ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ ಎಂದರೆ ತಕ್ಷಣ ಎದ್ದು ಕಾಣುವುದು ಅವರ ತೇಜಸ್ವೀ ಹಸನ್ಮುಖ, ಭಾರತದ ಕುರಿತಾದ ಬಲಪಂಥೀಯ ಒಲವುಳ್ಳ ನಿರರ್ಗಳ ಮಾತಿನ ಅನುಪಮ ಉತ್ಸಾಹ ಮತ್ತು ಸದಾ ಉಕ್ಕಿಹರಿಯುವ ಕಾರ್ಯೋತ್ಸಾಹ ಶ್ರದ್ಧೆ.
ಚಕ್ರವರ್ತಿ ಸೂಲಿಬೆಲೆ ಎಂದೇ ಖ್ಯಾತರಾಗಿರುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಅವರು 1980ರ ಏಪ್ರಿಲ್ 9ರಂದು ಜನಿಸಿದರು. ಅವರ ತಂದೆ ತಂದೆ ದೇವದಾಸ್ ಸುಬ್ರಾಯ್ ಶೇಟ್ ಅವರು ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದವರು.
ಚಕ್ರವರ್ತಿ ಸೂಲಿಬೆಲೆ ಅವರು ಓದಿ ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲಿಯಲ್ಲಿ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ಹಾಗೂ ನಂತರದಲ್ಲಿ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು.
ಚಕ್ರವರ್ತಿ ಸೂಲಿಬೆಲೆ ಅವರು ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದರು.
ರಾಜೀವ ದೀಕ್ಷಿತರ ಆಜಾದಿ ಬಚಾವೋ ಆಂದೋಲನದ ಮೂಲಕ ಸಾರ್ವಜನಿಕ ಜೀವನಕ್ಕೆ ಧುಮುಕಿದ ಚಕ್ರವರ್ತಿ ಸೂಲಿಬೆಲೆ ಅವರು ಭಾರತೀಯ ನೆಲದ ಬಗ್ಗೆ ವಿಶೇಷ ಪ್ರೀತಿ ತುಂಬಿಕೊಂಡವರು. ರಾಷ್ಟ್ರದ ಬಗ್ಗೆ ಚಿಂತಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಇವೆಲ್ಲ ಅವರಿಗೆ ಅಚ್ಚು ಮೆಚ್ಚು. ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಾ ಬಂದಿದ್ದಾರೆ. ಸ್ವದೇಶಿ ಆಂದೋಲನದಲ್ಲೂ ಒಲವಿರಿಸಿಕೊಂಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರು ಜಾಗೋ ಭಾರತ್ ವಿಶಿಷ್ಟ ಗೀತ ಕಥನ ಕಾರ್ಯಕ್ರಮದ ಮೂಲಕ ರಾಷ್ಟ್ರಜಾಗೃತಿಯ ಕೆಲಸಕ್ಕೆ ತೊಡಗಿದರು. ರಾಷ್ಟ್ರಶಕ್ತಿ ಕೇಂದ್ರದ ಮೂಲಕ ಸ್ವಯಂಸೇವಾ ಕಾರ್ಯಕ್ಕಿಳಿದರು. ಜೊತೆಗೆ ಯುವ ಬ್ರಿಗೇಡ್ ಮೂಲಕ ತಮಗೆ ವಿಶ್ವಾಸವಿರುವ ಮಾರ್ಗದಲ್ಲಿ ದೇಶದ ಉನ್ನತಿಗೆ ಪೂರಕವಾದ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ತಮ್ಮ ಉಪನ್ಯಾಸಗಳ ಮೂಲಕ ಭಾರತದ ಯುವ ಜನಾಂಗದಲ್ಲಿ ದೇಶಭಕ್ತಿ ಪ್ರೇರಿಸುವ ಹಲವಾರು ಕಾರ್ಯಗಳನ್ನು ನಡೆಸುತ್ತ ಬಂದಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರು ಹೊಸ 'ಸ್ವಾತಂತ್ರ್ಯದ ಬೆಳಕು' ಎಂಬ ಸ್ವದೇಶಿ ಆಂದೋಲನದ ಮುಖ ಪತ್ರಿಕೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 'ಮೇರಾ ಭಾರತ್ ಮಹಾನ್ ' ಎಂಬ ಕಿರು ಅಂಕಣವನ್ನು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಅದೇ ಪತ್ರಿಕೆಯಲ್ಲಿ 'ಹೋಂಗೆ ಕಾಮ್ಯಾಬ್' ಎಂಬ ಅಂಕಣ ಬರೆದಿದ್ದಾರೆ. ಇದಲ್ಲದೆ ‘ಗರ್ವ' ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಮತ್ತು ಕರ್ಮವೀರ ವಾರಪತ್ರಿಕೆಯ 'ಲೈಫ್ ಸ್ಕ್ಯಾನ್' ಅಂಕಣಕಾರರಾಗಿ ಕೆಲಸ ಮಾಡಿದ್ದಾರೆ. ಸುಭಾಷ್ ಚಂದ್ರ ಬೋಸ್, ಐನ್‌ಸ್ಟೀನ್, ಸಚಿನ್ ತಂಡೂಲ್ಕರ್ ಒಳಗೊಂಡಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ. 'ಜಾಗೋ ಭಾರತ್' ಎಂಬ ಸರಣಿ ಅಂಕಣವನ್ನು ವಿಜಯವಾಣಿಯಲ್ಲಿ ಲಿಖಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರ ಪ್ರಕಟಿತ ಕೃತಿಗಳಲ್ಲಿ 'ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರ್’. ‘ನೆಹರೂ ಪರದೆ ಸರಿಯಿತು’. ‘ಸ್ವಾತಂತ್ರ್ಯ ಮಹಾ ಸಂಗ್ರಾಮ 1857- ಒಂದು ವಾಕ್ಚಿತ್ರ’. ‘ಭಾರತ ಭಕ್ತ ವಿದ್ಯಾನಂದ’. ‘ಸರದಾರ’. ‘ಜಾಗೋ ಭಾರತ್’ – ಅಂಕಣ ಬರಹ, ‘ಭಾರತ ಮಾತೆಯ ಕರೆ’ ‘ಸ್ವದೇಶಿ ಮತ್ತು ಗೋ ಚಿಕಿತ್ಸೆ’, 'ಜಾಗೋ ಭಾರತ್ ಅಂಕಣಗಳ ಸಂಕಲನ', ‘ಶ್ರೀ ರಾಮಕೃಷ್ಣ ವಿವೇಕಾನಂದರ ನಿವೇದಿತಾ’ ಸೇರಿವೆ.
ಚಕ್ರವರ್ತಿ ಸೂಲಿಬೆಲೆ ಅವರು ಬೆಂಗಳೂರು ಆಕಾಶವಾಣಿಯ ಜ್ಞಾನವಾಣಿ ವಾಹಿನಿಯಲ್ಲಿ 'ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ' ಎಂಬ ಸರಣಿ ಉಪನ್ಯಾಸಗಳನ್ನು ನೀಡಿದ್ದಾರೆ.
On the birthday of our young and energetic inspirer Chakravarthi Sulibele
ಕಾಮೆಂಟ್‌ಗಳು