ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಫೆಲ್


 ರಾಫೆಲ್


ಇಟಲಿಯ ಪುನರುಜ್ಜೀವನ ಕಾಲದ ಪ್ರಸಿದ್ಧ ಕಲಾವಿದ. 

ರಾಫೆಲ್ 1483ರ ಏಪ್ರಿಲ್ 6 ರಂದು ಜನಿಸಿದ. ಗಿಯೊಕವನ್ನಿ ಸಾಂಟಿ ಹಾಗೂ ವ್ಯಾಜಿಯ ಡಿ ಬಟಿಸ್ಟ ಸಿಯರ್ಲಾ ಇವನ ತಂದೆತಾಯಿಗಳು. ರಾಫೆಲ್‍ನ ತಂದೆ ಗಿಯೊವೆನ್ನಿ ಅಂಥ ದೊಡ್ಡ ಕಲಾವಿದನಾಗಿರದಿದ್ದರೂ ಒಬ್ಬ ಸುಸಂಸ್ಕೃತ ವ್ಯಕ್ತಿಯಾಗಿದ್ದ ಉರ್ಬಿನೊ ಆಸ್ಥಾನದಲ್ಲಿ ಪ್ರಚಲಿತವಿದ್ದ ಎಲ್ಲ ಕಲಾತ್ಮಕ ಚಿಂತನೆಗಳನ್ನು ತನ್ನದಾಗಿಸಿಕೊಂಡಿದ್ದ. 1491 ರಾಫೆಲ್‍ನ ತಾಯಿ ತೀರಿಕೊಂಡಳು. 1494 ರಲ್ಲಿ ತಂದೆ ಕಾಲವಾದಾಗ ರಾಫೆಲ್‍ಗೆ ಕೇವಲ 11 ವರ್ಷ. ತನ್ನ ಜೀವಿತಾವಧಿಯಲ್ಲಿ ಮಗನಿಗೆ ಆತ ಆಸ್ಥಾನದ ಮಾನವತಾವಾದದ ತತ್ತ್ವಜ್ಞಾನದ ಪರಿಚಯ ಮಾಡಿಕೊಟ್ಟ.

ರಾಫೆಲ್ ಹುಟ್ಟುವುದಕ್ಕೆ ಮುಂಚೆ ಏಳುತಿಂಗಳು ಮೊದಲೇ ದೊರೆ ಫೆಡರಿಕೊ ಡ ಮಾಂಟೆಫೆಲ್ಟ್ರೋ ನಿಧನಹೊಂದಿದ್ದ. ಉರ್ಬಿನೊ ಆತನ ದರಬಾರಿನಲ್ಲಿ ಸಾಂಸ್ಕೃತಿಕ ಕೇಂದ್ರವಾಗಿದ್ದಿತ್ತು. ಸುಸಂಸ್ಕೃತ ರಾಜಕುಮಾರ ಫೆಡರಿಕೊ ಪುನರುಜ್ಜೀವನ ಕಾಲದ ನಿರೀಕ್ಷೆಗನುಗುಣವಾಗಿ ಎಲ್ಲ ಕಲೆಗಳನ್ನೂ ಪ್ರೋತ್ಸಾಹಿಸಿದ. ಅಷ್ಟೇ ಅಲ್ಲ ಪ್ರತಿಭಾವಂತ ಕಲಾವಿದರನ್ನು ಎಲ್ಲ ಕಡೆಯಿಂದ ಆಕರ್ಷಿಸಿ ತಾನು ಹೊಸದಾಗಿ ನಿರ್ಮಿಸಿದ ಅರಮನೆಯಲ್ಲಿ ಆಶ್ರಯ ನೀಡಿ ಉತ್ತೇಜಿಸಿದ. ಆ ಬುದ್ಧ ಜೀವಿಗಳ ನಡುವೆ ಉರ್ಬಿನೊದ ಇಬ್ಬರು ಮಹನೀಯರನ್ನು ನಾವು ಕಾಣಬಹುದು. ಒಬ್ಬ ವಾಸ್ತುಶಿಲ್ಪಿ ಡೊನ್ಯಾಟೊ ಬ್ರಮಾಂಟೆ (ತರುವಾಯ ರಾಫೆಲ್ ರೋಮ್‍ನಲ್ಲಿ ಇವನ ಮೈತ್ರಿಯನ್ನು ಗಳಿಸಿಕೊಂಡ), ಇನ್ನೊಬ್ಬ ಬರೆಹಗಾರ ಬಲ್ಡಸಾರ್ ಕ್ಯಾಸ್ಟಿಗ್ಲಿಯೊನ್ - ಈತನ ಆಸ್ಥಾನಿಕ ಎಂಬ ಕೃತಿ ಆ ಕಾಲಕ್ಕೆ ಲೋಕ ಪ್ರಸಿದ್ಧವಾಗಿತ್ತಲ್ಲದೆ ಬಲ್ಡಸಾರ್ ಉತ್ತಮ ನಡೆತೆಗೆ ಉದಾಹರಣೆಯಾಗಿ ಕಂಗೊಳಿಸುತ್ತಿದ್ದ. ಬ್ರಮಾಂಟೆಯಾಗಲೀ ಕ್ಯಾಸ್ಟಿಗ್ಲಿಯೊನ್ ಆಗಲೀ ಫೆಡರಿಕೊನ ಆಸ್ಥಾನದಲ್ಲಿ ಸದಸ್ಯರಾಗಿರಲಿಲ್ಲ. ಹಾಗೆಯೇ ಆ ಕಾಲದಲ್ಲಿ ಉರ್ಬಿನೊದ ದೃಶ್ಯಕಲೆಗಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಇನ್ನಿಬ್ಬರು ಕಲಾವಿದರಾದ ಪಿಯೆರೊ ಡೆಲ್ಲಾಫ್ರಾನ್ಸಿಸ್ಕಾ, ಲಿಯೊನ್ ಬಟಿಸ್ಟ ಆಲ್ಬರ್ಟ್ - ಇವರು ಕೂಡ ಆಸ್ಥಾನದಲ್ಲಿರಲಿಲ್ಲ. ಪಿಯೆರೊ ಹಾಗೂ ರಾಫೆಲ್ ರ ಶೈಲಿಯಲ್ಲಿ ವಿಭಿನ್ನತೆಯಿತ್ತು. ಪಿಯೆರೊ ಮನುಷ್ಯಾಕೃತಿಯನ್ನು ಜ್ಯಾಮಿತಿಯ ಅಂಶಗಳಾಗಿ ಪರಿಪೇಕ್ಷದ ಮೇಲೆ ಒತ್ತು ನೀಡಿದ್ದರಿಂದ ರಾಫೆಲ್‍ನ ಶೈಲಿಗೆ ವ್ಯತಿರಿಕ್ತವಾಗಿತ್ತು. ಈತ ಸಂಗೀತ ಸುನಾದದ ಆಧಾರದ ಮೇಲೆ ವಾಸ್ತುಶಿಲ್ಪಿಯ ಸೌಷ್ಟವವಿರಬೇಕೆಂದು ಒತ್ತು ಹೇಳಿದ. ರಾಫೆಲ್‍ನ ಶೈಲಿ ಮತ್ತು ಕಲಾತ್ಮಕ ತತ್ತ್ವಗಳನ್ನು ಗುರುತಿಸುವಾಗ ಈ ಮಹನೀಯರಿಬ್ಬರಿಗೆ ಈತ ಋಣಿಯಾಗಿರುವುದು ತಿಳಿಯುತ್ತದೆ. ಇವರಲ್ಲದೆ ರಾಫೆಲ್‍ನ ಮೇಲೆ ಜಸ್ಟಸ್, ಅಸೆಲ್ಲೊ, ಫ್ರಾನ್ಸೆಸ್ಕೊ ಡಿ ಜಿಯೊರ್ಜಿಯೊ ಇವರ ಪ್ರಭಾವವುಂಟಾಗಿತ್ತು. ಪ್ಲೆಮಿಶ್ ಚಿತ್ರಕಲೆಯ ಪ್ರಭಾವವೂ ಪ್ರಧಾನವಾಗಿತ್ತು. ಕಾಲಕ್ರಮೇಣ ರಾಫೆಲ್ ಫ್ಲಾರೆನ್ಸ್‍ನಲ್ಲಿ ಲಿಯೊನಾರ್ಡೊ ಡ ವಿಂಚಿಯ ಜೊತೆಗೂಡಿ 15 ನಯ ಶತಮಾನದ ಕಲಾವಿದರಲ್ಲಿ ಕಂಡುಬರುವ ಸಾವಯವ ಹಾಗೂ ಕ್ರಮಬದ್ಧ ಚಿತ್ರಕಲಾ ವಿಧಾನವನ್ನು ರೂಢಿಸಿಕೊಂಡ.‍

ಫ್ಲಾರೆನ್ಸ್ ಮತ್ತು ಪೆರುಜಿಯದಲ್ಲಿ ಇತರ ಪ್ರಸಿದ್ಧ ಕಲಾವಿದರ ಪ್ರಭಾವಕ್ಕೆ ರಾಫೆಲ್ ಒಳಗಾದನಾದರೂ ಈತನ ಅನಂತರದ ಎಲ್ಲ ಕಲಿಕೆಗೆ ಉರ್ಬಿನೊದಲ್ಲಿ ಕಲಿತ ವಿದ್ಯೆ ತಳಹದಿಯಾಗಿದೆ. ತನ್ನ ವಯಸ್ಸಿಗೆ ಮೀರಿದ ಪ್ರಾಢಿಮೆಯನ್ನು ಮೆರೆಯಲು ರಾಫೆಲ್‍ಗೆ ಸಾಧ್ಯವಾಯಿತು. ಕೇವಲ 17 ವರ್ಷದವನಾಗಿರುವಾಗಲೇ 16 ನೆಯ ಶತಮಾನ ಅರುಣೋದಯದ ಕಾಲದಲ್ಲಿ ಅತ್ಯದ್ಭುತವಾದ ಪ್ರತಿಭೆಯನ್ನು ರಾಫೆಲ್ ಮೆರೆದ.

ರಾಫೆಲ್ ತನ್ನ ತಂದೆಯ ನಿಧನಾನಂತರ ಆ ಕಾಲದ ಬಹುದೊಡ್ಡ ಕಲಾವಿದನಾಗಿದ್ದ ಪೀಟ್ರೊ ಪೆರುಜಿನೊ ಬಳಿ ಶಿಷ್ಯತ್ವಹೊಂದಿದ. 1501 ಮತ್ತು 1503 ರ ಅವಧಿಯಲ್ಲಿ ಇವನಿಗೆ ಘನವಾದ 'ಕನ್ಯಾಮಾತೆಯ ಕಿರೀಟಧಾರಣೆ' ಚಿತ್ರವನ್ನು ರೂಪಿಸುವ ನಿಯೋಜನೆ ದೊರಕಿತು.  ಪೆರುಜಿಯದ ಕ್ಯಾಪೆಲಾ ಒಡಿ ದೇವಾಲಯದಲ್ಲಿ ಇದನ್ನು ರಚಿಸಿದ.  1797 ರ ತನಕ ಇದು ಅಸ್ತಿತ್ವದಲ್ಲಿತ್ತಾದರೂ ಇದನ್ನು ನೆಪೋಲಿಯನ್ ಸೈನಿಕರು ಕದ್ದದ್ದಾಗಿ ತಿಳಿದು ಬರುತ್ತದೆ. ಆಕೃತಿಗಳ ರೇಖೆಗಳ ಮಾಧುರ್ಯವನ್ನು ಸೆರೆಹಿಡಿಯುವಲ್ಲಿ ಪೆರುಜಿನೊ ಪ್ರಭಾವ ಎದ್ದು ಕಾಣುತ್ತದೆ. ಆದಾಗ್ಯೂ ಆ ಆರಂಭದ ಅವಸ್ಥೆಯಲ್ಲೂ ರಾಫೆಲ್ ತನ್ನ ಗುರುವಿಗಿಂತ ಭಿನ್ನವಾದ ಮಾರ್ಗವನ್ನು ತುಳಿಯುತ್ತಿರುವುದರ ಸ್ಪಷ್ಟ ಸೂಚನೆಗಳನ್ನು ಗುರುತಿಸಬಹುದಾಗಿದೆ. ಅನಂತರ ರಚಿಸಿದ ವಿಷನ್ ಆಫ್ ಎ ನೈಟ್, ತ್ರೀಗ್ರೇಸಸ್ ಮತ್ತು ಸಂತ ಮೈಖೇಲ್ ಚಿತ್ರಗಳಲ್ಲಿ ನಿರೂಪಣಾ ಚಿತ್ರಶೈಲಿಯ ಅದ್ಭುತ ಮಾದರಿಗಳನ್ನು ಕಾಣಬಹುದಾಗಿದೆ. 

ಪೆರುಜಿಯದ ಚಿತ್ರಕಲಾವಿದ ಬರ್ನಾರ್ಡಿನೊ ಪಿಂಟರಿಜಿಯೊವನ್ನು ಸಿಯೆನಾದವರೆಗೆ ಹಿಂಬಾಲಿಸಿದ ರಾಫೆಲ್ ಅಲ್ಲಿಂದ ಮುಂದೆ ಫ್ಲಾರೆನ್ಸ್ ‍ವರೆಗೆ ತನ್ನ ಪ್ರಯಾಣ ಮುಂದುವರಿಸಿದ. ಆ ನಗರದಲ್ಲಿ ಲಿಯೊನಾರ್ಡೊ ಡ ವಿಂಚಿ ಮತ್ತು ಮೈಕೆಲೆಂಜೆಲೊ ಕೈಗೆತ್ತಿಕೊಂಡಿದ್ದ ಕೃತಿಗಳ ಬಗ್ಗೆ ರಾಫೆಲ್ ಕೇಳಿದ್ದರಿಂದ ಆ ಕಡೆ ಇವನು ಆಕರ್ಷಿತನಾಗಿದ್ದ. ರಾಫೆಲ್ 15 ನೆಯ ಶತಮಾನವಾದ ಪೂರ್ವಸೂರಿಗಳಿಂದ ಕಲಿಯುವುದರ ಜೊತೆಗೆ ತನ್ನ ಇಬ್ಬರು ಹಿರಿಯ ಸಮಕಾಲೀನರಾದ ಡ ವಿಂಚಿ ಹಾಗೂ ಮೈಕಲೆಂಜೆಲೋ ಅವರಿಂದಲೂ ಕಲಿತ. 

1505 ಮತ್ತು 1507 ರ ನಡುವೆ ರಾಫೆಲ್ ರಚಿಸಿದ ಕೃತಿಗಳಲ್ಲಿ ಅನೇಕ, ವಿಶೇಷವಾಗಿ ಮಡೊನ್ನಾ ಕೃತಿಗಳು - ದ ಮಡೊನ್ನಾ ಆಫ್ ದ ಗೋಲ್ಡ್ ಪಿಂಚ್, ದ ಮಡೊನ್ನಾ ಡೆಲ್, ಪ್ರೇಟೊ, ದ ಎಸ್ಟರೇಜಿ ಮಡೊನ್ನಾ ಇತ್ಯಾದಿ ಕೃತಿಗಳು  ಲಿಯನಾರ್ಡೊನ ಪ್ರಭಾವವನ್ನು ಎತ್ತಿ ತೋರಿಸುತ್ತವೆ. ಕೋಮಲ ಮುಖಭಾವದ ಮನುಷ್ಯ ಮಾದರಿಗಳನ್ನು ರಚಿಸುವಲ್ಲಿ ಲಿಯೊನಾರ್ಡೊಗಿಂತ ರಾಫೆಲ್ ಒಂದು ಹೆಜ್ಜೆ ಮುಂದೆ ಹೋದ. 1504 ಮತ್ತು 1508 ರ ಅವಧಿಯಲ್ಲಿ ರಾಫೆಲ್ ಫ್ಲಾರೆನ್ಸಿನಲ್ಲಿ ಒಂದೇ ಕಡೆ ವಾಸಿಸಲಿಲ್ಲ; ಉರ್ಬಿನೊಕ್ಕೆ ವಾಪಸ್ಸಾದ.  ಪೆರುಜಿಯಕ್ಕೆ ಹೋದ. 

1507 ರಲ್ಲಿ ಪೆರುಜಿಯದ ಶ್ರೀಮಂತ ಮಹಿಳೆಯೊಬ್ಬಳು 'ಡಿಪೊಸಿಷನ್' ಚಿತ್ರ ಬಿಡಿಸಲು ನಿಯೋಜಿಸಿದಳು; ಈಗ ಈ ಕೃತಿ ರೋಮ್‍ನ ಬೊರ್ಜಿಸ್ ಪ್ರದರ್ಶನಾಲಯದಲ್ಲಿದೆ. ಮೈಕೆಲೆಂಜಲೊ ಹಾಗೂ ಲಿಯೊನಾರ್ಡೊರ ಪ್ರಭಾವ ಇದರಲ್ಲಿ ಕಾಣುವುದಾದರೂ ರಾಫೆಲ್ ತನ್ನ ಸಂಶ್ಲೇಷಣಾ ಸಾಮರ್ಥ್ಯದಿಂದ ಇದನ್ನೊಂದು ಸ್ಟೋಪಜ್ಞ ಕೃತಿಯಾಗಿಸಿದ್ದಾನೆ.  ಆಗ ರಾಫೆಲ್ ಇನ್ನೂ 25 ಸಂವತ್ಸರಗಳನ್ನು ದಾಟದ ತರುಣನಾಗಿದ್ದರೂ ಆ ವೇಳೆಗಾಗಲೇ ತನ್ನ ಕಲಾತ್ಮಕ ಸಾಧ್ಯತೆಗಳ ಮೇಲೆ ಪೂರ್ಣ ಪ್ರಭುತ್ವ ಸಾಧಿಸಿದ್ದಲ್ಲದೆ ತನ್ನ ಸೌಂದರ್ಯ ತತ್ತ್ವಗಳ ಮೂಲನೆಲೆಯನ್ನೂ ಅರಿತಿದ್ದ. 

1508 ರ ಕೊನೆಯ ವೇಳೆಗೆ ಬ್ರಮಾಂಟೆಯ ಸಲಹೆಯ ಮೇರೆಗೆ ಎರಡನೆಯ ಪೋಪ್ ಜೂಲಿಯಸ್‍ನು ರಾಫೆಲ್‍ನನ್ನು ರೋಮ್ ನಗರಕ್ಕೆ ಆಹ್ವಾನಿಸಿದ. ಆ ವೇಳೆಗೆ ರಾಫೆಲ್ ಅಷ್ಟೇನೂ ಪ್ರಸಿದ್ಧನಾಗಿರಲಿಲ್ಲ; ಇವನು ಜೂಲಿಯಸ್‍ನ ಮನಸ್ಸನ್ನು ಗೆಲ್ಲುವುದಕ್ಕೆ ಇವನಿಗೆ ಬಹಳ ಕಾಲ ಬೇಕಾಗಲಿಲ್ಲ. ಇವನ ಪ್ರಸಿದ್ಧಿ, ಪ್ರಭಾವ ದಿನೇ ದಿನೇ ಹೆಚ್ಚತೊಡಗಿತು. ರೋಮ್ ಹಾಗೂ ಆ ನಗರದ ಶ್ರೀಮಂತಿಕೆಯ ಜೊತೆ ತನ್ನನ್ನು ತಾನು ಗುರುತಿಸಿಕೊಳ್ಳೂತ್ತಾ ರಾಫೆಲ್ ಪ್ರಸಿದ್ಧಿಯ ಅಲೆಯ ಮೇಲೆ ತೇಲುವಾಗ ಜನರು ಇವನನ್ನು ಚಿತ್ರಕಲಾವಿದ ರಾಜಕುಮಾರ ಎಂದು ಕರೆದರು. ತರುವಾಯದಲ್ಲಿ ಲ್ಯಾಟಿನ್ ಭಾಷೆಯ ಸೂಕ್ತಿಯೊಂದರ ಮೂಲಕ ಮಾನವತಾವಾದಿ ಸೀಲಿಯೊ ಕ್ಯಾಲಕಗ್ನಸಿ ಹೀಗೆ ಹೇಳಿದ : "ರೋಮ್ ನಗರವನ್ನು ಕಟ್ಟುವುದಕ್ಕೆ ಪುರಾತನಕಾಲದಲ್ಲಿ ಅನೇಕ ವೀರರು ಅನೇಕ ವರ್ಷಗಳ ಕಾಲ ದುಡಿಯಬೇಕಾಯಿತು. ಹಾಗೆಯೇ ಅದನ್ನು ನಾಶಮಾಡುವುದಕ್ಕೆ ಅನೇಕ ಶತ್ರುಗಳು ಹಾಗೂ ಶತಮಾನಗಳು ಬೇಕಾಯಿತು. ಈಗ ರಾಫೆಲ್ ರೋಮ್‍ನಲ್ಲಿ ರೋಮ್‍ನಗರವನ್ನು ಕಂಡುಹಿಡಿದಿದ್ದಾನೆ. ಅನ್ವೇಷಣೆ ಕೈಗೊಳ್ಳಲು ದೊಡ್ಡ ವ್ಯಕ್ತಿಯೇ ಬೇಕು. ಆದರೆ ಹೊಸ ಶೋಧ ಮಾತ್ರ ದೇವರಿಂದಲೇ ಸಾದ್ಯ.". ಒಟ್ಟು ಸಮಾಜದ ಗೌರವಕ್ಕೆ ಕಲಾವಿದ ಪಾತ್ರನಾದ ಬಗೆಯನ್ನು ಈ ಸೂಕ್ತಿ ಸ್ಪಷ್ಟವಾಗಿ ತಿಳಿಸುತ್ತದೆ. 

ರೋಮ್‍ನ ಶ್ರೀಮಂತ ವರ್ಗ ರಾಫೆಲ್ ತಮ್ಮಲ್ಲೊಬ್ಬನೆಂದು ಸ್ವೀಕರಿಸಿತು. 1514 ರಲ್ಲಿ ಕಾರ್ಡಿನಲ್ ಬಿಬಿಯೆನಾ ತನ್ನ ಸೋದರಿಯ ಮಗಳನ್ನು ರಾಫೆಲ್‍ಗೆ ಕೊಟ್ಟು ವಿವಾಹ ಮಾಡಬೇಕೆಂದಿದ್ದ. ವಸರಿಯ ಪ್ರಕಾರ ಎರಡನೆಯ ಜೂಲಿಯಸ್‍ನ ಉತ್ತರಾಧಿಕಾರಿಯಾದ ಹತ್ತನೆಯ ಪೋಪ್ ಲಿಯೊಗೆ ರಾಫೆಲ್‍ನನ್ನು ಮುಖ್ಯ ರಾಯಭಾರಿಯಾಗಿ ಮಾಡಬೇಕೆಂಬ ಇಚ್ಛೆಯಿದ್ದಿತು.

ರಾಫೆಲ್ ತನ್ನ ಬಾಳಿನ ಕಡೆಯ 12 ವರ್ಷಗಳನ್ನು ರೋಮ್‍ನಲ್ಲಿ ಕಳೆದ. ಅತ್ಯಂತ ಬಿರುಸಿನ ಚಟುವಟಿಕೆ ಹಾಗೂ ಪ್ರಧಾನ ಕೃತಿಗಳನ್ನು ರಚಿಸಿದ ಕಾಲಘಟ್ಟವದು. ಯಾವುದೇ ಪರೀಕ್ಷೆ ಇವನನ್ನು ಅಧೀರನನ್ನಾಗಿಸಲಿಲ್ಲ. ಪ್ರತಿಯೊಂದು ಜವಾಬ್ದಾರಿಯನ್ನೂ ವಿನಮ್ರತೆ ಹಾಗೂ ಗಾಢವಾದ ಅಧ್ಯಯನ ಶೀಲತೆಯಿಂದ ಹೊತ್ತುಕೊಂಡು ಹೊಸ ಎತ್ತರವನ್ನು ಮುಟ್ಟಿ ವಿಜಯಿಯಾದ. 1508ರ ಕೊನೆಯ ಭಾಗದಲ್ಲಿ ಪ್ರಾರಂಭಿಸಿ ಮೂರು ವರ್ಷದೊಳಗೇ ಮುಕ್ತಾಯ ಮಾಡಿದ ವ್ಯಾಟಿಕನ್ ಅರಮನೆಯ ಚಿತ್ರಗಳು ಇವನ ಅತ್ಯಂತ ಮಹತ್ತ್ವದ ಕೃತಿಗಳೆಂದು ಹೇಳಬಹುದು. ರಾಫೆಲ್ ಈ ಕೃತಿಗಳನ್ನು ರಚಿಸಿದುದು ಸ್ಟಾಂಜಾ ಡೆಲಾ ಸೆಗ್ನೇಚುರಾ ಎಂಬ ಕೊಠಡಿಯ ಭಿತ್ತಿಗಳ ಮೇಲೆ.  ಇದೇ ಕೊಠಡಿಯಲ್ಲಿ ಎರನೆಯ ಜೂಲಿಯಸ್ ಬದುಕಿ ಕೆಲಸ ಮಾಡಿದುದು.

ರಾಫೆಲ್‍ನ ರೋಮನ್ ಕೃತಿಗಳ ಆಧ್ಯಾತ್ಮಿಕ ಆಳದ ಕಾರಣ ಮಾನವತಾವಾದಿ ಹಾಗೂ ನವಪ್ಲೇಟೋವಾದಿ ಎಂಬ ಕೀರ್ತಿ ರೋಮ್‍ನಲ್ಲೆಲ್ಲಾ ಹರಡಿತು. ಅನೇಕ ಬರೆಹಗಾರರು ಇವನ ಸ್ನೇಹಿತರ ಬಳಗದಲ್ಲಿದ್ದರು. ಅವರಲ್ಲಿ ಕ್ಯಾಸ್ಟಿಗ್ಲಿಯೋನ್ಸ್, ಕಾರ್ಡಿನಲ್ ಬೆಂಬೊ, ಪೀಟ್ರೊ ಅರೆಟಿನೊ ಮತ್ತು ಬಿಬಿಯೆನಾ - ಇವರ ಜೊತೆಗೆ ಅನೇಕ ಕಲಾವಿದರು ಸೇರ್ಪಡೆಯಾಗಿದ್ದರು. 1519 ರಲ್ಲಿ ಇಟಲಿಯ ಮಹಾಕವಿ ಲುಡೊವಿಕೊ ಅರಿಯೆಸ್ಟೊ ರಚಿಸಿದ ಸುಖಾಂತ ನಾಟಕವೊಂದಕ್ಕೆ ರಂಗಸಜ್ಜಿಕೆಯನ್ನು ರಾಫೆಲ್ ವಿನ್ಯಾಸಗೊಳಿಸಿದ್ದ. ವಿಶೇಷ ಅಭಿಜಾತ ಕಾಲಘಟ್ಟದ ಬಗ್ಗೆ ಅಧಿಕೃತವಾಗಿ ಅಧ್ಯಯನ ಮಾಡಿದ್ದ ಮಹಾಪಂಡಿತ ರಾಫೆಲ್. ತನ್ನ ಕೃತಿರಚನಾ ಕಾಲದ ಕೊನೆಯ ಹಂತದಲ್ಲಿ ಇವನು ರಚಿಸಿದ ವಿನ್ಯಾಸಗಳು ಉನ್ನತ ಪುನರುಜ್ಜೀವನ ಕಾಲವನ್ನು ಮೀರಿ ಅಭಿವ್ಯಕ್ತಿಯ ಹೊಸ ಮಾದರಿಯ ಕಡೆ ಮುಖಮಾಡಿರುವುದನ್ನು ಕಾಣಬಹುದು. ರೋಮ್‍ನಲ್ಲಿ ರಾಫೆಲ್ ಯೋಜಿಸಿದ ವಿಲಾ ಮೆಂಡಾಮ - 1516 ರ ಅನಂತರ ಇದರ ನಿರ್ಮಾಣ ಪ್ರಾರಂಭವಾಯಿತು. - ಇಟಾಲಿಯನ್ ವಾಸ್ತುಶಿಲ್ಪದ ತದನಂತರದ ಅಭಿವೃದ್ಧಿಗೆ ಅತ್ಯಂತ ಮಹತ್ತ್ವದ ರೀತಿಯಲ್ಲಿ ಪ್ರಭಾವಬೀರಿತು. ನಿಯೋಜನೆಗೊಂಡ ಈತನ ಕಡೆಯ ಕೃತಿಯಾದ, 1517 ರಲ್ಲಿ ನಿಯೋಜನೆಗೊಂಡ "ಟ್ರಾನ್ಸ್‍ಫಿಗರೇಷನ್" ನಲ್ಲಿ ಕೂಡ ಹೊಸ ಸಂವೇದನೆಯಿದೆ. ಇದು ಹೊಸ ಜಗತ್ತಿನ ಮುನ್ನೋಟದಂತೆ ಇದೆಯಲ್ಲದೆ, ಅದರ ತಳಮಳವನ್ನೂ ಒಳಗೊಂಡಿದೆ.

1520ರ ಏಪ್ರಿಲ್ 6 ರಂದು ರಾಫೆಲ್ ತನ್ನ 37 ನೆಯ ಹುಟ್ಟಿಹಬ್ಬದ ದಿನವೇ ಕೊನೆಯುಸಿರೆಳೆದ. ಇವನ ಜೀವಿತದ ಕೊನೆಗಾಲದಲ್ಲಿ ಇವನ ಸುತ್ತ ಪೌರಾಣಿಕ ಪ್ರಭಾವಳಿ ಆವರಿಸಿತ್ತು. ಧರ್ಮಸಂಸ್ಥಾನ ಕೂಡ ಇವನ ಮರಣಕ್ಕಾಗಿ ಶೋಕಾಚರಣೆ ಮಾಡಿತು. ವ್ಯಾಟಿಕನ್‍ನಲ್ಲಿ ಇವನ ಅಂತ್ಯಸಂಸ್ಕಾರದ ಪ್ರಾರ್ಥನೆ ನಡೆಸಲಾಯಿತು. ರೋಮ್‍ನ ಪ್ಯಾಂಥಿಯನ್‍ನಲ್ಲಿ ಇವನನ್ನು ಸಮಾಧಿಮಾಡಲಾಯಿತು.

 On the birth anniversary of Italian Renaissance painter Raphael.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ