ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿನೂ ಮಂಕಡ್


 ವಿನೂ ಮಂಕಡ್


ವಿನೂ ಮಂಕಡ್ ಭಾರತದ ಕ್ರಿಕೆಟ್ ಇತಿಹಾಸದ ಪ್ರಥಮ ಶ್ರೇಷ್ಠ ಆಲ್‍ರೌಂಡರ್.

ವಿನೂ ಮಂಕಡ್ ಅವರ ಪೂರ್ಣ‍ ಹೆಸರು ಮುಲವಂತರಾಯ್ ಹಿಮ್ಮತರಾಯ್ ಮಂಕಡ್.  ಅವರು ಸ್ವತಂತ್ರಪೂರ್ವ ಜಾಮ್‌ನಗರ ಪ್ರಾಂತ್ಯದಲ್ಲಿ 1917ರ ಏಪ್ರಿಲ್ 12ರಂದು ಜನಿಸಿದರು. ವಿನೂ ಮಂಕಡ್ ತಂದೆ ಡಾಕ್ಟರ್ ಹಿಮ್ಮತಲಾಲ್ ದುಲಾಪ್‌ಜಿ ಮಂಕಡ್ ಅವರಿಗೆ ಸರ್ಕಾರಿ ಕೆಲಸ.

ಮಂಕಡ್‌ರ ತಂದೆಗೆ ಸರ್ಕಾರಿ ಕೆಲಸವಾಗಿದ್ದರಿಂದ, ಅವರಿಗೆ ಆಗಾಗ್ಗೆ ವರ್ಗವಾಗುತ್ತಿತ್ತು. ವಿನೂ, ತಮ್ಮ ಚಿಕ್ಕಪ್ಪ ಇಂದೂಲಾಲ್ ಧೋಲಾಕಿಯ ಅವರ ಮನೆಯಲ್ಲೇ ಉಳಿದುಕೊಂಡಿದ್ದರು.
ಮಂಕಡ್ ಸೇರಿದ್ದ ನವಾನಗರ್ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಕ್ರಿಕೆಟ್ ಆಟವನ್ನೇ ಆಡುತ್ತಿದ್ದರು. ಅವರೂ ಸಹಜವಾಗಿ ಆ ಕ್ರೀಡೆಯಲ್ಲಿ ಆಸಕ್ತರಾದರು. ಆಸಕ್ತಿಯೊಂದಿಗೆ ಪ್ರತಿಭೆಯೂ ಕೂಡಿ, ಮಂಕಡ್ ಅತಿ ಶೀಘ್ರದಲ್ಲಿ ತಮ್ಮ ಸಹ ಆಟಗಾರರ ಕಣ್ಮಣಿಯಾದರು. ಗೆಳೆಯರು ಅಕ್ಕರೆಯಿಂದ 'ಮಿನೂ' ಎನ್ನುತ್ತಿದ್ದರಂತೆ. ಕೆಲವರ ಬಾಯಲ್ಲಿ ಅದು 'ವಿನೂ' ಅಗಿ ವಿನೂ ಮಂಕಡ್ ಆದರು.  ಇವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ  ನೀಡಿದವರಲ್ಲಿ ನವಾನಗರದ ಯುವರಾಜ ದುಲೀಪ್‌ಸಿನ್ಹಜಿ ಪ್ರಮುಖರು.

ಮಂಕಡ್ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಆರಂಭಿಸಿದ್ದು 1935-36ರಲ್ಲಿ.  ಆಗ  ‘ಪಶ್ಚಿಮ ಭಾರತ’ ತಂಡಕ್ಕೆ ರಣಜಿ ಟ್ರೋಫಿಯಲ್ಲಿ ಆಡಿದಂದಿನಿಂದಲೇ ಹೆಸರುವಾಸಿ. ಅದರ ಮುಂದಿನ ವರ್ಷ ಲಾರ್ಡ್ ಟೆನಿಸನ್ ನಾಯಕತ್ವದ ಇಂಗ್ಲಿಂಡಿನ ಕ್ರಿಕೆಟ್ ತಂಡ ಭಾರತಕ್ಕೆ ಭೇಟಿ ನೀಡಿತು. ಅವರು ಭಾರತದ ವಿರುದ್ಧ ಆಡಿದ ನಾಲ್ಕು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲೂ ಆಡುವ ಅವಕಾಶ ಮಂಕಡ್‌ಗೆ ಲಭಿಸಿತು. ಆ ಸರಣಿಯಲ್ಲಿ ಅತ್ಯುತ್ತಮ ‘ಆಲ್‌ರೌಂಡ್’ ಪ್ರದರ್ಶನ ನೀಡಿದ ಮಂಕಡ್, ಬ್ಯಾಟಿಂಗ್ (62.66) ಮತ್ತು ಬೌಲಿಂಗ್ (14.53) ಸರಾಸರಿಯಲ್ಲಿ ಎರಡೂ ತಂಡಗಳ ಉಳಿದ ಆಟಗಾರರನ್ನು ಮೀರಿಸಿದರು. ಅಲ್ಲದೆ ಹತ್ತು ಒಳ್ಳೆಯ ಕ್ಯಾಚ್‌ಗಳನ್ನೂ ಹಿಡಿದರು. ಆಗ ಕೇವಲ ಇಪ್ಪತ್ತು ವರ್ಷದ ತರುಣರಾಗಿದ್ದ ಮಂಕಡರ ಆಟವನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಟೆನಿಸನ್ ಅವರು, ‘‘ಜಗತ್ತಿನ ಯಾವುದೇ ಕ್ರಿಕೆಟ್ ತಂಡದಲ್ಲಿ ಸ್ಥಾನಗಳಿಸಲು ಈತ ಅರ್ಹ’’ ಎಂದು ಸಾರಿದರು.

ಆದರೆ ಮಂಕಡರ ದುರದೃಷ್ಟಕ್ಕೆ ಎರಡನೇ ಮಹಾ ಯುದ್ಧದ ಕಾರಣ ಮುಂದಿನ ಒಂಬತ್ತು ವರ್ಷಕಾಲ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಿಲ್ಲ. ಸೀನಿಯರ್ ಪಟೌಡಿ ಅವರ ನಾಯಕತ್ವದಲ್ಲಿ 1946ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತದ ಟೀಮಿನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಂಕಡ್, ತಮ್ಮ 29ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣ ಮಾಡಿದರು. ಪ್ರವಾಸದುದ್ದಕ್ಕೂ ಅತ್ಯುತ್ತಮವಾಗಿ ಆಡಿದ ಅವರು 1120 ರನ್ ಹೊಡೆದು, 129 ವಿಕೆಟ್ ಪಡೆದು ‘ಡಬ್ಬಲ್’ ಗಳಿಸಿದರು. ಆವರೆಗೆ ಈ ವಿಕ್ರಮವನ್ನು ಯಾವ ಭಾರತೀಯನೂ ಸಾಧಿಸಿರಲಿಲ್ಲ. ಅಲ್ಲದೆ ಮಂಕಡ್ 18 ವರ್ಷಗಳ ಹಿಂದಿನ ಲ್ಯಾರಿ ಕಾನ್‌ಸ್ಟನ್‌ಟೈನ್ ಅವರ ದಾಖಲೆಯನ್ನು ಉತ್ತಮಪಡಿಸಿದರು. ಇಂಗ್ಲೆಂಡಿನ ಪ್ರಖ್ಯಾತ ಪ್ರಕಟಣೆಯಾದ ‘ವಿಸ್ಡನ್’  ಮಂಕಡರನ್ನು ವರ್ಷದ ಐವರು ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಹೆಸರಿಸಿ ಗೌರವಿಸಿತು.  ಅಲ್ಲಿಂದ ಮುಂದೆ 13 ವರ್ಷಗಳ ಕಾಲ ಕ್ರಿಕೆಟ್ ದಿಗಂತದಲ್ಲಿ ಧ್ರುವತಾರೆಯಂತೆ ಮೆರೆದು ‘‘ಭಾರತದ ಸರ್ವಶ್ರೇಷ್ಠ ಆಲ್‌ರೌಂಡರ್’ ಎಂಬ ಖ್ಯಾತಿ ಗಳಿಸಿದರು. 

ವಿನೂ ಮಂಕಡ್ ಕೇವಲ 23 ಟೆಸ್ಟ್‌ಗಳಲ್ಲಿ 1000 ರನ್ ಮತ್ತು 100 ವಿಕೆಟ್‌ಗಳನ್ನು ಪೂರೈಸಿ ನೂತನ ವಿಶ್ವದಾಖಲೆ ಸ್ಥಾಪಿಸಿದರು.ಇದೇ ಸಾಧನೆಗೆ ಅವರ ಪ್ರತಿಸ್ಪರ್ಧಿಗಳಾದ ಎಂ.ಎ. ನೋಬಲ್ ಮತ್ತು ಕೀತ್ ಮಿಲ್ಲರ್ ಅವರಿಗೆ ಕ್ರಮವಾಗಿ 27 ಮತ್ತು 33 ಪಂದ್ಯಗಳು ಬೇಕಾದವು ಎಂಬುದನ್ನು ನೋಡಿದಾಗ ಮಂಕಡರ ಹಿರಿಮೆ ಬೆಳಕಿಗೆ ಬರುತ್ತದೆ. ಒಟ್ಟು 44 ಅಧಿಕೃತ ಟೆಸ್ಟ್ ಪಂದ್ಯಗಳನ್ನು ಭಾರತದ ಪರವಾಗಿ ಆಡಿದ ವಿನೂ ಮಂಕಡ್, 72 ಇನ್ನಿಂಗ್ಸ್ ಗಳಲ್ಲಿ 2109ರನ್ (ಸರಾಸರಿ: 31.47) ಗಳಿಸಿದ್ದಲ್ಲದೆ, 162 ವಿಕೆಟ್‌ಗಳನ್ನೂ (ಸರಾಸರಿ : 32.31) ಪಡೆದರು.  ಈ ಸಾಧನೆ ಮಂಕಡರನ್ನು ಜಗತ್ತಿನ ಅತ್ಯುನ್ನತ ಆಲ್‌ರೌಂಡರ್‌ಗಳಾದ ಗ್ಯಾರಿ ಸೋಬರ‍್ಸ್ ಮತ್ತು ಕೀತ್ ಮಿಲ್ಲರ್ ಅವರ ಸಾಲಿಗೆ ಸೇರಿಸಿತು. ಮಂಕಡ್‌ಗೆ ಇಂಗ್ಲಿಷ್ ಕೌಂಟಿಗಳ ಆಹ್ವಾನದ ಸುರಿಮಳೆಯಾಯಿತು. 1947ರಿಂದ 1962ರ ವರೆಗೆ ಲ್ಯಾಂಕಷೈರ್ ಲೀಗಿನಲ್ಲಿ ಆಡಿದ ಮಂಕಡ್ ಹಲವು ದಾಖಲೆಗಳನ್ನು ನಿರ್ಮಿಸಿದರು. ಅವರ ವೃತ್ತಿಪರತೆ ಇಂದಿಗೂ ಪ್ರಸಿದ್ಧ. 

ಅಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕೆ ಪ್ರಪ್ರಥಮ ಜಯ ಒದಗಿಸಿದ ಕೀರ್ತಿ ಮಂಕಡ್‌ಗೆ ಸಲ್ಲುತ್ತದೆ. ಇಂಗ್ಲೆಂಡ್ ವಿರುದ್ಧ 1951-52ರ ಸರಣಿಯಲ್ಲಿ ಮದರಾಸಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ತನ್ನ ರಜತೋತ್ಸವ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿತು. ಇಂಗ್ಲೆಂಡಿನ ಆಟಗಾರರು ಮಂಕಡರ ಬೌಲಿಂಗಿಗೆ ನಿರುತ್ತರರಾದರು. ಪಂದ್ಯದಲ್ಲಿ ಒಟ್ಟು 24 ಮೇಡನ್‌ಗಳಿದ್ದ 69.3 ಓವರುಗಳನ್ನು ಬೌಲ್ ಮಾಡಿದ ಮಂಕಡ್ ಕೇವಲ 108 ರನ್ ನೀಡಿ 12 ವಿಕೆಟ್ ಗಳಿಸಿದರು. ಆ ಸರಣಿಯಲ್ಲಿ ಎಲ್ಲ ಸೇರಿ 34 ವಿಕೆಟ್ ಪಡೆದ ಮಂಕಡ್ ಹೊಸ ದಾಖಲೆಯೊಂದನ್ನು ನಿರ್ಮಿಸಿದರು. ಅದರ ಮುಂದಿನ ವರ್ಷ ಪಾಕಿಸ್ತಾನದ ವಿರುದ್ಧ ದೆಹಲಿ ಟೆಸ್ಟ್‌ನಲ್ಲಿ 13 ವಿಕೆಟ್ ಪಡೆದು ಭಾರತದ ಮತ್ತೊಂದು ಜಯಕ್ಕೆ ಕಾರಣರಾದರು.  ಬೌಲರುಗಳಿಗೆ ಸಹಾಯಕವಾಗದ ಪಿಚ್ ಮೇಲೂ ಉತ್ತಮವಾಗಿ ಬೌಲ್ ಮಾಡುತ್ತಿದ್ದುದು ಮಂಕಡರ ವೈಶಿಷ್ಟ್ಯ. ಒಮ್ಮೆ ಓವಲ್ ಮೈದಾನದಲ್ಲಿ ಆಟದ ಪ್ರಥಮ ದಿನ ಹಟ್ಟನ್ ಮತ್ತು ಷೆಪರ್ಡ್‌ರಿಗೆ ಬೌಲ್ ಮಾಡುತ್ತಿದ್ದ ಮಂಕಡ್ ಸತತವಾಗಿ 13 ಓವರುಗಳಲ್ಲಿ ಕೇವಲ ಒಂದು ರನ್ ನೀಡಿದ್ದರು. ಪ್ರೇಕ್ಷಕರು ತಮ್ಮ ಅಸಮಾಧಾನ ಸೂಚಿಸಲು ನಿಧಾನ ಚಪ್ಪಾಳೆಗೆ ತೊಡಗಿದಾಗ, ಹಟ್ಟನ್ ನೆರೆದಿದ್ದವರಿಗೆ ಬ್ಯಾಟ್ ತೋರಿಸಿ ‘‘ಇಂಥ ಬೌಲರ್ ವಿರುದ್ಧ ನೀವೇನು ಮಾಡಬಲ್ಲಿರೋ ನೋಡೋಣ’’ ಎಂದು ಸಂಜ್ಞೆ ಮಾಡಿದರು.  ಮಂಕಡ್ ಪ್ರಪಂಚದ ಕ್ರಿಕೆಟ್ ಚರಿತ್ರೆಯಲ್ಲಿ ಅತ್ಯುತ್ತಮ ಎಡಗೈ ಸ್ಪಿನ್ನರುಗಳಲ್ಲಿ ಒಬ್ಬರು.

1955-56ರಲ್ಲಿ ಭಾರತ ಪ್ರವಾಸ ಮಾಡಿದ ನ್ಯೂಜಿಲೆಂಡ್ ತಂಡದ ವಿರುದ್ಧ ಮುಂಬೈನ ಎರಡನೇ ಟೆಸ್ಟ್ ನಲ್ಲಿ  223ರನ್ ಹೊಡೆದರು.  ಮುಂದೆ ಮದ್ರಾಸಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಂಕಜರಾಯ್ ಅವರೊಂದಿಗೆ 
413ರನ್‌ಗಳ ವಿಶ್ವದಾಖಲೆ ಜೊತೆಯಾಟ ಆಡಿದರು.   ಮಂಕಡ್ 231ರನ್ ಗಳಿಸಿದರು. ವಿನೂ ಮಂಕಡ್ ಒಂದೇ ಸರಣಿಯಲ್ಲಿ ಎರಡು ಡಬ್ಬಲ್ ಸೆಂಚುರಿ ಹೊಡೆದ ಪ್ರಥಮ ಭಾರತೀಯರು. ಇಡೀ ಜಗತ್ತಿನಲ್ಲಿ ಡಾನ್ ಬ್ರಾಡ್‌ಮನ್ ಮತ್ತು ವಾಲ್ಟರ್ ಹ್ಯಾಮಂಡ್ ಮಾತ್ರ ಈ ಸಾಧನೆ ಮಾಡಿದ್ದರು.

ವೇಗದ ಬೌಲಿಂಗ್ ಆಡುವುದರಲ್ಲಿ ಒಳ್ಳೆಯ ಪರಿಣತಿ ಪಡೆದಿದ್ದ ವಿನೂ ಮಂಕಡ್  ‘ಬಂಪರ್’ ಗಳಿಗೆ ಎಂದೂ ಹೆದರಿದವರಲ್ಲ. ಎಷ್ಟೇ ವೇಗವಾಗಿ ಚೆಂಡನ್ನು ಅವರತ್ತ ಎಸೆದರೂ, ವಿಚಲಿತಗೊಳ್ಳದೆ ಆಡುತ್ತಿದ್ದರು. ಒಂದು ವೈಶಿಷ್ಟ್ಯವೆಂದರೆ, ಮಂಕಡರ ಎಲ್ಲ ಅತ್ಯುತ್ತಮ ಇನ್ನಿಂಗ್ಸ್‌ಗಳೂ ಆ ಕಾಲದ ಶ್ರೇಷ್ಠ ಬಿರುಸಿನ ಬೌಲರುಗಳ ವಿರುದ್ಧವೇ ಬಂದವು. ಟ್ರೂಮನ್, ಬೆಡ್‌ಸರ್, ರೈಟ್, ಲಿಂಡ್‌ವಾಲ್, ಮಿಲ್ಲರ್, ಜಾನ್‌ಸ್ಟನ್, ಲಾಕ್ ಮತ್ತು ಲೇಕರ್‌ರಂಥ ಶ್ರೇಷ್ಠ ಬೌಲರುಗಳ ವಿರುದ್ಧ ರನ್ ಗಳಿಸಿದರು.  

ಇಷ್ಟೆಲ್ಲಾ ಸಾಧನೆ ಇದ್ದರೂ ರಾಜಕೀಯ ಶಾಪಗ್ರಸ್ತ ಭಾರತೀಯ ಕ್ರಿಕೆಟ್ನಲ್ಲಿ ವಿನೂ ಮಂಕಡ್ ಅವರಿಗೆ ನಾಯಕತ್ವದ ಅವಕಾಶ ಸಿಕ್ಕಿದ್ದು ಅತಿ ಕಡಿಮೆ.

ವಿನೂ ಮಂಕಡ್ ನಿವೃತ್ತಿಯ ನಂತರ ತಮ್ಮ ಪೂರ್ಣ ಕಾಲವನ್ನು ಯುವಕರಿಗೆ ತರಬೇತಿ ನೀಡುವುದರಲ್ಲೇ ಕಳೆದರು. ಹೀಗೆ ಮಂಕಡರ ತರಬೇತಿಯಿಂದ ಪ್ರಸಿದ್ಧಿಗೆ ಬಂದವರಲ್ಲಿ ದಿಲೀಪ್ ಸರ್ದೇಸಾಯಿ, ರಾಮನಾಥ್ ಪಾರ್ಕರ್, ಸಲೀಮ್ ದುರಾನಿ, ಅಶೋಕ್ ಮಂಕಡ್, ಕೈಲಾಸ್ ಘಟ್ಟಾನಿ ಮತ್ತು ಮಾದವ ಆಪ್ಟೆ ಪ್ರಮುಖರು.

ವಿನೂ ಮಂಕಡ್ 1978ರ ಆಗಸ್ಟ್ 31 ರಂದು ಮುಂಬೈನಲ್ಲಿ ನಿಧನರಾದರು.

On the birth anniversary of first great allronder of Indian cricket Vinoo Mankad

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ