಂಬಡಿಕೆಯಲ್ಲಿರುವ ಸಾಕ್ಷ್ಯಗಳಲ್ಲೆಲ್ಲ ಅತ್ಯಂತ ಪ್ರಬಲವಾದುದು. ಹಾಗಾದರೆ ಶುಕ್ರವಾರ ಶಿಲುಬೆಗೇರಿಸಿದ ನಜರೇತಿನ ಯೇಸುವಿಗೆ ನಿಜವಾಗಿಯೂ ಆದುದ್ದಾದರೂ ಏನು ? ಮೊತ್ತಮೊದಲಿಗೆ, ಯೇಸುವಿನ ಮರಣಾನಂತರ ಅವನನ್ನು ಕಂಡ ಶಿಷ್ಯರು ಮತ್ತಿತರರು ನಿಜವಾದ ಒಬ್ಬ ಮನುಷ್ಯನನ್ನು ಕಂಡರು. ಅವನು ತೋಟವನ್ನು ನೋಡಿಕೊಳ್ಳುವವನಿರಬೇಕೆಂದು ಮಗ್ದಲದ ಮರಿಯ ಭಾವಿಸಿದಳು. ಆದರೆ ಹೆಸರನ್ನು ಹಿಡಿದು ಅವಳನ್ನು ಯೇಸು ಕರೆದಾಗ ಅವನ ಮನುಷ್ಯ ಸಹಜ ಪ್ರೀತಿಯ ಸ್ಪರ್ಶವನ್ನು ಅವಳು ಅನುಭವಿಸಿ ಅವನು ತನ್ನ ಪ್ರಭು ಎಂದು ಗುರುತು ಹಿಡಿದಳು (ಜಾನ್). ಇಬ್ಬರು ಶಿಷ್ಯರ ಜೊತೆ ಅವನು ಒಂದಷ್ಟು ದೂರ ನಡೆದುಹೋದ (ಲೂಕ್). ಪೀಟರ್ ಮತ್ತಿತರರೊಡನೆ ಸರೋವರದ ತೀರದಲ್ಲಿ ಪ್ರಾತಃಕಾಲದಲ್ಲಿ ತಿಂಡಿಯನ್ನು ತಿಂದ (ಜಾನ್). ಶುಕ್ರವಾರ ಸತ್ತ ಯೇಸು ಪುನಃ ಜೀವಂತನಾಗೆದ್ದನು ಎಂಬುದನ್ನು ಈ ಘಟನೆಗಳು ತೋರಿಸುತ್ತವೆ.
ಯೇಸುವಿನ ಪುನರುತ್ಥಾನಕ್ಕೂ ಲಾಜರಸನನ್ನು ಪುನಃ ಜೀವಂತಗೊಳಿಸಿದುದಕ್ಕೂ ವ್ಯತ್ಯಾಸವಿದೆ. ಲಾಜರಸನ ದೇಹ ಸಾವಿಗೀಡಾಗುವಂತಹದು. ಆದರೆ ಸತ್ತವರ ಮಧ್ಯದಿಂದ ಪುನಃ ಜೀವಂತಗೊಳಿಸಲ್ಪಟ್ಟ ಕ್ರಿಸ್ತ ಮತ್ತೆಂದೂ ಸಾಯುವವನಲ್ಲ ಎಂದು ನಮಗೆ ತಿಳಿದಿದೆ. ಸಾವಿಗೆ ಅವನ ಮೇಲೆ ಇನ್ನು ಅಧಿಕಾರವಿಲ್ಲ (ರೋಮನ್ಸ್).
ಎರಡನೆಯದಾಗಿ, ಪುನರುತ್ಥಾನಗೊಂಡ ಯೇಸುವಿನ ಶರೀರ. ಅದು ನಿಜವಾದ ದೇಹವಾಗಿದ್ದರೂ ನಮ್ಮ ದೇಹಗಳಂತೆ ಪ್ರಕೃತಿಯ ನಿಯಮಗಳಿಗೆ ಒಳಪಡುವುದಿಲ್ಲ. ಕಾಲದೇಶಗಳ ಮಿತಿಗಳ ಹೊರಗೆ, ಕ್ಷಯ-ನಾಶಗಳ ಆಚೆಗೆ ಅದು ಅಸ್ತಿತ್ವದಲ್ಲಿರುತ್ತದೆ. ಯೇಸು ಕೊಟ್ಟ ಹಲವು ದರ್ಶನಗಳ ಸಂದರ್ಭಗಳಲ್ಲಿ ಕೇವಲ ಮತ್ರ್ಯ ದೃಷ್ಟಿಯಿಂದ ಮಾತ್ರವೇ ಅವನ ಶಿಷ್ಯರು ಯೇಸುವಿನ ಗುರುತು ಹಿಡಿದುದಲ್ಲ; ಅವರ ನಂಬಿಕೆಯ ಮೂಲಕವೂ ಯೇಸುವನ್ನು ಅವರು ಕಂಡರು. ನಂಬಲು ತಯಾರಿಲ್ಲದವರು ಈ ದರ್ಶನಗಳ ಮೂಲಕ ಯೇಸುವನ್ನು ಗುರುತಿಸಲಿಲ್ಲ. ಎಮ್ಮೇಯಸಿಗೆ ಹೋಗುವ ಹಾದಿಯಲ್ಲಿ ನಂಬಿಕೆಯಿಂದ ತಮ್ಮ ಹೃದಯವನ್ನು ತೆರೆದಾಗಲೇ ಶಿಷ್ಯರು ಅವನನ್ನು ಗುರುತಿಸಿದರು (ಲೂಕ್). ಇಂದೂ ಹೀಗೆಯೇ ತೆರೆದ ಹೃದಯವುಳ್ಳವರು ಪುನರುತ್ಥಾನಗೊಂಡ ಯೇಸುವಿನ ಸಂಪರ್ಕವನ್ನು ಪಡೆಯಬಲ್ಲೆವೆಂದು ನಂಬಲು ತಯಾರಿದ್ದವರು ಮಾತ್ರ ಅವನನ್ನು ಕಂಡುಕೊಳ್ಳುವರು.
ಮೂರನೆಯದಾಗಿ, ಪುನರುತ್ಥಾನದ ಮೂಲಕ ಯೇಸು ಎಲ್ಲೆಲ್ಲೂ ಹಾಜರಾಗುತ್ತಾನೆ. ಕಾಲದೇಶಗಳು ನಮ್ಮ ಭೌತ ಶರೀರಗಳ ಮೇಲೆ ವಿಧಿಸುವ ಮಿತಿಗಳಿಂದ ಅವನ ಶರೀರ ತನ್ನ ಲೌಕಿಕ ಜೀವನಾವಧಿಯಲ್ಲಿ ಇದ್ದ ಪರಿಯಲ್ಲಿ ಈಗಿಲ್ಲ. ಅವನು ಕಾಣಿಸಿಕೊಳ್ಳುತ್ತಾನೆ. ಫಕ್ಕನೆ ಅದೃಶ್ಯನಾಗುತ್ತಾನೆ. ಮುಚ್ಚಿದ ಬಾಗಿಲುಗಳು ಅವನನ್ನು ತಡೆಯಲಾರವು (ಲೂಕ್). "ತನ್ನ ಪುನರುತ್ಥಾನದ ಮೂಲಕ ಅವನು ಜೀವದಾಯಕ ಆತ್ಮನಾಗಿದ್ದಾನೆ" ಎಂದು ಸಂತ ಪಾಲ್ ಹೇಳುತ್ತಾನೆ. ತನ್ನನ್ನು ನಂಬಿದವರಿಗೆಲ್ಲ ಜೀವನ ಸೆಲೆಯಾಗಿ ಅವನು ಹಾಜರಿರುತ್ತಾನೆ. ಹೀಗೆಂದರೆ ಪುನರುತ್ಥಾನದ ಅನಂತರ ದೇವರ ಜೀವ ಅವನನ್ನು ತುಂಬಿದೆ ಎಂದೂ ಅರ್ಥವಾಗುತ್ತದೆ (ರೋಮನ್ಸ್). ಆದುದರಿಂದ ಪುನರುತ್ಥಾನದ ಮೂಲಕ, ಎಲ್ಲೆಡೆಯಲ್ಲಿ ಮತ್ತು ಯಾವಾಗಲೂ ಕ್ರಿಸ್ತ ಮನುಷ್ಯರಿಗೋಸ್ಕರ ದೇವರ ಅಸ್ತಿತ್ವವಾಗಿರುತ್ತಾನೆ.
ಕೊನೆಯದಾಗಿ ಪುನರುತ್ಥಾನದ ದೇವರ ರಕ್ಷಣಾ ಯೋಜನೆಯ ಪರಿಪೂರ್ಣಗೊಳ್ಳುವಿಕೆಯಾಗುತ್ತದೆ. ತಾನು ಮೆಸ್ಸಾಯನೆಂದು (ರಕ್ಷಕನೆಂದು ಇಸ್ರೇಲ್ ಜನತೆ ನಿರೀಕ್ಷಿಸಿ ಇದ್ದವನು) ಯೇಸು ಹೇಳಿಕೊಂಡಿದ್ದ. ಇದನ್ನು ತನ್ನ ಮರಣ ಮತ್ತು ಪುನರುತ್ಥಾನಗಳ ಮೂಲಕ ಸಾಬೀತುಪಡಿಸಿದ. ತಾನು ಮೆಸ್ಸಾಯನೆಂದು ಹೇಳಿದುದಕ್ಕೆ ಪುರಾವೆ ಏನೆಂದು ಅವನನ್ನು ಕೇಳಿದಾಗ ಪುನರುತ್ಥಾನವನ್ನೇ ಏಕೈಕ ಪುರಾವೆಯೆಂದು ಹೇಳಿದ (ಲೂಕ್, ಮಾರ್ಕ್). ಇಡೀ ಹಳೆಯ ಒಡಂಬಡಿಕೆ ಹೀಗೆ ಪುನರುತ್ಥಾನದಲ್ಲಿ ಪರಿಪೂರ್ಣಗೊಂಡಿತು ಎಂಬುದನ್ನು ಪುನರುತ್ಥಾನದ ಅನಂತರ ತಾನೇ ಶಿಷ್ಯರಿಗೆ ವಿವರಿಸಿ ಹೇಳಿದ (ಲೂಕ್). ಯೇಸುಕ್ರಿಸ್ತನ ಪುನರುತ್ಥಾನ ಜಗತ್ತಿನಲ್ಲಿ ದೇವರ ಹೊಸ ರಾಜ್ಯವನ್ನು ಉದ್ಘಾಟಿಸಿತು. ಈ ರಾಜ್ಯದಲ್ಲಿ ನಿಜವಾದ ಜೀವದ ಎಲ್ಲ ವೈರಿಗಳು ನಾಶವಾಗುವರು. ಜೀವದ ಪರಮವೈರಿಯೆಂದರೆ ಮೃತ್ಯು. ಯೇಸುವನ್ನು ನಂಬಿ, ಈ ನಂಬಿಕೆಯ ಮೂಲಕ ಅವನ ಹೊಸ ರಾಜ್ಯವನ್ನು ಪ್ರವೇಶಿಸುವವರೆಲ್ಲ ಅವನಂತೆ ಮೃತ್ಯುವನ್ನು ಜಯಿಸುವರು. ಇದೇ ಸಂತ ಪಾಲನ ಅಭಿಪ್ರಾಯ.
ಪುನರುತ್ಥಾನಗೊಂಡ ಕ್ರಿಸ್ತನಲ್ಲಿ ತಾನಿರಿಸಿದ ನಂಬಿಕೆಯನ್ನು ವ್ಯಕ್ತಪಡಿಸುವ ಹಲವು ಕಾರ್ಯ ವಿಧಾನಗಳ ಮೂಲಕ ಇಂದಿನ ಕ್ರೈಸ್ತ ಧರ್ಮಸಭೆ ಪುನರುತ್ಥಾನಗೊಂಡ ಕ್ರಿಸ್ತನ ಅಸ್ತಿತ್ವದ ಅನುಭವವನ್ನು ಪಡೆಯುತ್ತಿರುತ್ತದೆ (ಇದೇ ಅನುಭವವನ್ನು ಆಪೋಸಲರ ಕಾಲದಲ್ಲಿ ಪ್ರತ್ಯಕ್ಷ ದರ್ಶನಗಳ ಮೂಲಕ ಶಿಷ್ಯರು ಪಡೆಯುತ್ತಿದ್ದರು). ಈ ಕಾರ್ಯ ವಿಧಾನಗಳನ್ನು ಹೀಗೆ ಗುರುತಿಸಬಹುದು: ಪ್ರಭು ಭೋಜನದ ಆಚರಣೆ-ಹೀಗೆ ಯೇಸುವಿನ ಹೆಸರಿನಲ್ಲಿ ಕ್ರೈಸ್ತರು ಸಭೆ ಸೇರಿ ಅವನ ಮಾತುಗಳಲ್ಲಿ ನಂಬಿಕೆಯನ್ನಿಟ್ಟು ರೊಟ್ಟಿಯನ್ನು ಮುರಿಯುತ್ತಾರೆ. ಕ್ರಿಸ್ತನಿಂದ ತಾವು ಪಡೆದಿರುವ ಪ್ರೀತಿಯ ಜೀವವನ್ನು ಅಭಿವ್ಯಕ್ತಗೊಳಿಸುವ ತಮ್ಮ ಪ್ರೀತಿಮಯ ಜೀವನ ಮತ್ತು ನಿಜವಾದ ಮಾನವ ಜೀವದ ಎಲ್ಲ ವೈರಿಗಳನ್ನು ಸೋಲಿಸುವುದಕ್ಕೋಸ್ಕರ ಪುನರುತ್ಥಾನಗೊಂಡ ಕ್ರಿಸ್ತನ ಸಾಮರ್ಥ್ಯವನ್ನು ತೋರ್ಪಡಿಸುವ ಧರ್ಮಾನುಚರಣೆಯ ಮತ್ತು ಧರ್ಮಪ್ರಸರಣದ ಜೀವನಗಳಲ್ಲಿ ನಿರತರಾಗುತ್ತಾರೆ.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
Resurrection. Happy Easter to all those who celebrate
ನಾನು ಸಹ ಯೇಸು ಜೀವ ಮತ್ತೆ ಪಡೆದ ಬಗ್ಗೆ ನಂಬುತ್ತೇನೆ.
ಪ್ರತ್ಯುತ್ತರಅಳಿಸಿ