ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ26


 'ಗೀತಗೋವಿಂದ' ತಂದ ಸಂತೃಪ್ತಿ


ನಿನ್ನೆಯವರೆವಿಗೆ ಜಯದೇವ ಕವಿಯ ಮಧುರ ಗೀತಗೋವಿಂದವನ್ನು ಕಳೆದ 24 ದಿನಗಳ ಕಾಲ ಪ್ರಕಟಿಸಿದೆ.  ಇದೊಂದು ರಮ್ಯ ಪಯಣ.  ಪ್ರೀತಿ ಪ್ರೇಮ ಎಂದರೆ ಅಡಗಿಸಿಟ್ಟ ನಿರ್ಬಂಧಿತ ಭಾವಗಳಾಗಿ ಬಹುತೇಕವಾಗಿ ಕಳೆದ ನಮ್ಮ ಬದುಕಿನಲ್ಲಿ 'ಗೀತಗೋವಿಂದ'ವನ್ನು ಸಂಗೀತ ರೂಪದಲ್ಲಿ ನೃತ್ಯ ರೂಪದಲ್ಲಿ ಕೇಳಿದ್ದೆವೇ ವಿನಃ ಅದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ನಮ್ಮಲ್ಲಿ ಹೆಚ್ಚು ಕಂಡಿರಲಿಲ್ಲ.

1975ರಲ್ಲಿ 'ಹಂಸಗೀತೆ' ಚಿತ್ರದಲ್ಲಿ ಎಂ. ಬಾಲಮುರಳೀ ಕೃಷ್ಣ, ಎಂ. ಎಲ್. ವಸಂತಕುಮಾರಿ ಮತ್ತು ಬಿ. ಕೆ. ಸುಮಿತ್ರಾ ಅವರ ಧ್ವನಿಯಲ್ಲಿ ಜಯದೇವ ಕವಿಯ 'ಗೀತಗೋವಿಂದ' ಅಷ್ಟಪದಿಗಳನ್ನು ಕೇಳಿದಾಗಿನಿಂದ ಅದು ನನ್ನನ್ನು ಅಪಾರವಾಗಿ ಸೆಳೆದಿತ್ತು.  ನಂತರದಲ್ಲಿ ಘಂಟಸಾಲ ಮತ್ತು ಬಾಲಮುರಳಿ ಕೃಷ್ಣ ಹಾಡಿರುವ ಗೀತಗೋವಿಂದದ ಎಲ್ಲ ಗೀತೆಗಳನ್ನು ಮತ್ತಷ್ಟು ಆಪ್ತವಾಗಿ ಕೇಳತೊಡಗಿದೆ.  ಅನೇಕ ಶ್ರೇಷ್ಠ ನೃತ್ಯ ಕಲಾವಿದರು ಅಭಿನಯಿಸಿರುವ 'ಗೀತಗೋವಿಂದ' ನೃತ್ಯ ನೋಡಿ ಸಂತೋಷಿಸಿದ್ದೆ.  ಆದರೆ ಸಂಸ್ಕೃತದಲ್ಲಿದ್ದ ಅದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನನ್ನಿಂದ ಆಗಿರಲಿಲ್ಲ. 

ಹೀಗಾಗಿ ಅದನ್ನು ನಾನೂ ಅರ್ಥೈಸಿ
ಇತರರ ಗ್ರಹಿಕೆಗೂ ಸುಲಭವಾಗಿ ದಕ್ಕುವ  ಹಾಗೆ ಪ್ರಕಟಿಸುವ ಆಸೆ ಇತ್ತು.  ಈ ನಿಟ್ಟಿನಲ್ಲಿ ಎಸ್. ವಿ. ಪರಮೇಶ್ವರ ಭಟ್ಟರು ಗೀತಗೋವಿಂದವನ್ನು ಕನ್ನಡದಲ್ಲಿ ಮಾಡಿರುವುದು ತಿಳಿದು ಅದನ್ನು ಹುಡುಕತೊಡಗಿದೆ.   ಜೊತೆಗೆ ತಿರುಪ್ಪಾವೈ ಮತ್ತು ಕುಮಾರವ್ಯಾಸ ಭಾರತಗಳಿಗೆ ನೀಡಿದ ಹಾಗೆ ಸಂಕ್ಷಿಪ್ತ ಭಾವ ನೀಡುವ ಆಶಯವೂ ಇತ್ತು.  ನಾ ಹೀಗೆ ಬಯಸಿದ್ದೆಲ್ಲವನ್ನೂ ಸಾಧ್ಯವಾಗಿಸಿದವರು ನನ್ನ ಅನೇಕ ಪ್ರಕಟಣೆಗಳಿಗೆ ಸಹಾಯ ನೀಡುತ್ತಿರುವ ಸಹೋದರಿ ಕೋಲಾರದ ಹೆಚ್. ಕೆ. ಸುಬ್ಬಲಕ್ಷ್ಮಿ (Lrphks kolar ) ಅವರು.  ಹೀಗೆ ಸುಬ್ಬುಲಕ್ಷ್ಮೀ ಅವರು ನೀಡಿರುವ ಸಂಕ್ಷಿಪ್ತ ಭಾವ, ಕನ್ನಡದಲ್ಲಿ ಎಸ್ ವಿ ಪರಮೇಶ್ವರ ಭಟ್ಟರ ಗೀತಗೊವಿಂದ ಕಾವ್ಯ ಹಾಗೂ ಮೂಲ ಜಯದೇವ ಕವಿಯ ಗೀತಗೋವಿಂದ ಕಾವ್ಯಗಳ ಸಂಯೋಗದೊಂದಿಗೆ ಗೀತಗೋವಿಂದವನ್ನು ಕಳೆದ 25 ದಿನ ಪ್ರಕಟಿಸಿದೆ. 

ಪ್ರಕಟಿಸಿದೆ ಎಂಬುದಕ್ಕಿಂತ 'ಗೀತಗೋವಿಂದ'ದ ಮಧುರಭಾವವನ್ನು ಆಪ್ತವಾಗಿಸಿಕೊಂಡೆ.  ಅದಕ್ಕಾಗಿ ಹಲವು ನೂರು ಚಿತ್ರಗಳನ್ನು ಅರಸಿ ಪ್ರತಿ ಅಷ್ಟಪದಿಗೂ ಜೋಡಿಸಿ ಸಂತೋಷಿಸಿದೆ. ರಾಧಾಕೃಷ್ಣರ ಒಲುಮೆಯನ್ನು ಮತ್ತಷ್ಟು ಪ್ರೇಮದಿಂದ ನನ್ನೊಳಗೆ ಸಾಕ್ಷಾತ್ಕರಿಸಿಕೊಳ್ಳಲೆತ್ನಿಸಿದೆ. ಅದು ನೀಡಿದ ಬೆಳಕು ಅಪರಿಮಿತ.   ಆ ಬೆಳಕಿಗೆ ಪ್ರೇಮದಿಂದ ನಮಿಸುತ್ತಿರುವೆ. “ಪ್ರೇಮದಿಂದಲಿ ನೋಡು ನಮ್ಮನು ತೇನಮೋಸ್ತು ನಮೋಸ್ತುತೆ, ಸ್ವಾಮಿದೇವನೆ ಲೋಕಪಾಲನೆ ತೇನಮೋಸ್ತು ನಮೋಸ್ತುತೆ🌷🙏🌷".

ಮತ್ತೊಮ್ಮೆ ಮೂಲ ಜಯದೇವ ಕವಿಯ 'ಗೀತಗೋವಿಂದ'ಕ್ಕೆ, ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪಕ್ಕೆ ಮತ್ತು
ಸುಬ್ಬುಲಕ್ಷ್ಮಿ Lrphks Kolar ಅವರು ನೀಡಿದ ಸಂಕ್ಷಿಪ್ತಭಾವಕ್ಕೆ ನನ್ನ ಕೃತಜ್ಞತಾ ಪೂರ್ವಕ ನಮನ.

ಸಹೋದರಿ ಸುಬ್ಬುಲಕ್ಷ್ಮಿ ಅವರ ಮಾತು:

ಗೀತಗೋವಿಂದ ಎಂದೊಡನೆ ಮೊದಲಿನಲ್ಲಿ ಏನೋ ಗೊಂದಲ, ಅನುಮಾನ, ಎಲ್ಲರೂ ಓದಬಹುದೇ ಎಂಬ ಅನಿಸಿಕೆ...ಹೀಗೇ ಏನೇನೋ ಭಾವಗಳಿದ್ದವು. ನಂತರ ಸಂಸ್ಕೃತ ಅಷ್ಟಪದಿಗಳು ಓದಿಗೆ ಸಿಕ್ಕಾಗ ಆಸಕ್ತಿ ಮೂಡಿತು. ಇದು ಕನ್ನಡದಲ್ಲಿ ಸಿಕ್ಕಿದ್ದರೆ ಎನಿಸಿತ್ತು. ಹೀಗೇ ಹುಡುಕುತ್ತಿದ್ದಾಗ ಎಸ್. ವಿ. ಪರಮೇಶ್ವರ ಭಟ್ಟರು ಕನ್ನಡ ರೂಪಕ್ಕೆ ತಂದಿರುವ ಪುಸ್ತಕ ಸಿಕ್ಕಿತು. ಅಪಾರವಾದ ಆನಂದದ ಕ್ಷಣ ಅದು. ಒಂದೊಂದೂ ಸುಂದರವಾದ ಭಾವಗೀತೆಗಳಾಗಿ ರಾಧಾ ಕೃಷ್ಣರ ಮಧುರ ಪ್ರೀತಿಯನ್ನು ಕಣ್ಣಿಗೆ, ಮನಸ್ಸಿಗೆ ಮುಟ್ಟಿಸಿದವು. ಸುಲಲಿತವಾಗಿ ಓದಿಸಿಕೊಳ್ಳುವ ಇವುಗಳನ್ನು ಇನ್ನಷ್ಟು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಕಾವ್ಯದ ಭಾಷೆಯಿಂದ ಗದ್ಯರೂಪದಲ್ಲಿ ತರುವ ಮನಸ್ಸಾಯಿತು. ಇದಕ್ಕೆ ಮೊದಲು ಹಿಂಜರಿಕೆ ಕಾಡಿತಾದರೂ ತಿರು ಶ್ರೀಧರರ ಪ್ರೀತಿಯ ಒತ್ತಾಯ, ಪ್ರೋತ್ಸಾಹಗಳು ಆತ್ಮವಿಶ್ವಾಸ ತುಂಬಿದವು. 

ಬರೆಯುತ್ತಾ ಹೋದಂತೆ ಮುಂದಿನದರ ಬಗ್ಗೆ ಕುತೂಹಲ ಹುಟ್ಟುತ್ತಿತ್ತು. ಸ್ಪೂರ್ತಿ ಸಿಗುತ್ತಿತ್ತು. ದಿನದಿಂದ ದಿನಕ್ಕೆ ಆ ರಾಧಾಮಾದವರ, ಸಖೀಜನರ, ಆ ಸುಂದರ ಪ್ರಕೃತಿಯ ನಡುವೆ ನಾನೂ ಇದ್ದಂತ ಭಾವ ಆವರಿಸಿತು. ಇಲ್ಲಿ ಕಂಡ ಪ್ರೀತಿ, ಹುಸಿಮುನಿಸು, ವಾತ್ಸಲ್ಯ, ಸಾಂತ್ವನ, ಸೌಂದರ್ಯ ವರ್ಣನೆ, ವಸಂತದ ಸೊಗಸು, ಉದಾತ್ತ ಶೃಂಗಾರ, ಎಲ್ಲವೂ ಸೊಗಸು. ಹಂತಹಂತವಾಗಿ ಸಾಗುವ ಪ್ರೇಮಗೀತೆ ಸಕಲರಿಗೂ ಆನಂದವನ್ನು ನೀಡುತ್ತದೆ.

ಸಂಕ್ಷಿಪ್ತ ರೂಪಕ್ಕೆ ತರುವಾಗ ಆ ಭಾವಲಹರಿಯಲ್ಲಿ ಮುಳುಗಿ ಮೈ ಮರೆತದ್ದಿದೆ. ಕೆಲವೊಂದು ಪದಗಳಿಗೆ ಶಬ್ದಕೋಶದ ಸಹಾಯ ಪಡೆದದ್ದಿದೆ. ಮತ್ತೆ ಹಲವು ಸಲ ಶ್ರೀಧರಣ್ಣನೊಂದಿಗೆ ಚರ್ಚೆ,  ಆತ್ಮೀಯರ ಸಲಹೆಗಳು ಹೀಗೆ ಕೆಲಸ ಸಾಗಿತು. ಕೊನೆಯಲ್ಲಿ ಸಹೃದಯರ ಮುಂದೆ ಬಂದಿತು.


ಕಾಮೆಂಟ್‌ಗಳು

  1. ತುಂಬಾ ಸೊಗಸ್ಸಾದ ಮತ್ತು ಅರ್ಥಪೂರ್ಣವಾದ ವಿಚಾರ ವಿನಿಮಯ ಸರ್.... ನಿಮಗೆ ಶುಭವಾಗಲಿ

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ