ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಲಿಯಮ್ ಹಾರ್ವೆ


 ವಿಲಿಯಮ್ ಹಾರ್ವೆ


ಮಹಾನ್ ಚಿಕತ್ಸಾ ವೈದ್ಯರಾದ ವಿಲಿಯಮ್ ಹಾರ್ವೆ ಆಧುನಿಕ ಪ್ರಾಯೋಗಿಕ ದೇಹಕ್ರಿಯಾವಿಜ್ಞಾನದ (ಮಾಡರ್ನ್ ಎಕ್ಸ್‍ಪೆರಿ ಮೆಂಟಲ್ ಫಿಜಿಯಾಲಜಿ) ಜನಕರೆಂದು ಪ್ರಸಿದ್ಧರು. ಇವರು ರಕ್ತಪರಿಚಲನೆಯ ಕ್ರಮವನ್ನು ಆವಿಷ್ಕರಿಸಿ ಅದನ್ನು ಸ್ಪಷ್ಟವಾಗಿ ವರ್ಣಿಸಿ ಮಹಾನ್ ಕೊಡುಗೆ ನೀಡದ್ದಾರೆ.

ವಿಲಿಯಮ್ ಹಾರ್ವೆ ಆಗ್ನೇಯ ಇಂಗ್ಲೆಂಡಿನ ಕೆಂಟ್‍ನಲ್ಲಿಯ ಫೋಕ್ಸ್‍ಸ್ಟನ್ನಿನಲ್ಲಿ 1578 ವರ್ಷದ ಏಪ್ರಿಲ್ 1 ರಂದು ಜನಿಸಿದರು. ಹಾರ್ವೆ ಮೊದಲು ಕೇಂಬ್ರಿಜ್‍ನ ಕೈಯಸ್ ಕಾಲೇಜಿಗೆ ಸೇರಿ, ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಾಗಿದ್ದ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನೂ ಇತರ ವಿಷಯಗಳನ್ನೂ ನಾಲ್ಕು ವರ್ಷಗಳ ಕಾಲ ವ್ಯಾಸಂಗಮಾಡಿ 1597ರಲ್ಲಿ ಬಿ.ಎ.ಪದವಿ ಗಳಿಸಿದರು. ಅನಂತರದಲ್ಲಿ ಇಟಲಿಯ ಪ್ರಸಿದ್ಧವಾದ ಪಾಡುವ ವಿಶ್ವವಿದ್ಯಾಲಯದಲ್ಲಿ ಹೆಸರಾಂತ ಫ್ಯಾಬ್ರೀಷಿಯಸ್ ಆಬ್ ಅಕ್ವಪೆಂಡೆಂಟಿ ಎಂಬ ಅಂಗರಚನಾಶಾಸ್ತ್ರಜ್ಞರ ಕೈಕೆಳಗೆ ವೈದ್ಯಕೀಯ ವ್ಯಾಸಂಗಮಾಡಿದರು. ಎಂ.ಡಿ. ಪದವಿ ಸಹಿತ ಇಂಗ್ಲೆಂಡಿಗೆ ಮರಳಿ ಲಂಡನ್ನಿನಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರು. ಇದಕ್ಕಾಗಿ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನ ಸದಸ್ಯನಾಗಿರಬೇಕಾದ್ದು ಆವಶ್ಯಕವಾಗಿದ್ದರಿಂದ 1604ರಲ್ಲಿ ಆ ಕಾಲೇಜಿನ ಸದಸ್ಯರಾದರು. 1607ರಲ್ಲಿ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನ ಫೆಲೋ ಆದರು. ಸುಮಾರು 1607ರಲ್ಲಿ ಲಂಡನ್ನಿನ ಸೇಂಟ್ ಬಾರ್ಥೋಲೋಮ್ಯು ಆಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡರು. ಈ ಹುದ್ದೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ 1643ರಲ್ಲಿ ಆ ಕೆಲಸದಿಂದ ಹೊರಬಂದರು. 

ವಿಜ್ಞಾನದ ಬೆಳೆವಣಿಗೆ ಅತಿ ಕಡಿಮೆಯಾಗಿದ್ದ ಆ ಕಾಲದಲ್ಲಿ ಎಲ್ಲ ವೈದ್ಯರೂ ತಮ್ಮ ಕೆಲಸವನ್ನು  ನಿಷ್ಠೆಯಿಂದ ಮಾಡುತ್ತಿದ್ದರಾದರೂ ಹಾರ್ವೆಯವರದೇ ವಿಶಿಷ್ಟ ಬಗೆಯದಾಗಿತ್ತು. ಈತ ಆಗಾಗ, ಶಸ್ತ್ರವೈದ್ಯವನ್ನೂ ಮಾಡುತ್ತಿದ್ದು ಪ್ರಸವಶಾಸ್ತ್ರದಲ್ಲಿ ಹೆಸರು ಗಳಿಸಿದ್ದರು.  ರೋಗಗಳು, ಅವುಗಳ ಲಕ್ಷಣಗಳನ್ನು ಚೆನ್ನಾಗಿ ಗಮನಿಸಿ ವಿಶದವಾಗಿ ಬರೆದಿಡುತ್ತಿದ್ದರು. ರೋಗಶಾಸ್ತ್ರ ಎಂಬುದು ದೇಹಕ್ರಿಯಾ ಶಾಸ್ತ್ರದ ಒಂದು ಭಾಗವೇ ಎಂದು ಹೇಳಿ ಅದನ್ನೂ ದೇಹಕ್ರಿಯಾಶಾಸ್ತ್ರದಂತೆಯೇ ಅಂಗರಚನಶಾಸ್ತ್ರ ದೃಷ್ಟಿಯಿಂದಲೇ ವ್ಯಾಸಂಗಮಾಡಬೇಕೆಂಬ ದೃಢ ಅಭಿಪ್ರಾಯ ತಳೆದಿದ್ದರು. ತಮಗೇ ಪೂರ್ಣವಾಗಿ ನಂಬಿಕೆ ಬರುವವರೆಗೆ ಒಂದು ವ್ಯಾಸಂಗ ವಿಷಯದಲ್ಲಿ ಏನನ್ನೂ ಪ್ರಚುರಪಡಿಸುತ್ತಿರಲಿಲ್ಲ. ಮೇಲಿಂದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಿ ಪರೀಕ್ಷಿಸಿ ಪ್ರತಿಪಾದನೆಯನ್ನು ಬಲವಾದ ತಳಹದಿಯ ಮೇಲೆ ಸ್ಥಾಪಿಸಿದ ಬಳಿಕವೇ ಪ್ರಚಾರಮಾಡುತ್ತಿದ್ದರು.  

ಹಾರ್ವೆ ಅವರು ತಮ್ಮ 'ಡಿ ಮೋಟು ಕಾರ್ಡಿಸ್' ಎಂಬ ಗ್ರಂಥದಲ್ಲಿ ಹೇಳಿರುವ ವಿಷಯವನ್ನು 12 ವರ್ಷಗಳಷ್ಟು ಮುಂಚೆಯೇ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನಲ್ಲಿ ಉಪನ್ಯಾಸವಾಗಿ ತಿಳಿಯಪಡಿಸಿದ್ದರೂ ಪುಸ್ತಕ ರೂಪದಲ್ಲಿ ಬರೆದು ಪ್ರಚುರಪಡಿಸಿದ್ದು 1628ರಲ್ಲಿ. ಈ ಗ್ರಂಥದ ಮೊದಲ 19 ಪುಟಗಳಲ್ಲಿ ಈತ ಗುಂಡಿಗೆ ಮತ್ತು ರಕ್ತ ಪರಿಚಲನೆ ವಿಷಯದಲ್ಲಿ ಹಿಂದಿನವರಾದ ಅರಿಸ್ಟಾಟಲ್, ಗೇಲನ್‍ಗಳು ತಿಳಿಸಿದ್ದ ವಿಚಾರಗಳನ್ನೂ ಸುಮಾರು 1550ರಿಂದ ಈಚೆಗೆ ವೆಸೇಲಿಯಸ್, ಫ್ಯಾಬ್ರೀಷಿಯಸ್ ಮೊದಲಾದವರು ಈ ವಿಷಯವಾಗಿ ಕಂಡುಕೊಂಡಿದ್ದ ವಿಚಾರಗಳನ್ನೂ ತಿಳಿಸಿದ್ದಾರೆ. ಮುಂದಿನ ಉಳಿಕೆಯ ಸುಮಾರು 52 ಪುಟಗಳಲ್ಲಿ ತಾವು ವ್ಯಾಸಂಗಿಸಿದ ವಿಷಯಗಳನ್ನು ಹಂತ ಹಂತವಾಗಿ ವಿವರಿಸುತ್ತ ರಕ್ತ ಪರಿಚಲಿಸುತ್ತಿದೆ ಎಂಬ ನಿರ್ಧಾರಕ್ಕೆ ಏಕೆ ಬರಬೇಕು ಎನ್ನುವುದನ್ನು ವಿವಾದಕ್ಕೆ ಆಸ್ಪದಬಾರದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ವಿವಿಧ ತೆರನ ಬಹುಸಂಖ್ಯೆಯ ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗಗಳನ್ನು ಆಧರಿಸಿ ತಮ್ಮ ಪ್ರತಿಪಾದನೆಯನ್ನು ಸಾಧಿಸಿದ್ದಾರೆ. ಡಿ ಮೋಟು ಕಾರ್ಡಿಸ್ ಗ್ರಂಥದಿಂದ ಮತ್ತು ರಿಯೋಲಾನ್ ಎಂಬವರಿಗೆ ಹಾರ್ವೆ ಬರೆದ ಕಾಗದಗಳಿಂದ ಇಂಥ ಪ್ರಯೋಗಾತ್ಮಕ ವ್ಯಾಸಂಗವಿಧಾನ ಮೊದಲಿಗೆ ಪ್ರಚಾರಕ್ಕೆ ಬಂತು. ಕ್ರಿ.ಶ.16ನೆಯ ಶತಮಾನದ ತನಕವೂ ಅಂಗಶಾಸ್ತ್ರಜ್ಞರಿಗೂ ವೈದ್ಯರಿಗೂ  ಇದ್ದ ಜ್ಞಾನ ಮಿತಿಯದಾಗಿತ್ತು. ಅಲ್ಲಿನವರೆಗೆ ರಕ್ತ ನಾಳಗಳಲ್ಲಿ ಸುಮ್ಮನೆ ತುಂಬಿಕೊಂಡಿರದೆ ಚಲಿಸುತ್ತಿರುವುದೆಂಬುದು ಗೊತ್ತಿತ್ತು. ಹೃದಯಕ್ಕೆ ಸಂಕೋಚನ-ವ್ಯಾಕೋಚನ ಸಾಮರ್ಥ್ಯವಿದ್ದು, ಅದು ಸಂಕೋಚಿಸುವುದರಿಂದಲೇ ರಕ್ತಚಲನೆಗೆ ಬೇಕಾಗುವ ಒತ್ತಡ ಒದಗುತ್ತದೆ ಎಂಬುದೂ ಅವರಿಗೆ ತಿಳಿದಿರಲಿಲ್ಲ.

ಅಪಧಮನಿಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವ ರಕ್ತ ಕಿಂಚಿತ್ತಾಗಿ ಆಯಾ ಎಡೆಗಳಲ್ಲಿ ಉಪಯೋಗಗೊಂಡು ಉಳಿದದ್ದು ಅಭಿಧಮನಿಗಳ ಮೂಲಕ ಗುಂಡಿಗೆಗೇ ಹಿಂತಿರುಗಿಬರುತ್ತದೆ. ಅಭಿಧಮನಿಗಳಲ್ಲಿ ರಕ್ತ ಗುಂಡಿಗೆಗೆ ಅಭಿಮುಖವಾಗಿ ಮಾತ್ರ ಸಾಗುತ್ತದೆ ಕವಾಟಗಳಿರುವುದರಿಂದ ಹಿಮ್ಮುಖವಾಗಿ ಹರಿಯಲು ಸಾಧ್ಯವಿಲ್ಲ. ಆದ್ದರಿಂದ ಇವುಗಳ್ಲಿ ರಕ್ತ ಒಂದು ಸಲ ಹಿಂದಕ್ಕೆ ಇನ್ನೊಂದು ಮುಂದಕ್ಕೆ ಹರಿಯುತ್ತದೆ ಎನ್ನುವುದು ತಪ್ಪು. ರಕ್ತ ಪರಿಚಲನೆ ಪ್ರಾರಂಭವಾಗುವುದು ಗುಂಡಿಗೆಯಿಂದ ಅಲ್ಲದೆ ಯಕೃತ್ತಿನಿಂದ ಅಲ್ಲ; ಕೊನೆಗೊಳ್ಳವುದೂ ಅಲ್ಲಿಯೇ.

ಈ ವಿಷಯಗಳನ್ನೆಲ್ಲ ಗ್ರಂಥ ವ್ಯಾಸಂಗದಿಂದಲೂ ನಿರಂತರ ಚಿಂತನೆಯಿಂದಲೂ ಹಾರ್ವೆ ತರ್ಕಿಸಿ ಅನೇಕ ಸಂಶೋಧನೆಗಳಿಂದ ತಮ್ಮ ವಾದಸರಣಿ ಸರಿಯಾಗಿರುವುದೆಂದು ಕಂಡುಕೊಂಡರು. ಸಂಶೋಧನೆಗಳನ್ನು ಶವಗಳ ಮೇಲೆ ನಡೆಸಿದ್ದಲ್ಲದೆ ಗುಂಡಿಗೆಯ ಮಿಡಿತವನ್ನು ನಾಯಿ, ಹಂದಿ, ಹಾವು, ಕಪ್ಪೆ, ಮೀನು, ಏಡಿ, ಮುತ್ತಿನ ಚಿಪ್ಪು, ಕೀಟ ಇವುಗಳ ಸಂದರ್ಭಗಳಲ್ಲಿ ಕಣ್ಣಾರೆ ಕಂಡು ವಿಷಯಗಳನ್ನು ಮನದಟ್ಟುಮಾಡಿಕೊಂಡರು. ಮೊಟ್ಟೆಯೊಳಗೆ ಇರುವ ಕೋಳಿಯ ಭ್ರೂಣದಲ್ಲಿ ಕೂಡ ಗುಂಡಿಗೆಯ ಮಿಡಿತವನ್ನು ತಾನು ನೋಡಿರುವುದಾಗಿ ತಿಳಿಸಿ ದೊರೆ ಚಾರಲ್ಸ್‍ನಿಗೂ ತೋರಿಸಿ ದೃಢಪಡಿಸಿದರು. ಗುಂಡಿಗೆಯಲ್ಲಿ ಮತ್ತು ಅಭಿಧಮನಿಗಳಲ್ಲಿ ವಪೆಯಂತಿರುವ ಕದ ಅಥವಾ ಕವಾಟಗಳು ಅಳವಟ್ಟಿರುವ ರೀತಿಯಾದರೂ ರಕ್ತ ಒಂದೇ ಮಾರ್ಗವಾಗಿ ಪ್ರವಹಿಸುವಂತೆ ಮಾಡುತ್ತದೆ ಎಂದು ನಿಶ್ಚಯಿಸಿದರು. ರಕ್ತ ಹೃತ್ಕರ್ಣದಿಂದ (ಆರಿಕಲ್) ಹೃತ್ಕುಕ್ಷಿಗೂ (ವೆಂಟ್ರಿಕಲ್) ಅಲ್ಲಿಂದ ಅಪಧಮನಿಗಳಿಗೂ ಪ್ರವಹಿಸಬಲ್ಲದೆ ವಿನಾ ಅಪಧಮನಿಯಿಂದ ಹಿಂದಕ್ಕೆ ಹೃತ್ಕುಕ್ಷಿಗೂ ಮತ್ತು ಹೃತ್ಕುಕ್ಷಿಯಿಂದ ವಾಪಸು ಹೃತ್ಕರ್ಣಕ್ಕೂ ಹೋಗುವ ಹಾಗಿಲ್ಲ; ಇದೇ ರೀತಿ ಅಭಿಧಮನಿಗಳಲ್ಲಿ ರಕ್ತ ಗುಂಡಿಗೆಯ ಕಡೆಗೆ ಹರಿಯುವುದೇ ಹೊರತು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸಲಾರದು; ರಕ್ತ ಪರಿಚಲನೆ ಗುಂಡಿಗೆಯಿಂದ ಅಪಧಮನಿಗಳು, ಅಪಧಮನಿಗಳಿಂದ ಅಭಿಧಮನಿಗಳು, ಪುನ: ಗುಂಡಿಗೆ-ಹೀಗೆ ಏರ್ಪಟ್ಟಿದೆ ಎಂದು ಈತ ತಮ್ಮ ಸಿದ್ಧಾಂತವನ್ನು ಮಂಡಿಸಿದರು. ಇವೆಲ್ಲವನ್ನೂ ಒಳಗೊಂಡ `ಡಿ ಮೋಟು ಕಾರ್ಡಿಸ್ ಗ್ರಂಥ 72 ಪುಟಗಳಷ್ಟು. ಆದರೂ ಬಲು ಬಿಗಿಯಾದ ಶೈಲಿಯಲ್ಲಿ ರಚಿತಗೊಂಡು ಅದರಲ್ಲಿಯ ವಿಷಯ ನಿರೂಪಣೆ ನಿಷ್ಕೃಷ್ಟವಾಗಿಯೂ ಸಂಪೂರ್ಣವಾಗಿಯೂ ಇದೆ. ಅಪಧಮನಿಗಳಿಗೂ ಅಭಿಧಮನಿಗಳಿಗೂ ನೇರ ಸೇರ್ಪಡೆ ಕಾಣಿಸದಿರುವುದರಿಂದ ಮತ್ತೆ ಬೇರೆ ರೀತಿ ಸೇರ್ಪಡೆ ಹೇಗೆ ಇರುವುದು ಎಂಬುದನ್ನು ಮಾತ್ರ ಇವರಿಗೆ ತೋರಿಸುವುದಕ್ಕಾಗಲಿಲ್ಲ. ಆದರೂ ಅಂಥ ಸೇರ್ಪಡೆ ಇದ್ದೇ ತೀರಬೇಕು ಎನ್ನುವುದನ್ನು ಮಾತ್ರ ಆತ ಖಂಡಿತವಾಗಿ ನಿರೂಪಿಸಿದ್ದರು. ಸುಮಾರು 35 ವರ್ಷಗಳ ಬಳಿಕ ಹಾರ್ರ್ವೆ ಕಾಲವಾದ 4 ವರ್ಷಗಳ ಅನಂತರ ಹಾರ್ವೆಯಂತೆಯೇ ಪ್ರಸಿದ್ಧರಾದ  ದೇಹಕ್ರಿಯಾ ವಿಜ್ಞಾನಿ ಮಾಲ್ಪೀಜಿ (1628-94) ಅವರು ಅಪಧಮನಿಗಳಿಗೂ ಅಭಿಧಮನಿಗಳಿಗೂ ಸಂಪರ್ಕ ಕಲ್ಪಿಸುವ ಲೋಮನಾಳಗಳನ್ನು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ ಅಧ್ಯಯನ ಮಾಡಿದರು. ಇದರಿಂದ ಹಾರ್ವೆ ಅವರ  ನಿರೂಪಣೆ ನಿಜ ಎಂಬುದು ಸ್ಪಷ್ಟಗೊಂಡಿತು. ಹಾರ್ವೆ ಕಾಲಕ್ಕೆ ಸೂಕ್ಷ್ಮದರ್ಶಕದ ಉಪಜ್ಞೆ ಇನ್ನೂ ಆಗಿರಲಿಲ್ಲವಾದ್ದರಿಂದ ಲೋಮನಾಳಗಳಂಥ ಸೂಕ್ಷ್ಮರಚನೆಗಳನ್ನು ಈತ ಕಾಣುವಂತಿರಲಿಲ್ಲ.

ರಕ್ತ ಪರಿಚಲನೆ ವಿಷಯದಲ್ಲಿ ಹಾರ್ವೆ ಸಿದ್ಧಾಂತವನ್ನು ಇಂಗ್ಲೆಂಡಿನಲ್ಲಿ ಮತ್ತು ಯುರೋಪಿನಲ್ಲಿಯ ವೈದ್ಯವೃಂದ ಬಲುಬೇಗ ಒಪ್ಪಿಕೊಂಡಿತು. ಪ್ರಾಚೀನವಿಜ್ಞಾನಿಗಳಾದ ಗೇಲೆನ್ ಮೊದಲಾದವರು ಹೇಳಿದ್ದನ್ನು ಯಾರೂ ಪ್ರಶ್ನಿಸಕೂಡದು, ಹಾಗೆ ಪ್ರಶ್ನಿಸಲು ಅಧಿಕಾರವೇ ಇಲ್ಲ ಎಂಬ ಅಂಧ ಮನೋಭಾವ ಸಾಮಾನ್ಯವಾಗಿದ್ದ ಆ ಕಾಲದಲ್ಲಿ ಈ ನೂತನ ಸಿದ್ಧಾಂತಕ್ಕೆ ಒಪ್ಪಿಕೊಳ್ಳದಿರುವುದಕ್ಕೆ ಹಾರ್ವೆ ಪ್ರಯೋಗಗಳು ಮತ್ತು ವಾದಗಳು ಅವಕಾಶವನ್ನೇ ಕೊಡುವಂತಿರಲಿಲ್ಲ. ಆದರೂ ಇವನ ಸಿದ್ಧಾಂತಕ್ಕೆ ಪ್ರತಿಭಟನೆ ಇಲ್ಲದಿರಲಿಲ್ಲ. ಅಲ್ಲದೆ ಈ ರೀತಿ ಇವರು ಅರಿಸ್ಟಾಟಲ್, ಗೇಲೆನ್‍ಗಳ ಬೋಧನೆಗೆ ವಿರುದ್ಧವಾಗಿ ಪ್ರತಿಪಾದಿಸುವರೆಂದು ಕ್ರುದ್ಧರಾದ ಜನರಿಂದ ಇವರ ವೈದ್ಯವೃತ್ತಿಯೂ ಗಣನೀಯವಾಗಿಯೇ ಕುಂಠಿತವಾಯಿತು. 

ಹಾರ್ವೆ ಪರಿಶೋಧಿಸಿದ ಇನ್ನೊಂದು ವಿಚಾರ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಮತ್ತು ಭ್ರೂಣದ ಬೆಳೆವಣಿಗೆಗಳಿಗೆ ಸಂಬಂಧಪಟ್ಟಿದ್ದು. ಈ ವಿಚಾರಗಳನ್ನೊಳಗೊಂಡ ಗ್ರಂಥ ರಕ್ತಪರಿಚಲನೆಯನ್ನು ವಿವರಿಸಿರುವ ಗ್ರಂಥದ 5-6 ಪಟ್ಟು ದೊಡ್ಡದಾಗಿದ್ದರೂ ಅದರಷ್ಟು ನಿಖರವಾಗಿಲ್ಲ. ವಾಸ್ತವವಾಗಿ ಸ್ತನಿಗಳಲ್ಲಿ ಅಂಡ ಇರುವ ವಿಚಾರ ಪತ್ತೆಯಾದದ್ದು 1827ರಲ್ಲಿ, ಈತ ನಿಧನಹೊಂದಿ ಸುಮಾರು 170 ವರ್ಷಗಳಾದ ಮೇಲೆಯೇ.

ಹಾರ್ವೆ ಅವರ ರಚನೆಗಳು ಎರಡು ಗ್ರಂಥಗಳಿಗೆ ಮಾತ್ರ ಸೀಮಿತವಾಗಿ ರಲಿಲ್ಲ. ಜೀನ್ ರಿಯೋಲಾನಿಗೆ ಹಾರ್ವೆ ಬರೆದ ಎರಡು ದೀರ್ಘಪತ್ರಗಳು ಗ್ರಂಥದಂತೆಯೇ ಇದ್ದು, ವಿಷಯ ಪ್ರತಿಪಾದನೆ, ವಾದವಿವಾದಗಳು, ಪ್ರಯೋಗವಿಧಾನ, ಪರಿಣಾಮಗಳು ಎಲ್ಲವನ್ನೂ ಒಳಗೊಂಡಿದ್ದುವು. ಇವು ಕೇಬ್ರಿಜ್‍ನಲ್ಲಿ ಪ್ರಕಟವಾದುವು (1649). ತಮಗೆ ಸ್ನೇಹಿತನಂತೆ ಇದ್ದ ಚಾರಲ್ಸ್ ದೊರೆ ಕೊಲೆಗೀಡಾದ ಪ್ರಕ್ಷುಬ್ಧಸಂದರ್ಭದಲ್ಲಿಯೂ ಇವರು ವೈಜ್ಞಾನಿಕ ವಿಷಯಗಳ ಸರಿ ತಪ್ಪು ನಿರ್ಣಯದಲ್ಲಿ ಎಷ್ಟು ಆಸಕ್ತನಾಗಿದ್ದರೆಂಬುದನ್ನು ಇದು ತೋರಿಸುತ್ತದೆ. ಇದೇ ರೀತಿ ಕ್ಯಾಸ್ಪರ್ ಹಾಫ್‍ಮನ್, ಶ್ಲೇಜಲ್, ವ್ಲಾಕ್‍ವೆಲ್ಡ್, ಮಾರಿಸನ್ ಮೊದಲಾದವರಿಗೆ ಕ್ರಮವಾಗಿ ಬರೆದ ವೈಜ್ಞಾನಿಕ ವಿಷಯ ಪತ್ರಗಳಲ್ಲಿ ಹಾರ್ವೆ ಅವರ ಅಮಿತಾಸಕ್ತಿಗಳು ಎದ್ದು ಕಾಣುತ್ತವೆ. ಅಲ್ಲದೆ ತಾಮಸ್ ಪಾರ್ ಎಂಬ, 150 ವರ್ಷಗಳಿಗೂ ಮೀರಿ ಬದುಕಿದ್ದನೆಂದು ಹೇಳಲಾದ, ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವಿವರಣೆ, ಇವರು ಮೊದಲನೆಯ ಲುಮ್ಲೆಯನ್ ಉಪನ್ಯಾಸಕ್ಕೆ ಉಪಯೋಗಿಸಿದ ವ್ಯಾಖ್ಯಾನವನ್ನೂ ಅವರ ಕೃತಿಗಳೆಂದು ಭಾವಿಸಲಾಗಿದೆ. ಕೀಟಗಳ ಪ್ರಜನನಕ್ರಿಯೆ ಕುರಿತು ಇವರು ಆಳವಾಗಿ ವ್ಯಾಸಂಗಿಸಿ ಗ್ರಂಥವೊಂದನ್ನು ರಚಿಸಿದ್ದರು. ಆದರೆ ದೊರೆಯನ್ನು ಹಿಂಬಾಲಿಸುತ್ತಿದ್ದ ಕಾಲದಲ್ಲಿ ಇವರು ದೊರೆಯೊಡನಾಡಿಯೆಂದು ಕ್ರುದ್ಧರಾದ ಜನ ಲಂಡನ್ನಿನಲ್ಲಿ ಇವರ ಮನೆಯನ್ನು 1642ರಲ್ಲಿ ಲೂಟಿ ಮಾಡಿದಾಗ ಆ ಹಸ್ತಪ್ರತಿ ಪೂರ್ಣವಾಗಿ ನಾಶವಾಗಿಹೋಯಿತು. ಪಾರ್ಲಿಮೆಂಟಿನ ಅನುಮತಿ ಇದ್ದಾಗಲೂ ಜನ ತನ್ನ ಮೇಲೆ ಆರೋಪಣೆ ಮಾಡಿ ಅಮೂಲ್ಯ ವ್ಯಾಸಂಗ ಫಲವನ್ನು ನಿರ್ನಾಮ ಮಾಡಿದ್ದು ಇವರಿಗೆ ಬಲು ಸಂಕಟವನ್ನು ತಂದುಕೊಟ್ಟಿತು. ಇಷ್ಟೇ ಅಲ್ಲದೆ ಶ್ವಾಸಕ್ರಮದ ಮೇಲೆಯೂ ರೋಗಶಾಸ್ತ್ರದ ಮೇಲೆಯೂ ಗ್ರಂಥಗಳನ್ನು ರಚಿಸಿದ್ದರೆಂದೂ ಬಹುಶ: ಅವು ಲಂಡನ್ನಿನ ಭೀಕರ ಅಗ್ನಿಕಾಂಡದಲ್ಲಿ ನಾಶವಾಗಿ ಹೋಗಿರಬೇಕೆಂದೂ ಹೇಳಲಾಗಿದೆ. 

ವಿಲಿಯಂ ಹಾರ್ವೆ 1657 ಜೂನ್ 3ರಂದು ಲಂಡನ್ನಿನಲ್ಲಿ ನಿಧನರಾದರು.

William Harvey, who made influential contributions in anatomy and physiology

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ