ಬಿ. ವಿ. ಭಾರತಿ
ಬಿ. ವಿ. ಭಾರತಿ
ಬಿ.ವಿ. ಭಾರತಿ ಕನ್ನಡದ ಪ್ರಸಿದ್ಧ ಬರಹಗಾರ್ತಿ.
ಭಾರತಿ ಅಂದ ತಕ್ಷಣ ನನಗೆ ಮೊದಲು ಕಣ್ಮುಂದೆ ಬರುವುದು, ಎಲ್ಲಿ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ಇದ್ದರೂ ಅಲ್ಲಿ ನಗು ನಗುತ್ತಾ ಪ್ರವೇಶಿಸುವ ಎತ್ತರದ ಆತ್ಮೀಯ ವ್ಯಕ್ತಿತ್ವ. ಭಾರತಿ ಅವರು ಮೊದಲು ಬರೆದ ಪುಸ್ತಕದ ಹೆಸರು ನನಗೆ ಜಗತ್ತಿನಲ್ಲಿ ಇಷ್ಟವಾದ ಬುದ್ಧನ ಕಥೆಯನ್ನು ನೆನಪಿಸುವ ‘ಸಾಸಿವೆ ತಂದವಳು’.
ಈ ಪುಸ್ತಕದ ಹಿನ್ನುಡಿಯನ್ನು ಬರೆದಿರುವ ಯು. ಆರ್. ಅನಂತಮೂರ್ತಿ ಹಾಗೂ ಮುನ್ನುಡಿಯನ್ನು ‘ಬದುಕು ನಿನ್ನಲ್ಲೆಂಥಾ ಮುನಿಸು...’ ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿರುವ ನೇಮಿಚಂದ್ರರ ಬರಹಗಳು ಈ ಕೃತಿಯ ಸಾರವನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತವೆ. ಅಂತೆಯೇ ಭಾರತಿಯವರ ಮೊದಲ ನುಡಿಗಳಾದ ‘ಬದುಕಿನ ಜೋಳಿಗೆಯಿಂದ ನಾಳೆಗಳನ್ನು ಕಸಿದೆ’ ಎಂಬ ಮೊದಲ ಮಾತುಗಳು ಕೂಡಾ ಅವಿಸ್ಮರಣೀಯ.
ರೈಲಿನಲ್ಲಿ ಹೋದರೆ ಹೇಗೆ, ವಿಮಾನದಲ್ಲಿ ಹೋದರೆ ಹೇಗೆ ಎಂದು ಭಯಪಡುತ್ತಿದ್ದ ಭಾರತಿ; ಕ್ಯಾನ್ಸರ್, ಟ್ಯೂಮರ್ ಅಂತದ್ದು ಎಲ್ಲಾದರೂ ಬಂದು ಬಿಟ್ಟರೆ ಎಂದು ಭಯಪಡುತ್ತಿದ್ದ ಭಾರತಿ; ಕ್ಯಾನ್ಸರ್ ಎಂಬುದೇ ಬಂದು ತನ್ನನ್ನಪ್ಪಿ ನಿಂತಾಗ ಅದಕ್ಕೆ ಅನುಭವಿಸಿದ ತಳಮಳ, ಹಿಂಸೆ, ನೋವು, ಭಯ ಇತ್ಯಾದಿಗಳನ್ನು ನಿಧಾನವಾಗಿ ತನ್ನ ಅಂತರಂಗದಲ್ಲಿನ ಆತ್ಮವಿಶ್ವಾಸದ ಮೂಲಕ ಒಪ್ಪಿಕೊಂಡು ಅದರಿಂದ ಮೇಲೇರಿ ನಿಂತ ರೀತಿ, ಅದರ ಹಿಂದಿರುವ ಅವರ ಗಟ್ಟಿಗತನ, ಇವೆಲ್ಲವನ್ನೂ ಹಾಸ್ಯದ ಕಣ್ಣಿನಿಂದ ನೋಡುವ ಪರಿ, ಇದನ್ನು ಬಣ್ಣಿಸಿರುವ ಒಕ್ಕಣೆ ಇವೆಲ್ಲಾ ನಮ್ಮಲ್ಲಿ ಸಂವೇದನೆ, ಸುಲಲಿತ ಓದುವಿಕೆ, ಗಂಭೀರತೆ ಮತ್ತು ಪ್ರಿಯ ಓದುವಿಕೆ ಇವೆರಡೂ ಒಂದಕ್ಕೊಂದು ವೈರುಧ್ಯ ದಿಕ್ಕು ಹಿಡಿಯದಂತ ಮೋಡಿ ಇವೆಲ್ಲಾ ಓದುಗರಾದ ನಮ್ಮನ್ನು ದೋಣಿಯಲ್ಲಿ ವಿಹಾರದಂತೆ ತಲ್ಲೀನವಾಗಿಸುತ್ತಾ ಸಾಗುತ್ತದೆ. ಇಲ್ಲಿ ಕ್ಯಾನ್ಸರ್ ಎಂಬ ಕರಾಳತೆಯ ದರ್ಶನ ಇದೆ; ವೈದ್ಯರು ಹೇಗಿದ್ದಾರೆ ಎಂಬುದರ ಜೊತೆಗೆ ಹೇಗಿದ್ದರೆ ಯಮ ಯಾತನೆ, ಹೇಗಿದ್ದರೆ ಚೆನ್ನ ಎಂಬ ನೈಜ ನಿದರ್ಶನಗಳಿವೆ; ಎಲ್ಲದರಲ್ಲೂ ದೇಹ ಸುಲಲಿತವಾಗಿ ತೊಡಗಿಕೊಳ್ಳುತ್ತಿದ್ದಾಗ ಎಲ್ಲದಕ್ಕೂ ನಾನೇ ಬೇಕು ಎಂಬ ಅಹಂ, ಎಲ್ಲದಕ್ಕೂ ನಾನೇ ಸಾಯಬೇಕು ಎಂಬ ಸಿಟ್ಟು; ದೇಹ ಕೈಕೊಟ್ಟು ತ್ರಾಣವಿಲ್ಲದಿದ್ದಾಗ, ನಾನಿಲ್ಲದಿದ್ದರೂ ವ್ಯವಸ್ಥೆ ನಡೆದುಬಿಡುತ್ತದೆಯಲ್ಲ , ನನ್ನ ಅಗತ್ಯವೇ ಪ್ರಪಂಚಕ್ಕಿಲ್ಲ ಎಂದು ಕಾಡುವ ಹತಾಶೆ; ಕ್ಯಾನ್ಸರ್ ಕಾಯಿಲೆ ಎಷ್ಟು ಜೀವವನ್ನು ತಿನ್ನುತ್ತದೋ ಅದಕ್ಕೆ ಇರುವ ಪರಿಹಾರ ಜೀವವನ್ನು ತಿನ್ನುವುದರಲ್ಲಿ ಮೀರಿಸಿದ್ದು ಎಂಬ ಅನುಭವದ ಚಿತ್ರಣ; ಸಮಾಜ ಕ್ಯಾನ್ಸರ್ ರೋಗಿ ಎಂಬ ವ್ಯಕ್ತಿಯನ್ನು ತನ್ನ ಮಾತುಗಳ ಚಪಲತೆಯ ಇರಿತದಲ್ಲಿ ಕೊಲ್ಲುವ ರೀತಿ ಸಾಕಷ್ಟು ಇದ್ದ್ಯಾಗ್ಯೂ ಈ ಲೋಕ ನಮಗೆ ಕೊಡುಗೆ ನೀಡಿರುವ ನಿರ್ಮಲ ಸ್ನೇಹವು ಕೊಡುವ ಅಮೃತ ಸಿಂಚನ ಮತ್ತು ಅದು ಬಾಳನ್ನು ಬೆಳಗುವ ರೀತಿ ಇವೆಲ್ಲವನ್ನೂ ಭಾರತಿ ಪ್ರಸ್ತಾಪಿಸಿರುವ ರೀತಿಯನ್ನು ಓದುವಾಗ ಸಮಸ್ತ ಬದುಕಿನ ಕುರಿತಾದ ಆಧ್ಯಾತ್ಮ ದರ್ಶನ ಪಡೆದಂತ ಭಾವ ಮೂಡುತ್ತದೆ.
“.... ಬದುಕು ಎಷ್ಟೆಲ್ಲ ಬದುಕನ್ನು ಕಲಿಸುತ್ತದೋ, ಅದಕ್ಕಿಂತ ಹೆಚ್ಚಿನದನ್ನು ಸಾವು ಅಥವಾ ಸಾವಿನ ನೆರಳಿನ ಸ್ವಲ್ಪ ದಿನದ ಬದುಕು ಕಲಿಸುತ್ತದೆ. ಈ ರೀತಿ ಸಾವಿಗೆ ಸೆಡ್ಡು ಹೊಡೆದಂತೆ ಬದುಕುವುದು ಬ್ರಹ್ಮ ವಿದ್ಯೆಯೇನೂ ಅಲ್ಲ. ಸ್ವಲ್ಪ ಧೈರ್ಯ, ಇನ್ನೊಂದು ಸ್ವಲ್ಪ ಆತ್ಮವಿಶ್ವಾಸ, ಜೊತೆಗೆ ಆಸಾಧ್ಯ ಬದುಕಿನ ಮೋಹ ಇಷ್ಟಿದ್ದರೆ ಸಾಕು .... ಬದುಕಿನ ನಳಪಾಕ ತಯಾರು! ನನ್ನಂಥ ‘ನಾನು’ ಅದನ್ನು ಎದುರಿಸಬಲ್ಲೆ ಎನ್ನುವುದಾದರೆ ‘ನಿಮ್ಮಿಂದ’ ಯಾಕೆ ಅದು ಸಾಧ್ಯವಿಲ್ಲ? ನಾನು ಮಾತನಾಡುತ್ತಿರುವುದು ಬರೀ ಸಾವಿನ ಬಗ್ಗೆ ಮಾತ್ರ ಅಲ್ಲ, ಬದುಕಿನ ಪ್ರತೀ ಹಂತದಲ್ಲೂ ಎದುರಾಗುವ ಸಮಸ್ಯೆಗಳ ಬಗೆಗೂ – Just remember , when you think all is lost, the future remains....” ಎಂದು ತಮ್ಮ ಮೊದಲ ಮಾತಿನಲ್ಲಿ ಹೇಳಿರುವ ಭಾರತಿಯವರ ನುಡಿ ಎಲ್ಲಿಂದಲೂ ಪೋಣಿಸಿದ ಒಣ ಘೋಷ ವಾಕ್ಯವಲ್ಲ. ಅನುಭವವೆಂಬ ತಪಸ್ಸಿನ ಮೂಸೆಯ ಅನುಭಾವದಿಂದ ಹೊರಹೊಮ್ಮಿರುವಂತದ್ದು ಎಂಬುದನ್ನು ಕೃತಿಯನ್ನು ಓದಿದವರಿಗೆಲ್ಲಾ ಖಂಡಿತ ಅರ್ಥವಾಗುವಂತದ್ದು. ಹೀಗಾಗಿ ಭಾರತಿ ಕೇವಲ ಕ್ಯಾನ್ಸರ್ ಎಂಬ ರೋಗಮುಕ್ತಿ ಸಾಧನೆಯ ಸಾಸಿವೆಯನ್ನು ತಂದವರಾಗಿಲ್ಲದೆ, ಬದುಕಿನ ಅನಂತತೆಯ ಅನುಭಾವದಲ್ಲೂ ಮಹತ್ವದ ಸಾಧಕಿಯಾಗಿ ಕಂಡು ಬರುತ್ತಾರೆ. ಭಾರತಿ ಅವರೇ, ನೀವು ಆರೋಗ್ಯವಂತರಾಗಿ ಸ್ಫೂರ್ತಿಧಾಯಕರಾಗಿ ನಿರಂತರ ನಮ್ಮೊಡನಿರುತ್ತೀರಿ ಎಂಬುದು ನಮ್ಮೆಲ್ಲರ ವಿಶ್ವಾಸ ಮತ್ತು ನಮಗೆಲ್ಲಾ ಸಂತೋಷ ತರುವ ಸಂಗತಿ.
ಫೇಸ್ಬುಕ್ನಲ್ಲಿ ತಮ್ಮ ನಳ ನಳಿಸುವ ಸ್ನೇಹಮಯ ಬರೆಹಗಳಿಂದ ಹಾಗೂ ಎಲ್ಲೆಲ್ಲಿ ವಿಶೇಷ ಕನ್ನಡದ ಸಾಂಸ್ಕೃತಿಕ ವಾತಾವರಣವಿರುತ್ತದೋ ಅಲ್ಲಿ ತಪ್ಪದೆ ಹಾಜರಿದ್ದು ಆಪ್ತವಾಗಿ ಮಾತಿಗೆ ಸಿಗುವ ನಮ್ಮೆಲ್ಲರ ಆತ್ಮೀಯರಾದ ಭಾರತಿ ಅವರ ಮೇಲ್ಕಂಡ ಕೃತಿಯೇ ಅಲ್ಲದೆ, ಸುಲಲಿತ ಪ್ರಬಂಧಗಳ ಸಂಗ್ರಹ ‘ಮಿಸಳ್ ಭಾಜಿ’, ಆಟೋಯಾನದ ಕಥೆಗಳ 'ಜಸ್ಟ್ ಮಾತ್ ಮಾತಲ್ಲಿ'; 'ಕಿಚನ್ ಕವಿತೆಗಳು'; ಪ್ರವಾಸ ಕಥನಗಳಾದ 'ನಕ್ಷತ್ರಗಳ ನಾಡಿನಲ್ಲಿ' ಮತ್ತು ‘ಅಅಅಅಮೆರಿಕಾ'; 'ಎಲ್ಲಿಂದಲೋ ಬಂದವರು', ‘ಈ ಪ್ರೀತಿ ಒಂಥರಾ', ಇವು ಮಾಂಟೋ ಕಥೆಗಳು 'ಯಕ್' , 'ಇಷ್ಟಕ್ಕೂ ಎಲ್ಲರೂ ಮನುಷ್ಯರೇ' ಹೀಗೆ ಎಲ್ಲ ಕೃತಿಗಳೂ ಜನಪ್ರಿಯವಾಗಿವೆ. 'ಮಿಸಳ್ ಬಾಜಿ', ಮತ್ತು 'ಎಲ್ಲಿಂದಲೋ ಬಂದವರು' ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಲಲಿತ ಪ್ರಬಂಧಕ್ಕಾಗಿನ ಪುರಸ್ಕಾರಗಳು ಸಂದಿದೆ. 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ' ಕೃತಿಗೆ ಉತ್ತಮ ಪ್ರವಾಸ ಕೃತಿಯಾಗಿ ಮತ್ತೊಂದು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಅವರ ವೈವಿಧ್ಯಮಯ ಲವಲವಿಕೆಯ ಬರೆಹಗಳು ಹಲವು ನಿಯತಕಾಲಿಕೆಗಳು ಮತ್ತು ವಿಶೇಷಾಂಕಗಳನ್ನು ಅಲಂಕರಿಸುತ್ತಾ ಸಾಗಿವೆ. ಸಂಧ್ಯಾರಾಣಿ ಅವರೊಂದಿಗಿನ 'ಆನು ನಿನ್ನ ಹಾಡಿದಲ್ಲದೆ ಸೈರಿಸೆಲಾರೆನಯ್ಯಾ', ಸಂಧ್ಯಾರಾಣಿ ಮತ್ತು ಪೂರ್ಣಿಮಾ ಮಾಳಗಿಮನಿ ಅವರ ಜೊತೆ 'ಲವ್ ಟುಡೆ' ಮುಂತಾದ ಕೃತಿಗಳೂ ಕೂಡಾ ಇವೆ.
ಅವರ ಸರಳ ಸಜ್ಜನಿಕೆಯ ಎಲ್ಲರೊಂದಿಗೆ ಒಂದಾಗಿ ನಗುನಗುತ್ತಾ ಬೆರೆಯುವ ಗುಣವಿದೆಯೆಲ್ಲಾ ಇದೆಲ್ಲಾ ಇಡೀ ಜಗತ್ತನ್ನೇ ಕೂಗಿ ಕರೆಯುವಂತೆ ಶಕ್ತಿಶಾಲಿಯಾದದ್ದಾಗಿದೆ. ಈ ಭವ್ಯ ಶಕ್ತಿಯ ಬಿ.ವಿ. ಭಾರತಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.
On the birth day of ever inspiring writer and our friend Bharathi B V🌷🌷🌷
ಕಾಮೆಂಟ್‌ಗಳು